ಬುಧವಾರ, ಆಗಸ್ಟ್ 10, 2022
23 °C

ಕೆಆರ್‌ಎಸ್‌ಗೆ ಸುಮಲತಾನ್ನ ಅಡ್ಡಡ್ಡ ಮಲಗಿಸಿ: ಎಚ್‌ಡಿಕೆ ಹೇಳಿಕೆಗೆ ಸಂಸದೆ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕೃಷ್ಣರಾಜಸಾಗರ ಅಣೆಕಟ್ಟು ಬಿರುಕು ಬಿಟ್ಟಿದ್ದರೆ ಅವರನ್ನು (ಸಂಸದೆ ಸುಮಲತಾ) ಅಡ್ಡ ಮಲಗಿಸಿ, ಸರಿ ಹೋಗುತ್ತದೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರು ನೀಡಿರುವ ವ್ಯಂಗ್ಯ ಹೇಳಿಕೆಗೆ ಮಂಡ್ಯದ ಸಂಸದೆ ಸುಮಲತಾ ಅಂಬರೀಷ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವಿಚಾರವಾಗಿ ಇಬ್ಬರ ಮಧ್ಯೆ ಸೋಮವಾರ ಇಡೀ ದಿನ ವಾಕ್ಸಮರ ನಡೆದಿದೆ. ಕೆಆರ್‌ಎಸ್‌ ಸುತ್ತಮುತ್ತ ಅಕ್ರಮ ಗಣಿಗಾರಿಕೆ ಬಗ್ಗೆ ಹೇಳಿಕೆ ನೀಡಿದ್ದ ಸುಮಲತಾ ಅವರು ಗಣಿಗಾರಿಕೆಯಿಂದ ಅಣೆಕಟ್ಟಿಗೆ ಹಾನಿಯಾಗುತ್ತದೆ ಎಂದಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಎಚ್‌.ಡಿ.ಕುಮಾರಸ್ವಾಮಿ, ‘ಕೆಆರ್‌ಎಸ್‌ ಅಣೆಕಟ್ಟೆಯನ್ನು ಏನೋ ಇವ್ರೆ ರಕ್ಷಣೆ ಮಾಡ್ತಾರಂತೆ. ಬಹುಶಃ ಇವರನ್ನೇ ಡ್ಯಾಮ್‌ ಬಾಗಿಲಿಗೆ ಅಡ್ಡ ಮಲಗಿಸಿ ಬಿಟ್ರೆ ಅಣೆಕಟ್ಟೆ ಬಿಗಿಯಾಗಿ ಬಿಡುತ್ತದೆ. ನೀರು ಹೋಗದ ರೀತಿ ಬಾಗಿಲಿಗೆ ಇವರನ್ನೇ ಮಲಗಿಸಿ ಬಿಟ್ರೆ ಎಲ್ಲ ಸರಿ ಆಗುತ್ತದೆ’ ಎಂದು ಕುಹಕ ಮಾಡಿದ್ದರು.

‘ಮಾಹಿತಿ ಇಟ್ಟುಕೊಳ್ಳದೇ ಕೆಲಸ ಮಾಡ್ತಾರೆ. ಯಾರದ್ದೋ ಮೇಲಿನ ವೈಯಕ್ತಿಕ ದ್ವೇಷಕ್ಕೆ ಹೇಳಿಕೆ ಕೊಡುವುದು ಬಹಳ ದಿನ ನಡೆಯದು. ಅನುಕಂಪದ ಮೇಲೆ ಚುನಾವಣೆ ಗೆದ್ದು ಬಂದಿದ್ದಾರೆ. ಜನರ ಋಣ ತೀರಿಸುವ ಕೆಲಸ ಮಾಡಲಿ. ಪದೇ ಪದೇ ಇಂಥ ಅವಕಾಶ ಸಿಗುವುದಿಲ್ಲ. ಮುಂದೆ ಜನ ಪಾಠ ಕಲಿಸುತ್ತಾರೆ’ ಎಂದು ಕುಮಾರಸ್ವಾಮಿ ಹೇಳಿದ್ದರು.

‘ತುಚ್ಛ ಹೇಳಿಕೆ’: ಇದರಿಂದ ಆಕ್ರೋಶಗೊಂಡ ಸುಮಲತಾ, ‘ಈ ರೀತಿಯ ತುಚ್ಛ ಹೇಳಿಕೆಯಿಂದ ಮಹಿಳೆಯರ ಬಗ್ಗೆ ಅವರಿಗಿರುವ ಮನಸ್ಥಿತಿ ಏನೆಂಬುದನ್ನು ತೋರಿಸುತ್ತದೆ. ಮಹಿಳೆಯರ ಬಗ್ಗೆ ಕೀಳಾಗಿ ಮಾತನಾಡುವುದನ್ನು ಇನ್ನೂ ಬಿಟ್ಟಿಲ್ಲ. ಕಳೆದ ಚುನಾವಣೆಯಲ್ಲಿ ಆದ ಪಾಠದಿಂದ ಏನೂ ಕಲಿತಂತೆ ಕಾಣುತ್ತಿಲ್ಲ’ ಎಂದು ಕಿಡಿ ಕಾರಿದ್ದರು.

‘ನಾನು ಯಾರ ವಿರುದ್ಧವೂ ವೈಯಕ್ತಿಕ ದ್ವೇಷದ ಮಾತುಗಳನ್ನೂ ಆಡಿಲ್ಲ. ಕೆಆರ್‌ಎಸ್‌ ಸುತ್ತಮುತ್ತ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು, ಅದನ್ನು ರೈತರು ನನ್ನ ಗಮನಕ್ಕೆ ತಂದಿದ್ದರು. ಇದನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಿದ್ದೆ. ಖುದ್ದಾಗಿ ಗಣಿ ಸಚಿವ ಮುರುಗೇಶ್ ನಿರಾಣಿ ಅವರೇ ಅಕ್ರಮ ಗಣಿಗಾರಿಕೆ ನೋಡಿದ್ದಾರೆ. ಒಂದು ಅಕ್ರಮ ಗಣಿಗಾರಿಕೆಗೆ ₹100 ಕೋಟಿ ದಂಡ ಹಾಕಿದ್ದಾರೆ’ ಎಂದರು.

ಸಮಜಾಯಿಷಿ ನೀಡಿದ ಎಚ್‌ಡಿಕೆ: ಹೇಳಿಕೆ ವಿವಾದದ ರೂಪ ಪಡೆಯುತ್ತಿದ್ದಂತೆ ಸಮಜಾಯಿಷಿ ನೀಡಿದ ಕುಮಾರಸ್ವಾಮಿ, ‘ಅಣೆಕಟ್ಟಿಗೆ ಸುಮಲತಾರನ್ನು ಮಲಗಿಸಿ ಎಂದರೆ ಕಾವಲು ಇರಿಸಿ ಎಂಬ ಅರ್ಥದಲ್ಲಿ ಹೇಳಿದ್ದೆ. ಸಂಸದರು ತಮ್ಮ ಜವಾಬ್ದಾರಿ ಅರಿತುಕೊಳ್ಳಬೇಕು. ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ. ಹೋದಲ್ಲಿ ಬಂದಲ್ಲಿ ಒಂದೇ ವಿಚಾರ ಪ್ರಸ್ತಾಪಿಸುವುದು ಬೇಡ. ಅವರು ಏನು ಮಾಡಿದ್ದಾರೆ ಎಂಬುದನ್ನು ಮುಂದಿನ ಚುನಾವಣೆಯಲ್ಲಿ ದಾಖಲೆ ಸಮೇತ ಪ್ರಸ್ತಾಪಿಸುತ್ತೇನೆ’ ಎಂದಿದ್ದಾರೆ.

ಇದಕ್ಕೆ ಮತ್ತೆ ತಿರುಗೇಟು ನೀಡಿದ ಸುಮಲತಾ, ‘ಕುಮಾರಸ್ವಾಮಿ ಇವತ್ತೇ ಆಡಿಯೋ ಬಾಂಬ್‌, ವಿಡಿಯೊ ಬಾಂಬ್‌ ಬಿಡುಗಡೆ ಮಾಡಲಿ. ಜನ ನ್ಯೂಕ್ಲಿಯರ್‌ ಬಾಂಬ್‌ ಇಟ್ಟುಕೊಂಡಿದ್ದಾರೆ. ಜನ ನಿಮ್ಮನ್ನು ಬಿಡುವುದಿಲ್ಲ’ ಎಂದಿದ್ದಾರೆ.

‘ಕುಮಾರಸ್ವಾಮಿ ತಾವು ಹೇಳಿದ ಮಾತಿಗೆ ಮೊದಲಿಗೆ ಕ್ಷಮೆ ಯಾಚಿಸಬೇಕು. ಆ ಮೇಲೆ ಯಾವುದೇ ದಾಖಲೆ ಬಿಡುಗಡೆ ಮಾಡಲಿ’ ಎಂದು ಕುಟುಕಿದ್ದಾರೆ.

‘ಮಂಡ್ಯದಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ಪ್ರಶ್ನೆ ಮಾಡಿದ್ದಕ್ಕೆ ಇದೆಲ್ಲ ನಡೆಯುತ್ತಿದೆ. ಲೋಕಸಭಾ ಚುನಾವಣೆಯ ಸೋಲಿನ ಹತಾಶೆ ಅವರನ್ನು ಕಾಡುತ್ತಿದೆ. ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸುಳ್ಳುಗಳನ್ನು ಹೆಣೆಯುತ್ತಿದ್ದಾರೆ, ಮೈಶುಗರ್‌ ಮತ್ತೆ ಆರಂಭವಾಗುವುದು ಅವರಿಗೆ ಬೇಕಿಲ್ಲ’ ಎಂದು ಸುಮಲತಾ ಹೇಳಿದರು.

ಇದನ್ನೂ ಓದಿ: 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು