ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾನಗಲ್‌ ಉಪಚುನಾವಣೆ: ತಾರಕೇಶ್ವರನ ನಾಡಿನಲ್ಲಿ ತಾರಕಕ್ಕೇರಿದ ಪ್ರಚಾರ

ಬಿಜೆಪಿ–ಕಾಂಗ್ರೆಸ್‌ ನಡುವೆ ನೇರ ಹಣಾಹಣಿ: ಜೆಡಿಎಸ್‌ ಆಟಕ್ಕುಂಟು–ಲೆಕ್ಕಕ್ಕಿಲ್ಲ
Last Updated 25 ಅಕ್ಟೋಬರ್ 2021, 3:19 IST
ಅಕ್ಷರ ಗಾತ್ರ

ಹಾವೇರಿ: ‘ತಾರಕೇಶ್ವರನ ನಾಡು’ ಹಾನಗಲ್‌ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆಯ ಪ್ರಚಾರ ತಾರಕಕ್ಕೇರಿದೆ. ಮತದಾನದ ದಿನಾಂಕ ಸಮೀಪಿಸುತ್ತಿರುವಂತೆ ಬಿಜೆಪಿ ಮತ್ತು ಕಾಂಗ್ರೆಸ್‌ ನಾಯಕರು ಆರೋಪ–ಪ್ರತ್ಯಾರೋಪಗಳನ್ನು ಮಾಡುತ್ತಾ, ವಾಗ್ಬಾಣಗಳ ಸುರಿಮಳೆಗೈಯ್ಯುತ್ತಿದ್ದಾರೆ.

ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇದ್ದು, ‘ಗೆಲುವು’ ಎರಡೂ ಪಕ್ಷಗಳ ಪಾಲಿಗೆ ಪ್ರತಿಷ್ಠೆಯಾಗಿದೆ. ‘ಮುಖ್ಯಮಂತ್ರಿ ತವರು ಜಿಲ್ಲೆ’ಯ ವಿಧಾನಸಭಾ ಕ್ಷೇತ್ರದಲ್ಲಿ ‘ಕೇಸರಿ’ ಬಾವುಟ ಹಾರಿಸಲು ಬಿಜೆಪಿ ರಣತಂತ್ರ ರೂಪಿಸಿದೆ. ಕಳೆದ ಬಾರಿ ಕೈತಪ್ಪಿದ್ದ ಈ ಕ್ಷೇತ್ರವನ್ನು ಈ ಬಾರಿ ‘ಕೈ’ ವಶ ಮಾಡಿಕೊಂಡು ಸೇಡು ತೀರಿಸಿಕೊಳ್ಳಲೇಬೇಕು ಎಂದು ಕಾಂಗ್ರೆಸ್‌ ಪ್ರತಿತಂತ್ರ ಹೆಣೆದಿದೆ.

ಪಕ್ಷೇತರ ಅಭ್ಯರ್ಥಿ ಬಿ.ಆರ್‌.ಪಾಟೀಲ್‌ ನಿಧನದಿಂದ 1968ರಲ್ಲಿ ಹಾನಗಲ್ ಕ್ಷೇತ್ರದಲ್ಲಿ ಮೊದಲ ಉಪಚುನಾವಣೆ ನಡೆದಿತ್ತು. ಬಿಜೆಪಿ ಶಾಸಕ ಸಿ.ಎಂ.ಉದಾಸಿ ಅವರು ಅಸ್ತಂಗತರಾದ ಹಿನ್ನೆಲೆಯಲ್ಲಿ ಎರಡನೇ ಉಪಚುನಾವಣೆ ರಂಗ ಈಗ ಗರಿಗೆದರಿದೆ.

ಹಾನಗಲ್‌ ಕ್ಷೇತ್ರದಲ್ಲಿ ಲಿಂಗಾಯತ, ಮುಸ್ಲಿಂ, ಪರಿಶಿಷ್ಟ ಜಾತಿ ಹಾಗೂ ಗಂಗಾಮತಸ್ಥ ಸಮುದಾಯ ದೊಡ್ಡ ಸಂಖ್ಯೆಯಲ್ಲಿದ್ದು, ಈ ಮತಗಳ ಮೇಲೆ ರಾಷ್ಟ್ರೀಯ ಪಕ್ಷಗಳು ಕಣ್ಣಿಟ್ಟಿವೆ. ಜೆಡಿಎಸ್‌ ವಿಶೇಷವಾಗಿ ಮುಸ್ಲಿಂ ಮತಗಳನ್ನು ಸೆಳೆಯಲು ಯತ್ನಿಸುತ್ತಿದೆ. ‘ಬಿಜೆಪಿಯ ಬಿ ಟೀಮ್‌’ ಎಂಬ ಗಂಭೀರ ಆರೋಪ ಎದುರಿಸುತ್ತಿರುವ ಜೆಡಿಎಸ್‌ ಎಷ್ಟು ಅಲ್ಪಸಂಖ್ಯಾತರ ಮತಗಳನ್ನು ಗಳಿಸುತ್ತದೊ, ಅಷ್ಟು ಕಾಂಗ್ರೆಸ್‌ಗೆ ನಷ್ಟ, ಬಿಜೆಪಿಗೆ ಲಾಭ ಎಂದು ವಿಶ್ಲೇಷಿಸಲಾಗುತ್ತಿದೆ.

ಅಖಾಡಕ್ಕೆ ಸಿಎಂ ಪ್ರವೇಶ: ಟಿಕೆಟ್‌ ಘೋಷಣೆಯಾದಾಗ ಕಾಂಗ್ರೆಸ್‌ ಅಭ್ಯರ್ಥಿ ಶ್ರೀನಿವಾಸ ಮಾನೆ ಅವರಿಗೆ ಅಲ್ಪ ಮುನ್ನಡೆ ಸಿಗುತ್ತದೆ ಎಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿಬರುತ್ತಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಏಳೆಂಟು ಸಚಿವರ ತಂಡ ಕಟ್ಟಿಕೊಂಡು ಕ್ಷೇತ್ರ ಪ್ರವೇಶಿಸಿದಾಗಿನಿಂದ ಗೆಲುವು ಬಿಜೆಪಿ ಮತ್ತು ಕಾಂಗ್ರೆಸ್‌ ಪಾಲಿಗೆ 50:50 ಎಂಬಂತಾಗಿದೆ.

ಪ್ರಚಾರದ ಸುನಾಮಿ: ಆರಂಭದಲ್ಲಿ ಚುನಾವಣೆಯ ಪ್ರಚಾರ ಮಂದಗತಿಯಲ್ಲಿ ಸಾಗುತ್ತಿತ್ತು. ಸಂಗೂರಿನ ‘ಶುಗರ್‌ ಫ್ಯಾಕ್ಟರಿ’ ಎಂಬ ಬಿಜೆಪಿಯ ಜೇನುಗೂಡಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕಲ್ಲು ಎಸೆದ ನಂತರ ಪ್ರಚಾರಗಳ ವರಸೆಯೇ ಬದಲಾಯಿತು. ‘ವಿರಾಟ ನಗರಿ’ಯಲ್ಲಿ ಪ್ರಚಾರ ವಿರಾಟ ಸ್ವರೂಪವನ್ನೇ ಪಡೆಯಿತು.

ಸಿ.ಎಂ.ಉದಾಸಿ ಮತ್ತು ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಮೇಲೆ ಭ್ರಷ್ಟಾಚಾರ ಆರೋಪ ಮಾಡಿದ ಸಿದ್ದರಾಮಯ್ಯ ವಿರುದ್ಧ ‘ಕೇಸರಿ ಕಲಿಗಳು’ ಕೆಂಡಾಮಂಡಲರಾಗಿ, ಆರೋಪಗಳ ಸುರಿಮಳೆಯನ್ನೇ ಸುರಿಸಿದರು. ಎರಡೂ ಪಕ್ಷದವರು ‘ಹಾವು–ಮುಂಗುಸಿಯಂತೆ’ ಪರಸ್ಪರ ಕಚ್ಚಾಡುತ್ತಾ, ಪ್ರಚಾರದ ಹೆದ್ದಾರಿಯಿಂದ ಅಪಪ್ರಚಾರದ ಅಡ್ಡದಾರಿಗೂ ಇಳಿದರು.

‘ಬಿಜೆಪಿ ಸಚಿವರು ಗೋಣಿಚೀಲದಲ್ಲಿ ಹಣ ತಂದು ಹಂಚುತ್ತಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ಗಂಭೀರ ಆರೋಪಕ್ಕೆ, ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆಯ ಅನುಭವಗಳನ್ನು ಡಿಕೆಶಿ ಹೇಳಿಕೊಳ್ಳುತ್ತಿದ್ದಾರೆ ಎಂದು ಸಿಎಂ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.

ತಂತ್ರ–ಪ್ರತಿತಂತ್ರ: ‘ಡಬಲ್‌ ಎಂಜಿನ್‌ ಸರ್ಕಾರ’ ಮತ್ತು ‘ಬೊಮ್ಮಾಯಿ ಅವರು ಹಾನಗಲ್‌ ಅಳಿಯ’ ಎಂಬ ಎರಡು ಪ್ರಬಲ ಅಸ್ತ್ರಗಳನ್ನು ಬಿಜೆಪಿ ಜಳಪಿಸುತ್ತಿದೆ. ನೀವು ನೀಡುವ ಮತಗಳು ಸಿ.ಎಂ.ಉದಾಸಿಯವರ ಆತ್ಮಕ್ಕೆ ಶಾಂತಿ ತರುತ್ತವೆ ಎಂದು ಭಾವನಾತ್ಮಕವಾಗಿ ಮತದಾರರ ಮನವೊಲಿಸಲು ಬಿಜೆಪಿ ಮುಂದಾಗಿದೆ.

‘ಭಾಗ್ಯ’ಗಳ ಯೋಜನೆ ಮತ್ತು ‘ಬೆಲೆ ಏರಿಕೆ’ ಎಂಬ ಎರಡು ಪರಿಣಾಮಕಾರಿ ಬಾಣಗಳನ್ನು ಕಾಂಗ್ರೆಸ್‌ ಬಿಡುತ್ತಿದೆ. ಜತೆಗೆ,ಕೋವಿಡ್ ಎಂಬ ಕಷ್ಟಕಾಲದಲ್ಲಿ ಜನರಿಗೆ ಸಹಾಯ ಮಾಡಿದ ‘ಆಪತ್ಬಾಂಧವ’ ಮಾನೆ ಅವರ ಋಣ ತೀರಿಸಿ ಎಂದು ಮತದಾರರ ಮನಸ್ಸನ್ನು ಗೆಲ್ಲಲು ಯತ್ನಿಸುತ್ತಿದೆ.

ಜೋಡೆತ್ತುಗಳ ಸಂಚಾರ: ಕಾಂಗ್ರೆಸ್‌ನಲ್ಲಿ ‘ಡಿಕೆಶಿ– ಸಿದ್ದರಾಮಯ್ಯ’ ಎಂಬ ರಾಜ್ಯಮಟ್ಟದ ಜೋಡೆತ್ತು, ಬಿಜೆಪಿಯಲ್ಲಿ ‘ಶಿವಕುಮಾರ ಉದಾಸಿ–ಶಿವರಾಜ ಸಜ್ಜನರ’ ಎಂಬ ಸ್ಥಳೀಯ ಜೋಡೆತ್ತು ಕ್ಷೇತ್ರದಾದ್ಯಂತ ಅಡ್ಡಾಡುತ್ತಾ ಅಬ್ಬರದ ಪ್ರಚಾರದಲ್ಲಿ ತೊಡಗಿವೆ. ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪ್ರಚಾರಕ್ಕೆ ಇಳಿದಿರುವುದು ಬಿಜೆಪಿಗೆ ‘ಆನೆಬಲ’ ಬಂದಂತಾಗಿದೆ.

ಸಿಂದಗಿ ಚುನಾವಣೆಗೆ ನೀಡಿದ ಮಹತ್ವವನ್ನು ‘ಜೆಡಿಎಸ್‌ ದಳಪತಿ’ಗಳು ಹಾನಗಲ್‌ ಕ್ಷೇತ್ರಕ್ಕೆ ನೀಡುತ್ತಿಲ್ಲ ಎಂಬ ಅಸಮಾಧಾನ ಕಾರ್ಯಕರ್ತರಲ್ಲಿ ಮನೆ ಮಾಡಿದೆ. ಕೊನೆಯ ಕ್ಷಣದಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾನಗಲ್‌ ಪ್ರವೇಶಿಸಿ, ಪ್ರಚಾರಕ್ಕೆ ರಂಗು ತರಲು ಯತ್ನಿಸಿದ್ದಾರೆ. ಇತ್ತ, ಕೆಆರ್‌ಎಸ್‌ ಪಕ್ಷದವರು ಭ್ರಷ್ಟ ‘ಜೆಸಿಬಿ’ (ಜೆಡಿಎಸ್‌–ಕಾಂಗ್ರೆಸ್‌–ಬಿಜೆಪಿ) ಪಕ್ಷಗಳಿಗೆ ತಕ್ಕ ಪಾಠ ಕಲಿಸಿ ಎಂದು ಮನವಿ ಮಾಡುತ್ತಿದ್ದಾರೆ.

ಅ.30ರಂದು ಮತದಾನ ನಡೆಯಲಿದ್ದು, ನ.2ರಂದು ಮತ ಎಣಿಕೆ ನಡೆಯಲಿದೆ.

ಸಾಂಪ್ರದಾಯಿಕ ಎದುರಾಳಿಗಳ ಹೋರಾಟ ಅಂತ್ಯ

ಹಾನಗಲ್‌ ವಿಧಾನಸಭಾ ಕ್ಷೇತ್ರದ ಚುನಾವಣಾ ಕಣದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಬಿಜೆಪಿಯ ಸಿ.ಎಂ.ಉದಾಸಿ ಮತ್ತು ಕಾಂಗ್ರೆಸ್‌ನ ಮನೋಹರ ತಹಶೀಲ್ದಾರ್‌1983ರಿಂದ 2013ರವರೆಗೆ ನಡೆದ ಎಂಟು ಚುನಾವಣೆಗಳಲ್ಲಿ ನಿರಂತರವಾಗಿ ಮುಖಾಮುಖಿಯಾಗಿದ್ದರು. ಸಿ.ಎಂ. ಉದಾಸಿ ಒಟ್ಟು 9 ಚುನಾವಣೆಗಳನ್ನು ಎದುರಿಸಿ, 6 ಬಾರಿ ಗೆಲುವು, 3 ಬಾರಿ ಸೋಲು ಕಂಡಿದ್ದರು. ಮನೋಹರ ತಹಶೀಲ್ದಾರ್‌ ಒಟ್ಟು 9 ಚುನಾವಣೆಗಳಲ್ಲಿ ಸ್ಪರ್ಧಿಸಿ, 4 ಬಾರಿ ಗೆಲುವು, 5 ಬಾರಿ ಸೋಲನ್ನಪ್ಪಿದ್ದಾರೆ.

38 ವರ್ಷಗಳ ನಂತರ ‘ಉದಾಸಿ–ತಹಶೀಲ್ದಾರ್‌’ ಈ ಇಬ್ಬರೂ ಚುನಾವಣಾ ಕಣದಲ್ಲಿ ಇಲ್ಲದೇ ನಡೆಯುತ್ತಿರುವ ಈ ಬಾರಿಯ ಉಪಚುನಾವಣೆ ಮತದಾರರಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಸಾಂಪ್ರದಾಯಿಕ ಎದುರಾಳಿಗಳ ಸುದೀರ್ಘ ಹೋರಾಟಕ್ಕೆ ತೆರೆ ಬಿದ್ದಿದೆ.

2018ರ ಚುನಾವಣಾ ಫಲಿತಾಂಶ
ಸಿ.ಎಂ.ಉದಾಸಿ (ಬಿಜೆಪಿ):
80,529
ಶ್ರೀನಿವಾಸ ಮಾನೆ (ಕಾಂಗ್ರೆಸ್): 74,015
ಗೆಲುವಿನ ಅಂತರ: 6,514

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT