ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳಿಗಾಲದ ಅಧಿವೇಶನಕ್ಕೆ ಮಸೂದೆಗಳ ಬಿಸಿ

ಗೋಹತ್ಯೆ, ‘ಲವ್‌ ಜಿಹಾದ್‌’ ಮಸೂದೆ ಮಂಡನೆಗೆ ಸಿದ್ಧತೆ?
Last Updated 6 ಡಿಸೆಂಬರ್ 2020, 20:14 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಮಂಡಲದ ಉಭಯ ಸದನಗಳ ಚಳಿಗಾಲದ ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ಮತ್ತು ‘ಲವ್‌ ಜಿಹಾದ್‌’ ತಡೆಗೆ ಕಾಯ್ದೆ ರೂಪಿಸಲು ಮಸೂದೆ ಮಂಡಿಸುವ ಸಾಧ್ಯತೆ ಇದ್ದು, ಇದು ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ಮಧ್ಯೆ ಕಾವೇರಿದ ಚರ್ಚೆಗೆ ಕಾರಣವಾಗುವ ಸಾಧ್ಯತೆ ಇದೆ. ಅಧಿವೇಶನ ಸೋಮವಾರದಿಂದ ಆರಂಭವಾಗಲಿದೆ.

ಗೋಹತ್ಯೆ ನಿಷೇಧಕ್ಕೆ ಕಠಿಣ ಕಾಯ್ದೆ ಜಾರಿ ತರಲಾಗುವುದು. ಈ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸುವುದಾಗಿ ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಹಾಗೂ ‘ಲವ್‌ ಜಿಹಾದ್‌‘ ತಡೆಗೆ ಸಂಬಂಧಿಸಿದಂತೆ ಮಸೂದೆ ಮಂಡಿಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಇವೆರಡೂ ಮಸೂದೆಗಳ ಮಂಡನೆಗೆ ಕಾಂಗ್ರೆಸ್‌ ತೀವ್ರ ವಿರೋಧ ವ್ಯಕ್ತಪಡಿಸಿದೆ. ಇದನ್ನು ಪ್ರತಿಭಟಿಸಿ ಉಗ್ರ ಹೋರಾಟ ನಡೆಸುವುದಾಗಿ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ. ಆದರೆ, ಇವೆರಡೂ ಕಾಯ್ದೆಗಳನ್ನು ರೂಪಿಸುವ ಸಂಬಂಧ ಬೆಳಗಾವಿಯಲ್ಲಿ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ನಿರ್ಣಯ ತೆಗೆದುಕೊಂಡಿದೆ.

‘ಉಪಚುನಾವಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಕಳುಹಿಸಿದ್ದ ಹಣವನ್ನು ಸಿ.ಪಿ.ಯೋಗೇಶ್ವರ್‌ ನನಗೆ ತಲುಪಿಸಲಿಲ್ಲ’ ಎಂದು ವಿಧಾನಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಅವರು ನೀಡಿರುವ ಹೇಳಿಕೆ ಬಗ್ಗೆ ಕಾಂಗ್ರೆಸ್‌ ಈಗಾಗಲೇ ಎಸಿಬಿಗೆ ದೂರು ನೀಡಿದ್ದು, ಈ ವಿಷಯವೂ ವಾಗ್ವಾದಕ್ಕೆ ದಾರಿ ಮಾಡುವ ಸಾಧ್ಯತೆ ಇದೆ.
ಕೋವಿಡ್‌ ಪರಿಸ್ಥಿತಿಯ ನಿರ್ವಹಣೆ, ಮೃತಪಟ್ಟವರ ಸಂಖ್ಯೆಯ ವಿಚಾರವಾಗಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ದಾಖಲೆಗಳ ಸಮೇತ ಸಿದ್ದರಾಮಯ್ಯ ಸಿದ್ಧತೆ ನಡೆಸಿಕೊಂಡಿದ್ದಾರೆ. ಕೋವಿಡ್‌ ನಿರ್ವಹಣೆಯಲ್ಲಿ ಆಗಿರುವ ಖರ್ಚು– ವೆಚ್ಚಗಳು, ರೋಗದಿಂದ ಸತ್ತವರ ವಿಚಾರದಲ್ಲಿ ಸರ್ಕಾರ ತಪ್ಪು ಮಾಹಿತಿಗಳನ್ನು ನೀಡಿದೆ ಎಂದೂ ಅವರು ಆರೋಪಿಸಿದ್ದಾರೆ.

ಕಳೆದ ಅಧಿವೇಶನದಲ್ಲಿ ಮೇಲ್ಮನೆಯಲ್ಲಿ ಅಂಗೀಕಾರಗೊಳ್ಳದ ಮತ್ತು ಮಂಡನೆಯಾಗದ ಭೂಸುಧಾರಣೆ, ಕಾರ್ಮಿಕ ಮತ್ತು ಎಪಿಎಂಸಿ ತಿದ್ದುಪಡಿ ಮಸೂದೆಗಳು ಈ ಬಾರಿ ಪುನಃ ಮಂಡನೆಯಾಗಲಿವೆ.

ವಿವಿಧ ನಿಗಮಗಳ ರಚನೆ ಮತ್ತು ಅವುಗಳ ಅನುದಾನ ನೀಡಿಕೆಯ ಕುರಿತೂ ಚರ್ಚೆ ನಡೆಯುವ ಸಂಭವವಿದೆ. ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎನ್‌.ಆರ್‌.ಸಂತೋಷ್‌ ಆತ್ಮಹತ್ಯೆ ಯತ್ನದ ವಿಷಯವೂ ಪ್ರಸ್ತಾಪವಾಗಲಿದೆ.

ಇತ್ತೀಚಿನ ದಿನಗಳಲ್ಲಿ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ, ಬಿಜೆಪಿ ಬಗ್ಗೆ ಮೃದು ಧೋರಣೆ ತಾಳಿದ್ದಾರೆ. ಸರ್ಕಾರ ಇಕ್ಕಟಿಗೆ ಸಿಲುಕಿದ ಸಂದರ್ಭದಲ್ಲಿ ಪರೋಕ್ಷವಾಗಿ ಬೆಂಬಲಕ್ಕೆ ನಿಲ್ಲಬಹುದು ಎಂದೂ ಹೇಳಲಾಗುತ್ತಿದೆ.

ಒಂದು ದೇಶ–ಒಂದು ಚುನಾವಣೆ: ಅಧಿವೇಶನದ ಕೊನೆಯ ಎರಡು ದಿನಗಳು ‘ಒಂದು ದೇಶ, ಒಂದು ಚುನಾವಣೆ’ ವಿಷಯ ಕುರಿತು ಚರ್ಚೆ ನಡೆಸಲು ನಿರ್ಧರಿಸಲಾಗಿದೆ. ಇತ್ತೀಚೆಗೆ ನಡೆದ ವಿಧಾನಸಭಾಧ್ಯಕ್ಷರ ಸಮ್ಮೇಳನದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಈ ವಿಷಯವಾಗಿ ದೇಶವ್ಯಾಪಿ ಚರ್ಚೆ ನಡೆಯಬೇಕು ಎಂದು ಹೇಳಿದ್ದರು. ಆದ್ದರಿಂದ, ಈ ವಿಷಯವನ್ನು ಸದನದಲ್ಲಿ ಗಂಭೀರವಾಗಿ ಚರ್ಚಿಸಲಾಗುವುದು ಎಂದು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.

ಸಭಾಪತಿ ವಿರುದ್ಧ ಅವಿಶ್ವಾಸ

ವಿಧಾನಪರಿಷತ್ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ ಅವರ ವಿರುದ್ಧ ಇದೇ ಅಧಿವೇಶನದಲ್ಲಿ ಅವಿಶ್ವಾಸ ನಿರ್ಣಯ ಮಂಡಿಸುವುದಾಗಿ ಪರಿಷತ್ ಕಾರ್ಯದರ್ಶಿಗೆ ಬಿಜೆಪಿ ಈಗಾಗಲೇ ನೋಟಿಸ್‌ ನೀಡಿದೆ. ಈ ಬಗ್ಗೆ ಬಿಜೆಪಿ ಮತ್ತು ಜೆಡಿಎಸ್‌ ಮಧ್ಯೆ ಹೊಂದಾಣಿಕೆ ಆಗುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಸಭಾಪತಿ ಪದಚ್ಯುತಿಗೆ ಜೆಡಿಎಸ್‌ ಬೆಂಬಲ ನೀಡಿದರೆ ಪ್ರತಿಯಾಗಿ ಸಭಾಪತಿ ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟುಕೊಡಬೇಕಾಗುತ್ತದೆ. ಈ ದಿಸೆಯಲ್ಲಿ ಮಾತುಕತೆಗಳು ನಡೆದಿವೆ ಎಂದು ಮೂಲಗಳು ತಿಳಿಸಿವೆ.
‘ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿಯವರು ಸದನದಲ್ಲಿ ನಿಷ್ಪಕ್ಷವಾಗಿ ವರ್ತಿಸದೇ ಕಾಂಗ್ರೆಸ್‌ ಸದಸ್ಯರಂತೆ ನಡೆದುಕೊಳ್ಳುತ್ತಿದ್ದಾರೆ ಎಂಬ ಭಾವನೆ ಮೂಡಿದೆ. ಸದಸ್ಯರಲ್ಲಿ ಅವರ ಬಗ್ಗೆ ವಿಶ್ವಾಸವಿಲ್ಲ. ಶಾಸಕಾಂಗ ಕರ್ತವ್ಯ ನಿರ್ವಹಣೆಯಲ್ಲಿ ಪಕ್ಷಪಾತಿಯಾಗಿದ್ದು, ಸಂವಿಧಾನದ ಆಶಯಕ್ಕೆ ಧಕ್ಕೆ ತಂದಿದ್ದಾರೆ’ ಎಂದು ನೋಟಿಸ್‌ನಲ್ಲಿ ಬಿಜೆಪಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT