ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪು ಶಿಲೀಂಧ್ರ: ತಡೆಗೆ ಕ್ರಮವಹಿಸಲು ಆಸ್ಪತ್ರೆಗಳಿಗೆ ಆರೋಗ್ಯ ಇಲಾಖೆ ಸೂಚನೆ

Last Updated 4 ಜೂನ್ 2021, 16:34 IST
ಅಕ್ಷರ ಗಾತ್ರ

ಬೆಂಗಳೂರು: ಸೋಂಕು ನಿವಾರಕ ದ್ರಾವಣದಿಂದ ಒಳಾಂಗಣ ಸ್ವಚ್ಛಗೊಳಿಸುವಿಕೆ ಸೇರಿದಂತೆ ವಿವಿಧ ಕ್ರಮಗಳ ಮೂಲಕ ಕಪ್ಪು ಶಿಲೀಂಧ್ರ ಸೇರಿದಂತೆ ವಿವಿಧ ಸೋಂಕುಗಳ ತಡೆ ಮತ್ತು ನಿಯಂತ್ರಣಕ್ಕೆ ಆದ್ಯತೆ ನೀಡಬೇಕು ಎಂದು ಆರೋಗ್ಯ ಇಲಾಖೆಯು ಆಸ್ಪತ್ರೆಗಳಿಗೆ ಸೂಚಿಸಿದೆ. ‌‌

ಇಲಾಖೆ ಆಯುಕ್ತ ಡಾ. ತ್ರಿಲೋಕ್ ಚಂದ್ರ ಈ ಬಗ್ಗೆ ಸುತ್ತೋಲೆ ಹೊರಡಿಸಿದ್ದಾರೆ. ಕೋವಿಡ್ ಎರಡನೇ ಅಲೆಯಲ್ಲಿ ಅನಿರೀಕ್ಷಿತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳು ವರದಿಯಾಗಿವೆ. ಪರಿಣಾಮ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರ ಸೋಂಕು ದೃಢ ಪ್ರಮಾಣವು ಹೆಚ್ಚಳವಾಗಿದೆ. ಕಪ್ಪು ಶಿಲೀಂಧ್ರ ಸೋಂಕು ಗಂಭೀರ ಸ್ವರೂಪದ್ದಾಗಿದ್ದು, ಜೀವಕ್ಕೆ ಅಪಾಯವನ್ನು ತಂದೊಡ್ಡಲಿದೆ. ಆದ್ದರಿಂದ ಈ ಸೋಂಕನ್ನು ನಿಯಂತ್ರಿಸಲು ರಾಜ್ಯದ ಎಲ್ಲ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿನ ಸಿಬ್ಬಂದಿ ಗಮನಹರಿಸಬೇಕು’ ಎಂದು ತಿಳಿಸಿದ್ದಾರೆ.

‘ಈಗಾಗಲೇ ರಚಿಸಲಾಗಿರುವ ಆಸ್ಪತ್ರೆ ಸೋಂಕು ನಿಯಂತ್ರಣಾ ಮತ್ತು ಸ್ವಚ್ಛತಾ ಸಮಿತಿಯು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಬೇಕು. ಸೋಂಕು ತಡೆ ಮತ್ತು ನಿಯಂತ್ರಣ ಅಧಿಕಾರಿಯನ್ನಾಗಿ ಆಸ್ಪತ್ರೆಯಲ್ಲಿನ ಜೀವಾಣು ಶಾಸ್ತ್ರಜ್ಞ ಅಥವಾ ನಿವಾಸಿ ವೈದ್ಯಕೀಯ ಅಧಿಕಾರಿಯನ್ನು ನಿಯೋಜಿಸಬೇಕು. ಹವಾನಿಯಂತ್ರಿತ ಯಂತ್ರಗಳು (ಎಸಿ) ಇಲ್ಲದಿದ್ದಲ್ಲಿ ನೈಸರ್ಗಿಕ ಗಾಳಿಗೆ ವ್ಯವಸ್ಥೆ ಮಾಡಬೇಕು. ರೋಗಿಗಳಿಗೆ ಸುರಕ್ಷಿತ ನೀರು ಮತ್ತು ಆಹಾರವನ್ನು ಒದಗಿಸಬೇಕು. ಆಸ್ಪತ್ರೆಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು’ ಎಂದು ಹೇಳಿದ್ದಾರೆ.

‘ವೈದ್ಯಕೀಯ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ತೀವ್ರ ನಿಗಾ ಘಟಕಗಳಲ್ಲಿ ಬಳಸಬಹುದಾದ ಉಪಕರಣಗಳಿಂದ ಉಂಟಾಗುವ ಸೋಂಕನ್ನು ತಡೆಯಲು ಕ್ರಮ ಕೈಗೊಳ್ಳಬೇಕು. ಅದೇ ರೀತಿ, ಪ್ರಯೋಗಾಲಯಗಳಲ್ಲಿ ಕೂಡ ಸೋಂಕು ಹರಡದಂತೆ ಎಚ್ಚರ ವಹಿಸಬೇಕು. ಕೋವಿಡ್‌ ಪೀಡಿತರಿಗೆ ಸ್ಟೆರಾಯ್ಡ್ ಅಗತ್ಯವಿದೆಯೇ ಎನ್ನುವುದರ ಬಗ್ಗೆ ವೈದ್ಯಕೀಯ ಮೌಲ್ಯಮಾಪನವನ್ನು ನಡೆಸಬೇಕು. ಕೋವಿಡ್‌ ಕಾಯಿಲೆ ವಾಸಿಯಾದ ಬಳಿಕ ಕಾಣಿಸಿಕೊಳ್ಳುವ ಸೋಂಕಿನ ಬಗ್ಗೆ ಕೂಡ ನಿಗಾ ಇಡಬೇಕು. ಸೋಂಕು ತಡೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಿಬ್ಬಂದಿಗೆ ತರಬೇತಿ ಒದಗಿಸಬೇಕು’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT