ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ರಗ್ಸ್‌ ಪ್ರಕರಣ ದುರ್ಬಳಕೆಗೆ ಸರ್ಕಾರದ ಯತ್ನ: ಸಿದ್ದರಾಮಯ್ಯ ಆರೋಪ

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪ
Last Updated 11 ಸೆಪ್ಟೆಂಬರ್ 2020, 19:03 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ವೈರಸ್‌ ಸೋಂಕು ತಡೆ ಮತ್ತು ಅತಿವೃಷ್ಟಿ ಸಂತ್ರಸ್ತರಿಗೆ ಪರಿಹಾರ ನೀಡುವುದರಲ್ಲಿನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ರಾಜ್ಯ ಸರ್ಕಾರ ಡ್ರಗ್ಸ್‌ ಪ್ರಕರಣದ ತನಿಖೆಯನ್ನು ದುರ್ಬಳಕೆ ಮಾಡಿಕೊಳ್ಳಲು ಯತ್ನಿಸುತ್ತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

‘ಮಾದಕವಸ್ತುಗಳ ಹಾವಳಿ ಕುರಿತು ತನಿಖೆಯನ್ನು ಕಾಂಗ್ರೆಸ್‌ ಸ್ವಾಗತಿಸುತ್ತದೆ. ಮಾದಕ ವಸ್ತುಗಳ ಹಾವಳಿಯನ್ನು ನಿರ್ಮೂಲನೆ ಮಾಡುವ ಪ್ರಾಮಾಣಿಕ ಉದ್ದೇಶ ನಿಮಗೆ ಇದ್ದರೆ ನಿಮ್ಮ ಸಂಪುಟದ ಸಚಿವರು ಮತ್ತು ಪಕ್ಷದ ನಾಯಕರು ಬೀದಿಯಲ್ಲಿ ನಿಂತು ಬಾಯಿಗೆ ಬಂದಂತೆ ಮಾತನಾಡುವುದನ್ನು ನಿಲ್ಲಿಸಿ, ತನಿಖೆ ನಡೆಸುತ್ತಿರುವ ಪೊಲೀಸರಿಗೆ ಮುಕ್ತ ಅವಕಾಶ ನೀಡಿ’ ಎಂದು ಆಗ್ರಹಿಸಿದ್ದಾರೆ.

'ಡ್ರಗ್ಸ್‌ ಹಗರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ತಮ್ಮವರನ್ನು ರಕ್ಷಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಅದಕ್ಕಾಗಿ ಈ ಹಗರಣವನ್ನು ಬಳಸಿಕೊಂಡು ವಿರೋಧ ಪಕ್ಷದ ನಾಯಕರ ಚಾರಿತ್ರ್ಯಹರಣ ಮಾಡುವ ಪ್ರಯತ್ನವನ್ನೂ ಮಾಡುತ್ತಿದೆ. ಇದನ್ನು ಕಾಂಗ್ರೆಸ್‌ ತೀವ್ರವಾಗಿ ಖಂಡಿಸುತ್ತದೆ’ ಎಂದಿದ್ದಾರೆ.

ಯಾರ ಮೇಲೆ ವಿಶ್ವಾಸವಿಲ್ಲ?:

‘ನಿಮ್ಮ ಮಾತಿಗೆ ತಲೆಯಾಡಿಸುವವರನ್ನು ಸೇರಿಸಿಕೊಂಡು ಡಿ.ಜೆ.ಹಳ್ಳಿ ಗಲಭೆ ಕುರಿತು ತನಿಖೆಯ ಪ್ರಹಸನ ಮಾಡಿ ವರದಿ ಬರೆಸಿಕೊಂಡು ಪೊಲೀಸ್‌ ತನಿಖೆಯ ಮೇಲೆ ಪ್ರಭಾವ ಬೀರುವ ಪ್ರಯತ್ನ ಮಾಡಿದ್ದೀರಿ. ಈಗ ಡ್ರಗ್ಸ್‌ ಹಗರಣದ ತನಿಖೆಯ ಅನಧಿಕೃತ ವಿವರಗಳನ್ನು ಸರಿಣಿಯಾಗಿ ಸೋರಿಕೆ ಮಾಡಿ ಪೊಲೀಸ್ ತನಿಖೆಯ ಹಾದಿ ತಪ್ಪಿಸುತ್ತಿದ್ದೀರಿ. ನಿಮಗೆ ವಿಶ್ವಾಸ ಇಲ್ಲದಿರುವುದು ಪೊಲೀಸರ ಮೇಲೋ? ಗೃಹ ಸಚಿವರ ಮೇಲೋ?’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

‘ಪ್ರತಿ ಬಾರಿ ನಿಮ್ಮ ಆಡಳಿತದ ವೈಫಲ್ಯ ಮುಚ್ಚಿಹಾಕಲು ವಿರೋಧ ಪಕ್ಷಗಳ ನಾಯಕರ ಮೇಲೆ ಸುಳ್ಳು ಆರೋಪ ಹೊರಿಸುವ ಕುತಂತ್ರ ಮಾಡುತ್ತಾ ಬಂದಿದ್ದೀರಿ. ಡ್ರಗ್ಸ್‌ ಹಗರಣದಲ್ಲಿ ಕೂಡ ಅದನ್ನೇ ಮಾಡುತ್ತಾ ಇದ್ದೀರಿ. ಸತ್ಯವನ್ನು ಮುಚ್ಚಿಡಬಹುದು, ನಾಶ ಮಾಡಲು ಆಗುವುದಿಲ್ಲ, ನೆನಪಿರಲಿ’ ಎಂದು ಹೇಳಿದ್ದಾರೆ.

ಆರೋಪಿಗಳ ಜತೆ ಇರುವ ರಾಜಕಾರಣಿಗಳ ಫೋಟೊಗಳ ಆಧಾರದಲ್ಲೇ ಅವರ ಹೆಸರನ್ನು ಹಗರಣದಲ್ಲಿ ಸೇರಿಸಲಾಗದು. ಇಂತಹ ಆಧಾರಗಳನ್ನು ಇರಿಸಿಕೊಂಡು ಸಾರ್ವಜನಿಕ ಕ್ಷೇತ್ರದಲ್ಲಿರುವ ವ್ಯಕ್ತಿಗಳ ಹೆಸರನ್ನು ಹಗರಣದಲ್ಲಿ ಜೋಡಿಸುವುದು ಅಕ್ಷಮ್ಯ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT