ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಭಾರಿ ಮಳೆಗೆ ರಸ್ತೆ, ಸೇತುವೆಗಳು ಜಲಾವೃತ

Last Updated 5 ಆಗಸ್ಟ್ 2020, 11:52 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯಾದ್ಯಂತ ಬುಧವಾರ ಬಿರುಸಿನ ಮಳೆಯಾಗಿದೆ. ಹಳ್ಳ– ಕೊಳ್ಳ ತುಂಬಿ ಹರಿಯುತ್ತಿವೆ. ಮಲಪ್ರಭಾ, ಘಟಪ್ರಭಾ ನದಿ ನೀರಿನ ಹರಿವು ಹೆಚ್ಚಳವಾಗಿದೆ. ನೆರೆಯ ದಕ್ಷಿಣ ಮಹಾರಾಷ್ಟ್ರದಲ್ಲೂ ಮಳೆ ಅಬ್ಬರ ಹೆಚ್ಚಾಗಿದ್ದರಿಂದ ಕೃಷ್ಣಾ ಹಾಗೂ ಉಪನದಿಗಳ ಒಳಹರಿವು ಹೆಚ್ಚಳವಾಗಿದೆ. ರಾಜಾಪುರ ಬ್ಯಾರೇಜ್‌ನಿಂದ 35,625 ಕ್ಯುಸೆಕ್ ಹಾಗೂ ದೂಧ್‌ಗಂಗಾ ನದಿಯಿಂದ 12,848 ಕ್ಯುಸೆಕ್ ಸೇರಿ ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿಗೆ 48,473 ಕ್ಯುಸೆಕ್ ನೀರು ಸೇರಿಕೊಳ್ಳುತ್ತಿದೆ.

ಕೃಷ್ಣಾ, ವೇದಗಂಗಾ, ದೂಧ್‌ಗಂಗಾ ನದಿಗಳ ಒಳಹರಿವು ಹೆಚ್ಚಾಗಿದ್ದರಿಂದ ಚಿಕ್ಕೋಡಿ, ನಿಪ್ಪಾಣಿ ತಾಲ್ಲೂಕಿನ ಏಳು ಕೆಳಮಟ್ಟದ ಬ್ರಿಡ್ಜ್‌ ಕಮ್‌ ಬ್ಯಾರೇಜ್‌ಗಳು ಜಲಾವೃತವಾಗಿವೆ. ಕಲ್ಲೋಳ-ಯಡೂರ, ಮಲಿಕವಾಡ-ದತ್ತವಾಡ, ಕಾರದಗಾ-ಭೋಜ್, ಭೋಜವಾಡಿ-ಕುನ್ನೂರ, ಕುನ್ನೂರ- ಬಾರವಾಡ, ಅಕ್ಕೋಳ-ಸಿದ್ನಾಳ ಹಾಗೂ ಜತ್ರಾಟ-ಭೀವಶಿ ಬ್ರಿಡ್ಜ್‌ ಕಮ್‌ ಬ್ಯಾರೇಜ್‌ಗಳು ಜಲಾವೃತವಾಗಿವೆ. ಜನರು ಪರ್ಯಾಯ ಮಾರ್ಗಗಳನ್ನು ಬಳಸುತ್ತಿದ್ದಾರೆ.

ಹುಕ್ಕೇರಿ ತಾಲ್ಲೂಕಿನ ಮಾರ್ಕಂಡೇಯ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ತೀವ್ರವಾಗಿ ಏರುಗತಿಯಲ್ಲಿದೆ. ಜಲಾಶಯದ ನಾಲ್ಕು ಗೇಟ್‌ಗಳನ್ನು ತೆರೆದು ನದಿಗೆ ನೀರನ್ನು ಹರಿಯಬಿಡಲಾಗುತ್ತಿದ್ದು, ನದಿ ದಂಡೆಯ ಮೇಲೆ ವಾಸಿಸುವ ಜನರಿಗೆ ಸುರಕ್ಷಿತ ಪ್ರದೇಶಗಳತ್ತ ತೆರಳಲು ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಚೋರ್ಲಾ ಘಾಟ್‌ದಲ್ಲಿ ಮಣ್ಣು ಕುಸಿದಿದ್ದರಿಂದ ಗೋವಾ ಕಡೆ ಹೋಗುವ ವಾಹನಗಳ ಸಂಚಾರ ಸ್ಥಗಿತಗೊಂಡಿದೆ. ಇನಾಮಹೊಂಗಲ ಬಳಿ ಸೇತುವೆ ಜಲಾವೃತಗೊಂಡಿದ್ದರಿಂದ ಸವದತ್ತಿ– ಧಾರವಾಡ ಸಂಪರ್ಕ ರಸ್ತೆ ಕಡಿತಗೊಂಡಿದೆ. ಬೆಳಗಾವಿ ತಾಲ್ಲೂಕಿನ ಕಡೋಲಿ– ದೇವಗಿರಿ ಹಾಗೂಮಂಡೋಳಿ– ಸಾವಗಾಂವ ರಸ್ತೆಯ ಮೇಲೆ ನೀರು ಹರಿದಿದೆ. ಬೈಲಹೊಂಗಲ ತಾಲ್ಲೂಕಿನ ಎಂ.ಕೆ.ಹುಬ್ಬಳ್ಳಿ ಬಳಿಯ ಖಾನಾಪೂರ ರಸ್ತೆ ಹಾಗೂ ಅಮರಾಪೂರ-ವೀರಾಪೂರ ರಸ್ತೆ ಬಂದ್‌ ಆಗಿದೆ.

ಬೆಳಗಾವಿ, ಖಾನಾಪುರ, ಬೈಲಹೊಂಗಲ, ಸವದತ್ತಿ, ಚಿಕ್ಕೋಡಿ, ಅಥಣಿ, ಎಂ.ಕೆ. ಹುಬ್ಬಳ್ಳಿ, ನಿಪ್ಪಾಣಿ, ಹಾರೂಗೇರಿ, ಯಮಕನಮರಡಿ, ರಾಯಬಾಗ, ಹುಕ್ಕೇರಿ, ರಾಮದುರ್ಗ, ಹಿರೇಬಾಗೇವಾಡಿ, ಸಾಂಬ್ರಾ, ಕೌಜಲಗಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆಯಾಗಿದೆ. ಬೆಳಗಾವಿಯ ಕೆಲವು ತಗ್ಗುಪ್ರದೇಶಗಳಲ್ಲಿ ಮನೆಯೊಳಗೆ ನೀರು ನುಗ್ಗಿದೆ. ರಸ್ತೆ ಬದಿ ನಿಲ್ಲಿಸಿದ್ದ ವಾಹನಗಳ ಮೇಲೆ ಮರಗಳು ಉರುಳಿ ಬಿದ್ದು ಹಾನಿ ಮಾಡಿವೆ. ಕೆಲವು ಕಡೆ ಮನೆಯ ಗೋಡೆಗಳು ನೆಲಕ್ಕುರುಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT