ಶನಿವಾರ, ಏಪ್ರಿಲ್ 1, 2023
29 °C

ಗ್ರಾಪಂ ಮಟ್ಟದಲ್ಲಿ ಮಹಿಳೆಗೆ ಸಮಾನ ಅವಕಾಶ ಸಿಕ್ಕಿಲ್ಲ: ಹೈಕೋರ್ಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸಂವಿಧಾನದ 73ನೇ ತಿದ್ದುಪಡಿ ಮೂಲಕ ಗ್ರಾಮ ಮಟ್ಟದ ಆಡಳಿತದತ್ತ ಹೆಜ್ಜೆ ಇಟ್ಟಿದ್ದರೂ, ಅಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಗೆ ಸಮಾನ ಹಕ್ಕು ಇನ್ನೂ ಸಿಕ್ಕಿಲ್ಲ ಎಂದು ಹೈಕೋರ್ಟ್ ಹೇಳಿದೆ.

ಮಂಗಳೂರು ತಾಲ್ಲೂಕಿನ ಕೊಣಾಜೆ ಗ್ರಾಮ ಪಂಚಾಯಿತಿಗೆ ಪರಿಶಿಷ್ಟ ಜಾತಿ ಮಹಿಳೆಯನ್ನು ಅಧ್ಯಕ್ಷರನ್ನಾಗಿ ನೇಮಿಸಿರುವುದನ್ನು ಪ್ರಶ್ನಿಸಿ ಪರಿಶಿಷ್ಟ ಜಾತಿಯ ಪುರುಷ ಸದಸ್ಯರು ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಪೀಠ, ಈ ಅಭಿಪ್ರಾಯಪಟ್ಟಿತು.

12 ಸದಸ್ಯರಿರುವ ಗ್ರಾಮ ಪಂಚಾಯಿತಿಗೆ ಈ ಹಿಂದೆ ಅಧ್ಯಕ್ಷ ಸ್ಥಾನ ಮಹಿಳೆಯರಿಗೆ ಮೀಸಲಾಗಿದ್ದರಿಂದ ಈ ಬಾರಿ (2020) ಪರಿಶಿಷ್ಟ ಜಾತಿಯ ಪುರುಷರಿಗೆ ದೊರಕಬೇಕಿತ್ತು ಎಂದು ಅರ್ಜಿದಾರರು ವಾದಿಸಿದ್ದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಮೀಸಲಾತಿಯಲ್ಲಿ ಯಾವುದೇ ಅವ್ಯವಹಾರ ಆಗದಂತೆ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಲಾಗಿದೆ ಎಂದು ರಾಜ್ಯ ಚುನಾವಣಾ ಆಯೋಗದ ಪರ ವಕೀಲರು ವಾದಿಸಿದರು. ಕೊಣಾಜೆ ಗ್ರಾಮ ಪಂಚಾಯಿತಿಯಲ್ಲಿ ಪರಿಶಿಷ್ಟ ಜಾತಿಯ ಇಬ್ಬರು ಸದಸ್ಯರಿದ್ದು, ಶೇ 50ರಷ್ಟು ಮೀಸಲಾತಿ ಅಡಿಯಲ್ಲಿ ಮಹಿಳೆಗೆ ಈ ಸ್ಥಾನ ಲಭಿಸಿದೆ ಎಂದು ಅವರು ವಿವರಿಸಿದರು.

‘ಗ್ರಾಮ ಪಂಚಾಯಿತಿಗಳನ್ನು ಮುನ್ನಡೆಸಲು ಮಹಿಳೆಯರಿಗೆ ಪುರುಷರು ಅವಕಾಶ ಮಾಡಿಕೊಡಬೇಕು. ಮಹಿಳೆಯರು ಬೇರು ಮಟ್ಟದಿಂದ ರಾಜಕೀಯ ಶಕ್ತಿ ಬೆಳೆಸಿಕೊಳ್ಳಲು ಇದು ಅನುಕೂಲ ಆಗಲಿದೆ. ಗ್ರಾಮ ಮಟ್ಟದಲ್ಲಿ ಮಹಿಳೆಯರು ಅಧಿಕಾರ ಹಿಡಿಯಬೇಕು ಎಂಬುದು ಗಾಂಧೀಜಿ ಅವರ ಕನಸು ಕೂಡ ಆಗಿತ್ತು. ಅದನ್ನು ನನಸು ಮಾಡುವ ನಿಟ್ಟಿನಲ್ಲಿ ಇದು ಸ್ಪಷ್ಟ ಹೆಜ್ಜೆಯಾಗಲಿದೆ’ ಎಂದು ಪೀಠ ಹೇಳಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು