ನಿರಂತರ ಅಭಿವೃದ್ಧಿ, ಸರ್ವರಿಗೂ ಸಮಪಾಲು: ಸಿಎಂ ಬೊಮ್ಮಾಯಿ

ಹೂವಿನಹಡಗಲಿ/ಹೊಸಪೇಟೆ (ವಿಜಯನಗರ): ‘ನಿರಂತರವಾಗಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿರಬೇಕು. ಸರ್ವರಿಗೂ ಸಮಪಾಲು ಸಿಕ್ಕರೆ ಸಮಗ್ರ ಅಭಿವೃದ್ಧಿ ಸಾಧ್ಯ. ಈ ಆಶಯದೊಂದಿಗೆ ಬಿಜೆಪಿ ಸರ್ಕಾರ ಕೆಲಸ ಮಾಡುತ್ತಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇಲ್ಲಿನ ಜಿ.ಬಿ.ಆರ್. ಕ್ರೀಡಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಬಿಜೆಪಿ ಜನಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ಶಿಕ್ಷಣ, ಉದ್ಯೋಗ ಕ್ಷೇತ್ರದಲ್ಲಿ ಎಲ್ಲರಿಗೂ ಸಂಪೂರ್ಣ ಪಾಲು ಸಿಗಬೇಕು. ಆರೋಗ್ಯ ಕ್ಷೇತ್ರದ ಸವಲತ್ತುಗಳು ಎಲ್ಲರಿಗೂ ತಲುಪಬೇಕು ಎಂದರು.
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರು ಹೆಚ್ಚಿರುವುದರಿಂದ ಮೀಸಲಾತಿ ಪ್ರಮಾಣ ಹೆಚ್ಚಿಸಲಾಗಿದೆ. 60 ವರ್ಷಗಳಿಂದ ಒಂದೇ ಮೀಸಲು ಪ್ರಮಾಣ ಇತ್ತು. ಹಲವರಿಗೆ ಜಮೀನು ಇಲ್ಲ. ಕೂಲಿ ಕೆಲಸವೇ ಗತಿ. ಮಕ್ಕಳಿಗೆ ಶಿಕ್ಷಣ ಕೊಡಲಾರದ ಪರಿಸ್ಥಿತಿ ಇದೆ. ಮದುವೆ ಮಾಡಬೇಕಾದರೆ ಆಸ್ತಿ ಅಡವಿಡಬೇಕು. ಸ್ವಾವಲಂಬಿ, ಸ್ವಾಭಿಮಾನಿ ಬದುಕಿಗಾಗಿ ಮೀಸಲಾತಿ ಹೆಚ್ಚಿಸಲಾಗಿದೆ. ಆದರೆ, ಕಾಂಗ್ರೆಸ್ಸಿಗರು ಇದನ್ನು ವಿರೋಧಿಸುತ್ತಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ರಮೇಶ ಕುಮಾರ್ ಹೇಳಿಕೆ ಕಾಂಗ್ರೆಸ್ ಹಗಲು ದರೋಡೆಗೆ ಸಾಕ್ಷಿ: ಯಡಿಯೂರಪ್ಪ
ರೈತರು, ನೇಕಾರರು, ಮೀನುಗಾರರು, ಚಾಲಕರು, ದುಡಿಯುವ ವರ್ಗದವರಿಗೆ ಸ್ವಾವಲಂಬಿ ಬದುಕು ಸಾಗಿಸಲು, ಸ್ವಯಂ ಉದ್ಯೋಗಕ್ಕಾಗಿ ₹50 ಸಾವಿರ ಸಾಲ ನೀಡಲಾಗುತ್ತದೆ. ದುಡಿಯುವ ವರ್ಗಕ್ಕೆ ಹೆಚ್ಚಿನ ಮಹತ್ವ ನಮ್ಮ ಸರ್ಕಾರ ಕೊಡುತ್ತಿದೆ. 5 ಲಕ್ಷ ಯುವಕರಿಗೆ ಕೆಲಸ ಕೊಡುವ ಗುರಿ ಹೊಂದಲಾಗಿದೆ. ಸ್ತ್ರೀ ಶಕ್ತಿ ಗುಂಪುಗಳಿಗೆ ನೆರವು ಒದಗಿಸಿ ಆರ್ಥಿಕ ಬಲಪಡಿಸಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ಸಾರಿಗೆ ಸಚಿವ ಬಿ. ಶ್ರೀರಾಮುಲು ಮಾತನಾಡಿ, ಕಾಂಗ್ರೆಸ್ ಎಲ್ಲೆಡೆ ಅಸ್ತಿತ್ವ ಕಳೆದುಕೊಂಡಿದೆ. ಅದು ಮಟಾಶ್ ಆಗಿದೆ. ಭಾರತ್ ಜೋಡೋ ಹೆಸರಲ್ಲಿ ನಾಟಕವಾಡುತ್ತಿದೆ ಎಂದು ಆರೋಪಿಸಿದರು.
ಮಾಜಿ ಮುಖ್ಯಮಂತ್ರಿಯೂ ಆದ ಶಾಸಕ ಬಿ.ಎಸ್. ಯಡಿಯೂರಪ್ಪ, ಸಚಿವರಾದ ಬಿ. ಶ್ರೀರಾಮುಲು, ಗೋವಿಂದ ಕಾರಜೋಳ, ಶಶಿಕಲಾ ಜಿಲ್ಲೆ, ಆನಂದ್ ಸಿಂಗ್, ಸಂಸದ ವೈ. ದೇವೇಂದ್ರಪ್ಪ, ಶಾಸಕರಾದ ಕರುಣಾಕರ ರೆಡ್ಡಿ, ಶಶಿಲ್ ನಮೋಶಿ, ಎನ್. ರವಿಕುಮಾರ, ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ, ಮುಖಂಡರಾದ ಓದೋ ಗಂಗಪ್ಪ, ಚಂದ್ರ ನಾಯ್ಕ, ಸಿದ್ದೇಶ್ ಯಾದವ್ ಇತರರಿದ್ದರು.
ಇದನ್ನೂ ಓದಿ: ಹಿಂದಿನ ಕಾಂಗ್ರೆಸ್ ಸರ್ಕಾರ ಹೈಕಮಾಂಡ್ಗೆ ಎಟಿಎಂ ಆಗಿತ್ತು: ಸಿಎಂ ಬೊಮ್ಮಾಯಿ
ಪುರಸಭೆ ಜಾಗ ಕನಕದಾಸರ ಸಂಘಕ್ಕೆ: ಸಿಎಂ
‘ಹೂವಿನಹಡಗಲಿಯ ಪುರಸಭೆ ಜಾಗವನ್ನು ಕನಕದಾಸರ ಸಂಘಕ್ಕೆ ನೀಡಲಾಗುವುದು. ಅದೇ ರೀತಿ ಹೂವಿನಹಡಗಲಿಯ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.
ಸಿಂಗಟಾಲೂರು ನೀರಾವರಿ ಯೋಜನೆಗೆ ಯಡಿಯೂರಪ್ಪನವರು ಮುಖ್ಯಮಂತ್ರಿಯಿದ್ದ ಸಂದರ್ಭದಲ್ಲಿ ಚಾಲನೆ ನೀಡಲಾಗಿತ್ತು. ನಾನಾಗ ಜಲಸಂಪನ್ಮೂಲ ಸಚಿವನಾಗಿದ್ದೆ. 42 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಸಿಕ್ಕಿದೆ. ಕೆರೆ ತುಂಬಿಸುವ ಯೋಜನೆ ಕೂಡ ಪೂರ್ಣಗೊಳಿಸಲಾಗುವುದು. ತಳಕಲ್ಲು ಕೆರೆ ಯೋಜನೆಗೆ ₹2 ಕೋಟಿ ಮಂಜೂರು ಮಾಡಿದ್ದು, ಆದಷ್ಟು ಶೀಘ್ರ ಕೆಲಸ ಪೂರ್ಣಗೊಳಿಸಿ ಉದ್ಭಾಟಿಸಲಾಗುವುದು. ಹಡಗಲಿ ಅಂತರ್ಜಲ ಹೆಚ್ಚಾಗಬೇಕು. ಬರ ನೀಗಿಸಲು ಬಿಜೆಪಿ ಸರ್ಕಾರ ಕೆಲಸ ಮಾಡಿದೆ ಎಂದು ಹೇಳಿದರು.
ಸಿದ್ದರಾಮಯ್ಯ-ಡಿಕೆಶಿ ಜೋಡಿಸುವ ಯಾತ್ರೆ: ಕಾರಜೋಳ
‘ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ 'ಭಾರತ್ ಜೋಡೋ' ಯಾತ್ರೆ ಸಿದ್ದರಾಮಯ್ಯ-ಡಿ.ಕೆ. ಶಿವಕುಮಾರ ಅವರನ್ನು ಜೋಡಿಸುವ ಯಾತ್ರೆ’ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ವ್ಯಂಗ್ಯವಾಡಿದರು.
ಜಿಲ್ಲೆಯ ಹೂವಿನಹಡಗಲಿಯಲ್ಲಿ ಗುರುವಾರ ಏರ್ಪಡಿಸಿದ್ದ ಬಿಜೆಪಿ ಜನಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ಹಸಿ ಸುಳ್ಳು ಹೇಳಲು ಭಾರತ್ ಜೋಡೋ ಯಾತ್ರೆ ಮೂಲಕ ಕಾಂಗ್ರೆಸ್‌ನವರು ಜನರ ನಡುವೆ ಬರುತ್ತಿದ್ದಾರೆ. ಅನ್ನ ಭಾಗ್ಯ ಯೋಜನೆ ತಮ್ಮ ಯೋಜನೆಯೆಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ವಾಸ್ತವದಲ್ಲಿ ಅದು ಜನತಾ ಸರ್ಕಾರದ ಅವಧಿಯಲ್ಲಿ ಜಾರಿಗೆ ತರಲಾಗಿತ್ತು. ಕಾಂಗ್ರೆಸ್ ನವರು ಈ ದೇಶ, ರಾಜ್ಯಕ್ಕೆ ಏನೂ ಮಾಡಿಲ್ಲ. ಮೋಸ ಮಾಡುವ, ಸುಳ್ಳು ಹೇಳುವ ಕಾಂಗ್ರೆಸ್ಸಿಗರ ಕೈಗೆ ಅಧಿಕಾರ ಕೊಡಬೇಡಿ ಎಂದರು.
ನುಡಿದಂತೆ ನಡೆದ ಸರ್ಕಾರ ನಮ್ಮದು: ಸಚಿವೆ ಶಶಿಕಲಾ
‘ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದವರ ಮೀಸಲಾತಿ ಹೆಚ್ಚಿಸುವ ಬೇಡಿಕೆ ಈಡೇರಿಸುವುದರ ಮೂಲಕ ನುಡಿದಂತೆ ನಡೆದ ಸರ್ಕಾರ ನಮ್ಮದು’ ಎಂದು ಮುಜರಾಯಿ ಖಾತೆ ಸಚಿವೆ ಶಶಿಕಲಾ ಅಣ್ಣಾಸಾಹೇಬ್ ಜೊಲ್ಲೆ ಹೇಳಿದರು.
ಜಿಲ್ಲೆಯ ಹೂವಿನಹಡಗಲಿಯಲ್ಲಿ ಗುರುವಾರ ಏರ್ಪಡಿಸಿದ್ದ ಬಿಜೆಪಿ ಜನಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ಕೆಲಸದ ಬಗ್ಗೆ ಕಾಂಗ್ರೆಸ್ ನವರು ಟೀಕಿಸುತ್ತಿದ್ದಾರೆ. ಆದರೆ, ಅಧಿಕಾರದಲ್ಲಿದ್ದಾಗ ಅವರೇಕೆ ಈ ಕೆಲಸ ಮಾಡಿಲಿಲ್ಲ. ಜನರ ಭಾವನೆಗಳಿಗೆ ಸ್ಪಂದಿಸಿ ಸರ್ಕಾರ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದೆ. ಈಗ ಸಂಕಲ್ಪ ಯಾತ್ರೆ ಮೂಲಕ 150 ಸ್ಥಾನಗಳಲ್ಲಿ ಗೆದ್ದು ಮತ್ತೆ ಸರ್ಕಾರ ರಚಿಸುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.