ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ರಾಜಕೀಯ ಪಕ್ಷ ಘೋಷಿಸಿದ ಮಾಜಿ ಸಚಿವ ಜನಾರ್ದನ ರೆಡ್ಡಿ

Last Updated 25 ಡಿಸೆಂಬರ್ 2022, 8:28 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿಯಿಂದ ಹೊರ ಬಂದಿದ್ದು, ಸ್ವತಂತ್ರವಾಗಿ ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ ಎಂಬ ಹೊಸ ರಾಜಕೀಯ ಪಕ್ಷವನ್ನು ಆರಂಭಿಸಲಾಗುವುದು ಎಂದು ಮಾಜಿ‌ ಸಚಿವ ಜಿ. ಜನಾರ್ದನ ರೆಡ್ಡಿ ಘೋಷಿಸಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ನಾನು ಬಿಜೆಪಿಗಾಗಿ ಸಾಕಷ್ಟು ಕೆಲಸ ಮಾಡಿದ್ದೇನೆ. ಸ್ವಂತ ಕೆಲಸ‌ ಬದಿಗೊತ್ತಿ ಪಕ್ಷಕ್ಕಾಗಿ ದುಡಿದಿದ್ದೆ. ಆದರೆ, ನನ್ನ ಕಷ್ಟದ ದಿನಗಳಲ್ಲಿ ಬಿ.ಎಸ್. ಯಡಿಯೂರಪ್ಪ ಮತ್ತು ಜಗದೀಶ ಶೆಟ್ಟರ್ ಹೊರತಾಗಿ ಪಕ್ಷದ ಯಾರೊಬ್ಬರೂ ಜತೆಗೆ ನಿಲ್ಲಲಿಲ್ಲ' ಎಂದು ದೂರಿದರು.

'ಹಲವು ವರ್ಷಗಳ ಕಾಲ‌ ಬಿಜೆಪಿಗಾಗಿ ರಾಜ್ಯದ ಉದ್ದಗಲಕ್ಕೆ ಸುತ್ತಾಡಿದ್ದೆ. ಮೊದಲ ಬಾರಿಗೆ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರ ತರುವಲ್ಲಿ ನನ್ನ ಪಾತ್ರವೂ ಇತ್ತು. ಅಧಿಕಾರ‌ ಹಸ್ತಾಂತರ ಮಾಡದ‌ ಜೆಡಿಎಸ್ ವಿರುದ್ಧ ಹೋರಾಡಿ ಸ್ವತಂತ್ರ ಬಿಜೆಪಿ ಸರ್ಕಾರ ತರುವಲ್ಲೂ ನನ್ನ ಶ್ರಮ ಇತ್ತು. ಆದರೆ,‌ ನಾನು‌ ಜೈಲಿಗೆ ಹೋದಾಗ ಯಾರೂ ಬೆಂಬಲಕ್ಕೆ ನಿಲ್ಲಲಿಲ್ಲ' ಎಂದರು.

'ಬಿ‌ ಶ್ರೀರಾಮುಲು ನಮ್ಮ ಸಹೋದರನಿದ್ದಂತೆ. ಅವಕಾಶ ಸಿಕ್ಕ ಎಲ್ಲ ಸಂದರ್ಭಗಳಲ್ಲಿ ನನ್ನ ಬದಲಿಗೆ ಅವರಿಗೆ ಅಧಿಕಾರ ನೀಡುವಂತೆ ಪಕ್ಷದ ನಾಯಕರಲ್ಲಿ‌ ಮನವಿ ಮಾಡಿದ್ದೆ. ಈಗಲೂ ನಮ್ಮ ಹೊಸ ಪಕ್ಷ ಸೇರುವಂತೆ ಒತ್ತಡ ಹೇರುವುದಿಲ್ಲ. ಅವರಿಗೆ ತೋಚಿದಂತೆ ನಿರ್ಧಾರ ಕೈಗೊಳ್ಳಲಿ' ಎಂದು ರೆಡ್ಡಿ ಹೇಳಿದರು.

'ಜನಾರ್ದನ ರೆಡ್ಡಿಗೂ ಬಿಜೆಪಿಗೂ ಸಂಬಂಧವಿಲ್ಲ ಎಂದು ಕೇಂದ್ರ ಗೃಹ ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡಿದ್ದರು. ಅವರು ಏಕೆ ಹಾಗೆ ಹೇಳಿದ್ದರೋ ತಿಳಿಯಲಿಲ್ಲ? ಯಾರು ಹಾಗೆ ಹೇಳಿಸಿದ್ದರು ಎಂಬುದೂ ಗೊತ್ತಾಗಲಿಲ್ಲ. ಆದರೆ, ಆ ಹೇಳಿಕೆಯಿಂದ ತುಂಬಾ ನೋವಾಯಿತು. ಅದೇ ರೀತಿ ಬಿ.ಎಸ್. ಯಡಿಯೂರಪ್ಪ ಅವರಿಗೂ ಅನ್ಯಾಯವಾಗಿದೆ' ಎಂದರು.

ಸಂಕಷ್ಟದ ದಿನಗಳಲ್ಲಿ ಕುಟುಂಬವನ್ನು ಮುನ್ನಡೆಸಿದ್ದ ಪತ್ನಿ ಲಕ್ಷ್ಮಿ ಅರುಣಾ ಈಗ‌ ಹೊಸ‌ ರಾಜಕೀಯ ಪಕ್ಷ ಮುನ್ನಡೆಸುವ ವಿಚಾರದಲ್ಲೂ ಮಹತ್ವದ ಪಾತ್ರ ನಿರ್ವಹಿಸುತ್ತಾರೆ. ಶೀಘ್ರದಲ್ಲೇ ಪಕ್ಷದ ಚಿಹ್ನೆ ಮತ್ತು ಬಾವುಟ ಅಂತಿಮಗೊಳಿಸಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT