ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಅಸಹಾಯಕತೆಯಲ್ಲಿ ದೈವಕ್ಕೆ ಶರಣೆಂಬರು

Last Updated 2 ಜೂನ್ 2021, 23:53 IST
ಅಕ್ಷರ ಗಾತ್ರ

ಚಿತ್ರದುರ್ಗ: ಮೊಳಕಾಲ್ಮುರು ತಾಲ್ಲೂಕಿನ ಮುತ್ತಿಗೇರಹಳ್ಳಿ ಮ್ಯಾಸರಹಟ್ಟಿ ಜನರಿಗೆ ಕೋವಿಡ್‌ ಆತಂಕವಿಲ್ಲ. ಮ್ಯಾಸನಾಯಕ ಬುಡಕಟ್ಟು ಆರಾಧ್ಯ ದೈವ ‘ದೇವರ ಎತ್ತು’ ಸಮಾಧಿ ಸುತ್ತ ಕುಳಿತಿದ್ದವರು ಕೆಮ್ಮುತ್ತ, ಸೀನುತ್ತ ಹರಟುತ್ತಿದ್ದರು. ಕೊರೊನಮ್ಮನಿಗೆ ಪೂಜೆ ನೆರವೇರಿಸಿ ಗ್ರಾಮದ ಗಡಿ ದಾಟಿಸಿದವರಿಗೆ ಕೋವಿಡ್‌ ಬರುವುದಿಲ್ಲವೆಂಬ ಬಲವಾದ ನಂಬಿಕೆ!

ಚಳ್ಳಕೆರೆ ತಾಲ್ಲೂಕಿನ ಮನ್ನೆಕೋಟೆಯ ನಾಲ್ವರಿಗೆ ಕೋವಿಡ್‌ ಕಾಣಿಸಿಕೊಂಡ ತಕ್ಷಣ ಗ್ರಾಮಸ್ಥರೆಲ್ಲರೂ ಮಾರಮ್ಮ ದೇವಿಯ ಮೊರೆಹೋದರು. ಊರ ಸುತ್ತ ತೆಂಗಿನಕಾಯಿ ಕಟ್ಟಿ ಕೈಮುಗಿದರು. ನಾಯಕನಹಟ್ಟಿ ಜನರು ಅನ್ನ ಚೆಲ್ಲಿ ಹರಕೆ ತೀರಿಸಿದರು. ಸಾಂಕ್ರಾಮಿಕ ರೋಗವನ್ನು ವೈದ್ಯಕೀಯ ಸಾಧನಗಳೊಂದಿಗೆ ಎದುರಿಸಬೇಕಾದ ಜನರು ಮೌಢ್ಯಕ್ಕೆ ಜೋತು ಬಿದ್ದಿರುವ ಕಂಡು ಬಂದಿತು.

ವೈದ್ಯಕೀಯ ಸೌಲಭ್ಯಕ್ಕೆ ಹೊರ ಜಿಲ್ಲೆಯನ್ನೇ ಹೆಚ್ಚಾಗಿ ಆಶ್ರಯಿಸಿದ ಚಿತ್ರದುರ್ಗ ಜಿಲ್ಲೆಯ ಜನರಿಗೆ ಕೋವಿಡ್ ಚಿಕಿತ್ಸೆ ಸಕಾಲಕ್ಕೆ ದೊರೆಯುತ್ತಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು, ಶುಶ್ರೂಷಕರ ಕೊರತೆ ವಿಪರೀತವಾಗಿದೆ. ವೈದ್ಯಕೀಯ ಸೌಕರ್ಯ ಕೈಗೆಟಕುವುದು ಅನುಮಾನ ಎಂಬುದು ದಿಟವಾದ ಬಳಿಕ ಜನರು ದೇವರ ನೆರವಿಗೆ ಮೊರೆ ಹೋಗಿದ್ದಾರೆ.

ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿ
ರುವ ಹಳ್ಳಿಗಳು ವೈದ್ಯಕೀಯ ಸೌಲಭ್ಯಗಳಿಂದ ಬಹುದೂರವೇ ಉಳಿದಿವೆ. ಪರಶುರಾಂಪುರ ಹೋಬಳಿಯ ದೊಡ್ಡಚಲ್ಲೂರು ಗ್ರಾಮಕ್ಕೆ ಕೋವಿಡ್‌ ಅಂಟಿದ್ದೇ ಆಂಧ್ರಪ್ರದೇಶದಿಂದ ಎಂಬುದು ಗ್ರಾಮಸ್ಥರ ಅಭಿಪ್ರಾಯ. ‘ನಮಗೆ ಬಂದಿರುವುದು ನಿಗೂಢ ಜ್ವರವೇ ಹೊರತು ಕೋವಿಡ್‌ ಅಲ್ಲ’ ಎಂಬ ವಾದವನ್ನು ಅವರು ಮುಂದಿಡುತ್ತಾರೆ.

ಕೋವಿಡ್‌ ಮೊದಲ ಅಲೆಯಲ್ಲಿ ತೊಂದರೆ ಅನುಭವಿಸದ ಕೋಟೆನಾಡು ಎರಡನೇ ಅಲೆಗೆ ತತ್ತರಿಸಿ ಹೋಗಿದೆ. ಜಿಲ್ಲೆಯ 1,360 ಗ್ರಾಮಗಳಲ್ಲಿ 526 ಹಳ್ಳಿಗಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರಲ್ಲಿ 22 ಹಳ್ಳಿಗಳನ್ನು ‘ಹಾಟ್‌ಸ್ಪಾಟ್‌’ಗಳೆಂದು ಗುರುತಿಸಲಾಗಿದೆ. ಸೋಂಕು ದೃಢಪಡುವ ಪ್ರಮಾಣ ಶೇ 20ಕ್ಕೆ ತಲುಪಿದೆ. ಗುಣಮುಖರಾಗುವವರ ಪ್ರಮಾಣ ಶೇ 76ಕ್ಕೆ ಕುಸಿದಿದೆ. ಇದು ರಾಜ್ಯದ ಸರಾಸರಿಗಿಂತಲೂ ಕಡಿಮೆ ಆಗಿದ್ದು, ಮರಣ ಪ್ರಮಾಣ ಆತಂಕ ಹುಟ್ಟಿಸುವ ರೀತಿಯಲ್ಲಿ ಹೆಚ್ಚಾಗುತ್ತಿದೆ.

ಕೆಲಸ ಅರಸಿ ಮಹಾನಗರಗಳಿಗೆ ವಲಸೆ ಹೋಗುವ ಪ್ರವೃತ್ತಿ ಬರದ ನಾಡಿನಲ್ಲಿದೆ. ಮಳೆ ಕೊರತೆ ಎದುರಿಸುವ ಹಳ್ಳಿಯ ಬಹುತೇಕರು ಬೆಂಗಳೂರು, ಹೈದರಾಬಾದ್‌ ಹಾಗೂ ಚಿಕ್ಕಮಗಳೂರು, ಕೊಡಗಿನ ಕಾಫಿತೋಟಗಳನ್ನು ಆಶ್ರಯಿಸಿದ್ದಾರೆ. ಲಾಕ್‌ಡೌನ್ ಘೋಷಣೆಯಾಗುತ್ತಿದ್ದಂತೆ ತಮ್ಮ ಊರಿಗೆಗೆ ಮರಳಿದರು. ಹೊರಗಿನ ಜನ ಬಂದ ಎರಡೇ ವಾರಗಳಲ್ಲಿ ಹಳ್ಳಿಗಳಲ್ಲಿ ಸಾವು ಹೆಚ್ಚಾಗಿದೆ.

‘ಲಾಕ್‌ಡೌನ್‌ ಬಳಿಕ ಬೆಂಗಳೂರಿನಿಂದ ನೂರಾರು ಜನರು ಗ್ರಾಮಕ್ಕೆ ಮರಳಿದರು. ಹೆಚ್ಚಿನವರಲ್ಲಿ ಕೋವಿಡ್‌ ಲಕ್ಷಣ ಕಾಣಿಸಿ
ಕೊಂಡವು. ಉಪ ಆರೋಗ್ಯ ಕೇಂದ್ರವೂ ಬಾಗಿಲು ಮುಚ್ಚಿದ್ದರಿಂದ ಔಷಧದ ಅಂಗಡಿ
ಯಲ್ಲಿ ಸಿಗುವ ಮಾತ್ರೆಗಳನ್ನು ಸೇವಿಸಿದ್ದಾರೆ. ಕೋವಿಡ್‌ ಪರೀಕ್ಷೆಗೆ ಬಹುತೇಕರು ಮುಂದೆ ಬರುತ್ತಿಲ್ಲ’ ಎನ್ನುತ್ತಾರೆ ಹೊಸದುರ್ಗ ತಾಲ್ಲೂಕಿನ ಲಕ್ಕಿಹಳ್ಳಿಯ ಸಿದ್ದೇಶ್‌.

ಚಿತ್ರದುರ್ಗ ತಾಲ್ಲೂಕಿನ ಮದಕರಿಪುರದಲ್ಲಿ 35 ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಪಿಳ್ಳೆಕೆರೆನಹಳ್ಳಿಯ 27 ಸೋಂಕಿತರು ಆರೋಗ್ಯ ಇಲಾಖೆಯ ನಿಗಾದಲ್ಲಿದ್ದಾರೆ. ಸೀಬಾರ, ಗೊಡಬನಾಳ್‌ ಗ್ರಾಮಗಳಲ್ಲಿ ಕೋವಿಡ್ ವ್ಯಾಪಕವಾಗಿ ಹರಡಿದೆ. ಮನೆಯಲ್ಲೇ ಚಿಕಿತ್ಸೆ ಪಡೆಯುವುದನ್ನು ಸರ್ಕಾರ ನಿರ್ಬಂಧಿಸಿದೆ. ಇದಕ್ಕಾಗಿ ಜಿಲ್ಲೆಯಲ್ಲಿ 22 ಆರೈಕೆ ಕೇಂದ್ರಗಳನ್ನು ತೆರೆಯಲಾಗಿದೆ. ಇಲ್ಲಿ 1,300 ಜನರನ್ನು ಮಾತ್ರ ದಾಖಲಿಸಲು ಸಾಧ್ಯವಿದೆ. 4,874ಕ್ಕೂ ಹೆಚ್ಚು ಜನರು ಮನೆಯಲ್ಲೇ ಉಳಿದಿದ್ದಾರೆ.

ಸೋಂಕು ನಿಯಂತ್ರಣಕ್ಕೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾರ್ಯಪಡೆ ರಚಿಸಲಾಗಿದೆ. ಸೋಂಕಿತರನ್ನು ಸಮುದಾಯದಿಂದ ಪ್ರತ್ಯೇಕಿಸಲು ಗ್ರಾಮದ ಶಾಲೆಯನ್ನೇ ಆರೈಕೆ ಕೇಂದ್ರವನ್ನಾಗಿ ಪರಿವರ್ತಿಸಲಾಗಿದೆ. ಚಳ್ಳಕೆರೆ ತಾಲ್ಲೂಕಿನ ದೇವರೆಡ್ಡಿಹಳ್ಳಿಯ ಆರೈಕೆ ಕೇಂದ್ರಕ್ಕೆ ವೈದ್ಯರೇ ಬರುತ್ತಿಲ್ಲ. ಕೋವಿಡ್‌ ನಿಯಂತ್ರಣಕ್ಕೆ ಕೈಗೊಳ್ಳುತ್ತಿರುವ ಕ್ರಮಗಳು ಅನುಷ್ಠಾನದಲ್ಲಿ ವೈಫಲ್ಯ ಕಾಣುತ್ತಿರುವುದದಕ್ಕೆ ಇದೊಂದು ನಿದರ್ಶನ.

ಗರ್ಭಿಣಿಗಿಲ್ಲ ಪ್ರತ್ಯೇಕ ಚಿಕಿತ್ಸೆ

ಚಳ್ಳಕೆರೆ ತಾಲ್ಲೂಕಿನ ಹಿರೇಹಳ್ಳಿಯ ಶಾಂತಮ್ಮ ಎಂಟು ತಿಂಗಳ ಗರ್ಭಿಣಿ. ಸ್ಕ್ಯಾನಿಂಗ್‌ಗೆ ಒಳಪಡಿಸುವ ಮುನ್ನ ನಡೆಸಿದ ಪರೀಕ್ಷೆಯಲ್ಲಿ ಸೋಂಕು ಪತ್ತೆಯಾಗಿದೆ. ಎನ್‌.ಮಹದೇವಪುರದ ಇಂದಿರಾ ಗಾಂಧಿ ವಸತಿಶಾಲೆಯಲ್ಲಿ ತೆರೆದ ಆರೈಕೆ ಕೇಂದ್ರಕ್ಕೆ ಇವರನ್ನು ದಾಖಲಿಸಲಾಗಿದೆ.

ತಾಯಿ ಶಾಂತಮ್ಮ ಕೂಡ ಮಗಳ ಆರೈಕೆಗೆ ಜೊತೆಯಲ್ಲೇ ಇದ್ದಾರೆ. ಸಾಮಾನ್ಯ ಸೋಂಕಿತರಿಗೆ ನೀಡುವ ಚಿಕಿತ್ಸೆಯೇ ಗರ್ಭಿಣಿಗೂ ಸಿಗುತ್ತಿದೆ. ಪ್ರತ್ಯೇಕ ಚಿಕಿತ್ಸೆಯ ಬಗ್ಗೆ ಇಲ್ಲಿರುವ ಶುಶ್ರೂಷಕಿಯರಿಗೂ ಅರಿವಿಲ್ಲ.

ಔಷಧದ ಕೊರತೆ

ಕೋವಿಡ್‌ ರೋಗಿಗಳ ಚಿಕಿತ್ಸೆಗೆ ಬಳಸುವ ಔಷಧ ಹಾಗೂ ಆಮ್ಲಜನಕದ ಸಮಸ್ಯೆ ಜಿಲ್ಲೆಯಲ್ಲಿ ಇನ್ನೂ ನೀಗಿಲ್ಲ. ಸಮುದಾಯ ಆರೋಗ್ಯ ಕೇಂದ್ರಗಳಿಗೆ ಸಕಾಲಕ್ಕೆ ಔಷಧ ತಲುಪದೇ ಇರುವ ಬಗ್ಗೆ ವೈದ್ಯರೇ ಕಳವಳ ವ್ಯಕ್ತಪಡಿಸುತ್ತಾರೆ.

‘ಶ್ವಾಸಕೋಶಕ್ಕೆ ಉಂಟಾಗಿರುವ ಸೋಂಕನ್ನು ತಡೆಯಲು ಬಳಸುವ ಸ್ಟೆರಾಯ್ಡ್‌ ಹಲವು ದಿನಗಳಿಂದ ಆಸ್ಪತ್ರೆ ತಲುಪಿಲ್ಲ. ರಕ್ತ ಹೆಪ್ಪುಗಟ್ಟದಂತೆ ಸೋಂಕಿತರಿಗೆ ನೀಡುವ ಚುಚ್ಚುಮದ್ದು ಸಿಗುತ್ತಿಲ್ಲ. ಇದರಿಂದ ಸೋಂಕಿತರ ಮರಣ ಪ್ರಮಾಣ ಹೆಚ್ಚಾಗುತ್ತಿದೆ’ ಎಂಬುದು ಹೊಳಲ್ಕೆರೆ ತಾಲ್ಲೂಕಿನ ಕೋವಿಡ್‌ ಆರೈಕೆ ಕೇಂದ್ರದ ವೈದ್ಯರ ಬೇಸರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT