ಉಚಿತ ವಿದ್ಯುತ್ ಯೋಜನೆ ಇಂಧನ ಉಳಿತಾಯಕ್ಕೆ ವಿರುದ್ಧ: ಅಲೋಕ್ ಕುಮಾರ್

ಬೆಂಗಳೂರು: ಉಚಿತವಾಗಿ ವಿದ್ಯುತ್ ಒದಗಿಸುವ ಯೋಜನೆಗಳು ಇಂಧನ ಉಳಿತಾಯ ಕಾರ್ಯಕ್ರಮಗಳಿಗೆ ವಿರುದ್ಧವಾದುವು. ಉಚಿತವಾಗಿ ವಿದ್ಯುತ್ ಒದಗಿಸಿದರೆ ಇಂಧನ ಉಳಿತಾಯದ ಕಾರ್ಯಕ್ರಮಗಳು ವಿಫಲವಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಇಂಧನ ಸಚಿವಾಲಯದ ಕಾರ್ಯದರ್ಶಿ ಅಲೋಕ್ ಕುಮಾರ್ ಹೇಳಿದರು.
ಜಿ–20 ರಾಷ್ಟ್ರಗಳ ಇಂಧನ ಪರಿವರ್ತನಾ ಕಾರ್ಯಕಾರಿ ಗುಂಪಿನ ಸಭೆಗೆ ಸಂಬಂಧಿಸಿದಂತೆ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಉಚಿತ ವಿದ್ಯುತ್ ಪೂರೈಸುವ ಯೋಜನೆಗಳ ಬಗ್ಗೆ ಪ್ರಶ್ನಿಸಿದಾಗ, ‘ಇಂಧನ ಉಳಿತಾಯಕ್ಕಾಗಿ ಸರ್ಕಾರಗಳು ದೊಡ್ಡ ಮೊತ್ತದ ವೆಚ್ಚ ಮಾಡುತ್ತವೆ. ಉಚಿತವಾಗಿ ವಿದ್ಯುತ್ ಪೂರೈಸಿದರೆ ಮಿತ ಬಳಕೆಯ ಕುರಿತು ಜನರು ಯೋಚಿಸುವುದಿಲ್ಲ. ಆಗ ಇಂಧನ ಉಳಿತಾಯದ ಕಾರ್ಯಕ್ರಮಗಳು ಫಲ ನೀಡುವುದಿಲ್ಲ’ ಎಂದರು.
ಉಚಿತವಾಗಿ ವಿದ್ಯುತ್ ಪೂರೈಸುವುದು ಸೇರಿದಂತೆ ವಿದ್ಯುತ್ ಕ್ಷೇತ್ರದಲ್ಲಿ ನಿರ್ಧಾರ ಕೈಗೊಳ್ಳಲು ರಾಜ್ಯ ಸರ್ಕಾರಗಳಿಗೆ ಅಧಿಕಾರವಿದೆ. ಆದರೆ, ಉಚಿತವಾಗಿ ಪೂರೈಸುವ ವಿದ್ಯುತ್‌ನ ವೆಚ್ಚವನ್ನು ಸಂಬಂಧಿಸಿದ ವಿದ್ಯುತ್ ಸರಬರಾಜು ಕಂಪನಿಗಳಿಗೆ ಸಕಾಲಕ್ಕೆ ಪಾವತಿಸಬೇಕು. ಇಲ್ಲವಾದರೆ ಆ ಕಂಪನಿಗಳು ನಷ್ಟದ ಸುಳಿಗೆ ಸಿಲುಕುತ್ತವೆ ಎಂದು ಹೇಳಿದರು.
ಕಿರು ಜಲ ವಿದ್ಯುತ್ ಯೋಜನೆಗಳಿಗೆ ಕೆಲವು ರಾಜ್ಯಗಳು ವಿರೋಧ ವ್ಯಕ್ತಪಡಿಸುತ್ತಿರುವ ಕುರಿತು ಕೇಳಿದಾಗ, ‘ಅಂತಹ ಬೆಳವಣಿಗೆ ನನ್ನ ಗಮನಕ್ಕೆ ಬಂದಿಲ್ಲ. ಅರುಣಾಚಲಪ್ರದೇಶ, ಹಿಮಾಚಲಪ್ರದೇಶ ಸೇರಿದಂತೆ ಹಲವು ರಾಜ್ಯಗಳು ಕಿರು ಜಲ ವಿದ್ಯುತ್ ಯೋಜನೆಗಳಿಗೆ ತ್ವರಿತವಾಗಿ ಅನುಮತಿ ನೀಡುವಂತೆ ಹಾಗೂ ಹೆಚ್ಚು ಸಹಾಯಧನ ನೀಡುವಂತೆ ಬೇಡಿಕೆ ಇಟ್ಟಿವೆ’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.