ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನದಿ ಬಂತು ಮನೆಗೆ: ಬದುಕು ಬಯಲಿಗೆ

Last Updated 15 ಅಕ್ಟೋಬರ್ 2020, 21:16 IST
ಅಕ್ಷರ ಗಾತ್ರ

ಕಲಬುರ್ಗಿ: ‘ಕುಡಿಯುವ ನೀರು ತರಲು ಬಿಂದಿಗೆ ಹಿಡಿದುಕೊಂಡು ಅಲೆಯುತ್ತಿದ್ದೆವು. ಈಗ ನದಿಯೇ ಮನೆಗೆ ಬಂದುಬಿಟ್ಟಿದೆ. ಜೀವ ಉಳಿಸಿಕೊಳ್ಳಲು ಓಡಿ ಹೊರ ಬಂದಿದ್ದೇವೆ. ತೊಟ್ಟಿರುವ ಬಟ್ಟೆ ಬಿಟ್ಟರೆ ಬೇರೇನೂ ಉಳಿದಿಲ್ಲ. ನಮ್ಮ ಬದುಕೇ ಮುಳುಗಿಹೋಯಿತು’ ಎನ್ನುತ್ತ ಕಲಬುರ್ಗಿ ತಾಲ್ಲೂಕು ಫಿರೋಜಾಬಾದ್‌ ಗ್ರಾಮದ ಮಹಿಳೆ ಕಲಾವತಿ ಕಣ್ಣೀರು ಸುರಿಸಲಾರಂಭಿಸಿದರು. ಅಲ್ಲಿದ್ದವರೆಲ್ಲ ನಾಳೆಯ ಬದುಕಿನ ಚಿಂತೆಯಲ್ಲಿ ಮೌನಕ್ಕೆ ಜಾರಿದರು.

‘ಮನೆ ಜಲಾವೃತವಾಗಿದ್ದರಿಂದಬೀದಿಯಲ್ಲಿ ನಿಂತಿದ್ದೇವೆ. ಬೆಳಿಗ್ಗೆಯಿಂದಲೂ ಊಟ ಮಾಡಿಲ್ಲ. ಮುಂದೇನು ಎಂಬ ಚಿಂತೆ ಕಾಡುತ್ತಿದೆ’ ಎಂದು ಲಕ್ಷ್ಮಿ ಧರ್ಮಾ ಆತಂಕ ವ್ಯಕ್ತಪಡಿಸಿದರು.

‘200ಕ್ಕಿಂತ ಹೆಚ್ಚು ಮನೆಗಳು, ಶಾಲೆ–ದೇವಸ್ಥಾನಗಳೆಲ್ಲವೂ ಜಲಾವೃತಗೊಂಡಿವೆ. ಸಾವಿರಾರು ಎಕರೆ ಬೆಳೆ ಭೀಮೆಯ ಪಾಲಾಗಿದೆ. ಇಡೀ ಗ್ರಾಮವೇ ಆಪತ್ತಿನಲ್ಲಿದೆ’ ಎಂದು ಯುವ ಮುಖಂಡ ವಿಶ್ವನಾಥ ಕುಂಬಾರ ತಮ್ಮೂರಿಗೆ ಬಂದ ದುಸ್ಥಿತಿ ಕಂಡು ಮರುಗಿದರು. ‘ಪದೇ ಪದೇ ಪ್ರವಾಹ ಬರುತ್ತಿದ್ದರೂ ಶಾಶ್ವತ ಪರಿಹಾರ ಸಿಕ್ಕಿಲ್ಲ’ ಎಂದು ಕಲ್ಲಪ್ಪ ಪ್ಯಾಟಿ ಆಕ್ರೋಶದಿಂದಲೇ ಹೇಳಿದರು.

ಕುಂಭದ್ರೋಣ ಮಳೆಗೆ ಕಲಬುರ್ಗಿ, ಬೀದರ್‌ ಜಿಲ್ಲೆಗಳ ಜನ ತತ್ತರಿಸಿ ಹೋಗಿದ್ದರೆ, ಈಗ ಮಹಾರಾಷ್ಟ್ರದಲ್ಲಿಯ ಮಳೆಯಿಂದಾಗಿ ಉಕ್ಕಿ ಹರಿಯುತ್ತಿರುವ ಭೀಮಾ ನದಿ, ತೀರದ ಗ್ರಾಮಸ್ಥರಿಗೆ ಮತ್ತೊಂದು ಸಂಕಷ್ಟ ತಂದೊಡ್ಡಿದೆ. ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಭೀಮಾ ನದಿಯಲ್ಲಿ 5 ಲಕ್ಷಕ್ಕೂ ಹೆಚ್ಚು ಕ್ಯುಸೆಕ್‌ ನೀರು ಹರಿಯುತ್ತಿದ್ದು, ಹಾನಿಯ ಪ್ರಮಾಣ ಹೆಚ್ಚಿಸುತ್ತಿದೆ.

ಮಳೆ–ಪ್ರವಾಹದ ಕಾರಣ ಕಲಬುರ್ಗಿ ಜಿಲ್ಲೆಯೊಂದರಲ್ಲೇ ಸಾವಿರಕ್ಕೂ ಹೆಚ್ಚು ಜಾನುವಾರುಗಳು ಪ್ರಾಣ ಕಳೆದುಕೊಂಡಿವೆ. ಮನೆಗಳಿಗೆ ನೀರು ನುಗ್ಗಿದ್ದರಿಂದ ದವಸ–ಧಾನ್ಯ, ಗೃಹೋಪಯೋಗಿ ವಸ್ತುಗಳೆಲ್ಲ ಹಾಳಾಗಿವೆ. ಬಹುತೇಕ ಕಡೆಗಳಲ್ಲಿಯ ಜಮೀನಿನಲ್ಲಿ ಬೆಳೆ ಅಷ್ಟೇ ಅಲ್ಲ, ಮಣ್ಣು ಸಹ ಕೊಚ್ಚಿ ಹೋಗಿದೆ. ಮುಂದೇನು ಎಂಬ ಚಿಂತೆ ಎಲ್ಲ ಸಂತ್ರಸ್ತರನ್ನೂ ಕಾಡುತ್ತಿದೆ. ಅನ್ನ ನೀಡುತ್ತಿದ್ದವರೂ ಆಗ ಜಿಲ್ಲಾ ಆಡಳಿತ ಆರಂಭಿಸಿರುವ ಕಾಳಜಿ ಕೇಂದ್ರಗಳಲ್ಲಿ ತುತ್ತು ಅನ್ನಕ್ಕಾಗಿ ಕೈಯೊಡ್ಡುವ ಹಾಗಾಗಿದೆ.

ಕುಡಿಯಲು ನೀರಿಲ್ಲ:ಪ್ರವಾಹ ಇದ್ದರೂ ಕುಡಿಯಲು ಶುದ್ಧ ನೀರು ಸಿಗದ ಸ್ಥಿತಿ ಬಹುಪಾಲು ಗ್ರಾಮಗಳಲ್ಲಿ ಉಂಟಾಗಿದೆ.ಜಾಕ್‌ವೆಲ್‌, ಕೊಳವೆಬಾವಿ, ಶುದ್ಧ ನೀರಿನ ಘಟಕಗಳು ಮುಳುಗಿವೆ. ಪ್ರವಾಹ ನೀರು ಮನೆ ಹೊಕ್ಕಿದ್ದರೂ ಅದು ಕುಡಿಯಲು ಯೋಗ್ಯವಾಗಿಲ್ಲ. ಸಂತ್ರಸ್ತರಿಗೆ ಆಹಾರದ ಜೊತೆಗೆ ಶುದ್ಧ ಕುಡಿಯುವ ನೀರು ಪೂರೈಸುವ ಬೇಡಿಕೆಯೂ ಹೆಚ್ಚುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT