ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮ ಸಂಗ್ರಾಮ: ನಾಳೆ ಮತ ಎಣಿಕೆ

Last Updated 29 ಡಿಸೆಂಬರ್ 2020, 12:01 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ 5,728 ಗ್ರಾಮ ಪಂಚಾಯಿತಿಗಳಿಗೆ ಎರಡು ಹಂತಗಳಲ್ಲಿ ನಡೆದ ಚುನಾವಣೆಯ ಮತಗಳ ಎಣಿಕೆ ಕಾರ್ಯ ಬುಧವಾರ ನಡೆಯಲಿದೆ.

ಬೀದರ್‌ ಜಿಲ್ಲೆಯಲ್ಲಿ ಮಾತ್ರ ಇವಿಎಂ ಬಳಸಲಾಗಿದ್ದು, ಉಳಿದ ಕಡೆಗಳಲ್ಲಿ ಮತ ಪತ್ರಗಳನ್ನು ಬಳಸಲಾಗಿದೆ. ಇದರಿಂದಾಗಿ ಎಣಿಕೆ ಕಾರ್ಯ ತಡವಾಗಲಿದೆ. ಬೆಳಿಗ್ಗೆ 8 ಕ್ಕೆ ಎಣಿಕೆ ಪ್ರಕ್ರಿಯೆಗೆ ಚಾಲನೆ ಸಿಗಲಿದೆ.

ಒಟ್ಟು 226 ತಾಲ್ಲೂಕುಗಳ 91,339 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿತ್ತು. ಇದರಲ್ಲಿ 8,074 ಸ್ಥಾನಗಳಿಗೆ ಅವಿರೋಧ ಆಯ್ಕೆ ಆಗಿದೆ. ಉಳಿದ ಸ್ಥಾನಗಳಿಗೆ 3,11,887 ಅಭ್ಯರ್ಥಿಗಳು ಕಣದಲ್ಲಿದ್ದರು. ಮೊದಲ ಹಂತದಲ್ಲಿ 43,238 ಮತ್ತು ಎರಡನೇ ಹಂತದಲ್ಲಿ 39,378 ಸ್ಥಾನಗಳಿಗೆ ಮತದಾನ ನಡೆದಿತ್ತು.

ಡಿ.22 ರಂದು ನಡೆದ ಮೊದಲ ಹಂತದ ಮತದಾನದಲ್ಲಿ ಶೇ 82 ರಷ್ಟು ಮತ್ತು ಡಿ.27 ರಂದು ನಡೆದ ಎರಡನೇ ಹಂತದ ಚುನಾವಣೆಯಲ್ಲಿ ಶೇ 80 ರಷ್ಟು ಪ್ರಮಾಣದ ಮತದಾನವಾಗಿತ್ತು.

ಈ ಬಾರಿ ಮೂರೂ ರಾಜಕೀಯ ಪಕ್ಷಗಳ ಆಶೀರ್ವಾದ ಪಡೆದ ಅಭ್ಯರ್ಥಿಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸಿದ್ದರು. ಹಲವು ಜಿಲ್ಲೆಗಳಲ್ಲಿ ಗ್ರಾಮ ಪಂಚಾಯಿತಿ ಸ್ಥಾನಗಳನ್ನೇ ಲಕ್ಷಾಂತರ ರೂಪಾಯಿಗಳಿಗೆ ಹರಾಜಿಗಿಡುವ ಮೂಲಕ ಪ್ರಜಾಪ್ರಭುತ್ವದ ಆಶಯವನ್ನು ಉಲ್ಲಂಘಿಸಿದ ಪ್ರಕರಣಗಳು ನಡೆದಿದ್ದವು.

ಈ ಬಾರಿ ರಾಜ್ಯ ಉದ್ದಗಲಕ್ಕೂ ಸಾಕಷ್ಟು ಗ್ರಾಮ ಪಂಚಾಯತ್‌ಗಳಲ್ಲಿ ಲಕ್ಷಾಂತರ ರೂಪಾಯಿಗಳಿಗೆ ಪಂಚಾಯಿತಿ ಸದಸ್ಯ ಸ್ಥಾನಗಳನ್ನು ಹರಾಜು ಹಾಕುವ ವ್ಯವಸ್ಥೆ ಬಹಿರಂಗವಾಗಿಯೇ ನಡೆಯಿತು. ಚುನಾವಣಾ ಆಯೋಗದ ಎಚ್ಚರಿಕೆಗೂ ಗ್ರಾಮಸ್ಥರು ಸೊಪ್ಪು ಹಾಕಲಿಲ್ಲ. ಅಲ್ಲದೆ, ಗ್ರಾಮದ ಅಭಿವೃದ್ಧಿ ಮತ್ತು ದೇವಸ್ಥಾನಗಳ ಅಭಿವೃದ್ಧಿಗೆ ಯಾರು ಹೆಚ್ಚು ಹಣ ಕೊಡುತ್ತಾರೋ ಅವರಿಗೇ ಮತ ಕೊಡುತ್ತೇವೆ ಎಂಬ ಷರತ್ತು ವಿಧಿಸಿದ್ದೂ ನಡೆಯಿತು.

ಎರಡೂ ಹಂತಗಳ ಮತದಾನ ಪ್ರಕ್ರಿಯೆಯಲ್ಲಿ ಕೋವಿಡ್‌ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲಾಗಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇದೇ 31 ರ ಸಂಜೆ 5 ಗಂಟೆವರೆಗೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT