ಶನಿವಾರ, 3 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣೇಶೋತ್ಸವ: ಕಳೆಗುಂದಿದ ಸಂಭ್ರಮ

ವಿಘ್ನೇಶ್ವರನ ಮೂರ್ತಿಗಳನ್ನು ಖರೀದಿಸಲು ಗ್ರಾಹಕರ ನಿರಾಸಕ್ತಿ; ವ್ಯಾಪಾರಿಗಳು ಕಂಗಾಲು
Last Updated 6 ಸೆಪ್ಟೆಂಬರ್ 2021, 22:19 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಸರ್ಕಾರವು ಕೋವಿಡ್‌ ನಿಯಂತ್ರಣಕ್ಕೆ ಸಂಬಂಧಿಸಿದ ಹಲವು ಷರತ್ತುಗಳೊಂದಿಗೆ ಸಾರ್ವಜನಿಕ ಗಣೇಶೋತ್ಸವಕ್ಕೆ ಅನುಮತಿ ನೀಡಿದ್ದರೂ ಕೂಡ ನಗರದಲ್ಲಿ ಹಿಂದಿನಷ್ಟು ಸಂಭ್ರಮ ಕಾಣುತ್ತಿಲ್ಲ.

ಗಣೇಶ ಮೂರ್ತಿಗಳ ಖರೀದಿಗೆ ನಾಗರಿಕರು ನಿರಾಸಕ್ತಿ ತೋರುತ್ತಿರುವುದರಿಂದ ವ್ಯಾಪಾರಿಗಳು ಕಂಗಾಲಾಗಿದ್ದಾರೆ. ಗರಿಷ್ಠ ನಾಲ್ಕು ಅಡಿಯ ವಿಗ್ರಹಗಳನ್ನಷ್ಟೇ ಪ್ರತಿಷ್ಠಾಪಿಸಬೇಕೆಂಬ ಸರ್ಕಾರದ ಷರತ್ತು ಗಣೇಶ ಮೂರ್ತಿ ತಯಾರಿಕೆ ಉದ್ಯಮವನ್ನೇ ನಂಬಿದ್ದವರನ್ನು ಅಡಕತ್ತರಿಗೆ ಸಿಲುಕಿಸಿದೆ. ಕೋವಿಡ್‌ನಿಂದಾಗಿ ಈಗಾಗಲೇ ಸಾಕಷ್ಟು ನಷ್ಟ ಅನುಭವಿಸಿರುವ ಅವರು ಈಗ ದಿಕ್ಕೇ ತೋಚದಾಗಿದ್ದಾರೆ. ಒಂದಷ್ಟು ಮೂರ್ತಿಗಳಾದರೂ ಬಿಕರಿಯಾದರೆ ಸಾಕು ಎಂಬ ಮನಸ್ಥಿತಿಯಲ್ಲಿರುವ ಕೆಲವರು ಗ್ರಾಹಕರು ಕೇಳಿದ ಮೊತ್ತಕ್ಕೆ ವಿಗ್ರಹಗಳನ್ನು ಮಾರುವ ಅನಿವಾರ್ಯತೆಗೂ ಸಿಲುಕಿದ್ದಾರೆ.

‘ಸರ್ಕಾರವು ಗಣೇಶೋತ್ಸವಕ್ಕೆ ಅನುಮತಿ ನೀಡುತ್ತದೆಯೊ ಇಲ್ಲವೊ ಎಂಬ ಗೊಂದಲದಲ್ಲೇ ಇದ್ದೆವು. ಹೀಗಾಗಿ ದೊಡ್ಡ ಮೂರ್ತಿಗಳನ್ನು ನಿರ್ಮಿಸಿರಲಿಲ್ಲ. ಹಬ್ಬಕ್ಕೆ ಐದು ದಿನ ಇರುವಾಗ ಸರ್ಕಾರ ಹಸಿರು ನಿಶಾನೆ ತೋರಿದೆ. ಈಗ ಕೆಲವರು ದೊಡ್ಡ ವಿಗ್ರಹಗಳಿಗಾಗಿ ಬೇಡಿಕೆ ಇಡುತ್ತಿದ್ದಾರೆ. ಮೂರು ದಿನಗಳಲ್ಲಿ ಮೂರ್ತಿಗಳ ನಿರ್ಮಾಣ ಅಸಾಧ್ಯ’ ಎಂದು ಬಸವನಗುಡಿಯ ದೊಡ್ಡ ಗಣಪತಿ ರಸ್ತೆಯಲ್ಲಿ ಮೂರ್ತಿಗಳನ್ನು ಮಾರಾಟಕ್ಕಿಟ್ಟಿರುವ ಅಂಬುಜಾ ತಿಳಿಸಿದರು.

‘ಮೊದಲೆಲ್ಲಾ ಸಣ್ಣ ಮೂರ್ತಿಗಳ ಜೊತೆಗೆ ಒಂದಷ್ಟು ದೊಡ್ಡ ವಿಗ್ರಹಗಳನ್ನು ತಯಾರಿಸುತ್ತಿದ್ದೆವು. ಹಬ್ಬಕ್ಕೆ ಎಂಟು ತಿಂಗಳು ಮುಂಚಿತವಾಗಿಯೇ ಮೂರ್ತಿಗಳ ತಯಾರಿಕೆ ಆರಂಭಿಸಬೇಕಾಗುತ್ತದೆ. ಜೇಡಿಮಣ್ಣಿನಿಂದ ತಯಾರಿಸುವುದರಿಂದ ನೆರಳಲ್ಲೇ ಅವುಗಳನ್ನು ಮೂರು ತಿಂಗಳು ಒಣಗಲು ಬಿಡಬೇಕು. ಕೋವಿಡ್‌ಗೂ ಮುನ್ನ 3,500 ಗಣೇಶ ಹಾಗೂ 2,500 ಗೌರಿ ವಿಗ್ರಹಗಳನ್ನು ತಯಾರಿಸುತ್ತಿದ್ದೆವು. ಈ ಬಾರಿ 2,500 ಗಣೇಶ ಮೂರ್ತಿಗಳನ್ನಷ್ಟೇ ನಿರ್ಮಿಸಿದ್ದೇವೆ. ಬಿಕರಿಯಾಗದೆ ಉಳಿದ ವಿಗ್ರಹಗಳನ್ನು ಕರಗಿಸಿಬಿಡುತ್ತೇವೆ. ಮುಕ್ಕಾಲು ಅಡಿಯ ಗಣೇಶ ಮೂರ್ತಿಗೆ ₹200, 1 ಅಡಿಯ ವಿಗ್ರಹಕ್ಕೆ ₹250 ರಿಂದ ₹300 ದರ ನಿಗದಿಪಡಿಸಲಾಗಿದೆ. ತಾತನ ಕಾಲದಿಂದಲೂ ಈ ಕೆಲಸ ಮಾಡಿಕೊಂಡು ಬಂದಿದ್ದೇವೆ’ ಎಂದು ತಲಘಟ್ಟಪುರದ ಭರತ್‌ ಹೇಳಿದರು.

ಹನುಮಂತನಗರದಲ್ಲಿ ಗಣೇಶ ಮೂರ್ತಿಗಳನ್ನು ಮಾರಾಟಕ್ಕಿಟ್ಟಿದ್ದ ರಮೇಶ್‌ ‘ಗಣೇಶ ಮೂರ್ತಿಗಳಿಗೆ ಹಿಂದಿನಷ್ಟು ಬೇಡಿಕೆ ಇಲ್ಲ. ಹಬ್ಬಕ್ಕೆ ಅನುಮತಿ ನೀಡುವ ವಿಚಾರದಲ್ಲಿ ಸರ್ಕಾರ ವಿಳಂಬ ನೀತಿ ಅನುಸರಿಸಿದ್ದರಿಂದ ವ್ಯಾಪಾರಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಗ್ರಾಹಕರು ಕೇಳಿದಷ್ಟೇ ದರಕ್ಕೆ ಮೂರ್ತಿಗಳನ್ನು ಮಾರುವ ಅನಿವಾರ್ಯತೆಗೆ ಸಿಲುಕಿದ್ದೇವೆ. ಮನೆಯಲ್ಲಿ ಮೂರ್ತಿ ಪ್ರತಿಷ್ಠಾಪಿಸುವವರ ಪೈಕಿ ಕೆಲವರು ಚಿಕ್ಕ ಮೂರ್ತಿಗಳನ್ನು ಕಾಯ್ದಿರಿಸುತ್ತಿದ್ದಾರೆ. ಅದೇ ಸಮಾಧಾನ’ ಎಂದರು.

‘ಚುನಾವಣೆ ವೇಳೆ ಜನ ಸೇರಿದರೆ ಸೋಂಕು ಹರಡುವುದಿಲ್ಲವೇ’

‘ಗಣೇಶ ಹಬ್ಬದ ಆಚರಣೆಗೆ ಸರ್ಕಾರ ಇಲ್ಲಸಲ್ಲದ ಷರತ್ತುಗಳನ್ನು ವಿಧಿಸುತ್ತದೆ. ಚುನಾವಣೆ ವೇಳೆ ಅಷ್ಟೊಂದು ಜನ ಸೇರುತ್ತಾರಲ್ಲ. ಅಲ್ಲಿ ಸೋಂಕು ಹರಡುವುದಿಲ್ಲವೇ. ಅದು ಸರ್ಕಾರಕ್ಕೆ ಗೊತ್ತಿಲ್ಲವೇ’ ಎಂದು ಆರ್‌.ವಿ.ರಸ್ತೆಯ ವ್ಯಾಪಾರಿ ನಂದಕಿಶೋರ್‌ ಪ್ರಶ್ನಿಸಿದರು.

‘ಹಿಂದೆಲ್ಲಾ ಜನ ಗಣೇಶ ಮೂರ್ತಿಗಳ ಖರೀದಿಗೆ ಮುಗಿ ಬೀಳುತ್ತಿದ್ದರು. ಬೆಳಿಗ್ಗೆಯಿಂದ ಸಂಜೆಯವರೆಗೂ ವ್ಯಾಪಾರ ನಡೆಯುತ್ತಿತ್ತು. ಈಗ ಜನ ಅಂಗಡಿಗಳತ್ತ ಸುಳಿಯುತ್ತಲೇ ಇಲ್ಲ. ಹೀಗಾಗಿ ಕೆಲಸವಿಲ್ಲದೆ ಕೂರಬೇಕಾಗಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಹಬ್ಬಗಳೇ ಮರೆಯಾಗಬಹುದು’ ಎಂದು ಬೇಸರ ವ್ಯಕ್ತಪಡಿಸಿದರು.

‘ಸಿದ್ಧತೆಗೂ ಸಮಯ ಇಲ್ಲ’

‘ಪ್ರತಿ ವರ್ಷ ಗಣೇಶ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದೆವು. ಈ ಬಾರಿ ಸರ್ಕಾರ ತಡವಾಗಿ ಅನುಮತಿ ನೀಡಿರುವುದರಿಂದ ಸಿದ್ಧತೆಗೂ ಸಮಯ ಇಲ್ಲದಂತಾಗಿದೆ. ವಾರ್ಡ್‌ಗೊಂದು ಮೂರ್ತಿ ಪ್ರತಿಷ್ಠಾಪಿಸಲು ಅನುಮತಿ ನೀಡಿರುವುದೂ ಸರಿಯಲ್ಲ’ ಎಂದು ಜೆ.ಪಿ.ನಗರ ಎರಡನೇ ಹಂತದ ಶಶಾಂಕ್‌ ತಿಳಿಸಿದರು.

‘ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ವಿಗ್ರಹಗಳ ದರ ಕಡಿಮೆ ಇದೆ. ಇದರಿಂದ ವ್ಯಾಪಾರಿ
ಗಳಿಗೆ ದೊಡ್ಡ ಹೊಡೆತ ಬೀಳಬಹುದು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT