ಬುಧವಾರ, ಆಗಸ್ಟ್ 17, 2022
28 °C
ಯೋಗೇಶ್ವರ್‌ಗೆ ಮಂತ್ರಿ ಸ್ಥಾನ ನೀಡಲು ಅವಸರವೇಕೆ: ವಿಧಾನ ಪರಿಷತ್‌ ಬಿಜೆಪಿ ಸದಸ್ಯ ಎಚ್‌. ವಿಶ್ವನಾಥ್‌ ಪ್ರಶ್ನೆ

ನಾವು ಯಾರನ್ನು ವಿರೋಧಿಸಿದ್ದೆವೋ ಅವರೇ ಬಿಎಸ್‌ವೈ ಸ್ನೇಹಿತರಾಗಿದ್ದಾರೆ: ವಿಶ್ವನಾಥ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ನಾವು ಯಾರನ್ನು ವಿರೋಧಿಸಿದ್ದೆವೋ ಅವರೇ ಈಗ ಯಡಿಯೂರಪ್ಪ ಅವರ ಸ್ನೇಹಿತರಾಗಿದ್ದಾರೆ. ತಂದೆಯನ್ನು ಕೊಂದವನನ್ನೇ, ತಾಯಿಯು ಮದುವೆ ಆಗಿ ಮೆರವಣಿಗೆ ಹೊರಟಂತಿದೆ. ಷೇಕ್ಸ್‌ಪಿಯರ್‌ನ ‘ಹ್ಯಾಮ್ಲೆಟ್‌’ ನಾಟಕದಲ್ಲಿ ಇದೇ ರೀತಿ ಪ್ರಸಂಗ ಇದೆ. ನಮ್ಮ ಹಾಗೂ ಸರ್ಕಾರದ ಪರಿಸ್ಥಿತಿಯೂ ಹಾಗೇ ಆಗಿದೆ’ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್ ಬುಧವಾರ ಇಲ್ಲಿ‌ ಅಸಮಾಧಾನ ವ್ಯಕ್ತಪಡಿಸಿದರು.

‘ಕೇಂದ್ರದ ವರಿಷ್ಠರು ಸಚಿವ ಸಂಪುಟ ವಿಸ್ತರಣೆಗೆ ಇನ್ನೂ ಒಪ್ಪಿಗೆಯನ್ನೇ ನೀಡಿಲ್ಲ. ಯೋಗೇಶ್ವರ್ ಅವರಿಗೆ ಮಂತ್ರಿ ಸ್ಥಾನ ನೀಡಲು ಇಷ್ಟೊಂದು ಅವಸರ ಏಕೆ? ಬಿಜೆಪಿ ಸರ್ಕಾರ ರಚನೆಯಲ್ಲಿ ಯೋಗೇಶ್ವರ್‌ ಪಾತ್ರವೇನಿತ್ತು? ಅವರೇನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದವರೇ? ಮುಂಬೈ, ಪುಣೆಯಲ್ಲಿ ಸೂಟ್‌ಕೇಸ್‌ ಹಿಡಿದುಕೊಂಡು ಓಡಾಡುತ್ತಿದ್ದರು’ ಎಂದು ಹರಿಹಾಯ್ದರು.

‘ಸರ್ಕಾರದ ರಚನೆ ಸಂದರ್ಭದಲ್ಲಿ ಯಡಿಯೂರಪ್ಪ ನನ್ನ ಮುಂದೆ ನಿಂತಿದ್ದ
ಸ್ಥಿತಿಯೇ ಬೇರೆ; ಈಗಿನ ಅವರ ನಡವಳಿಕೆಯೇ ಬೇರೆ. ಏಕೋ ನಿಧಾನವಾಗಿ ಕೆಲ ವಿಚಾರ ಮರೆಯುತ್ತಿದ್ದಾರೆ. ರಾಜಕಾರಣದಲ್ಲಿ ಕೃತಜ್ಞತೆ ಕಡಿಮೆಯಾಗಿ ಕಲುಷಿತಗೊಂಡಿದೆ. ಯಡಿಯೂರಪ್ಪ ಅವರ ಮೇಲೆ ಒತ್ತಡ ಇರುವುದು ನಿಜ’ ಎಂದರು.

ನ್ಯಾಯಾಂಗ ತನಿಖೆಗೆ ಕಾಂಗ್ರೆಸ್‌ ಆಗ್ರಹ(ಬೆಂಗಳೂರು ವರದಿ): ‘ಹುಣಸೂರು ಉಪಚುನಾವಣೆ ವೇಳೆ ಬಿಜೆಪಿ ಅಭ್ಯರ್ಥಿ ಎಚ್‌. ವಿಶ್ವನಾಥ್‌ ಅವರಿಗೆ ಪಕ್ಷದಿಂದ ದೊಡ್ಡ ಮೊತ್ತ ನೀಡಲಾಗಿತ್ತು ಎಂಬ ವಿಷಯವನ್ನು ಸ್ವತಃ ವಿಶ್ವನಾಥ್ ಒಪ್ಪಿಕೊಂಡಿದ್ದು, ಅವರು ಹೇಳಿರುವ ದೊಡ್ಡ ಮೊತ್ತ ಎಷ್ಟು. ಅದು ಬಿಳಿ ಹಣವಾ, ಕಪ್ಪು ಹಣವಾ’ ಎಂದು ಪ್ರಶ್ನಿಸಿರುವ ರಾಜ್ಯ ಕಾಂಗ್ರೆಸ್, ಈ ಬಗ್ಗೆ ಹೈಕೋರ್ಟ್ ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು’ ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.

ಜಂಟಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಕಾಂಗ್ರೆಸ್ ನಾಯಕರಾದ ಬಿ.ಎಲ್. ಶಂಕರ್, ವಿ.ಎಸ್. ಉಗ್ರಪ್ಪ ಮತ್ತು ಎಚ್‌.ಎಂ. ರೇವಣ್ಣ, ‘ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಪ್ರಮಾಣದಲ್ಲಿ ಹಣದ ಹೊಳೆ ಹರಿಸುತ್ತದೆ ಎಂಬುದಕ್ಕೆ ವಿಶ್ವನಾಥ್ ಹೇಳಿಕೆಯೇ ಸಾಕ್ಷಿ’ ಎಂದರು.

ಉಗ್ರಪ್ಪ ಮಾತನಾಡಿ, ‘ವಿಶ್ವನಾಥ್ ಅವರು ನಮಗೂ ಸ್ನೇಹಿತರೇ. ಅವರು ಒಂದೊಂದು ಸಾರಿ ಕಟು ಸತ್ಯ ಹೇಳುತ್ತಾರೆ. ಮಂಗಳವಾರ ಹೇಳಿದ ಕಟು ಸತ್ಯಕ್ಕೆ ಅವರನ್ನು ಅಭಿನಂದಿಸುತ್ತೇನೆ. ಅವರು ಆ ಸತ್ಯಕ್ಕೆ ಬದ್ಧವಾಗಿರುತ್ತಾರೆ ಎಂದು ಭಾವಿಸುತ್ತೇನೆ’ ಎಂದರು.

ಬಿ.ಎಲ್. ಶಂಕರ್‌ ಮಾತನಾಡಿ, ‘ವಿಶ್ವನಾಥ್ ಅವರು ತಮ್ಮ ಆದಾಯ ಮೂಲವನ್ನು ಹೇಳಬೇಕು. ಆ ಹಣ ಎಲ್ಲಿಂದ ಬಂದು ಎಂದು ತಿಳಿಸಿ ಪ್ರಮಾಣಪತ್ರ ಹಾಕಬೇಕು ಎಂದು ಆಗ್ರಹಿಸಿದರು.

‘ಜಿ.ಟಿ ದೇವೇಗೌಡ ಅವರಿಗೆ ಹಣ ನೀಡಲಾಗಿತ್ತು’ ಎಂಬ ವಿಚಾರವಾಗಿ ಸಿದ್ದರಾಮಯ್ಯನವರು ಪಕ್ಷದ ಸಭೆಯಲ್ಲಿ ತಿಳಿಸಿದ್ದರು ಎಂಬ ಬಗ್ಗೆ ಕೇಳಿದ ಪ್ರಶ್ನೆಗೆ ‘ಕಾಂಗ್ರೆಸ್ ಹಿರಿಯ ನಾಯಕರ ಸಭೆಯಲ್ಲಿ ಜಿ.ಟಿ ದೇವೇಗೌಡರಿಗೆ ಹಣ ನೀಡಲಾಗಿದೆ ಎಂಬ ವಿಚಾರವನ್ನು ಸಿದ್ದರಾಮಯ್ಯನವರು ಪ್ರಸ್ತಾಪಿಸಿಯೇ ಇಲ್ಲ. ನಾನು ಉಗ್ರಪ್ಪನವರು ಅದೇ ಸಭೆಯಲ್ಲಿ ಇದ್ದೆವು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು