ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರುದ್ಯೋಗ ನಿವಾರಣೆಗೆ ಉದ್ಯಮಗಳಿಗೆ ಉತ್ತೇಜನ: ಸಚಿವ ಮುರುಗೇಶ್ ಆರ್‌. ನಿರಾಣಿ

Last Updated 10 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ನಿರುದ್ಯೋಗ ನಿವಾರಣೆಗೆ ಪೂರಕವಾಗಿ ಉದ್ಯಮಶೀಲತೆಗೆ ಉತ್ತೇಜನ ನೀಡಲಾಗುವುದು. ಈ ಉದ್ದೇಶದಿಂದ ‘ಉದ್ಯಮಿಯಾಗು ಉದ್ಯೋಗ ನೀಡು’ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಲಾಗುವುದು ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್‌. ನಿರಾಣಿ ತಿಳಿಸಿದರು.

ನಗರದ ಅರಮನೆ ಮೈದಾನದಲ್ಲಿಸೋಮವಾರ ನಡೆಯಲಿರುವ ‘ಉದ್ಯಮಿಯಾಗು ಉದ್ಯೋಗ ನೀಡು’ ಕಾರ್ಯಾಗಾರ ಮತ್ತು ಮಂಗಳವಾರ ನಡೆಯಲಿರುವ ಕೈಗಾರಿಕಾ ಅದಾಲತ್‌ನ ಸಿದ್ಧತೆಗಳನ್ನು ಭಾನುವಾರ ಪರಿಶೀಲಿಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾರ್ಯಾಗಾರ ಉದ್ಘಾಟಿಸುವರು. ಕಾರ್ಯಾಗಾರದಲ್ಲಿ 10,000ಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಈಗಾಗಲೇ 4,800 ಮಂದಿ ನೋಂದಣಿ ಮಾಡಿಸಿದ್ದಾರೆ.
ಉದ್ಯಮಿಗಳಾಗಿ ಯಶಸ್ಸು ಸಾಧಿಸಿರುವವರು ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ. ಉದ್ಯಮಗಳ ಆರಂಭಕ್ಕೆ ಬೇಕಿರುವ ಸಿದ್ಧತೆ, ಹೂಡಿಕೆ, ಬ್ಯಾಂಕ್‌ ನೆರವು, ಯಶಸ್ವಿ ಅನುಷ್ಠಾನ ಮತ್ತಿತರ ವಿಷಯಗಳಕುರಿತು ಅವರು ಮಾರ್ಗದರ್ಶನ ನೀಡಲಿದ್ದಾರೆ ಎಂದರು.

ಜೆರೋಧಾ ಕಂಪನಿ ಸಂಸ್ಥಾಪಕ ನಿತಿನ್‌ ಕಾಮತ್‌, ಕೂ ಆ್ಯಪ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಪ್ರಮೇಯ ರಾಧಾಕೃಷ್ಣ, ನೋಪೋ ನ್ಯಾನೊ ತಂತ್ರಜ್ಞಾನ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗದಾಧರ್‌ ರೆಡ್ಡಿ, ಕ್ರೆಡಿಟ್ ಉಡಾನ್ ಕ್ಯಾಪಿಟಲ್‌ ಮುಖ್ಯಸ್ಥ ಚೈತನ್ಯ ಅಡಪ, ಬೌನ್ಸ್‌ ಸಹ ಸಂಸ್ಥಾಪಕ ವಿವೇಕಾನಂದ ಹಳ್ಳೇಕೆರೆ, ನಿರಾಮೈ ಹೆಲ್ತ್‌ ಅನಾಲಿಟಿಕ್ಸ್‌ನ ಸಂಸ್ಥಾಪಕಿಗೀತಾ ಮಂಜುನಾಥ್‌, ಸಾಮೂಹಿಕ ಉದ್ಯಮಶೀಲತೆಗಾಗಿಜಾಗತಿಕ ಒಕ್ಕೂಟದ ಸಹ ಸಂಸ್ಥಾಪಕ ಮದನ್‌ ಪಡಕಿ, ಫಿಸ್ಡಮ್‌ ಸಹ ಸಂಸ್ಥಾಪಕಸುಬ್ರಹ್ಮಣ್ಯ ಎಸ್‌.ವಿ. ಯುವಜನರಿಗೆಮಾರ್ಗದರ್ಶನ ನೀಡುವರು ಎಂದು ವಿವರಿಸಿದರು.

250 ಮನವಿ ಸಲ್ಲಿಕೆ: ಮಂಗಳವಾರ ಬೆಂಗಳೂರು ವಲಯದ ಕೈಗಾರಿಕಾ ಅದಾಲತ್‌ ನಡೆಯಲಿದೆ. ಕೈಗಾರಿಕೋದ್ಯಮಿಗಳು ಮತ್ತು ಮಧ್ಯಸ್ಥಿಕೆದಾರರ ನಡುವೆ ಸಮಾಲೋಚನೆಗೆ ಅದಾಲತ್‌ನಲ್ಲಿ ಅವಕಾಶ ಕಲ್ಪಿಸಲಾಗುವುದು. ಉದ್ದಿಮೆಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ತ್ವರಿತ ಪರಿಹಾರಕ್ಕೆ ಈ ಕ್ರಮ ಕೈಗೊಂಡಿದ್ದು, ಈವರೆಗೆ 250 ಮನವಿಗಳು ಸಲ್ಲಿಕೆಯಾಗಿವೆ ಎಂದು ಸಚಿವರು ತಿಳಿಸಿದರು.

ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ. ರಮಣ ರೆಡ್ಡಿ, ಆಯುಕ್ತೆ ಗುಂಜನ್‌ ಕೃಷ್ಣ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎನ್‌. ಶಿವಶಂಕರ್‌, ಕರ್ನಾಟಕ ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಬಸವರಾಜು ‍ಪತ್ರಿಕಾಗೋಷ್ಠಿಯಲ್ಲಿದ್ದರು.

ಹೊಸ ನೀತಿ ಜಾರಿಗೆ ಸಿದ್ಧತೆ

‘ಜೈವಿಕ ಇಂಧನ ಸೇರಿದಂತೆ ಕೆಲವು ಕ್ಷೇತ್ರಗಳಿಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಸ್ಪಷ್ಟವಾದ ನೀತಿ ಇಲ್ಲ. ಅಂತಹ ಕ್ಷೇತ್ರ
ಗಳನ್ನು ಗುರುತಿಸಿ ಹೊಸ ನೀತಿಗಳನ್ನು ರೂಪಿಸಿ, ಜಾರಿಗೊಳಿಸಲಾಗುವುದು’ಎಂದು ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.

ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಜೈವಿಕ ಇಂಧನ ನೀತಿ ಇದೆ. ಅವುಗಳನ್ನು ಅಧ್ಯಯನ ನಡೆಸಿ, ಕರಡು ನೀತಿ ಸಿದ್ಧಪಡಿಸಲಾಗಿದೆ. ಆರ್ಥಿಕ ಇಲಾಖೆಯ ಒಪ್ಪಿಗೆ ದೊರೆತ ಬಳಿಕ ಅದನ್ನು ಬಿಡುಗಡೆ ಮಾಡಿ, ಅನುಷ್ಠಾನಕ್ಕೆ ತರಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT