ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಲೆ ರಾಜಕಾರಣಕ್ಕೆ ಗಾಂಧಿ ವಿಚಾರವೇ ಉತ್ತರ: ಸುಧೀಂದ್ರ ಕುಲಕರ್ಣಿ

‘ಮಿನುಗು ನೋಟ’ ಕೃತಿ ಬಿಡುಗಡೆ ಮಾಡಿದ ಸುಧೀಂದ್ರ ಕುಲಕರ್ಣಿ
Last Updated 15 ಜನವರಿ 2023, 16:23 IST
ಅಕ್ಷರ ಗಾತ್ರ

ಮಂಗಳೂರು: ‘ಸಮಾಜವನ್ನು ಒಡೆದು ಅಧಿಕಾರಕ್ಕೆ ಬರುವ ಹೊಲಸಿನ ರಾಜಕಾರಣಕ್ಕೆ, ಭ್ರಷ್ಟಾಚಾರದ, ಹಿಂಸೆಯ, ಕೊಲೆಯ ರಾಜಕಾರಣಕ್ಕೆ ಗಾಂಧೀಜಿ ವಿಚಾರಧಾರೆಯ ಮೂಲಕ ಉತ್ತರ ಕೊಡಬೇಕಿದೆ’ ಎಂದು ಚಿಂತಕ ಸುಧೀಂದ್ರ ಕುಲಕರ್ಣಿ ಹೇಳಿದರು.

ಲೇಖಕ ಎಂ.ಜಿ. ಹೆಗಡೆ ರಚಿಸಿರುವ ‘ಮಿನುಗು ನೋಟ’ ಕೃತಿಯನ್ನು ಗಾಂಧಿ ವಿಚಾರ ವೇದಿಕೆ ಆಶ್ರಯದಲ್ಲಿ ಇಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿ ಅವರು ಮಾತನಾಡಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ರಾಜಕೀಯ ಕೊಲೆಗಳ ಕುರಿತು ಕಳವಳ ವ್ಯಕ್ತಪಡಿಸಿದ ಅವರು, ‘ಇಂತಹ ಕೊಲೆಗಳಿಗೆ ಹಿಂದೂ ಧರ್ಮದಲ್ಲಾಗಲೀ, ಮುಸ್ಲಿಂ ಧರ್ಮದಲ್ಲಾಗಲೀ ಸ್ಥಾನವಿದೆಯೇ. ಸಂವಿಧಾನವಾದರೂ ಇದನ್ನು ಒಪ್ಪುತ್ತದೆಯೇ’ ಎಂದು ಪ್ರಶ್ನಿಸಿದರು.

‘ಮಂಗಳೂರನ್ನು, ಕರ್ನಾಟಕವನ್ನು ಕೋಮುವಾದ ವೈರಾಣುವಿಂದ ಹಾಗೂ ಕೋಮುಹಿಂಸೆ ಮುಕ್ತಗೊಳಿಸುವ ಪ್ರತಿಜ್ಞೆಯನ್ನು ಎಲ್ಲರೂ ತೊಡಬೇಕಿದೆ. ಜಗತ್ತಿಗೆ ಭಾರತ, ಭಾರತಕ್ಕೆ ಕರ್ನಾಟಕಕ್ಕೆ ಆದರ್ಶ ಆಗಬೇಕು. ಗಾಂಧೀಜಿ ಪ್ರತಿಪಾದಿಸಿದ ‌ಸದ್ವಿಚಾರಗಳಿಂದ ಇದು ಖಂಡಿತಾ ಸಾಧ್ಯ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘19ನೇ ಶತಮಾನ ಬ್ರಿಟಿಷರದ್ದು. 20ನೇ ಶತಮಾನ ಅಮೆರಿಕದ ಪ್ರಭುತ್ವದ್ದು. ಆದರೆ, ಅಮೆರಿಕ ಮತ್ತು ಯೂರೋಪ್‌ನ ಪ್ರಭುತ್ವ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿದೆ. 21 ನೇ ಶತಮಾನದಲ್ಲಿ ಯಾರ ಮೇಲೂ ಪ್ರಭುತ್ವ ಸಾಧಿಸುವ ಅಗತ್ಯ ಇಲ್ಲ. ಜಗತ್ತನ್ನು ಸರಿಯಾದ ದಿಕ್ಕಿನಲ್ಲಿ ನಡೆಸುವ ಶಕ್ತಿ ಸಾಮರ್ಥ್ಯ ಗಾಂಧಿ ವಿಚಾರಧಾರೆಗೆ ಇದೆ. ಇದರಿಂದ ಜಗತ್ತಿಗೆ ಹೊಸ ದಿಕ್ಕನ್ನು ನೀಡಬಹುದು’ ಎಂದರು.

‘ಗಾಂಧೀಜಿ ಕುರಿತು ಅಪಪ್ರಚಾರ ಮಾಡುವ ಜನರು, ಜವಹರಲಾಲ್‌ ನೆಹರೂ ಅವರನ್ನು ಖಳನಾಯಕರನ್ನಾಗಿ ಮಾಡಿ ಬಿಟ್ಟಿದ್ದಾರೆ. ಸ್ವಾತಂತ್ರ್ಯಕ್ಕೆ ಮೊದಲು ಹಾಗೂ ನಂತರ ನೆಹರೂ ಅವರು ದೇಶಕ್ಕಾಗಿ ಮಾಡಿದ ತ್ಯಾಗ, ಸಂಘರ್ಷಗಳೆಲ್ಲವನ್ನೂ ಅಳಿಸಿಹಾಕಲಾಗುತ್ತಿದೆ. ನೆಹರೂ ಕೆಲವು ತಪ್ಪುಗಳನ್ನು ಮಾಡಿರಬಹುದು. ಆದರೆ ದೇಶಕ್ಕೆ ಅವರು ನೀಡಿದ ಕೊಡುಗೆ ಅಲ್ಲಗಳೆಯಲು ಸಾಧ್ಯವಿಲ್ಲ. ಅವರ ಕೊಡುಗೆ ಮರೆತರೆ ನಾವು ಕೃತಘ್ನರು. ನೆಹರೂ ವಿರುದ್ಧದ ಅಪಪ್ರಚಾರಕ್ಕೂ ಉತ್ತರ ಕೊಡಬೇಕಿದೆ‘ ಎಂದರು.

‘ಕೆಲವು ಮಹಾನಾಯಕರ ಬಗ್ಗೆ ಪ್ರಶ್ನೆ ಕೇಳಕೂಡದು ಎಂಬಂತಹ ಸನ್ನಿವೇಶ ಈಗ ಇದೆ. ಆ ಶ್ರೇಣಿಯಲ್ಲಿ ಗಾಂಧೀಜಿ ಇಲ್ಲ. ಎಂಟು ವರ್ಷದಿಂದ ಈಚೆಗೆ ಮಾತ್ರವಲ್ಲ ಗಾಂಧೀಜಿ ಕಾಲದಲ್ಲೇ ಅವರನ್ನು ಟೀಕಿಸಿದವರು ಇದ್ದಾರೆ. ಟೀಕಾಕಾರಿಗೆ ಅವರು ಅಷ್ಟೇ ತಾಳ್ಮೆಯಿಂದ ಉತ್ತರಿಸಿದ್ದರು. ನಾವೂ ಸತ್ಯನಿಷ್ಠರಾಗಿ ಉತ್ತರ ಕೊಡಬೇಕು. ಸಿಟ್ಟಿನಿಂದ ಉತ್ತರಿಸಿದರೆ ನಾವು ನಿಜವಾದ ಗಾಂಧಿವಾದಿಗಳಲ್ಲ. ಎಷ್ಟೇ ಅಪಪ್ರಚಾರ ನಡೆದರೂ ನಿರಾಶರಾಗಬೇಕಿಲ್ಲ. ಗಾಂಧಿ ವಿಚಾರದಲ್ಲಿ ಸತ್ವ ಇದೆ. ಅವರ ವಿಚಾರ ಬಿತ್ತರಿಸುವಾಗ ಚಿಂತನೆ ಬೇಕು. ಅಧ್ಯಯನ ಬೇಕು. ವ್ಯಕ್ತಿಯನ್ನು ಕೊಲ್ಲಬಹುದು. ಅವರ ವಿಚಾರ ಕೊಲ್ಲುವುದಕ್ಕೆ ಸಾಧ್ಯವಿಲ್ಲ’ ಎಂದರು.

‘ಸತ್ಯ, ನೈತಿಕತೆ, ಅಹಿಂಸೆಗೆ ಆಗ್ರಹಿಸುವುದೇ ಸತ್ಯಾಗ್ರಹದ ಅರ್ಥ. 1893ರಿಂದ 1914ರವರೆಗೆ ಗಾಂಧೀಜಿ ದಕ್ಷಿಣ ಆಫ್ರಿಕಾದಲ್ಲಿದ್ದರು. ಆಗ ಮಸೀದಿಯ ಇಮಾಮ್‌ ಜೊತೆ ಇಸ್ಲಾಂ ಬಗ್ಗೆ ಚರ್ಚಿಸಿದ್ದರು. ಜಿಹಾದ್‌ ಇವತ್ತು ಅಪಾರ್ಥ ಮುಸ್ಲೀಮರೂ ಮಾಡುತ್ತಿದ್ದಾರೆ, ಹಿಂದೂಗಳೂ ಮಾಡುತ್ತಿದ್ದಾರೆ. ನಾನು ನನ್ನವಿರುದ್ಧ ಮಾಡುವ ಸಂಘರ್ಷ. ನನ್ನಲ್ಲಿನ ದೋಷ ತೆಗೆದು ಹಾಕಲು ಮಾಡುವ ಹೋರಾಟ ಜಿಹಾದ್‌ನ ಅರ್ಥ. ಅನ್ಯಾಯದ ವಿರುದ್ಧ ಹೋರಾಡುವಾಗ, ನನ್ನಲ್ಲಿರುವ ದೋಷ ನಿವಾರಣೆಯಾಗಬೇಕು. ಸತ್ಯಾಗ್ರಹದ ಕಲ್ಪನೆಯು ಗಾಂಧೀಜಿಗೆ ಇಸ್ಲಾಂನಿಂದ ಸಿಕ್ಕಿದೆ’ ಎಂದರು.

‘ಗಾಂಧಿ ಹಿಂದೂ ವಿರೋಧಿ ಎಂಬು ಬಿಂಬಿಸಲಾಗುತ್ತಿದೆ. ಕೊನೆಯ ಉಸಿರಿನಲ್ಲೂ ಹೇ ರಾಮ್‌ ಎಂದು ಉದ್ಘರಿಸಿದ, ಭಗವದ್ಗೀತೆಯನ್ನು ತನ್ನ ತಾಯಿ ಎಂದು ಹೇಳಿದ ಗಾಂಧಿಯನ್ನು ಹಿಂದೂ ವಿರೋಧಿ ಎನ್ನಲು ಸಾಧ್ಯವೇ’ ಎಂದು ಪ್ರಶ್ನಿಸಿದರು.

‘ಮಹಿಳಾ ಸಬಲೀಕರಣದ ಬಗ್ಗೆಯೂ ಗಾಂಧಿಜಿ ಪ್ರತಿಪಾದಿಸಿದ್ದರು. ಮನುಕುಲದ ಭವಿಷ್ಯ ಮಹಿಳೆಯರ ಕೈಯಲ್ಲೇ ಇದೆ ಎಂದು ಪ್ರತಿಪಾದಿಸಿದ್ದರು. ಕರುಣಾಮಯಿಗಳು, ಸಂವೇದನಾಶೀಲರು ಮನುಕುಲದ ಭವಿಷ್ಯವನ್ನು ರೂಪಿಸುತ್ತಾರೆ. ಮಹಿಳೆಯರೂ ಸಹಜವಾಗಿಯೇ ಹೆಚ್ಚು ಸಂವೇದನಾಶೀಲರು‘ ಎಂದಿದ್ದರು.

ಲೇಖಕ ಎಂ.ಜಿ.ಹೆಗಡೆ, ಬಿ.ಎಂ.ರೋಹಿಣಿ, ಗಾಂಧಿ ವಿಚಾರ ವೇದಿಕೆಯ ಅಧ್ಯಕ್ಷ ಶ್ರೀಧರ ಭಿಡೆ, ಅರವಿಂದ ಚೊಕ್ಕಾಡಿ , ವಿಚಾರ ವೇದಿಕೆಯ ಉಪಾಧ್ಯಕ್ಷ ಅಣ್ಣಾ ವಿನಯಚಂದ್ರ ಇದ್ದರು.

-0-

‘ಹಿಂದೂ ಸಮಾಜ ಒಡೆಯುವುದನ್ನು ತಡೆದರು’

‘ಪುಣೆ ಒಪ್ಪಂದವನ್ನು ವಿರೋಧಿಸುವ ಮೂಲಕ ಗಾಂಧೀಜಿ ದಲಿತರಿಗೆ ಅನ್ಯಾಯ ಮಾಡಿದ್ದಾರೆ ಎಂದು ಅಂಬೇಡ್ಕರ್ ವಾದಿಗಳು ಆರೋಪಿಸುತ್ತಾರೆ. ಮುಸ್ಲೀಮರಿಗೆ ಪ್ರತ್ಯೇಕ ಎಲೆಕ್ಟೋರಲ್‌ ಅನ್ನು ಬ್ರಿಟಿಷರು ಕೊಟ್ಟರು. ಅಲ್ಪಸಂಖ್ಯಾತರಾದ ಪರಿಶಿಷ್ಟ ಜಾತಿಯವರಿಗೂ ಪ್ರತ್ಯೇಕ ಎಲೆಕ್ಟೋರಲ್‌ ಬೇಕು ಎಂಬುದು ಅಂಬೇಡ್ಕರ್‌ ಬೇಡಿಕೆಯಾಗಿತ್ತು. ಇದಕ್ಕೊಪ್ಪದ ಗಾಂಧಿ ಆಮರಣ ಉಪವಾಸ ಕೈಗೊಂಡರು. ಪರಿಶಿಷ್ಟ ಜಾತಿಯವರೂ ಹಿಂದೂ ಸಮಾಜದ ಭಾಗ. ಅವರು ವಿಭಜನೆ ಆಗಬಾರದು. ಜಂಟಿ ಮತದಾರರ ಕ್ಷೇತ್ರಗಳಲ್ಲಿ ಅವರಿಗೆ ವಿಶೇಷ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಗಾಂಧೀಜಿಯ ಒತ್ತಾಯವಾಗಿತ್ತು. ಸಂವಿಧಾನ ರಚನೆ ಸಂದರ್ಭದಲ್ಲೂ ಈ ವಿಚಾರದಲ್ಲಿ ಗಾಂಧೀಜಿಯ ಮಾತಿಗೆ ಮನ್ನಣೆ ಸಿಕ್ಕಿದೆ’ ಎಂದರು.

‘ಪರಿಶಿಷ್ಟ ಜಾತಿಯವರಿಗೆ ಪ್ರತ್ಯೇಕ ಎಲೆಕ್ಟೋರಲ್‌ ನೀಡಿದ್ದಿದ್ದರೆ, ನಂತರ ಇತರ ಹಿಂದುಳಿದ ವರ್ಗದವರೂ ಇದಕ್ಕೆ ಬೇಡಿಕೆ ಸಲ್ಲಿಸುತ್ತಿದ್ದರು. ಇದರಿಂದ ನಮ್ಮ ಪ್ರಜಾಪ್ರಭುತ್ವ ಹಾಗೂ ಸಮಾಜ ಛಿದ್ರವಾಗಿ ಹೋಗುತ್ತಿತ್ತು. ಇದನ್ನು ತಪ್ಪಿಸಿದ್ದು ಮಹಾತ್ಮ ಗಾಂಧೀಜಿ’ ಎಂದು ಸುಧೀಂದ್ರ ಕುಲಕರ್ಣಿ ಹೇಳಿದರು.

‘ಅಸ್ಪೃಶ್ಯತೆ ವಿರುದ್ಧ ಅಂಬೇಡ್ಕರ್‌ ಮಾತ್ರ ಹೋರಾಡಿದ್ದರು ಎಂದು ಬಿಂಬಿಸಲಾಗುತ್ತಿದೆ. ಅಂಬೇಡ್ಕರ್‌ಗೆ ಮುನ್ನವೇ ಗಾಂಧೀಜಿ ಈ ಬಗ್ಗೆ ಹೋರಾಡಿದ್ದರು. ದಕ್ಷಿಣ ಆಫ್ರಿಕಾದಲ್ಲಿದ್ದಾಗಲೇ ಈ ಬಗ್ಗೆ ಹೋರಾಡಿದ್ದರು’ ಎಂದರು.

ವರ್ಣಾಶ್ರಮವನ್ನು ಗಾಂಧೀಜಿ ಆರಂಭದಲ್ಲಿ ಒಪ್ಪಿದ್ದು ನಿಜ. ಆದರೆ, ‘ಇರುವುದು ಒಂದೇ ವರ್ಣ. ನಾವೆಲ್ಲ ಶೂದ್ರರು ಎಂದು ಕೊನೆಗೆ ನಿಲುವು ಬದಲಾಯಿಸಿದ್ದರು’ ಎಂದರು.

-0-

‘ದೇಶ ವಿಭಜನೆಗೆ ಗಾಂಧಿ ಹೊಣೆಯಲ್ಲ’

‘ಭಾರತದ ವಿಭಜನೆಗೆ ಗಾಂಧಿಜಿ ಹೊಣೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಹಿಂದೂರಾಷ್ಟ್ರ ಆಗಬೇಕು ಎಂಬುದನ್ನು ಅವಿಭಜಿತ ಭಾರತದ ಸಂದರ್ಭದಿಂದಲೂ ಹೇಳುವವರು ಇದನ್ನು ತಪ್ಪಿಸಲು ಏನು ಮಾಡಿದರು ಎಂದು ಕೇಳಬೇಕಿದೆ’ ಎಂದು ಕುಲಕರ್ಣಿ ಹೇಳಿದರು.

‘ವಿಭಜನೆಗೆ ಕಾರಣ ಬ್ರಿಟಿಷರು ಹಾಗೂ ಮುಸ್ಲಿಂ ಲೀಗ್‌ ಪ್ರತಿಪಾದಿಸಿದ ದ್ವಿರಾಷ್ಟ್ರ ನೀತಿ. ಹಿಂಸಾಚಾರ ತಡೆಯುವ ಕಾರಣಕ್ಕೆ ಗಾಂಧೀಜಿ ದೇಶ ವಿಭಜನೆಗೆ ಒಪ್ಪಿದರು. ಮುಸ್ಲಿಂ ಲೀಗ್‌ನ ದ್ವಿರಾಷ್ಟ್ರ ನೀತಿಯನ್ನು ಸಾವರ್ಕರ್‌ ಕೂಡಾ ಪ್ರತಿಪಾದಿಸಿದ್ದರು. ಈಗ ಅವರನ್ನು ದೊಡ್ಡ ದೇಶಭಕ್ತ ಎಂದು ಬಿಂಬಿಸಲಾಗುತ್ತಿದೆ’ ಎಂದರು.

‘ಸರ್ದಾರ್‌ ವಲ್ಲಭಭಾಯಿ ಪಟೇಲ್‌ಗೆ ಗಾಂಧಿ ಅನ್ಯಾಯ ಮಾಡಿದರು ಎಂಬ ಆರೋಪದಲ್ಲೂ ಹುರುಳಿಲ್ಲ. ಪಟೇಲ್‌ ಅವರ ಬಗ್ಗೆ ಗಾಂಧೀಜಿಗೆ ಚೆನ್ನಾಗಿ ತಿಳಿದಿತ್ತು. ಪಟೇಲರ ಆರೋಗ್ಯ ಚೆನ್ನಾಗಿರಲಿಲ್ಲ. ಹಾಗಾಗಿಯೇ ಅವರು ಪಟೇಲ್‌ ಬದಲು, ಅವರಿಗಿಂತ ಹೆಚ್ಚು ಮುತ್ಸದ್ದಿಯಾಗಿದ್ದ ನೆಹರೂ ಪ್ರಧಾನಿ ಆಗಬೇಕೆಂದು ಬಯಸಿದ್ದರು‘ ಎಂದರು.

‘ಸುಭಾಷ್‌ ಚಂದ್ರ ಬೋಸ್ ಅವರಿಗೆ ಗಾಂಧಿ ಅನ್ಯಾಯ ಮಾಡಿದರು ಎಂಬ ಆರೋಪದಲ್ಲೂ ಹುರುಳಿಲ್ಲ. ‌ಗಾಂಧಿ ಮತ್ತು ಬೋಸ್‌ ನಡುವಿನ ಸಂಬಂಧ ತುಂಬಾ ಚೆನ್ನಾಗಿತ್ತು. ಬೋಸ್‌ ಐಎನ್‌ಎಯಲ್ಲಿ ಮಾಡಿದ ಭಾಷಣದಲ್ಲಿ ಗಾಂಧಿಯನ್ನು ಪ್ರಶಂಸೆ ಮಾಡಿದ್ದರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT