ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆಗಳ ‘ಹೊಸ ದಾಖಲೆ’!

1.06 ಲಕ್ಷ ವಿದ್ಯಾರ್ಥಿಗಳು ಹೊಸದಾಗಿ ನೋಂದಣಿ l ಇನ್ನೂ 50 ಸಾವಿರ ವಿದ್ಯಾರ್ಥಿಗಳು ದಾಖಲಾಗುವ ನಿರೀಕ್ಷೆ
Last Updated 24 ಸೆಪ್ಟೆಂಬರ್ 2020, 4:25 IST
ಅಕ್ಷರ ಗಾತ್ರ

ಬೆಂಗಳೂರು: ಸತತ 14 ವರ್ಷಗಳಿಂದ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಕುಸಿತ ಕಾಣುತ್ತಲೇ ಬಂದಿರುವ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು, ಈ ಶೈಕ್ಷಣಿಕ ಸಾಲಿನಲ್ಲಿ (2020–21) ಹೊಸ ದಾಖಲೆ ಬರೆದಿವೆ.

ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ (ಸೆ. 23ರವರೆಗೆ) ಸರ್ಕಾರಿ ಶಾಲೆಗಳಿಗೆ 1.06 ಲಕ್ಷ ವಿದ್ಯಾರ್ಥಿಗಳು ಹೊಸದಾಗಿ ಪ್ರವೇಶ ಪಡೆದಿದ್ದಾರೆ.

ಕಳೆದ ವರ್ಷ ದಾಖಲಾಗಿದ್ದ ಒಟ್ಟು 1.05 ಕೋಟಿ ವಿದ್ಯಾರ್ಥಿಗಳಲ್ಲಿ ಈಗಾಗಲೇ 85 ಲಕ್ಷ ವಿದ್ಯಾರ್ಥಿಗಳು ಮತ್ತೆ ನೋಂದಣಿ ಮಾಡಿಕೊಂಡಿದ್ದಾರೆ. ಅನುದಾನಿತ ಮತ್ತು ಅನುದಾನರಹಿತ ಖಾಸಗಿ ಶಾಲೆಗಳಲ್ಲಿ 45 ಲಕ್ಷ ವಿದ್ಯಾರ್ಥಿಗಳು ಹಾಗೂ ಸರ್ಕಾರಿ ಶಾಲೆಗಳಲ್ಲಿ 40 ಲಕ್ಷ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಇದೇ ತಿಂಗಳ 30ರವರೆಗೆ ನೋಂದಣಿ ನಡೆಯಲಿದ್ದು, ಇನ್ನೂ50 ಸಾವಿರ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಿಗೆ ದಾಖಲಾಗುವ ನಿರೀಕ್ಷೆ ಇದೆ. ‘2006–07ರಲ್ಲಿ 53.40 ಲಕ್ಷ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಿಗೆ ಪ್ರವೇಶಾತಿ ಪಡೆದಿದ್ದರು. ಈ ಸಂಖ್ಯೆ 2019–20ರಲ್ಲಿ 41.26 ಲಕ್ಷಕ್ಕೆ ಕುಸಿದಿತ್ತು. ಪ್ರತಿವರ್ಷ ವಿದ್ಯಾರ್ಥಿಗಳ ನೋಂದಣಿ ಪ್ರಮಾಣಸರಾಸರಿ ಒಂದೂವರೆ ಲಕ್ಷದಷ್ಟು ಕಡಿಮೆಯಾಗುತ್ತಲೇ ಬಂದಿದೆ. ಆದರೆ, ಈ ವರ್ಷ ಅದಕ್ಕೆ ತದ್ವಿರುದ್ಧವಾಗಿದೆ. ಸರ್ಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳನ್ನು ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ ಎಂಬ ಮಾತುಗಳ ಮಧ್ಯೆ ಇದು ಹೊಸ ಬೆಳವಣಿಗೆ’ ಎಂದು ಶಿಕ್ಷಣ ಇಲಾಖೆಯ ಮೂಲಗಳು ಹೇಳಿವೆ.

‘ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸೇರಿ ಒಟ್ಟು 48,004 ಸರ್ಕಾರಿ ಶಾಲೆಗಳಿವೆ. 31,063 ಶಾಲೆಗಳಲ್ಲಿ ಪ್ರಸಕ್ತ ಸಾಲಿನಲ್ಲಿ ವಿದ್ಯಾರ್ಥಿಗಳ ನೋಂದಣಿ ಹೆಚ್ಚಳವಾಗಿದೆ. ಅನೇಕ ಶಾಲೆಗಳಲ್ಲಿ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ ಇಮ್ಮಡಿಯಾದರೆ, ಇನ್ನೂ ಅನೇಕ ಶಾಲೆಗಳಲ್ಲಿ ಒಂದೂವರೆಪಟ್ಟು ಹೆಚ್ಚಳವಾಗಿದೆ. ವಿದ್ಯಾರ್ಥಿಗಳ ನೋಂದಣಿಯಲ್ಲಿ ಹೊಸ ದಾಖಲೆ ಸೃಷ್ಟಿಯಾಗುವ ನಿರೀಕ್ಷೆ ಇದೆ’ ಎಂದೂ ಮೂಲಗಳು ಹೇಳಿವೆ.

ಈ ಕುರಿತು ‘ಪ್ರಜಾವಾಣಿ‘ಗೆ ಪ್ರತಿಕ್ರಿಯಿಸಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್‌, ‘ಸರ್ಕಾರಿ ಶಾಲೆಗಳ ದಾಖಲಾತಿ ಹೆಚ್ಚಳಕ್ಕೆ ನಾನಾ ಕಾರಣಗಳಿವೆ. ಕೊರೊನಾದಿಂದ ಆರ್ಥಿಕವಾಗಿ ಜರ್ಜರಿತವಾದ ಕುಟುಂಬಗಳಿಗೆ ಸರ್ಕಾರಿ ಶಾಲೆಗಳು ಆಸರೆಯಾಗಿವೆ. ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಮಧ್ಯಾಹ್ನದ ಬಿಸಿಯೂಟ ಎಲ್ಲವೂ ಕಾರಣವಾಗಿದೆ. ಜತೆಗೆ ಗುಣಮಟ್ಟದ ಶಿಕ್ಷಣವೂ ಸಿಗುತ್ತದೆ ಎಂಬ ವಿಶ್ವಾಸ ಬಂದಿದೆ’ ಎಂದರು.

‘ಇಲಾಖೆ ಆರಂಭಿಸಿದ ‘ವಿದ್ಯಾಗಮ’ ಯೋಜನೆ ಕೂಡಾ ಸರ್ಕಾರಿ ಶಾಲೆಗಳ ದಾಖಲಾತಿ ಹೆಚ್ಚಳಕ್ಕೆ ಕಾರಣವಾಗಿದೆ. ಚಂದನವಾಹಿನಿ ಮೂಲಕ ಪಾಠ, ಅದನ್ನು ಪರಿಶೀಲಿಸಲು ಶಿಕ್ಷಕರು ಮನೆ ಬಾಗಿಲಿಗೆ ಬರುವ ವ್ಯವಸ್ಥೆ ‘ಗುರುಕುಲ’ ಶಿಕ್ಷಣ ಮಾದರಿಯನ್ನು ನೆನಪಿಸುತ್ತದೆ. ಈ ಎಲ್ಲ ಕ್ರಮಗಳಿಂದ ಸರ್ಕಾರಿ ಶಾಲೆಗಳನ್ನು ಮತ್ತೆ ಸದೃಢಗೊಳಿಸುವ ವಿಶ್ವಾಸ ನನ್ನದು’ ಎಂದೂ ಹೇಳಿದರು.

ನೋಂದಣಿ ಹೆಚ್ಚಾಗಲು ಕಾರಣಗಳೇನು?

* ಕೊರೊನಾ ಪರಿಣಾಮ ಎದುರಾದ ಆರ್ಥಿಕ ಸಂಕಷ್ಟ

* ಬಡ, ಮಧ್ಯಮ ಕುಟುಂಬಗಳ ಮಕ್ಕಳಿಗೆ ಆಸರೆ

* ಗುಣಮಟ್ಟದ ಶಿಕ್ಷಣ ಸಿಗುತ್ತದೆಯೆಂಬ ವಿಶ್ವಾಸ

* ‘ವಿದ್ಯಾಗಮ’ ಯೋಜನೆಯ ಫಲಶ್ರುತಿ

ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ

ವರ್ಷ; ಒಟ್ಟು ನೋಂದಣಿ

2006–07; 53,40,000

2017–18; 44,57,535

2018–19; 42,73,871

2019–20; 41,26,587

2020–21; 40 ಲಕ್ಷ ದಾಟಿದೆ*

(* ಇನ್ನೂ 21 ಲಕ್ಷ ವಿದ್ಯಾರ್ಥಿಗಳ ನೋಂದಣಿಗೆ ಬಾಕಿ ಇದ್ದು, ಸೆ. 30ರವರೆಗೂ ಅವಕಾಶವಿದೆ)

***
ಮಧ್ಯಮ, ಕೆಳಮಧ್ಯಮ ಕುಟುಂಬಗಳಲ್ಲಿ ಸರ್ಕಾರಿ ಶಾಲೆಗಳ ಬಗ್ಗೆ ನಿಧಾನವಾಗಿ, ಆದರೆ ಖಚಿತವಾಗಿ ವಿಶ್ವಾಸ ಮರುಕಳಿಸುತ್ತಿದೆ. ಶಿಕ್ಷಣ ಇಲಾಖೆಯ ಮೇಲಿನ ಜವಾಬ್ದಾರಿ ಹೆಚ್ಚಿದೆ

-ಎಸ್‌. ಸುರೇಶ್‌ಕುಮಾರ್‌, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT