ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ಪ್ರಶ್ನೆ ಪತ್ರಿಕೆ: ಎರಡು ಭಾಷೆಯಲ್ಲಿ ಉತ್ತರಿಸಲು ಅವಕಾಶ

ರಾಜ್ಯ ಉನ್ನತ ಶಿಕ್ಷಣ ಪರಿಷತ್‌ ಸಭೆ ತೀರ್ಮಾನ
Last Updated 14 ಡಿಸೆಂಬರ್ 2022, 16:16 IST
ಅಕ್ಷರ ಗಾತ್ರ

ಬೆಂಗಳೂರು: ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಒಂದು ವಿಷಯದ ಪ್ರಶ್ನೆಪತ್ರಿಕೆಗೆ ಉತ್ತರ ಬರೆಯುವಾಗ ಕನ್ನಡ ಮತ್ತು ಇಂಗ್ಲಿಷ್‌ ಎರಡೂ ಭಾಷೆಗಳನ್ನೂ ಬಳಸುವ ಅವಕಾಶ ನೀಡಲು ಉನ್ನತ ಶಿಕ್ಷಣ ಪರಿಷತ್ ತೀರ್ಮಾನಿಸಿದೆ.

ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಪರಿಷತ್ತಿನ 23ನೇ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಸಭೆ ಬಳಿಕ ಮಾತನಾಡಿದ ಸಚಿವ ಅಶ್ವತ್ಥನಾರಾಯಣ, ‘ಉನ್ನತ ಶಿಕ್ಷಣದಲ್ಲಿ ಮಾತೃಭಾಷೆ ಕನ್ನಡದ ಬಳಕೆಯನ್ನು ಗರಿಷ್ಠ ಪ್ರಮಾಣದಲ್ಲಿ ಉತ್ತೇಜಿಸಲು ಇಂತಹ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ’ ಎಂದರು.

ಇಲ್ಲಿಯವರೆಗೆ, ಪದವಿ ಮತ್ತು ಸ್ನಾತಕೋತ್ತರ ಪದವಿಗಳಲ್ಲಿ ಯಾವುದೇ ಒಂದು ವಿಷಯದ ಪರೀಕ್ಷೆ ಬರೆಯುವಾಗ, ಉತ್ತರ ಪತ್ರಿಕೆಯಲ್ಲಿ ಕನ್ನಡ ಅಥವಾ ಇಂಗ್ಲಿಷ್‌ನಲ್ಲಿ ಒಂದು ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬೇಕಿತ್ತು. ಪರೀಕ್ಷೆ ಬರೆಯುವಾಗ, ಯಾವ ಭಾಷೆಯಲ್ಲಿ ಬರೆದರೆ ಹೆಚ್ಚು ಸೂಕ್ತವೆನಿಸುತ್ತದೆಯೋ ಆ ಭಾಷೆಯಲ್ಲೇ ಉತ್ತರ ಬರೆಯುವ ಅವಕಾಶವನ್ನು ವಿದ್ಯಾರ್ಥಿಗಳಿಗೆ ನೀಡಲಾಗುವುದು. ಒಂದು ಪ್ರಶ್ನೆಗೆ ಕನ್ನಡದಲ್ಲಿ, ಮತ್ತೊಂದು ಪ್ರಶ್ನೆಗೆ ಇಂಗ್ಲಿಷ್‌ನಲ್ಲೂ ಉತ್ತರಿಸಬಹುದು. ಪಾಲಿಟೆಕ್ನಿಕ್‌ ಶಿಕ್ಷಣದಲ್ಲಿ ಈಗಾಗಲೇ ಈ ಸೌಲಭ್ಯ ನೀಡಲಾಗಿದೆ ಎಂದರು.

ಪ್ರಾದೇಶಿಕ ಭಾಷೆಗಳಲ್ಲಿ ಉನ್ನತ ಶಿಕ್ಷಣವನ್ನು ಕಲಿಸಬೇಕೆಂಬ ರಾಷ್ಟ್ರೀಯ ಶಿಕ್ಷಣ ನೀತಿಯ ಆಶಯವನ್ನು ಅನುಷ್ಠಾನಕ್ಕೆ ತರಲು ಎಲ್ಲ ವಿಷಯಗಳಿಗೆ ಸಂಬಂಧಿಸಿದ ಪಠ್ಯಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸುವ ನಿರ್ಣಯ ಕೈಗೊಳ್ಳಲಾಗಿದೆ. ಈ ಕೆಲಸಕ್ಕೆ ಆಧುನಿಕ ತಂತ್ರಜ್ಞಾನದ ನೆರವು ಪಡೆಯುವ ಬಗ್ಗೆ ರೂಪುರೇಷೆ ಸಿದ್ಧಪಡಿಸಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗುವುದು ಎಂದು ಹೇಳಿದರು.

‘ಹೊಸದಾಗಿ ಬುಡಕಟ್ಟು ವಿಶ್ವವಿದ್ಯಾಲಯದ ಸ್ಥಾಪನೆಯ ಬದಲಿಗೆ ಈಗಾಗಲೇ ಅಸ್ತಿತ್ವದಲ್ಲಿರುವ ಕರ್ನಾಟಕ ರಾಜ್ಯ ಜಾನಪದ ವಿ.ವಿ.ಯಲ್ಲೇ ಬುಡಕಟ್ಟು ಅಧ್ಯಯನಕ್ಕೂ ಸಮರ್ಪಕ ವ್ಯವಸ್ಥೆ ಮಾಡಲಾಗುವುದು’ ಎಂದು ಹೇಳಿದರು.

ಸಭೆಯಲ್ಲಿ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ.ತಿಮ್ಮೇಗೌಡ, ಕಾರ್ಯನಿರ್ವಾಹಕ ನಿರ್ದೇಶಕ ಗೋಪಾಲಕೃಷ್ಣ ಜೋಶಿ, ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್‌, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ ಹಾಗೂ ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT