ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವರಾಜ ಬೊಮ್ಮಾಯಿ ನಿವಾಸಕ್ಕೆ ಎಚ್‌.ಡಿ. ಕುಮಾರಸ್ವಾಮಿ ಭೇಟಿ, ಚರ್ಚೆ

ರಾಜಕೀಯ ವಿಷಯ ಚರ್ಚಿಸಿಲ್ಲ– ಇಬ್ಬರು ನಾಯಕರ ಸ್ಪಷ್ಟನೆ
Last Updated 21 ಜನವರಿ 2021, 7:08 IST
ಅಕ್ಷರ ಗಾತ್ರ

ಬೆಂಗಳೂರು: ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಗುರುವಾರ ಬೆಳಿಗ್ಗೆ ಆರ್‌.ಟಿ. ನಗರದಲ್ಲಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ನಿವಾಸಕ್ಕೆ ಭೇಟಿ ಮಾಡಿ ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದರು. ಕುಮಾರಸ್ವಾಮಿ ಭೇಟಿ ರಾಜಕೀಯ ವಲಯದಲ್ಲಿ ನಾನಾ ಚರ್ಚೆಗೆ ಕಾರಣವಾಗಿದೆ.

ಆದರೆ, ಭೇಟಿಯ ಬಳಿಕ ಮಾತನಾಡಿದ ಕುಮಾರಸ್ವಾಮಿ, ‘ರಾಜಕೀಯ ಬೆಳವಣಿಗೆ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ಜೆಡಿಎಸ್ ಪಕ್ಷ ಸೇರ್ಪಡೆಗೆ ಮನವೊಲಿಸಲು ಕೂಡಾ ಬಂದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ನಮ್ಮದು ಹಳೆಯ ಸ್ನೇಹ. ಒಂದೇ ಕುಟುಂಬದ ರೀತಿ ಇದ್ದೇವೆ. ದೇವೇಗೌಡರು ಮತ್ತು ಎಸ್.ಆರ್. ಬೊಮ್ಮಾಯಿ‌ ಸ್ನೇಹಿತರಾಗಿದ್ದರು. ಆ ಕಾಲದಿಂದಲೂ ನಮ್ಮ ಸ್ನೇಹ ಇದೆ’ ಎಂದರು.

‘ನನ್ನ ಕ್ಷೇತ್ರದ ಕೆಲವು ಹುದ್ದೆಗಳಿಗೆ ನೇಮಕ ವಿಚಾರ ಚರ್ಚೆ ಮಾಡಿದ್ದೇವೆ ಅಷ್ಟೇ. ಅದು ಬಿಟ್ಟು ಬೇರೆ ಏನೂ ಚರ್ಚೆ ಆಗಿಲ್ಲ’ ಎಂದರು.

ಬೆಳಗಾವಿಯಲ್ಲಿ ಎಂಇಎಸ್, ಶಿವಸೇನೆ ಉದ್ದಟತನ ವಿಚಾರವಾಗಿ ಪ್ರತಿಕ್ರಿಯಿಸಿದ ಎಚ್‌.ಡಿ. ಕುಮಾರಸ್ವಾಮಿ, ‘ಗೃಹ ಸಚಿವರಿಗೂ ಈ ಬಗ್ಗೆ ಮನವಿ ಮಾಡಿದ್ದೇನೆ. ಎಂಇಎಸ್ ಹಾಗೂ ಶಿವಸೇನೆ ವಿರುದ್ದ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಇದು ಎಂಇಎಸ್ ಹಾಗೂ ಶಿವಸೇನೆಯ ಉದ್ದಟತನ’ ಎಂದರು.

‘ಕನ್ನಡದ ಧ್ವಜವನ್ನು ಬೆಳಗಾವಿಯ ಪಾಲಿಕೆ ಮೇಲೆ ಹಾರಿಸುವುದನ್ನು ವಿರೋಧಿಸುವುದು ರಾಜ್ಯದ ದ್ರೋಹಿಗಳು. ಕರ್ನಾಟಕದಲ್ಲಿ ಬಿಟ್ಟು ನಾವು ಮಹಾರಾಷ್ಟ್ರದಲ್ಲಿ ಕನ್ನಡ ಬಾವುಟ ಹಾರಿಸಲು ಆಗುತ್ತದೆಯೇ. ನಮ್ಮ ರಾಜ್ಯ, ನಮ್ಮ ನೆಲದಲ್ಲಿ ಬಾವುಟ ಹಾರಿಸಲು ವಿರೋಧಿಸುವವರನ್ನು ಗಡಿಪಾರು ಮಾಡಬೇಕು’ ಎಂದು ಆಗ್ರಹಿಸಿದರು.

‘ಸ್ಥಳೀಯ ಜನಪ್ರತಿನಿಧಿಗಳು ಇಂಥ ವಿಷಯ ಇತ್ಯರ್ಥ ಮಾಡಲು ಒಗ್ಗಟ್ಟಿನ ತೀರ್ಮಾನ ಮಾಡಬೇಕು’ ಎಂದೂ ಅವರು ಸಲಹೆ ಹೇಳಿದರು.

ಬಸವರಾಜ ಬೊಮ್ಮಾಯಿ ಮಾತನಾಡಿ, ‘ಕುಮಾರಸ್ವಾಮಿ ಮತ್ತು ನನ್ನ ಮಧ್ಯೆ ಯಾವುದೇ ರಾಜಕೀಯ ವಿಚಾರ ಚರ್ಚೆ ಆಗಿಲ್ಲ. ಈ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವುದು ಬೇಡ. ಕುಮಾರಸ್ವಾಮಿ ಮತ್ತು ನಾನು ತುಂಬಾ ಹಳೇ ಸ್ನೇಹಿತರು. ನನ್ನ ತಂದೆ ಕಾಲದಿಂದಲೇ ದೇವೇಗೌಡರ ಕುಟುಂಬದ ಜೊತೆ ಉತ್ತಮ ಬಾಂಧವ್ಯ ಇದೆ. ಕ್ಷೇತ್ರದ ಅಭಿವೃದ್ಧಿ ಸಂಬಂಧಪಟ್ಟಂತೆ ಕುಮಾರಸ್ವಾಮಿ ಚರ್ಚೆ ಮಾಡಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT