ಶನಿವಾರ, ಜುಲೈ 2, 2022
20 °C

ಹಿಜಾಬ್: ಮಧ್ಯಂತರ ಆದೇಶಕ್ಕೂ ಮುನ್ನ ಗೈರಾದವರಿಗೆ ಮರು ಪರೀಕ್ಷೆ ಇಲ್ಲ -ಮಾಧುಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಹಿಜಾಬ್‌ ಕುರಿತು ಹೈಕೋರ್ಟ್‌ ಮಧ್ಯಂತರ ಆದೇಶ ನೀಡುವುದಕ್ಕೆ ಮೊದಲು ಪರೀಕ್ಷೆಗಳಿಗೆ ಹಾಜರಾಗದ ವಿದ್ಯಾರ್ಥಿನಿಯರಿಗೆ ಮತ್ತೊಮ್ಮೆ ಪರೀಕ್ಷೆ ನಡೆಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಲಿದೆ. ಆದೇಶದ ಬಳಿಕ ಪರೀಕ್ಷೆಗೆ ಹಾಜರಾಗದವರನ್ನು ಪರಿಗಣಿಸುವುದಿಲ್ಲ’ ಎಂದು ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ವಿಧಾನಸಭೆಯಲ್ಲಿ ಗುರುವಾರ ಶೂನ್ಯ ವೇಳೆಯಲ್ಲಿ ಬಿಜೆಪಿಯ ರಘುಪತಿ ಭಟ್‌ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಪರೀಕ್ಷೆ ನಡೆಸುವ ಬಗ್ಗೆ ಸರ್ಕಾರ ನಿಲುವು ತಳೆಯಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಈ ಬಗ್ಗೆ ಮುಖ್ಯಮಂತ್ರಿ ಮತ್ತು ಇತರರ ಜತೆ ಚರ್ಚೆ ನಡೆಸಿ ನಿರ್ಣಯ ತೆಗೆದುಕೊಳ್ಳುತ್ತೇವೆ’ ಎಂದು ಭರವಸೆ ನೀಡಿದರು.

 ‘ವಿದ್ಯಾರ್ಥಿಗಳು ಹೈಕೋರ್ಟ್‌ನ ಮಧ್ಯಂತರ ಆದೇಶಕ್ಕಿಂತ ಮೊದಲು ಗೊಂದಲಗಳಿಂದಾಗಿ ಪರೀಕ್ಷೆ ಹಾಜರಾಗಲು ಸಾಧ್ಯವಾಗದಿದ್ದರೆ ಅವರಿಗೆ ಅವಕಾಶ ನೀಡಲಾಗುವುದು. ಅಜ್ಞಾನ ಅಥವಾ ಮುಗ್ದತೆ ಕಾರಣಕ್ಕಾಗಿ ಪರೀಕ್ಷೆ ತಪ್ಪಿಸಿಕೊಂಡಿದ್ದಾರೆ ಎಂದು ಪರಿಗಣಿಸಬಹುದು. ಆದೇಶ ನೀಡಿದ ಬಳಿಕವೂ ಪಾಲಿಸದೇ ಇದ್ದವರು ನ್ಯಾಯಾಲಯದ ಆದೇಶ ಧಿಕ್ಕರಿಸಿದ್ದಾರೆ ಎಂದು ಭಾವಿಸಬೇಕಾಗುತ್ತದೆ’ ಎಂದರು.

‘ಇದನ್ನೇ ಬೆಳೆಸಿಕೊಂಡು ಹೋದರೆ ಕಷ್ಟ. ವಿವಿಧ ಕಾರಣಗಳನ್ನು ಮುಂದೊಡ್ಡಿ ಪರೀಕ್ಷೆಗಳಿಗೆ ಹಾಜರಾಗದೇ ಕೇಳಿ ಕೇಳಿದಾಗಲೆಲ್ಲ ಪರೀಕ್ಷೆ ನಡೆಸಲು ಆಗುತ್ತಾ? ಕೆಲವೇ ವಿದ್ಯಾರ್ಥಿಗಳ ಕಾರಣಕ್ಕೆ ಉಳಿದ ವಿದ್ಯಾರ್ಥಿಗಳ ಹಿತವನ್ನು ಕಡೆಗಣಿಸಲು ಆಗುತ್ತದೆಯೆ? ಈ ರೀತಿ ಮಾಡಿದರೆ ಪರೀಕ್ಷಾ ವ್ಯವಸ್ಥೆ ಉಳಿಯುತ್ತದೆಯೇ’ ಎಂದು ಮಾಧುಸ್ವಾಮಿ ಪ್ರಶ್ನಿಸಿದರು.

‘ಹೈಕೋರ್ಟ್‌ ತೀರ್ಪು ಜಾರಿಗೆ ಎಲ್ಲ ಪ್ರಕ್ರಿಯೆಗಳನ್ನೂ ಸರ್ಕಾರ ಅನುಸರಿಸಲಿದೆ. ತೀರ್ಪಿನ ಬಗ್ಗೆ ಸಮಾಧಾನ ಇಲ್ಲವಾದರೆ, ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬಹುದು. ಅಲ್ಲಿ ಇತ್ಯರ್ಥ ಆಗುವವರೆಗೆ ಹೈಕೋರ್ಟ್‌ ಆದೇಶ ಜಾರಿಯಲ್ಲಿರುತ್ತದೆ’ ಎಂದರು.

ವಿಷಯ ಪ್ರಸ್ತಾಪಿಸಿದ ರಘುಪತಿ ಭಟ್‌, ‘ಹಿಜಾಬ್‌ ಗೊಂದಲದಿಂದಾಗಿ ಪರೀಕ್ಷೆ ಬರೆಯಲು ಸಾಧ್ಯವಾಗದ ವಿದ್ಯಾರ್ಥಿನಿಯರಿಗೆ ಹಿಜಾಬ್‌ ತೆಗೆದಿಟ್ಟು ಪರೀಕ್ಷೆ ಬರೆಯಲು ಅವಕಾಶ ನೀಡಬೇಕು. ಹಿಜಾಬ್‌ ಧರಿಸಲೇ ಬೇಕು ಎಂದು ಪಟ್ಟು ಹಿಡಿದು ಕಾಲೇಜು ವಾತಾವರಣ ಕೆಡಿಸಲು ಯತ್ನಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು‘ ಎಂದು ಒತ್ತಾಯಿಸಿದರು.

ಬಿಜೆಪಿಯ ಜಗದೀಶ ಶೆಟ್ಟರ್‌, ‘ತೀರ್ಪು ಪ್ರಶ್ನಿಸಿ ಬಂದ್‌ ನಡೆಸಿದರೆ ನ್ಯಾಯಾಲಯದ ಆದೇಶಕ್ಕೆ ಕಿಮ್ಮತ್ತು ಇಲ್ಲದಂತಾಗುತ್ತದೆ’ ಎಂದರು.

ಬಿಜೆಪಿಯ ಸಿ.ಟಿ.ರವಿ, ‘ತೀರ್ಪು ವಿರೋಧಿಸಿ ಬಂದ್‌ ಮಾಡುವ ಮೂಲಕ ಬೆದರಿಕೆ ಹಾಕುವುದು ಸರಿಯೇ? ಸಮವಸ್ತ್ರದ ವಿಚಾರದಲ್ಲಿ ವೋಟ್‌ ಬ್ಯಾಂಕ್‌ ರಾಜಕಾರಣದಂತಹ ಹೀನ ಕೆಲಸಕ್ಕೆ ಇಳಿದಿದ್ದೀರಿ’ ಎಂದು ಕಾಂಗ್ರೆಸ್ ಸದಸ್ಯರನ್ನು ಉದ್ದೇಶಿಸಿ ಹೇಳಿದರು.

ಪ್ರತಿಭಟನೆಯ ಹಕ್ಕು ಇದೆ: ಸಿದ್ದರಾಮಯ್ಯ
‘ಹೈಕೋರ್ಟ್‌ ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಲು ಶಾಂತಿಯುತವಾಗಿ ಬಂದ್, ಪ್ರತಿಭಟಿಸುವುದು ಸಂವಿಧಾನಾತ್ಮಕ ಹಕ್ಕು’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿಪಾದಿಸಿದರು.

‘ಪ್ರತಿಭಟನೆ, ಬಂದ್‌ಗಳನ್ನು ಸರ್ಕಾರ ಹೇಗೆ ತಡೆಯಲು ಸಾಧ್ಯ. ಅದನ್ನು ಹತ್ತಿಕ್ಕಬಾರದು. ಹಾಗಂತ ನಾನು ಹೈಕೋರ್ಟ್‌ ಆದೇಶವನ್ನು ಅಗೌರವಿಸುತ್ತಿಲ್ಲ. ನ್ಯಾಯಾಲಯದ ವಿರುದ್ಧವೂ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಜಗದೀಶ ಶೆಟ್ಟರ್‌, ‘ನೀವೊಬ್ಬ ವಕೀಲರಾಗಿ ಈ ರೀತಿ ಮಾತನಾಡುವುದು ಸರಿಯಲ್ಲ. ಇಂತಹ ಬೇಡಿಕೆಗಳಿಗೆ ಕೊನೆ ಇರುವುದಿಲ್ಲ. ಇದಕ್ಕೆ ಅವಕಾಶ ಕೊಟ್ಟರೆ ಅರಾಜಕತೆ ಸೃಷ್ಟಿ ಆಗುತ್ತದೆ’ ಎಂದರು.

*

ಪರೀಕ್ಷೆಯಿಂದ ವಂಚಿತರಾದವರಿಗೆ ಮತ್ತೊಂದು ಅವಕಾಶ ನೀಡಬೇಕು. ಇವರನ್ನು ನಿಮ್ಮ ಸ್ವಂತ ಮಕ್ಕಳೆಂದು ಭಾವಿಸಿ ಅವಕಾಶ ನೀಡಿ. ಹಾಗೆಂದ ಮಾತ್ರಕ್ಕೆ ಹೈಕೋರ್ಟ್‌ ಬಗ್ಗೆ ಅಗೌರವವಿಲ್ಲ.
-ಯು.ಟಿ. ಖಾದರ್, ವಿರೋಧ ಪಕ್ಷದ ಉಪನಾಯಕ

*

ಹೈಕೋರ್ಟ್‌ ಆದೇಶ ಉಲ್ಲಂಘಿಸುವುದು ಮತ್ತು ಪ್ರಶ್ನಿಸುವುದು ನ್ಯಾಯಾಂಗ ನಿಂದನೆ ಆಗುತ್ತದೆ. ಅದರ ಪರಿಣಾಮ ಎದುರಿಸಬೇಕಾಗುತ್ತದೆ. ಬಂದ್‌, ಪ್ರತಿಭಟನೆಗಳ ಮೂಲಕ ಒತ್ತಡ ತಂದರೆ ಮಣಿಯುವ ಪ್ರಶ್ನೆ ಇಲ್ಲ.
-ಜೆ.ಸಿ. ಮಾಧುಸ್ವಾಮಿ, ಕಾನೂನು ಸಚಿವ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು