ಶನಿವಾರ, ಜುಲೈ 2, 2022
25 °C
ಮೈದುಂಬಿದ ನದಿಗಳು, ಕೆಆರ್‌ಎಸ್‌ನಲ್ಲಿ ಹೆಚ್ಚಿದ ಒಳಹರಿವು

ವಿವಿಧೆಡೆ ಮಳೆ: ತುಂಬಿದ ಕೆರೆ ಕಟ್ಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜ್ಯದಾದ್ಯಂತ ಮಂಗಳ ವಾರ ರಾತ್ರಿಯಿಂದ ಧಾರಾಕಾರವಾಗಿ ಮಳೆ ಸುರಿದಿದ್ದು, ಬುಧವಾರ ಹಲವೆಡೆ ಕೆರೆ, ಕಟ್ಟೆಗಳು ತುಂಬಿ ಕೋಡಿ ಹರಿದಿವೆ. ಕಾವೇರಿ, ಶಿಂಷಾ, ಕಬಿನಿ, ಅರ್ಕಾವತಿ, ಉತ್ತರ ಪಿನಾಕಿನಿ ಸೇರಿದಂತೆ ಹಲವು ನದಿಗಳಲ್ಲಿ ನೀರಿನಮಟ್ಟ ಏರಿಕೆಯಾಗಿದ್ದು, ಜಲಾಶಯಗಳಿಗೆ ಒಳಹರಿವು ಹೆಚ್ಚಾಗಿದೆ.  

ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಕೆಆರ್‌ಎಸ್‌ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾ ಣವೂ ಹೆಚ್ಚಾಗಿದೆ. ಬುಧವಾರ ಸಂಜೆ ವೇಳೆಗೆ ಕೆಆರ್‌ಎಸ್‌ ಜಲಾಶಯದ ನೀರಿನ ಮಟ್ಟ 100.95 ಅಡಿ ದಾಖ ಲಾಗಿತ್ತು. 5,396 ಕ್ಯುಸೆಕ್‌ ಒಳಹರಿವು, 1,065 ಕ್ಯುಸೆಕ್‌ ಹೊರ ಹರಿವು ಇತ್ತು. ಕಳೆದ ವರ್ಷ ಇದೇ ವೇಳೆಗೆ 86.80 ಅಡಿ ನೀರು ಸಂಗ್ರಹವಾಗಿತ್ತು.

ಮೈದುಂಬಿದ ಉತ್ತರ ಪಿನಾಕಿನಿ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಉತ್ತರ ಪಿನಾಕಿನಿ ನದಿಯು ತುಂಬಿ ಹರಿಯುತ್ತಿದೆ. ಈ ಹಿಂದೆ ಬರಡಾಗಿದ್ದ ಉತ್ತರ ಪಿನಾಕಿನಿಯ ಒಡಲು ಕಳೆದ ವರ್ಷದಿಂದ ತುಂಬುತ್ತಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ನದಿಯು ಪೂರ್ವ ಮುಂಗಾರು ಹಂಗಾಮಿನಲ್ಲಿಯೇ ಮೈದುಂಬಿದೆ. 

ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಮಂಚನಬೆಲೆ ಜಲಾ ಶಯ ಭರ್ತಿಯಾಗುವ ಹಂತ ತಲುಪಿದ್ದು, ಬುಧವಾರ ಮಧ್ಯಾಹ್ನ ಡ್ಯಾಂನಿಂದ ಅರ್ಕಾವತಿ ನದಿಗೆ ನೀರು ಬಿಡುಗಡೆ ಮಾಡಲಾಯಿತು. ಜಲಾಶಯದಲ್ಲಿ ನೀರು ಸಂಗ್ರಹಣಾ ಸಾಮರ್ಥ್ಯ 1.22 ಟಿಎಂಸಿ ಅಡಿ.

ತುಂಬಿ ಹರಿದ ಕೆರೆಗಳು: ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕು ಹೊನ್ನಾವರದ ಹಿರಿಕೆರೆ, ಕಲ್ಕೆರೆ, ಹುಲಿಕೆರೆ, ಚನ್ನಾಪುರ ಕೆರೆ. ಬಿಂಡಿಗ ನವಿಲೆ ಕೆರೆಗಳು ತುಂಬಿ ಹರಿದಿವೆ. ದುಮ್ಮಸಂದ್ರ ಅಣೆಕಟ್ಟೆ ಮೇಲೆ ನೀರು ಹರಿಯುತ್ತಿದೆ. ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ತೋವಿನಕೆರೆ ಸಮೀಪ 4 ಕೆರೆಗಳು ಭರ್ತಿಯಾಗಿವೆ. 

ಮಳೆ: ನಾಲ್ವರ ಸಾವು

ಭಾರೀ ಮಳೆ ಪರಿಣಾಮ ಬೆಂಗಳೂರಿನಲ್ಲಿ ಇಬ್ಬರು ಸೇರಿದಂತೆ ರಾಜ್ಯದಲ್ಲಿ ನಾಲ್ವರು ಅಸುನೀಗಿದ್ದಾರೆ. ಬೆಂಗಳೂರಿನ ಉಲ್ಲಾಳ ಉಪಕಾರ್‌ ಲೇಔಟ್‌ ಬಸ್‌ನಿಲ್ದಾಣದ ಬಳಿ ನಡೆಯುತ್ತಿದ್ದ 5ನೇ ಹಂತದ ಕಾವೇರಿ ನೀರು ಸರಬರಾಜು ಕಾಮಗಾರಿಯಲ್ಲಿ ಕಬ್ಬಿಣದ ಪೈಪ್‌ನಲ್ಲಿ ಸಿಲುಕಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ. ಬಿಹಾರದ ದೇವ್‌ಭರತ್‌ ಕುಶ್ವಾಹ (36) ಹಾಗೂ ಉತ್ತರಪ್ರದೇಶದ ಅಂಕಿತ್‌ಕುಮಾರ್‌ ಸಹಾನಿ (23) ಮೃತಪಟ್ಟವರು.

ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಹಳ್ಳಿಮೈಸೂರು ಹೋಬಳಿ ರಂಗೇನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆ ಗೋಡೆ ಕುಸಿದು ಚನ್ನರಾಯಪಟ್ಟಣ ತಾಲ್ಲೂಕಿನ ದಿಡಗ ಹೊಸೂರು ಗ್ರಾಮದ ಶಿವಕುಮಾರ (26) ಕೊನೆಯುಸಿರೆಳೆದಿದ್ದಾರೆ.  ದೊಡ್ಡಬಳ್ಳಾಪುರದಲ್ಲಿ ಭಾರೀ ಮಳೆ ಪರಿಣಾಮ ನಗರದ ಕೋಳಿ ಮಾಂಸ ಮಾರಾಟದ ಅಂಗಡಿಯಲ್ಲಿ ವಿದ್ಯುತ್‌ ಪ್ರವಹಿಸಿ  ಗೌರಿಬಿದನೂರು ತಾಲ್ಲೂಕಿನ ಮರಳೂರು ಗ್ರಾಮದ ಶ್ರೀರಾಮು (33) ಅವರು ಅಸುನೀಗಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು