ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಳಿ ಮಾತು: ಬಿಎಸ್‌ವೈ ಆಪ್ತರ ನಡೆ ನಿಗೂಢ?

ಗಾಳಿ ಮಾತು
Last Updated 1 ಏಪ್ರಿಲ್ 2023, 6:15 IST
ಅಕ್ಷರ ಗಾತ್ರ

ಅಧಿಕಾರದಿಂದ ಇಳಿಸಿದರೂ ಬಿಜೆಪಿಯಲ್ಲಿ, ರಾಜ್ಯಕಾರಣದಲ್ಲಿ ತಮ್ಮದೇ ಕಿಮ್ಮತ್ತು–ಗಮ್ಮತ್ತು ಹೊಂದಿರುವ ‘ಶಿಕಾರಿ’ಪುರದ ‘ರಾಜಾ ಹುಲಿ’ ಬಿ.ಎಸ್‌. ಯಡಿಯೂರಪ್ಪನವರು ಈ ಚುನಾವಣೆಯಲ್ಲಿ ಆಡುವ ಆಟ ಸಖತ್‌ ಮಜವಾಗಿರುತ್ತದೆ ಎಂಬ ಮಾತುಗಳು ಹರಿದಾಡುತ್ತಲೇ ಇವೆ.

ಸಿದ್ದರಾಮಯ್ಯ ವಿರುದ್ಧ ವರುಣಾದಿಂದ ಬಿ.ವೈ. ವಿಜಯೇಂದ್ರ ಅವರನ್ನು ವರಿಷ್ಠರು ಕಣಕ್ಕೆ ಇಳಿಸಬಹುದು ಎಂದು ಸುದ್ದಿ ಹರಿದಾಡಿಸಿದ್ದೇ ತಡ, ಪ್ರಭಾವಿ ನಾಯಕನ ವಿರುದ್ಧ ತಮ್ಮ ‘ಪ್ರಭಾವಿ’ ಮಗ ಸ್ಪರ್ಧಿಸುವುದೇ ಇಲ್ಲ ಎಂದು ಬಿಎಸ್‌ವೈ ಹೇಳಿಬಿಟ್ಟರು. ಇದರ ಹಿಂದೆ ಬಲವಾದ ಕಾರಣವೂ ಇದೆ ಎಂಬ ಗುಸುಗುಸು ಎದ್ದಿದೆ.

ಯಡಿಯೂರಪ್ಪ ಆಪ್ತವಲಯದಲ್ಲಿ ಗುರುತಿಸಿಕೊಂಡು ಹಲವರು ಕಾಂಗ್ರೆಸ್ ಕಡೆ ಜಿಗಿದಿದ್ದು, ಕೆಲವರು ಬಿಜೆಪಿಯ ಪ್ರಭಾವಿಗಳ ಎದುರು ಸೆಣಸಲು ಅಣಿಯಾಗುತ್ತಿದ್ದಾರೆ. ಆಪ್ತಬಣದ ನಡೆಯ ಹಿಂದೆ ರಹಸ್ಯ ಅಡಗಿದ್ದು, ಈ ರಹಸ್ಯ ಬೇಧಿಸುವುದು ಹೇಗೆ ಎಂದು ‘ಚಾಣಕ್ಯ’ರೇ ತಲೆ ಕೆಡಿಸಿಕೊಂಡಿದ್ದಾರಂತೆ. . .

ಮೋಹನ ಲಿಂಬಿಕಾಯಿ ಕಾಂಗ್ರೆಸ್ ಸೇರಿದ್ದು, ಆಯನೂರು ಮಂಜುನಾಥರನ್ನು ಸೆಳೆಯಲು ‘ಕೈ’ ನಾಯಕರು ತಂತ್ರ ರೂಪಿಸಿದ್ದಾರೆ. ಯಡಿಯೂರಪ್ಪ ನಿಕಟವರ್ತಿಯಾಗಿದ್ದ ರುದ್ರೇಶ್, ರಾಮನಗರ ತೊರೆದು ಚಾಮರಾಜನಗರ ಕಡೆ ಮುಖಮಾಡಿದ್ದೇಕೆ? ಇದೇ ಬಣದಲ್ಲಿದ್ದ ತಮ್ಮಯ್ಯ, ಚಿಕ್ಕಮಗಳೂರಿಗೆ ದೌಡಾಯಿಸಿದ್ದೇಕೋ? ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಆಪ್ತವರ್ಗದಲ್ಲಿ ಮಂಜುನಾಥ ಕುನ್ನೂರ ಕಾಂಗ್ರೆಸ್‌ ಅಪ್ಪಿಕೊಂಡಿದ್ದೇಕೆ? ಎಲ್ಲೋ ಏನೋ ನಡೆಯುತ್ತಿದೆಯೇ ಎಂಬ ಕತೆಗಳು ಅಕ್ಕಪಕ್ಕದಲ್ಲೇ ಇರುವ ಯಡಿಯೂರಪ್ಪ ನಿವಾಸ ‘ಕಾವೇರಿ’ ಹಾಗೂ ಮುಖ್ಯಮಂತ್ರಿ ಕಚೇರಿ ‘ಕೃಷ್ಣಾ’ದ ಗೋಡೆಗಳನ್ನು ಅಪ್ಪಳಿಸುತ್ತಿವೆಯಂತಲ್ಲ‌. . .!!!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT