ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕು ಬಾರಿಯೂ ಬಿಕ್ಕಟ್ಟಿನಲ್ಲೇ ನಿರ್ಗಮನ!

Last Updated 26 ಜುಲೈ 2021, 20:54 IST
ಅಕ್ಷರ ಗಾತ್ರ

ಬೆಂಗಳೂರು: ಮಂಡ್ಯ ಜಿಲ್ಲೆಯ ಬೂಕನಕೆರೆಯಲ್ಲಿ ಹುಟ್ಟಿ, ಶಿವಮೊಗ್ಗ ಜಿಲ್ಲೆಯ ಶಿಕಾರಿಪುರಕ್ಕೆ ವಲಸೆ ಬಂದು ಜನ ನಾಯಕನಾಗಿ ಬೆಳೆದ ಬಿ.ಎಸ್‌. ಯಡಿಯೂರಪ್ಪ ಅವರು ನಾಲ್ಕು ಬಾರಿ ಮುಖ್ಯಮಂತ್ರಿ ಗಾದಿ ಏರಿದ್ದಾರೆ. ಎಲ್ಲ ಸಂದರ್ಭಗಳಲ್ಲೂ ಅಗತ್ಯ ಸಂಖ್ಯಾಬಲದ ಕೊರತೆಯ ನಡುವೆಯೂ ‘ಕಸರತ್ತು’ ನಡೆಸಿ ಮುಖ್ಯಮಂತ್ರಿಯಾದ ಅವರು, ಬಿಕ್ಕಟ್ಟಿನಲ್ಲೇ ಅಧಿಕಾರದಿಂದ ನಿರ್ಗಮಿಸಿದ್ದಾರೆ

2006ರಲ್ಲಿ ಕಾಂಗ್ರೆಸ್‌– ಜೆಡಿಎಸ್‌ ಸಮ್ಮಿಶ್ರ ಸರ್ಕಾರದಿಂದ ಹೊರಬಂದ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌ ಶಾಸಕರ ಗುಂಪು, ಬಿಜೆಪಿ ಜತೆ ಕೈಜೋಡಿಸಿತ್ತು. ಆಗ ತಲಾ 20 ತಿಂಗಳ ಅವಧಿಗೆ ಮುಖ್ಯಮಂತ್ರಿ ಹುದ್ದೆಯ ಅಧಿಕಾರ ಹಂಚಿಕೆಯಾಗಿತ್ತು.

ಮೊದಲ ಅವಧಿಗೆ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಮತ್ತು ಉಪ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅಧಿಕಾರ ಸ್ವೀಕರಿಸಿದ್ದರು. 20 ತಿಂಗಳ ಬಳಿಕ ಅಧಿಕಾರ ಹಸ್ತಾಂತರಿಸಲು ಹಿಂದೇಟು ಹಾಕಿದ್ದ ಜೆಡಿಎಸ್ ವರಿಷ್ಠರು, ಕೆಲವು ಷರತ್ತು ಮುಂದಿಟ್ಟಿದ್ದರು. ಇದರಿಂದ ಬೇಸರಗೊಂಡ ಯಡಿಯೂರಪ್ಪ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿನೀಡಿ, ಅಲ್ಲಿಂದ ರಾಜ್ಯ ಪ್ರವಾಸಕ್ಕೆ ಮುಂದಾಗಿದ್ದರು.

ಅಷ್ಟರಲ್ಲೇ ಮತ್ತೆ ಅಧಿಕಾರ ಹಸ್ತಾಂತರದ ಭರವಸೆ ಜೆಡಿಎಸ್‌ನಿಂದ ಬಂದಿತ್ತು. ವಾಪಸು ಬಂದ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ, ವಾರದೊಳಗೆ ನಡೆದ ವಿಶ್ವಾಸಮತ ಯಾಚನೆಯಲ್ಲಿ ಜೆಡಿಎಸ್‌ ಬೆಂಬಲ ನೀಡಲಿಲ್ಲ. ಯಡಿಯೂರಪ್ಪ ರಾಜೀನಾಮೆ ನೀಡಿ, ಪದತ್ಯಾಗ ಮಾಡಿದ್ದರು.

ಲೋಕಾಯುಕ್ತ ವರದಿಯ ಪೆಟ್ಟು: ಜೆಡಿಎಸ್‌ ತಮಗೆ ಅಧಿಕಾರ ಹಸ್ತಾಂತರಿಸದೇ ವಚನ ಭ್ರಷ್ಟವಾಗಿದೆ ಎಂದು ಯಡಿಯೂರಪ್ಪ ರಾಜ್ಯದ ಉದ್ದಗಲಕ್ಕೆ ಪ್ರಚಾರ ನಡೆಸಿದ್ದರು. 2008ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 110 ಸ್ಥಾನಗಳೊಂದಿಗೆ ಬಹುಮತದ ಸನಿಹ ಬಂದು ನಿಂತಿತ್ತು. ‘ಆಪರೇಷನ್‌ ಕಮಲ’ದ ಹೆಸರಿನಲ್ಲಿ ಆರು ಮಂದಿ ಪಕ್ಷೇತರರೂ ಸೇರಿದಂತೆ ಕೆಲವು ಶಾಸಕರನ್ನು ತಮ್ಮ ತೆಕ್ಕೆಗೆ ಸೆಳೆದಿದ್ದ ಯಡಿಯೂರಪ್ಪ, ಸರ್ಕಾರ ರಚಿಸುವಲ್ಲಿ ಸಫಲವಾಗಿದ್ದರು.

ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಲೋಕಾಯುಕ್ತ ತನಿಖಾ ವರದಿಯಲ್ಲಿ ಯಡಿಯೂರಪ್ಪ ಮತ್ತು ಅವರ ಕುಟುಂಬದ ಸದಸ್ಯರ ವಿರುದ್ಧ ಆರೋಪಗಳಿದ್ದವು. ಈ ಕಾರಣಕ್ಕಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಬಿಜೆಪಿ ಹೈಕಮಾಂಡ್‌ ಸೂಚಿಸಿತ್ತು. ಹೈಕಮಾಂಡ್‌ ಒತ್ತಡ ಹೆಚ್ಚಿದಾಗ ಬೇರೆ ಮಾರ್ಗವಿಲ್ಲದೆ 2011ರ ಜುಲೈ 31ರಂದು ಯಡಿಯೂರಪ್ಪ ರಾಜೀನಾಮೆ ನೀಡಿದ್ದರು.

ಪತನ: 2018ರ ವಿಧಾನಸಭಾ ಚುನಾವಣೆಯಲ್ಲಿ 224 ವಿಧಾನಸಭಾ ಕ್ಷೇತ್ರಗಳ ಪೈಕಿ 222 ಕ್ಷೇತ್ರಗಳಲ್ಲಿ ಮಾತ್ರ ಮತದಾನ ನಡೆದಿತ್ತು. 104 ಸದಸ್ಯ ಬಲದೊಂದಿಗೆ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಕಾಂಗ್ರೆಸ್‌ 78, ಜೆಡಿಎಸ್‌ 37 ಸದಸ್ಯರನ್ನು ಹೊಂದಿದ್ದವು. ಬಿಎಸ್‌ಪಿ ಒಬ್ಬರು ಮತ್ತು ಇಬ್ಬರು ಪಕ್ಷೇತರರು ಗೆಲುವು ಸಾಧಿಸಿದ್ದರು.

ಕಾಂಗ್ರೆಸ್‌ ಮತ್ತು ಜೆಡಿಎಸ್‌ ಚುನಾವಣೋತ್ತರ ಮೈತ್ರಿಕೂಟ ರಚಿಸಿಕೊಂಡು, ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದವು. ಆದರೆ, ರಾಜ್ಯಪಾಲ ವಜುಭಾಯಿ ವಾಲಾ ಅವರು ಯಡಿಯೂರಪ್ಪ ಅವರಿಗೆ ಸರ್ಕಾರ ರಚನೆಗೆ ಆಹ್ವಾನ ನೀಡಿದ್ದರು. ಯಡಿಯೂರಪ್ಪ 2018ರ ಮೇ 17ರಂದು ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.

ಬಹುಮತ ಸಾಬೀತುಪಡಿಸಲು ರಾಜ್ಯಪಾಲರು 15 ದಿನ ಕಾಲಾವಕಾಶ ನೀಡಿದ್ದರು. ಆದರೆ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದವು. ಒಂದೇ ದಿನದೊಳಗೆ ಬಹುಮತ ಸಾಬೀತುಪಡಿಸುವಂತೆ ಸುಪ್ರೀಂಕೋರ್ಟ್‌ ಆದೇಶಿಸಿತ್ತು. ಬಹುಮತ ಸಾಬೀತುಪಡಿಸಲು ಸಾಧ್ಯವಾಗದೇ ಮೇ 19ರಂದು ಯಡಿಯೂರಪ್ಪ ರಾಜೀನಾಮೆ ಸಲ್ಲಿಸಿದ್ದರು.

ಸಂಭ್ರಮದ ಕ್ಷಣದಲ್ಲೇ ಪದತ್ಯಾಗ: ಕಾಂಗ್ರೆಸ್‌ ಮತ್ತು ಜೆಡಿಎಸ್‌ನ 17 ಶಾಸಕರು ರಾಜೀನಾಮೆ ಸಲ್ಲಿಸಿ, ಬಿಜೆಪಿ ಸೇರಿದ್ದರಿಂದ 2019ರಲ್ಲಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌– ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ಪತನಗೊಂಡಿತ್ತು. ಎರಡನೇ ಬಾರಿ ‘ಆಪರೇಷನ್‌ ಕಮಲ’ದ ಮೂಲಕ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ, 2019ರ ಜುಲೈ 26ರಂದು ಪ್ರಮಾಣವಚನ ಸ್ವೀಕರಿಸಿದ್ದರು.

ಸೋಮವಾರ ತಮ್ಮ ಸರ್ಕಾರ ಎರಡು ವರ್ಷಗಳನ್ನು ಪುರೈಸಿದ ಸಂಭ್ರಮಾಚರಣೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗದ್ಗದಿತರಾಗಿಯೇ ರಾಜೀನಾಮೆ ವಿಷಯ ಪ್ರಕಟಿಸಿದರು. ನಾಲ್ಕನೇ ಬಾರಿಯೂ ಅವರು ಬಿಕ್ಕಟ್ಟಿನಿಂದಾಗಿಯೇ ಅಧಿಕಾರದಿಂದ ನಿರ್ಗಮಿಸಿದರು.

ಬಿಎಸ್‌ವೈಗೆ ಸಚಿವರು, ಶಾಸಕರ ಸಾಥ್‌

ಪದತ್ಯಾಗ ಘೋಷಿಸಿ, ರಾಜೀನಾಮೆ ಪತ್ರ ಸಹಿತ ರಾಜಭವನಕ್ಕೆ ಹೊರಟ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಸಂಪುಟದ ಕೆಲವು ಸಚಿವರು, ಬೆನ್ನ ಹಿಂದೆ ಕಾಣಿಸಿಕೊಳ್ಳುತ್ತಿದ್ದ ಆಪ್ತ ಶಾಸಕರು, ಮಾಜಿ ಶಾಸಕರು ಸಾಥ್‌ ನೀಡಿದರು.

ವಿಧಾನಸೌಧದಿಂದ ಕಾರಿನಲ್ಲಿ ನೇರವಾಗಿ ರಾಜಭವನಕ್ಕೆ ತೆರಳಿದ ಯಡಿಯೂರಪ್ಪ, ಸಚಿವ ಸಂಪುಟದ ರಾಜೀನಾಮೆ ಪತ್ರವನ್ನು ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಕೈಯಲ್ಲಿಟ್ಟು ಕೆಲವೇ ಕ್ಷಣಗಳಲ್ಲಿ ಹೊರಬಂದರು.

ಬಳಿಕ ರಾಜಭವನದ ಮುಂಭಾಗದಲ್ಲಿ ಸುದ್ದಿಗಾರರ ಜೊತೆ ಯಡಿಯೂರಪ್ಪ ಮಾತನಾಡಿದಾಗ, ಅವರ ಪುತ್ರ, ಸಂಸದ ಬಿ. ವೈ. ರಾಘವೇಂದ್ರ, ಆರ್. ಅಶೋಕ, ಬಸವರಾಜ ಬೊಮ್ಮಾಯಿ, ಡಾ. ಸಿ.ಎನ್‌. ಅಶ್ವತ್ಥನಾರಾಯಣ್, ಎಸ್‌. ಸುರೇಶ್‌ಕುಮಾರ್‌, ಎಂ.ಪಿ. ರೇಣುಕಾಚಾರ್ಯ, ಎಸ್‌. ಆರ್‌. ವಿಶ್ವನಾಥ್‌, ರಾಜು ಗೌಡ, ಡಿ.ಎನ್‌. ಜೀವರಾಜ್‌, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT