ಶುಕ್ರವಾರ, ಆಗಸ್ಟ್ 12, 2022
22 °C

ಕೋಸ್ಟ್‌ ಗಾರ್ಡ್‌ಗೆ ಎಎಲ್‌ಎಚ್‌ ಮಾರ್ಕ್‌–3 ಹೆಲಿಕಾಪ್ಟರ್‌ ಸೇರ್ಪಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌) ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಮೂರು ಸುಧಾರಿತ ಎಎಲ್‌ಎಚ್ ಮಾರ್ಕ್‌–3 ಹೆಲಿಕಾಪ್ಟರ್‌ಗಳು ಶನಿವಾರ ಭಾರತೀಯ ಕರಾವಳಿ ಭದ್ರತಾ ಪಡೆಗೆ (ಐಸಿಜಿ) ಸೇರ್ಪಡೆಗೊಂಡಿವೆ.

ಐಸಿಜಿಗೆ ಒಟ್ಟು 16 ಹೆಲಿಕಾಪ್ಟರ್‌ಗಳನ್ನು ಪೂರೈಸುವ ಸಂಬಂಧ ಎಚ್‌ಎಎಲ್‌ ಒಪ್ಪಂದ ಮಾಡಿಕೊಂಡಿದ್ದು, ಮೊದಲ ಹಂತದಲ್ಲಿ ಮೂರು ಹೆಲಿಕಾಪ್ಟರ್‌ಗಳನ್ನು ಹಸ್ತಾಂತರಿಸಲಾಗಿದೆ. 

ಈ ಹೆಲಿಕಾಪ್ಟರ್‌ಗಳು ಕಣ್ಗಾವಲು ರಾಡಾರ್‌, ಎಲೆಕ್ಟ್ರೋ ಆಪ್ಟಿಕ್‌ ಪಾಡ್‌, ವೈದ್ಯಕೀಯ ತುರ್ತು ನಿಗಾ ಘಟಕ (ಐಸಿಯು), ಅಧಿಕ ಕ್ಷಮತೆಯ ಸರ್ಚ್‌ಲೈಟ್‌, ಎಸ್‌ಎಆರ್‌ ಹೋಮರ್‌, ಲೌಡ್‌ ಹೇಲರ್‌ ಹಾಗೂ ಮಷಿನ್‌ ಗನ್‌ಗಳ ಸೌಲಭ್ಯ ಒಳಗೊಂಡಿರಲಿವೆ.  

‘ಕಾರ್ಯಕ್ಷಮತೆ ಆಧಾರಿತ ವ್ಯವಸ್ಥಾಪನಾ ತಂತ್ರದಲ್ಲಿ (ಪಿಬಿಎಲ್‌) ನಾವು ಹೊಸ ಹೆಜ್ಜೆ ಇಟ್ಟಿದ್ದೇವೆ. ಐಸಿಜಿಗೆ ಒಟ್ಟು 16 ಹೆಲಿಕಾಪ್ಟರ್‌ಗಳನ್ನು ಪೂರೈಸುವ ಸಂಬಂಧ ಒಪ್ಪಂದವಾಗಿತ್ತು. ಮೊದಲ ಹಂತದಲ್ಲಿ ಮೂರು ಹೆಲಿಕಾಪ್ಟರ್‌ಗಳನ್ನು ಒದಗಿಸಿದ್ದೇವೆ. ಮುಂದಿನ ವರ್ಷದ ಮಧ್ಯಂತರದಲ್ಲಿ ಉಳಿದ 13 ಹೆಲಿಕಾಪ್ಟರ್‌ ಗಳನ್ನು ಪೂರೈಸಲಿದ್ದೇವೆ’ ಎಂದು ಎಚ್‌ಎಎಲ್‌ನ ಮುಖ್ಯಸ್ಥ ಮತ್ತು ವ್ಯವಸ್ಥಾಪಕ ನಿರ್ದೇಶಕ ಆರ್‌.ಮಾಧವನ್‌ ತಿಳಿಸಿದ್ದಾರೆ.

‘ಈ ಹೆಲಿಕಾಪ್ಟರ್‌ಗಳು ಕರಾವಳಿ ಭದ್ರತಾ ಪಡೆಯ ಶಕ್ತಿ ಹೆಚ್ಚಿಸಲಿವೆ. ರಕ್ಷಣಾ ಕಾರ್ಯಾಚರಣೆ, ವೈದ್ಯಕೀಯ ಉಪಕರಣಗಳ ಸ್ಥಳಾಂತರ ಸೇರಿದಂತೆ ಇತರ ಕಾರ್ಯಗಳಿಗೆ ನೆರವಾಗಲಿವೆ. ಇವುಗಳನ್ನು ಭುವನೇಶ್ವರ, ಪೋರಬಂದರ್‌, ಕೊಚ್ಚಿ ಹಾಗೂ ಚೆನ್ನೈಗೆ ಕಳುಹಿಸಿಕೊಡಲಾಗುತ್ತದೆ’ ಎಂದರು.

‘ಕರಾವಳಿ ಭದ್ರತಾ ಪಡೆಯು ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದೆ. ಚಂಡಮಾರುತ ಹಾಗೂ ಪ್ರವಾಹದ ಸಂದರ್ಭಗಳಲ್ಲಿ ನಾಗರಿಕರ ಜೀವ ರಕ್ಷಿಸುವ ಕೆಲಸ ಮಾಡಿದೆ. ಈ ಹೆಲಿಕಾಪ್ಟರ್‌ಗಳ ಸೇರ್ಪಡೆಯಿಂದ ಐಸಿಜಿಯ ಶಕ್ತಿ ಇಮ್ಮಡಿಸಲಿದೆ’ ಎಂದು ರಕ್ಷಣಾ ಕಾರ್ಯದರ್ಶಿ ಅಜಯ್‌ ಕುಮಾರ್‌ ಹೇಳಿದ್ದಾರೆ.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು