ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ, ಬೀದರ್‌ ಜಿಲ್ಲೆಯಲ್ಲಿ ಭಾರಿ ಮಳೆ

ಹೊಸಪೇಟೆ: ತುಂಗಭದ್ರಾ ನದಿ ನೀರಿನ ಹರಿವು ಇಳಿಮುಖ l ಇಳಕಲ್‌: 40ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು
Last Updated 10 ಅಕ್ಟೋಬರ್ 2021, 19:31 IST
ಅಕ್ಷರ ಗಾತ್ರ

ಕಲಬುರಗಿ: ಕಲಬುರಗಿ ಮತ್ತು ಬೀದರ್‌ ಜಿಲ್ಲೆಯಲ್ಲಿ ಭಾನುವಾರ ಬಿರುಸಿನ ಮಳೆಯಾಗಿದ್ದು, ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನಲ್ಲಿ ಸಿಡಿಲು ಬಡಿದು ಎತ್ತು ಮತ್ತು ಹಸು ಮೃತಪಟ್ಟಿವೆ.

ಕಲಬುರಗಿ ನಗರದಲ್ಲಿ 40 ನಿಮಿಷಕ್ಕೂ ಹೆಚ್ಚು ಹೊತ್ತು ಮಳೆಯಾದ ಪರಿಣಾಮ ಬಹುತೇಕ ರಸ್ತೆಗಳಲ್ಲಿ ನೀರು ನಿಂತು ವಾಹನಗಳ ಸಂಚಾರಕ್ಕೆ ಅಡ್ಡಿಯಾಯಿತು. ಚಿಂಚೋಳಿ ಮತ್ತು ಕಾಳಗಿ ತಾಲ್ಲೂಕುಗಳಲ್ಲೂ ಮಳೆಯಾಗಿದ್ದು, ಕಾಳಗಿ ತಾಲ್ಲೂಕಿನ ಸುಂಠಾಣ ಗ್ರಾಮದಲ್ಲಿ ಮನೆಯೊಂದು ಕುಸಿದಿದೆ.

ಬೀದರ್ ಜಿಲ್ಲೆಯ ಕೆಲವೆಡೆ ಸಾಧಾರಣ ಮಳೆಯಾಗಿದೆ. ಬೀದರ್‌, ಹುಮನಾಬಾದ್, ಚಿಟಗುಪ್ಪ ಹಾಗೂ ಹುಲಸೂರು ತಾಲ್ಲೂಕಿನಲ್ಲಿ ಮಳೆ ಸುರಿದಿದೆ.

ನೆರೆಯ ಮಹಾರಾಷ್ಟ್ರದ ಲಾತೂರ್‌ ಜಿಲ್ಲೆಯಲ್ಲಿ ಮಳೆಯಾಗುತ್ತಿದ್ದು, ಧಣೆಗಾಂವ ಜಲಾಶಯದಿಂದ ನೀರು ಹೊರಗೆ ಬಿಡಲಾಗಿದೆ. ಹುಲಸೂರು ಸಮೀಪದ ವಾಜರಖೇಡ ನೆಲ ಮಟ್ಟದ ಸೇತುವೆ ಮುಳುಗಡೆಯಾಗಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ.

ಉತ್ತಮ ಮಳೆ: ಬಾಗಲಕೋಟೆ, ಬೆಳಗಾವಿ, ಗದಗ, ಹೊಸಪೇಟೆ ಸೇರಿದಂತೆ ಹಲವೆಡೆ ಆಗಾಗ ಮಳೆಯಾಗಿದೆ.

ಹೊಸಪೇಟೆಯ ತುಂಗಭದ್ರಾ ನದಿ ನೀರಿನ ಹರಿವು ಸ್ವಲ್ಪ ಇಳಿಮುಖಗೊಂಡಿದೆ. ನೀರಿನ ಹರಿವು ಕಡಿಮೆಯಾಗಿದ್ದರಿಂದ ಪುರಂದರ ಮಂಟಪ, ಕಾಲು ಸೇತುವೆ ಗೋಚರಿಸಿದವು. ವಿಜಯನಗರ ಜಿಲ್ಲೆಯ ಹೆಚ್ಚಿನ ಭಾಗಗಳಲ್ಲಿ ಶನಿವಾರ ರಾತ್ರಿ ಆರಂಭಗೊಂಡ ಮಳೆ ಭಾನುವಾರ ಬೆಳಗಿನ ಜಾವದವರೆಗೆ ಸುರಿದಿದೆ.

ಬಾಗಲಕೋಟೆ ಜಿಲ್ಲೆಯ ಇಳಕಲ್‌ ಹಾಗೂ ಹುನಗುಂದಲ್ಲಿ ಶನಿವಾರ ತಡರಾತ್ರಿ ಹಾಗೂ ಬೆಳಗಿನ ಜಾವ ಭಾರಿ ಮಳೆಯಾಗಿದೆ. ಇಳಕಲ್ ನಗರದ ಗೌಳೇರಗುಡಿ (ನವನಗರ)ಯಲ್ಲಿ 40ಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ನುಗ್ಗಿತ್ತು. ಶನಿವಾರ ರಾತ್ರಿ ಹುನಗುಂದದಲ್ಲಿ ಸುರಿದ ಭಾರಿ ಮಳೆಗೆ, ರಾಜ್ಯ ಹೆದ್ದಾರಿಯಲ್ಲಿ ಬರುವ ಬೇಕಮಲದಿನ್ನಿ ಹಳ್ಳ ತುಂಬಿ ಹರಿದು, ಸಾರಿಗೆ ಬಸ್ ಹಳ್ಳದ ಮಧ್ಯದಲ್ಲಿ ಸಿಲುಕಿತ್ತು. ಬಳಿಕ ಅದನ್ನು ಟ್ರ್ಯಾಕ್ಟರ್‌ ಸಹಾಯದಿಂದ ಹೊರಗೆ ತರಲಾಯಿತು.

ಗದಗ ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ ಸುರಿಯಿತು. ಚಿತ್ರದುರ್ಗ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ. ಹೊಸದುರ್ಗತಾಲ್ಲೂಕಿನಲ್ಲಿ ಜಮೀನುಗಳು ಜಲಾವೃತಗೊಂಡಿವೆ.

ಸೆಸ್ಕ್ ಕಚೇರಿ ಕಾಂಪೌಂಡ್ ಕುಸಿತ

ಮಂಡ್ಯ/ಮೈಸೂರು: ಮಂಡ್ಯ ಹಾಗೂ ಮೈಸೂರು ಜಿಲ್ಲೆಯ ಹಲವೆಡೆ ಭಾನುವಾರ ಮಧ್ಯಾಹ್ನ ಧಾರಾಕಾರ ಮಳೆಯಾಗಿದೆ.

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನಲ್ಲಿ ಸುಮಾರು ಎರಡು ತಾಸು ಮಳೆ ಸುರಿದಿದೆ. ನಾಗಮಂಗಲ ಪಟ್ಟಣದಲ್ಲಿ ಸೆಸ್ಕ್ ಕಚೇರಿಯ ಕಾಂಪೌಂಡ್ ಕುಸಿದಿದ್ದು, ಅಂಗಡಿ, ಮಳಿಗೆಗಳಿಗೆ ನೀರು ನುಗ್ಗಿದೆ. ಕೆಎಸ್ಆರ್‌ಟಿಸಿ ಬಸ್ ನಿಲ್ದಾಣ ಕೆರೆಯಂತಾಗಿದೆ.

ಹೊಣಕೆರೆ, ಬೆಳ್ಳೂರು, ದೇವಾಲಾಪುರ, ಬಿಂಡಿಗನವಿಲೆ ಹೋಬಳಿಯ ವ್ಯಾಪ್ತಿಯಲ್ಲೂ ಭಾರಿ ಮಳೆಯಾಗಿದೆ. ಮಳವಳ್ಳಿಯಲ್ಲಿ ಧಾರಾಕಾರ ಮಳೆಯಾಗಿದ್ದು, ಮರ ಬಿದ್ದು ಹಸು ಮೃತಪಟ್ಟಿದೆ.

ಮೈಸೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಮಧ್ಯಾಹ್ನ 3 ಗಂಟೆ ಸುಮಾರಿಗೆ ಆರಂಭವಾದ ಮಳೆ ರಾತ್ರಿವರೆಗೆ ಸುರಿಯುತ್ತಲೇ ಇತ್ತು. ದಸರೆ ಸಂಗೀತ ಕಾರ್ಯಕ್ರಮಕ್ಕೆ ಅಡ್ಡಿ ಉಂಟಾಯಿತು. ಅಲ್ಲದೇ, ಕೆಲ ರಸ್ತೆಗಳಲ್ಲಿ ದೀಪಾಲಂಕಾರ ಸ್ಥಗಿತಗೊಳಿಸಲಾಗಿತ್ತು. ಶಾರ್ಟ್‌ ಸರ್ಕಿಟ್‌ನಿಂದ ಬಲ್ಬುಗಳು ಸಿಡಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT