ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕ್ಸಿಜನ್‌ ಕೊರತೆಯಿಂದ ಜೀವ ಹೋದರೆ ಸರ್ಕಾರವೇ ಹೊಣೆ: ಎಚ್‌.ಕೆ. ಪಾಟೀಲ

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪಗೆ ಪತ್ರ ಬರೆದು ಎಚ್ಚರಿಕೆ
Last Updated 20 ಆಗಸ್ಟ್ 2020, 9:23 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದಲ್ಲಿ ಆಕ್ಸಿಜನ್‌ ಕೊರತೆ ತೀವ್ರವಾಗಿದ್ದು, ಗಂಭೀರ ಮತ್ತು ದೃಢವಾದ ತಕ್ಷಣದ ಹೆಜ್ಜೆ ಇಡದೇ ಹೋದರೆ ಜನ ಆಸ್ಪತ್ರೆಗಳಲ್ಲಿ ಭಾರಿ ಸಂಖ್ಯೆಯಲ್ಲಿ ಸಾವಿಗೀಡಾಗಬೇಕಾದ ಪ್ರಸಂಗ ಬಂದೀತು’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಪತ್ರ ಬರೆದು ಕಾಂಗ್ರೆಸ್‌ ಶಾಸಕ ಎಚ್.ಕೆ. ಪಾಟೀಲ ಎಚ್ಚರಿಕೆ ನೀಡಿದ್ದಾರೆ.

‘ಈಗಾಗಲೇ 10–12 ಜನರು ಆಕ್ಸಿಜನ್‌ ಕೊರತೆಯಿಂದ ಸಾವನ್ನಪ್ಪಿದ್ದಾರೆ. ಇಂಥ ಸ್ಥಿತಿಯಲ್ಲಿ ಏನು ಕ್ರಮ ತೆಗೆದುಕೊಳ್ಳಬೇಕು, ವೈಜ್ಞಾನಿಕ ಕ್ರಮ ಏನು, ಕಾನೂನಾತ್ಮಕ ಕ್ರಮಗಳೇನು, ಮೂಲಸೌಲಭ್ಯದಲ್ಲಿ ಬದಲಾವಣೆ ಅಗತ್ಯವಿದೆಯೇ ಹೀಗೆ ಹೆಚ್ಚಿನ ವ್ಯವಸ್ಥೆಯನ್ನು ತಕ್ಷಣ ಕೈಗೊಳ್ಳ‌ಬೇಕು’ ಎಂದೂ ಅವರು ಆಗ್ರಹಿಸಿದ್ದಾರೆ.

‘ಕೊರೊನಾ ಮಹಾಮಾರಿ ದಿನೇ ದಿನೇ ಹೆಚ್ಚು ವ್ಯಾಪಕವಾಗುತ್ತಿದೆ. ತನ್ನ ಲಕ್ಷಣದ ಪರಿಣಾಮಗಳನ್ನು ಬದಲಾಯಿಸುತ್ತಿದೆ. ಒಂದು ಅಂದಾಜಿನಂತೆ, ನಮ್ಮ ರಾಜ್ಯದಲ್ಲಿ ಸಾವಿನ ಪ್ರಮಾಣ ಜೂನ್, ಜುಲೈಮ ಆಗಸ್ಟ್ 15ರ ವರೆಗಿನ ದಿನಗಳನ್ನು ಗಮನಿಸಿದಾಗ ಜೂನ್‍ಗಿಂತ 2-3 ಪಟ್ಟು ಜಾಸ್ತಿ ಆಗಿದೆ. ಸರ್ಕಾರಿ ಅಂಕಿ-ಅಂಶಗಳ ಪ್ರಕಾರ ಸಾವಿನ ಪ್ರಮಾಣ ಶೇ 1.5 ಇದ್ದದ್ದು ಶೇ 3 ಕ್ಕೆ ಏರಿಕೆಯಾಗಿರುವುದು ಭಯಾನಕ ಅಂಶ’ ಎಂದೂ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

‘ಕೆಲವು ದಿನಗಳಿಂದ ಕೋವಿಡ್‌ನಿಂದ ಬಳಲುವವರಿಗೆ ಆಕ್ಸಿಜನ್ ಅವಶ್ಯಕತೆ ಭಾರಿ ಪ್ರಮಾಣದಲ್ಲಿ ಬೇಕಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಲಿಕ್ವಿಡ್ ಆಕ್ಸಿಜನ್ ವ್ಯವಸ್ಥೆ ಮಾಡಿಕೊಂಡಿಲ್ಲ. ಈಗ ತರಾತುರಿ ನಡೆದಿದೆ. ಆಕ್ಸಿಜನ್ ಸಿಲಿಂಡರ್‌ಗಳ ಪೂರೈಕೆ ಆಗುತ್ತಿಲ್ಲ. ಲಿಕ್ವಿಡ್ ಆಕ್ಸಿಜನ್ ಸಮರ್ಪಕವಾಗಿ ಪೂರೈಸುತ್ತಿಲ್ಲ. ಕಾರಣಗಳನ್ನು ತಿಳಿದುಕೊಂಡು, ಸಮಸ್ಯೆ ಬಗೆಹರಿಯಬೇಕು’ ಎಂದೂ ಪಾಟೀಲ ಆಗ್ರಹಿಸಿದ್ದಾರೆ.

‘ತಮಿಳುನಾಡಿನಿಂದ ಬರುತ್ತಿದ್ದ ಲಿಕ್ವಿಡ್ ಆಕ್ಸಿಜನ್ ಹಾಗೂ ಗ್ಯಾಸ್ ಸಿಲಿಂಡರ್‌ಗಳು ಅವರ ರಾಜ್ಯದಲ್ಲಿ ನೀಡಿ ಹೆಚ್ಚಾದರೆ ಮಾತ್ರ ಕರ್ನಾಟಕಕ್ಕೆ ಎಂಬ ನಿಲುವು ಅಲ್ಲಿನ ಅಧಿಕಾರಿಗಳು ತೆಗೆದುಕೊಂಡಿದ್ದಾರೆ. ಇದರಿಂದ ಭಾರಿ ಪ್ರಮಾಣದ ಸಮಸ್ಯೆ ಸೃಷ್ಟಿಯಾಗಿದೆ. ಮಹಾರಾಷ್ಟ್ರದಿಂದ ಸದ್ಯ ಈಗ ಸಮಸ್ಯೆ ಇಲ್ಲ. ಬರುವ ದಿನಗಳಲ್ಲಿಯ ಪರಿಸ್ಥಿತಿ ಕುರಿತು ಮುಂದಾಲೋಚನೆ ಮಾಡಬೇಕು.‌ ತಕ್ಷಣ ಜನಪರ ಕೆಲಸ ಮಾಡುವ ಪ್ರಾಮಾಣಿಕ ಅಧಿಕಾರಿಗಳ ನೇತೃತ್ವದಲ್ಲಿ ಒಂದು ಕಾರ್ಯಪಡೆ ರಚಿಸಿ, ಸಿಲಿಂಡರ್‌, ಲಿಕ್ವಿಡ್‌ ಆಕ್ಸಿಜನ್‌, ಅಗತ್ಯ ಮೂಲಸೌಲಭ್ಯಗಳ ಮೇಲೆ ನಿಗಾ, ತೀರ್ಮಾನ ತೆಗೆದುಕೊಳ್ಳುವ ಹೊಣೆಗಾರಿಕೆ ನೀಡಬೇಕು’ ಎಂದಿದ್ದಾರೆ.

‘ಮೆಡಿಕಲ್ ಆಕ್ಸಿಜನ್‌ ಕೊರತೆಯ ಪರಿಸ್ಥಿತಿ ಹೀಗೆ ಮುಂದುವರಿದರೆ, ಕೊರೊನಾ ಪೀಡಿತರಿಗೆ ಕೈಗಾರಿಕಾ ಆಕ್ಸಿಜನ್‌ ಬಳಸುವ ಅನಿವಾರ್ಯವಾದಂತೆ ಗೋಚರಿಸುತ್ತಿದೆ. ಅದನ್ನು ಬಳಕೆ ಮಾಡಲು ಕಾನೂನಿನ ತೊಡಕು ಇರಲು ಸಾಧ್ಯವಿದೆ. ಕೈಗಾರಿಕಾ ಆಕ್ಸಿಜನ್‌ ಕೂಡಾ ವೈದ್ಯಕೀಯ ಆಕ್ಸಿಜನ್‌ದಷ್ಟೆ ಶುದ್ಧವಾಗಿಸಬಹುದು. ಇಲ್ಲಿ ನೈಜ ಸಮಸ್ಯೆ ಎಂದರೆ, ಸಿಲಿಂಡರ್‌ಗಳ ಕೊರತೆ. ಕೈಗಾರಿಕಾ ಆಕ್ಸಿಜನ್‌ ಸಿಲಿಂಡರ್‌ ಬಳಕೆಗೆ ಸರ್ಕಾರ ಅವಕಾಶ ಮಾಡಿಕೊಡಬೇಕು. ಆ ವ್ಯವಸ್ಥೆ ಮಾರ್ಪಡಿಸಿದರೆ ಸಮಸ್ಯೆ ಬಗೆಹರಿದೀತು’ ಎಂದೂ ಅವರು ಪತ್ರದಲ್ಲಿ ಪ್ರಸ್ತಾವಿಸಿದ್ದಾರೆ.

‘ಕೆಲವು ಕಾರ್ಖಾನೆಗಳು ತಮ್ಮ ಕಾರ್ಖಾನೆಯ ಬಳಕೆಗಾಗಿ ಮಾತ್ರ ಮೀಸಲಿಟ್ಟುಕೊಂಡಿವೆ. ಅದು ಕೇವಲ ಕಾರ್ಖಾನೆಯ ಬಳಕೆಗೆ ಮಾತ್ರ ಉಪಯೋಗಿಸಲಾಗುತ್ತಿವೆ. ಅವುಗಳನ್ನು ತಕ್ಷಣ ಕೊರೊನಾ ಪೀಡಿತರಿಗೆ ನೀಡಲು ಆದೇಶಿಸಬೇಕು. ತೋರಣಗಲ್‍ನಲ್ಲಿರುವ ಜಿಂದಾಲ್ ಕಂಪನಿಯ ದೊಡ್ಡ ಘಟಕ ಮತ್ತು ಮರಿಯಮ್ಮನಹಳ್ಳಿಯ ಜಿಂದಾಲ್ ಕಂಪನಿಯ ಆಕ್ಸಿಜನ್ ಘಟಕಗಳನ್ನು ರಾಜ್ಯದಲ್ಲಿ ತನ್ನ ಪೂರ್ಣ ಸಾಮರ್ಥ್ಯವನ್ನು ಈ ತುರ್ತುಪರಿಸ್ಥಿತಿಯಲ್ಲಿ ಜನರಿಗೆ ದೊರಕಿಸುವಂತೆ ಮಾಡಬೇಕು’ ಎಂದೂ ಪಾಟೀಲ ಸಲಹೆ ನೀಡಿದ್ದಾರೆ.

ಪ್ರವಾಹ ನಿರ್ಲಕ್ಷ್ಯ: ‘ಉತ್ತರ ಕರ್ನಾಟಕದಲ್ಲಿ ಪ್ರವಾಹ ಭೀತಿ ಎದುರಾಗಿದೆ. ಕಳೆದ ವರ್ಷ ಸರ್ಕಾರ ಮುಂಜಾಗ್ರತಾ ಕ್ರಮ ಕೈಗೊಂಡಿರಲಿಲ್ಲ. ಬೋಟ್ ವ್ಯವಸ್ಥೆ, ಪುನರ್ ವಸತಿ ವ್ಯವಸ್ಥೆ ಮಾಡಿರಲಿಲ್ಲ. ಈ ವರ್ಷ ಹಾಗಾಗಬಾರದು. ಸರ್ಕಾರ ಮುಂಜಾಗ್ರತೆ ವಹಿಸಬೇಕು’ ಎಂದೂ ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT