ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಯ್ಡಾದಲ್ಲಿ ಸಿದ್ಧವಾಗುತ್ತಿದೆ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ‌ ಪ್ರತಿಮೆ

ಪ್ರತಿಮೆ ವೀಕ್ಷಿಸಿದ ಸಚಿವ ಅಶ್ವತ್ಥನಾರಾಯಣ, ನಿರ್ಮಲಾನಂದನಾಥ ಸ್ವಾಮೀಜಿ
Last Updated 6 ಫೆಬ್ರುವರಿ 2021, 8:52 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮುಂಭಾಗದಲ್ಲಿ ಪ್ರತಿಷ್ಠಿಸಲಾಗುವ 108 ಅಡಿ ಎತ್ತರದ‌ ನಾಡಪ್ರಭು ಕೆಂಪೇಗೌಡರ ಪ್ರತಿಮೆ ನಿರ್ಮಾಣ ಕಾರ್ಯ ದೆಹಲಿ‌ ಸಮೀಪದ ನೋಯ್ಡಾದಲ್ಲಿ ಪ್ರಗತಿಯಲ್ಲಿದ್ದು, ಉಪ ಮುಖ್ಯಮಂತ್ರಿ ‌ಡಾ.ಸಿ.ಎನ್. ಅಶ್ವತ್ಥನಾರಾಯಣ ಮತ್ತು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಾಲಾನಂದನಾಥ ಸ್ವಾಮೀಜಿ ಅದನ್ನು ವೀಕ್ಷಿಸಿದರು.

ಪ್ರಸಿದ್ಧ ಕಲಾವಿದ ರಾಮ್ ಸುತಾರ್ ನೇತೃತ್ವದ ತಂಡ ಈ ಪ್ರತಿಮೆಯನ್ನು ನಿರ್ಮಿಸುತ್ತಿದೆ. ಮೊದಲ ಹಂತದಲ್ಲಿ ಥರ್ಮಾಕೋಲ್‌ನಲ್ಲಿ ಪ್ರತಿಮೆಯ ಮಾದರಿ ನಿರ್ಮಿಸಲಾಗುತ್ತಿದೆ. ಅದರ ಪ್ರಗತಿಯನ್ನು ಸಚಿವರು ಮತ್ತು ಸ್ವಾಮೀಜಿ ಶನಿವಾರ ವೀಕ್ಷಿಸಿದರು.

ಥರ್ಮಾಕೋಲ್‌ನಲ್ಲಿ ತಯಾರಿಸಿದ ಪ್ರತಿಮೆಯಲ್ಲಿ ಏನಾದರೂ ಬದಲಾವಣೆಗಳು ಇದ್ದರೆ ಆ ಸಂದರ್ಭದಲ್ಲೇ ಅದನ್ನು ಸರಿಪಡಿಸಲಾಗುತ್ತದೆ. ಅದೇ ಮಾದರಿಯನ್ನು ಇಟ್ಟುಕೊಂಡು ಕಂಚಿನ ಪ್ರತಿಮೆ ನಿರ್ಮಿಸಲಾಗುತ್ತದೆ.

‘ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಂಪೇಗೌಡರ ಪ್ರತಿಮೆ ಸ್ಥಾಪಿಸಬೇಕು ಎನ್ನುವುದು ಬಹಳ ವರ್ಷಗಳ ಹಿಂದಿನ ಆಸೆ, ಅಭಿಲಾಷೆ. ಅದನ್ನು ಕಾರ್ಯರೂಪಕ್ಕೆ ತರಲು ನಮ್ಮ ಸರ್ಕಾರ ನಿಶ್ಚಿಯಿಸಿದೆ. 23 ಎಕರೆ ಪ್ರದೇಶದಲ್ಲಿ ಕೆಂಪೇಗೌಡ ಹೆರಿಟೇಜ್‌ ಪಾರ್ಕ್‌ನಲ್ಲಿ ಸೂಕ್ತ ಜಾಗದಲ್ಲಿ ಪ್ರತಿಮೆ ಸ್ಥಾಪಿಸಲು ಭೂಮಿ ಪೂಜೆ ಆಗಿದೆ. ಪ್ರತಿಮೆಯನ್ನು ಅಂತರರಾಷ್ಟ್ರೀಯ ಖ್ಯಾತಿಯ ಶಿಲ್ಪಿ ರಾಮ್ ಸುತಾರ್ ಕುಟುಂಬದವರು ನಿರ್ಮಿಸುತ್ತಿದ್ದಾರೆ. ಸ್ವಾಮೀಜಿ ಜೊತೆ ಅದರ ರೂಪುರೇಷೆಯನ್ನು ವೀಕ್ಷಿಸಿದ್ದೇನೆ’ ಎಂದು ಅಶ್ವತ್ಥನಾರಾಯಣ ಹೇಳಿದರು.

‘ಕಳೆದ ಜೂನ್‌ 27ರಂದು ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಂಪೇಗೌಡ ಜಯಂತಿ ದಿನ ಪ್ರತಿಮೆ ಸ್ಥಾಪನೆಗೆ ಶಂಕುಸ್ಥಾಪನೆ ನಡೆದಿದೆ. ರಾಜ್ಯ ಸರ್ಕಾರ ನಿರ್ಧರಿಸಿದಂತೆ ಪ್ರತಿಮೆ ಸ್ಥಾಪಿಸಲು ಸಂಕಲ್ಪ ಮಾಡಿದ್ದೇವೆ. ಪ್ರತಿಮೆ ನಿರ್ಮಾಣದ ಪ್ರಗತಿ ವೇಗವಾಗಿ ನಡೆದಿದೆ. ಆದರೆ, ಕೊರೊನಾ ಕಾರಣದಿಂದ ಸ್ವಲ್ಪ ವಿಳಂಬವೂ ಆಗಿದೆ. ಮುಂದಿನ ಜಯಂತಿ ವೇಳೆಗೆ ಸಿದ್ಧ ಆಗಬೇಕಿತ್ತು. ಎಲ್ಲ ವೈಜ್ಞಾನಿಕ ಕ್ರಮಗಳನ್ನು ತೆಗೆದುಕೊಂಡು ರಿಯಲ್‌ ಟೈಮ್‌ನಲ್ಲಿ ಮಾದರಿ ಸಿದ್ಧವಾಗುತ್ತಿದೆ. 3–4 ಹಂತದಲ್ಲಿ ಕೆಲಸ ಮುಗಿಯಲು 9–10 ತಿಂಗಳು ಬೇಕಾಗುತ್ತದೆ’ ಎಂದು ನಿರ್ಮಾಲಾನಂದನಾಥ ಸ್ವಾಮೀಜಿ ಹೇಳಿದರು.

ಶಿಲ್ಪಿ ರಾಮ್ ಸುತಾರ್ ಮಾತನಾಡಿ, ‘ಕತ್ತಿನ ಭಾಗದವರೆಗೆ ಸುಮಾರು 80 ಅಡಿ ಎತ್ತರದಲ್ಲಿ ಥರ್ಮಾಕೋಲ್‌ನಲ್ಲಿ ಪ್ರತಿಮೆ ನಿರ್ಮಿಸಿದ್ದೇವೆ. ಹೆಚ್ಚು ಎತ್ತರದ ಪ್ರತಿಮೆ ಆಗಿರುವುದರಿಂದ ನಿರ್ಮಾಣಕ್ಕೆ ಹೆಚ್ಚು ಸಮಯ ತಗಲುತ್ತದೆ. ಬಳಿಕ ಪ್ರತಿಮೆ ಮಾದರಿಯನ್ನು ಕ್ಲೇ ಮತ್ತು ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ನಲ್ಲಿ ಮಾಡುತ್ತೇವೆ. ಎರಡು ಭಿನ್ನ ರೀತಿಯಲ್ಲಿ ನಿರ್ಮಾಣ ಕೆಲಸ ನಡೆಯಲಿದೆ. ನಿತ್ಯ 10 ಟನ್‌ ಕಂಚು ಕರಗಿಸಿ, ಅದನ್ನು ಕ್ಲೇ ಮತ್ತು ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ನಲ್ಲಿ ತಯಾರಿಸಿದ ಮಾದರಿಯ ಒಳಗೆ ಸುರಿಯಲಾಗುತ್ತದೆ. ಮರುದಿನ ಅದನ್ನು ತೆರೆಯುತ್ತೇವೆ. ಹೀಗೆ, ಎಲ್ಲ ಭಾಗಗಳು ಸಿದ್ಧಗೊಂಡ ಬಳಿಕ ಅವುಗಳನ್ನೆಲ್ಲ ಜೋಡಿಸಲಾಗುತ್ತದೆ’ ಎಂದು ವಿವರಿಸಿದರು.

ನಾಡಪ್ರಭು ಕೆಂಪೇಗೌಡರ ಪ್ರತಿಮೆ ನಿರ್ಮಾಣ ಕಾರ್ಯವನ್ನು ಸಚಿವ ಅಶ್ವತ್ಥನಾರಾಯಣ, ನಿರ್ಮಲಾನಂದನಾಥ ಸ್ವಾಮೀಜಿ ವೀಕ್ಷಿಸಿದರು.
ನಾಡಪ್ರಭು ಕೆಂಪೇಗೌಡರ ಪ್ರತಿಮೆ ನಿರ್ಮಾಣ ಕಾರ್ಯವನ್ನು ಸಚಿವ ಅಶ್ವತ್ಥನಾರಾಯಣ, ನಿರ್ಮಲಾನಂದನಾಥ ಸ್ವಾಮೀಜಿ ವೀಕ್ಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT