ಭಾನುವಾರ, ಜೂನ್ 13, 2021
29 °C
ಮುಖ್ಯಮಂತ್ರಿ ತವರಿನಲ್ಲಿ ಹೀಗೊಂದು ’ಕ್ರಾಂತಿ’

ಸಿಎಂ ಬಿಎಸ್‌ವೈ ತವರಲ್ಲಿ ಹೆಡ್‌ಕಾನ್‌ಸ್ಟೆಬಲ್‌ಗೆ ನೋಂದಣಿ ಇಲಾಖೆಯ ಕಾಯಂ ಹುದ್ದೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಶಿವಮೊಗ್ಗದ ಸಶಸ್ತ್ರ ಮೀಸಲು ಪಡೆಯ ಹೆಡ್‌ಕಾನ್‌ಸ್ಟೆಬಲ್‌ ಎಸ್‌.ಕೆ.ನಂದೀಶ್ ಅವರನ್ನು  ಶಾಶ್ವತ ವರ್ಗಾವಣೆ ಮೂಲಕ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ವಿಲೀನಗೊಳಿಸಲಾಗಿದೆ.

ಇವರು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಗನ್ ಮನ್ ಆಗಿದ್ದು, ಶಿಕಾರಿಪುರದಲ್ಲಿ ಆಪ್ತ ಸಹಾಯಕರೂ ಆಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನೇರ ನೇಮಕಾತಿ ಅಡಿ ಖಾಲಿ ಇರುವ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ವಿಲೀನಗೊಳಿಸಲು ಪ್ರಸ್ತಾವನೆ ಕಳುಹಿಸಲಾಗಿತ್ತು. ಕೇವಲ ಒಂದೂವರೆ ತಿಂಗಳಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಿ ಆದೇಶ ಹೊರಡಿಸಲಾಗಿದೆ.

ಕರ್ನಾಟಕ ನಾಗರೀಕ ಸೇವೆ(ಸೇವೆಗಳು ಮತ್ತು ಕನ್ನಡ ಭಾಷಾ ಪರೀಕ್ಷೆ) ನಿಯಮಗಳು 1974 ರಂತೆ ಒಂದು ವರ್ಷದ ಅವಧಿಯಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ನಿಗದಿ ಮಾಡಿರುವ ಇಲಾಖಾ ಪರೀಕ್ಷೆಯಲ್ಲಿ ಇವರು ಉತ್ತೀರ್ಣ ಹೊಂದಬೇಕು.

ಅಲ್ಲದೆ, ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977 ರ ಅನ್ವಯ ವರ್ಗಾವಣೆ ಮೂಲಕ ನೇಮಕಾತಿಯನ್ನು ನೌಕರರ ಸೇವಾವಧಿಯಲ್ಲಿ ಒಮ್ಮೆ ಮಾತ್ರ ಪರಿಗಣಿಸಬಹುದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಒಂದು ಇಲಾಖೆಯಲ್ಲಿ ನೇಮಕಗೊಂಡವರನ್ನು ಮತ್ತೊಂದು ಇಲಾಖೆಗೆ ಶಾಶ್ವತ ವರ್ಗಾವಣೆ ಮಾಡಿ, ಹುದ್ದೆಯನ್ನೇ ವಿಲೀನಗೊಳಿಸುವುದು ಅಪರೂಪದ ಪ್ರಕರಣದಲ್ಲಿ ಮಾತ್ರ. ಇಲಾಖೆ ಬೇರೆಯಾಗಿದ್ದರೂ ಸಮಾನ ಕೆಲಸಗಳಿದ್ದಾಗ ಹೀಗೆ ಮಾಡಿದ ನಿದರ್ಶನಗಳಿದ್ದವು. ಪೇದೆಯೊಬ್ಬರಿಗೆ ಪ್ರಥಮ ದರ್ಜೆ ಸಹಾಯಕ ಹುದ್ದೆ ನೀಡಿದ್ದು ಇದೇ ಮೊದಲು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಮೂಲಗಳು ಹೇಳಿವೆ.

ಈ ಆದೇಶ ಭವಿಷ್ಯದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆ ಇದೆ. ಇನ್ನಷ್ಟು ನೌಕರರು ತಮಗೆ ಬೇಕಾದ ಇಲಾಖೆಯಲ್ಲಿ ಹುದ್ದೆ ವಿಲೀನಕ್ಕಾಗಿ ಮನವಿ ಸಲ್ಲಿಸಬಹುದು. ಇದನ್ನು ಮಾದರಿಯಾಗಿ ಪರಿಗಣಿಸಿ ಇನ್ನಷ್ಟು ಸಿಬ್ಬಂದಿ ಮನವಿ ಸಲ್ಲಿಸಬಹುದು, ಒಂದು ವೇಳೆ ನಿರಾಕರಿಸಿದರೆ ನ್ಯಾಯಾಲಯದ ಮೆಟ್ಟಿಲು ಹತ್ತುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು