ಮಂಗಳವಾರ, ಆಗಸ್ಟ್ 3, 2021
27 °C
ಪರೀಕ್ಷೆ ನಡೆಸಲು ವೆಚ್ಚವಾಗುವ ಹಣ ಖಾಸಗಿ ಶಾಲಾ ಶಿಕ್ಷಕರಿಗೆ ನೀಡಿ

ಎಸ್ಸೆಸ್ಸೆಲ್ಸಿ ಪರೀಕ್ಷೆ ಬೇಡ: ‘‍ಪ್ರಜಾವಾಣಿ’ ಸಂವಾದದಲ್ಲಿ ತಜ್ಞರ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಜೀವನದ ಪ್ರಮುಖ ಘಟ್ಟ ಎನಿಸಿರುವ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದು ಮಾಡಿರುವ ರಾಜ್ಯ ಸರ್ಕಾರ, ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ನಡೆಸಲು ಮುಂದಾಗಿರುವುದು ಅವಿವೇಕದ ನಿರ್ಧಾರ. ಶಿಕ್ಷಕರು, ವಿದ್ಯಾರ್ಥಿಗಳನ್ನು ಸಾವಿನ ದವಡೆಗೆ ನೂಕುವ ಇಂತಹ ಅಪಾಯಕಾರಿ ನಿರ್ಧಾರವನ್ನು ವಾಪಸ್ ತೆಗೆದುಕೊಳ್ಳಬೇಕು. ಆಂತರಿಕ ಪರೀಕ್ಷೆಗಳ (ಎಫ್‌ಎ) ಅಂಕಗಳ ಆಧಾರದ ಮೇಲೆಯೇ ಅವರನ್ನು ಉತ್ತೀರ್ಣಗೊಳಿಸಬೇಕು. ಪರೀಕ್ಷೆಗೆ ವ್ಯಯಿಸುವ ಹಣವನ್ನೇ ಖಾಸಗಿ ಶಾಲೆಗಳ ಶಿಕ್ಷಕರ ವೇತನಕ್ಕೆ ಅಥವಾ ಗ್ರಾಮೀಣ ವಿದ್ಯಾರ್ಥಿಗಳ ಕಲಿಕೆಗೆ ವಿನಿಯೋಗಿಸಬೇಕು...’

‘ಪಿಯುಸಿ ಪರೀಕ್ಷೆ ಕೈ ಬಿಟ್ಟು ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವ ಔಚಿತ್ಯ ಏನು’ ಎಂಬ ವಿಷಯ ಕುರಿತು ‘ಪ್ರಜಾವಾಣಿ’ಯು ಫೇಸ್‌ಬುಕ್‌ನಲ್ಲಿ ಗುರುವಾರ ನಡೆಸಿದ ಸಂವಾದದಲ್ಲಿ ತಜ್ಞರು ವ್ಯಕ್ತಪಡಿಸಿದ ಅಭಿಪ್ರಾಯವಿದು.

‘ಸಚಿವರು ಶಿಕ್ಷಣ ಮಂತ್ರಿಯೇ ವಿನಾ ಪರೀಕ್ಷಾ ಮಂತ್ರಿ ಅಲ್ಲ. ಕಲಿಕೆಗೆ ಮೊದಲು ವ್ಯವಸ್ಥೆ ಮಾಡಿ’ ಎಂದೂ ಶಿಕ್ಷಣ ತಜ್ಞರು ಒತ್ತಾಯಿಸಿದರು.

‘ಶೇ 80ರಷ್ಟು ವಿದ್ಯಾರ್ಥಿಗಳಿಗೆ ಸಾಮಾಜಿಕ ಅನ್ಯಾಯ’
ಒಂದು ಪಠ್ಯಕ್ರಮದ (ಸಿಬಿಎಸ್‌ಇ) ವಿದ್ಯಾರ್ಥಿಯು ಪರೀಕ್ಷೆ ಬರೆಯದೆ ಉತ್ತೀರ್ಣಗೊಂಡಾಗ, ಅದೇ ಬೀದಿಯಲ್ಲಿನ ಮತ್ತೊಬ್ಬ ವಿದ್ಯಾರ್ಥಿ ಬೇರೆ ಪಠ್ಯಕ್ರಮದ (ರಾಜ್ಯ) ಕಾರಣಕ್ಕೆ ಪರೀಕ್ಷೆ ಬರೆಯಬೇಕು ಎಂಬುದು ಸಂವಿಧಾನದ ಆಶಯಗಳಿಗೇ ವಿರುದ್ಧ. ಆನ್‌ಲೈನ್‌ ಬೋಧನಾ ಸೌಲಭ್ಯ ದೊರೆತಿರುವುದು ಶೇ 20ರಷ್ಟು ವಿದ್ಯಾರ್ಥಿಗಳಿಗೆ ಮಾತ್ರ. ಉಳಿದ ಶೇ 80ರಷ್ಟು ವಿದ್ಯಾರ್ಥಿಗಳು ಸೌಲಭ್ಯದಿಂದ ವಂಚಿತರಾಗಿದ್ದಾರೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆದರೆ ಅದು ಈ ವಿದ್ಯಾರ್ಥಿಗಳಿಗೆ ಆಗುವ ಸಾಮಾಜಿಕ ಅನ್ಯಾಯ.

ತಜ್ಞರ ಅಭಿಪ್ರಾಯ ಮಾತ್ರವಲ್ಲ, ಜನಾಭಿಪ್ರಾಯವನ್ನೂ ಸರ್ಕಾರ ಗೌರವಿಸುತ್ತಿಲ್ಲ. ಪ್ರಾಥಮಿಕ ಶಾಲಾ ಶಿಕ್ಷಣ ವಲಯವಂತೂ ಗೊಂದಲದ ಗೂಡಾಗಿದೆ. ಆನ್‌ಲೈನ್‌ ಶಿಕ್ಷಣದಿಂದ ವಂಚಿತರಾದವರಲ್ಲಿ ಗ್ರಾಮೀಣ ಭಾಗದ, ದಲಿತ, ಹಿಂದುಳಿದ, ಬಡ ವರ್ಗದ ವಿದ್ಯಾರ್ಥಿಗಳೇ ಹೆಚ್ಚಾಗಿದ್ದಾರೆ. ಈಗ ಪರೀಕ್ಷೆ ನಡೆದರೆ ಅವರಿಗೆ ನ್ಯಾಯ ಸಿಗಲು ಸಾಧ್ಯವೇ ಇಲ್ಲ. ಇಂತಹ ಸಮುದಾಯಕ್ಕೆ ಶಿಕ್ಷಣದ ನಿರಾಕರಣೆಯನ್ನೇ ಗುರಿಯಾಗಿಸಿಕೊಂಡಿದ್ದವರು, ಈಗಲೂ ಇಂತಹ ‘ರಹಸ್ಯ ಕಾರ್ಯಸೂಚಿಯನ್ನು’ ಪರೀಕ್ಷೆ ನಡೆಸುವ ಮೂಲಕ ಅನುಷ್ಠಾನಕ್ಕೆ ತರುತ್ತಿದ್ದಾರೆ. ಪರೀಕ್ಷೆ ಬದಲು, ನಿರಂತರ–ವ್ಯಾಪಕ ಮೌಲ್ಯಮಾಪನಕ್ಕೆ (ಸಿಸಿಇ) ಆದ್ಯತೆ ನೀಡಬೇಕು.

-ವಿ.ಪಿ. ನಿರಂಜನಾರಾಧ್ಯ, ಅಭಿವೃದ್ಧಿ ಶಿಕ್ಷಣ ತಜ್ಞ

*

‘ಶೇ 75ರಷ್ಟು ಶಿಕ್ಷಕರಿಗೆ ಲಸಿಕೆ ಹಾಕಿಲ್ಲ’
ಸುಮಾರು 8.5 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಬಹುಪಾಲು ವಿದ್ಯಾರ್ಥಿಗಳಿಗೆ ಈವರೆಗೆ ಲಸಿಕೆ ಹಾಕಿಲ್ಲ. ಇನ್ನು, ಶೇ 75ರಷ್ಟು ಶಿಕ್ಷಕರೂ ಲಸಿಕೆ ಪಡೆದಿಲ್ಲ. ಇಂತಹ ಸಂದರ್ಭದಲ್ಲಿ ಪರೀಕ್ಷೆ ನಡೆಸುವುದು ಅಪಾಯಕ್ಕೆ ಆಹ್ವಾನ ನೀಡಿದಂತೆ.

ಮೊದಲು, ಎಸ್ಸೆಸ್ಸೆಲ್ಸಿಯೇ ನಿರ್ಣಾಯಕ ಘಟ್ಟ ಎನ್ನಲಾಗುತ್ತಿತ್ತು. ಈಗ ಅದು ಬದಲಾಗಿದೆ. ದ್ವಿತೀಯ ಪಿಯುಸಿಯ ಫಲಿತಾಂಶವೇ ನಿರ್ಣಾಯಕವಾಗಿದೆ. ಆ ಪರೀಕ್ಷೆಯನ್ನೇ ಮುಂದೂಡಲಾಗಿದೆ. ಇಂಥದ್ದರಲ್ಲಿ ಇಷ್ಟೊಂದು ಸಮಸ್ಯೆ, ಸವಾಲುಗಳ ನಡುವೆ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವ ಔಚಿತ್ಯವಾದರೂ ಏನಿದೆ ಎಂಬುದು ನನಗೆ ತಿಳಿಯುತ್ತಿಲ್ಲ. 

ಡಿಸೆಂಬರ್‌ನಿಂದ ಮಾರ್ಚ್‌ವರೆಗೂ ಭೌತಿಕ ತರಗತಿಗಳು ನಡೆದಿವೆ. ಎರಡು ಬಾರಿ ರೂಪಣಾತ್ಮಕ ಪರೀಕ್ಷೆಗಳನ್ನೂ (ಎಫ್‌ಎ) ಮಾಡಲಾಗಿದೆ. ಎರಡೆರಡು ಯೋಜನಾ ವರದಿಗಳನ್ನೂ ವಿದ್ಯಾರ್ಥಿಗಳು ಸಿದ್ಧಮಾಡಿ ಕೊಟ್ಟಿದ್ದಾರೆ. ಇದರ ಆಧಾರದ ಮೇಲೆ ಫಲಿತಾಂಶ ನಿರ್ಣಯಿಸಬಹುದು. ಅಲ್ಲದೆ, ಬಹುಆಯ್ಕೆಯ ಪ್ರಶ್ನೆಗಳಿರುವ ಪರೀಕ್ಷೆಯ ಮೂಲಕ ವಿದ್ಯಾರ್ಥಿಗಳ ಕಲಿಕಾ ಮಟ್ಟ ಅಳೆಯಲು ಸಾಧ್ಯವಿಲ್ಲ. ಪರೀಕ್ಷೆಗೆ ವ್ಯಯಿಸುವ ಹಣವನ್ನೇ ಖಾಸಗಿ ಶಾಲಾ ಶಿಕ್ಷಕರ ವೇತನ ಪಾವತಿಗೆ ಸರ್ಕಾರವು ವಿನಿಯೋಗಿಸಬೇಕು.

-ಬಸವರಾಜ ಗುರಿಕಾರ, ಅಖಿಲ ಭಾರತ ಶಿಕ್ಷಕರ ಫೆಡರೇಷನ್‌ ಉಪಾಧ್ಯಕ್ಷ

*

‘ಸಂಕಲ್ಪ ಇಲ್ಲದ ಶಿಕ್ಷಣ ವ್ಯವಸ್ಥೆ’
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ ನಿರ್ಣಯಿಸಲು ಪ್ರಥಮ ಪಿಯುಸಿ ಮತ್ತು ಎಸ್ಸೆಸ್ಸೆಲ್ಸಿ ಪರೀಕ್ಷೆ ಆಧಾರವಾಗಿಟ್ಟುಕೊಳ್ಳಲಾಗಿದೆ. ಆದರೆ, 9ನೇ ತರಗತಿಯಲ್ಲೂ ಪರೀಕ್ಷೆ ಮಾಡಿಲ್ಲವಾದ್ದರಿಂದ ಎಸ್ಸೆಸ್ಸೆಲ್ಸಿಯಲ್ಲಿ ಪರೀಕ್ಷೆ ನಡೆಸಲೇಬೇಕಾಗಿದೆ ಎಂದು ಇಲಾಖೆ ಹೇಳಿದೆ. ಆದರೆ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಎರಡು ಆಂತರಿಕ ಪರೀಕ್ಷೆ ನಡೆಸಲಾಗಿದೆ. ಇದರ ಆಧಾರದ ಮೇಲೆಯೇ ಅವರನ್ನು ಉತ್ತೀರ್ಣಗೊಳಿಸಬಹುದು.

ರಾಜ್ಯದಲ್ಲಿ 16 ತಿಂಗಳಿನಿಂದ ಪಠ್ಯ ಬೋಧನೆ ನಡೆದಿಲ್ಲ. ವರ್ಷದಲ್ಲಿ 250 ಕಲಿಕಾ ದಿನಗಳು ಇರುತ್ತವೆ. ಆದರೆ, ಈ ಬಾರಿ ಇಂತಹ 75 ಕಲಿಕಾ ದಿನಗಳು ಮಾತ್ರ ನಡೆದಿವೆ. ಈ ವೇಳೆ ಶೇ 75ರಷ್ಟು ಪಠ್ಯಕ್ರಮವನ್ನು ಆಧರಿಸಿ ಪರೀಕ್ಷೆ ನಡೆಸುವುದು ಸರಿಯಲ್ಲ.  ಮೂರನೇ ಅಲೆಯ ಅಪಾಯದ ನಡುವೆಯೇ ಪರೀಕ್ಷೆ ನಡೆದರೆ ಶಿಕ್ಷಕರು, ವಿದ್ಯಾರ್ಥಿಗಳು ತೊಂದರೆಗೆ ಸಿಲುಕುತ್ತಾರೆ.

ಸದ್ಯ ರಾಜ್ಯದಲ್ಲಿ ಗಟ್ಟಿಯಾದ ಶೈಕ್ಷಣಿಕ ನೀತಿಯೇ ಇಲ್ಲದಂತಾಗಿದೆ. ಶಿಕ್ಷಣ ಸಚಿವರು ಬೆಳಿಗ್ಗೆಯೊಂದು ಕಾನೂನು ತಂದರೆ, ಸಂಜೆ ಅದಕ್ಕೆ ವ್ಯತಿರಿಕ್ತವಾದ ಮತ್ತೊಂದು ಕಾನೂನು ತರುತ್ತಾರೆ. ಒಟ್ಟಿನಲ್ಲಿ, ಒಂದು ಸಂಕಲ್ಪವೇ ಇಲ್ಲದ ಶಿಕ್ಷಣ ವ್ಯವಸ್ಥೆ ನಮ್ಮದಾಗಿದೆ.

-ಎನ್. ಇಸ್ಮಾಯಿಲ್, ಶಿಕ್ಷಣ ತಜ್ಞ

*
‘ಕಲಿಕಾ ವ್ಯವಸ್ಥೆಯೇ ಛಿದ್ರ’
ಅನೇಕ ಅಸ್ಪಷ್ಟತೆಗಳ ನಡುವೆ ಪರೀಕ್ಷೆ ನಡೆಸುವ ಅಗತ್ಯವಿಲ್ಲ. ಸಚಿವರು ಹಟ ತೊಟ್ಟು ಪರೀಕ್ಷೆ ನಡೆಸಲು ಮುಂದಾಗುತ್ತಿದ್ದಾರೆ. ಆದರೆ, ಇದಕ್ಕೆ ಪ್ರಬಲವಾದ ಸಮರ್ಥನೆಗಳನ್ನು ಅವರು ಕೊಡುತ್ತಿಲ್ಲ. ಪರೀಕ್ಷೆ ನಡೆಸುವ ಮುನ್ನ, ಎಲ್ಲರ ಸಲಹೆಗಳನ್ನೂ ಅವರು ಕೇಳಿಲ್ಲ. ಕಲಿಕೆ ಇಲ್ಲ, ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರವಿಲ್ಲದೆ, ಸುರಕ್ಷಿತ ತರಗತಿಯ ವಾತಾವರಣವಿಲ್ಲದೆ ನಮ್ಮ ಕಲಿಕಾ ವ್ಯವಸ್ಥೆಯೇ ಛಿದ್ರವಾಗಿದೆ.

ಕೇಂದ್ರ ಸರ್ಕಾರ, ಅದರಲ್ಲಿಯೂ ಪ್ರಧಾನಿ ನರೇಂದ್ರ ಮೋದಿಯವರು ಸಿಬಿಎಸ್‌ಇ ಪಠ್ಯಕ್ರಮದ ದ್ವಿತೀಯ ಪಿಯು ಪರೀಕ್ಷೆಯನ್ನು ರದ್ದು ಮಾಡಿದ್ದರಿಂದ ಮಾತ್ರ ರಾಜ್ಯ ಸರ್ಕಾರ, ಇಲ್ಲಿಯೂ ಆ ಪರೀಕ್ಷೆ ನಡೆಸಿಲ್ಲ. ಇದಕ್ಕೆ ಕೇಂದ್ರ ಸರ್ಕಾರದ ಒತ್ತಡ ಕಾರಣವಷ್ಟೇ.

ವಿದ್ಯಾರ್ಥಿ ಎಂದರೆ ಕೆಲವರನ್ನು ಮಾತ್ರ ಪರಿಗಣಿಸುವುದಿಲ್ಲ. ಬೆಂಗಾಡಿನಲ್ಲಿರುವ, ಆದಿವಾಸಿ ಮಕ್ಕಳನ್ನೂ ಗಮನದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಅವರಿಗೂ ಕಲಿಕೆ ಸಾಧ್ಯವಾಗಿದೆಯೇ ಎಂಬುದನ್ನು ನೋಡಬೇಕಾಗುತ್ತದೆ. ಶಾಲಾ ಕಲಿಕೆಯನ್ನು ಪುನರಾರಂಭಿಸುವಂತೆ ಯುನೆಸ್ಕೊ ಮಾರ್ಗಸೂಚಿ ಹೊರಡಿಸಿತ್ತು. ಆದರೆ ಇವರು ಪರೀಕ್ಷೆ ಮಾತ್ರ ನಡೆಸುತ್ತಿದ್ದಾರೆ. ಸಚಿವರು ಶಿಕ್ಷಣ ಮಂತ್ರಿಯೇ ಹೊರತು, ಪರೀಕ್ಷಾ ಸಚಿವರಲ್ಲ ಎಂಬುದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು.

-ಮಲ್ಲಿಗೆ ಸಿರಿಮನೆ, ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ ಕಾರ್ಯಕರ್ತೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು