ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದರೆ ಜೈಲು ಶಿಕ್ಷೆ

ಸ್ವತ್ತು ನಷ್ಟ ವಸೂಲಿಗಾಗಿ ಅಪರಾಧಿಗಳ ಆಸ್ತಿ ಜಪ್ತಿ ಮಸೂದೆ ಅಂಗೀಕಾರ
Last Updated 23 ಸೆಪ್ಟೆಂಬರ್ 2020, 20:32 IST
ಅಕ್ಷರ ಗಾತ್ರ

ಬೆಂಗಳೂರು: ಸಾಂಕ್ರಾಮಿಕ ರೋಗ ಹರಡಿದ ಸಂದರ್ಭದಲ್ಲಿ ವೈದ್ಯರು, ನರ್ಸ್‌ಗಳು ಮತ್ತು ಇತರ ಆರೋಗ್ಯ ಸೇವೆಗಳ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದರೆ 5 ವರ್ಷದವರೆಗೆ ಜೈಲು ಮತ್ತು ₹5 ಲಕ್ಷದವರೆಗೆ ದಂಡ ವಿಧಿಸುವ ಹಾಗೂ ನಷ್ಟ ಪರಿಹಾರ ವಸೂಲಿ ಮಾಡುವ ಮಸೂದೆಗೆ ವಿಧಾನಸಭೆ ಒಪ್ಪಿಗೆ ನೀಡಿದೆ.

ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರು ‘ಕರ್ನಾಟಕ ಸಾಂಕ್ರಾಮಿಕ ರೋಗಗಳ ಮಸೂದೆ- 2020’ ಮಂಡಿಸಿ, ಕೊರೊನಾ ವಾರಿಯರ್ಸ್‌ಗಳ ಮೇಲೆ ಅದರಲ್ಲೂ ವೈದ್ಯರು, ನರ್ಸ್‌ಗಳು ಮತ್ತು ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆಗಳು ನಡೆದವು. ಇದರಿಂದ ಕೋವಿಡ್ ನಿರ್ವಹಣೆ ಕಾರ್ಯಕ್ಕೆ ಅಡ್ಡಿಯುಂಟಾಯಿತು. ಅವರಿಗೆ ರಕ್ಷಣೆ ನೀಡಲು ಈ ಮಸೂದೆ ಮಂಡಿಸಲಾಗಿದೆ' ಎಂದರು.

ಮಸೂದೆಯ ಪ್ರಮುಖ ಅಂಶಗಳು:

* ಆಸ್ಪತ್ರೆ ಅಥವಾ ಕ್ಲಿನಿಕ್‌ ಆವರಣದಲ್ಲಿ ನೌಕರರ ಜೀವಕ್ಕೆ ಹಾನಿ ಮಾಡುವ, ಗಾಯ, ನೋವು ಬೆದರಿಕೆ ಒಡ್ಡುವಂತಿಲ್ಲ.

* ಸಾಂಕ್ರಾಮಿಕ ರೋಗಗಳು ಎಂದರೆ ಸರ್ಕಾರವು ಸರ್ಕಾರಿ ರಾಜ್ಯಪತ್ರದಲ್ಲಿ ಪ್ರಕಟಿಸಿರುವ ಅಧಿಸೂಚಿತ ಸಾಂಕ್ರಾಮಿಕ ರೋಗಗಳು.

ಏನು ಶಿಕ್ಷೆ?

* ಅಪರಾಧ ನಿರ್ಣಯವಾದ ಮೇಲೆ ಮೂರು ತಿಂಗಳಿಗೆ ಕಡಿಮೆ ಇಲ್ಲದೆ ಐದು ವರ್ಷಗಳಿಗೆ ವಿಸ್ತರಿಸಬಹುದಾದ ಅವಧಿಯ ಜೈಲುವಾಸ ಮತ್ತು ₹50 ಸಾವಿರಕ್ಕೆ ಕಡಿಮೆ ಇಲ್ಲದೆ ₹2 ಲಕ್ಷಗಳವರೆಗೆ ವಿಸ್ತರಿಸಬಹುದಾದ ದಂಡ

‌* ನೌಕರರ ಮೇಲೆ ಹಿಂಸಾಕೃತ್ಯ ಎಸಗಿದ ವ್ಯಕ್ತಿಗೆ ದಂಡ ಸಂಹಿತೆ 320 ರ ಅಡಿಯಲ್ಲಿ 6 ತಿಂಗಳಿಂದ 7 ವರ್ಷ ಅವಧಿಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಮತ್ತು ₹ 1 ಲಕ್ಷದಿಂದ ₹5 ಲಕ್ಷದವರೆಗೆ ದಂಡ ವಿಧಿಸಬಹುದು.

* ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗಳಿಗೆ ಹಾನಿ ಮಾಡಿದರೆ 3 ತಿಂಗಳಿಂದ 5 ವರ್ಷ ಜೈಲುವಾಸ, ₹50 ಸಾವಿರದಿಂದ ₹ 2 ಲಕ್ಷದವರೆಗೆ ದಂಡ ವಿಧಿಸಬಹುದು.

* ಸಾರ್ವಜನಿಕ ಮತ್ತು ಖಾಸಗಿ ಸ್ವತ್ತುಗಳಿಗೆ ಹಾನಿ ಉಂಟಾದರೆ, ಅಪರಾಧಿಗಳಿಂದಲೇ ನ್ಯಾಯಾಲಯ ನಿರ್ಧರಿಸಬಹುದಾದ ಮೊತ್ತವನ್ನು ನಷ್ಟ ಪರಿಹಾರವಾಗಿ ಭರಿಸಲಾಗುವುದು. ಆಸ್ತಿ ಜಪ್ತಿ ಮಾಡಬಹುದು.

ಸಾಂಕ್ರಾಮಿಕ ರೋಗ ಹರಡಿದಾಗ ಅಧಿಕಾರಿಗಳು ನಡೆಸುವ ಭ್ರಷ್ಟಾಚಾರದ ತನಿಖೆ, ರೋಗದ ಕುರಿತು ಅಂಕಿಅಂಶ ನೀಡುವುದು ಮತ್ತು ಸರ್ಕಾರ ಮಾಡುವ ಖರ್ಚು ವೆಚ್ಚಗಳ ವಿಶೇಷ ಲೆಕ್ಕ ಪರಿಶೋಧನೆ ನಡೆಸಬೇಕು ಎಂಬುದನ್ನು ತಿದ್ದುಪಡಿಗೆ ಸೇರಿಸಬೇಕು ಎಂಬ ಕಾಂಗ್ರೆಸ್‌ನ ಎಚ್.ಕೆ.ಪಾಟೀಲ ನೀಡಿದ ಸಲಹೆಯನ್ನು ತಿರಸ್ಕರಿಸಲಾಯಿತು.

ಅನುಮೋದನೆ ಪಡೆದ ಮಸೂದೆಗಳು

* ಕರ್ನಾಟಕ ಲೋಕಾಯುಕ್ತ (ಎರಡನೇ ತಿದ್ದುಪಡಿ) ಮಸೂದೆ: ಲೋಕಾಯುಕ್ತರು ಪ್ರಾರಂಭಿಕ ವಿಚಾರಣೆಯನ್ನು ದೂರು ಸ್ವೀಕರಿಸಿದ ದಿನಾಂಕದಿಂದ 90 ದಿನಗಳಲ್ಲಿ ಪೂರ್ಣಗೊಳಿಸಬೇಕು. ತನಿಖೆಯನ್ನು ಆರಂಭಿಸಲು ಆದೇಶ ಮಾಡಿದ ದಿನದಿಂದ 6 ತಿಂಗಳಲ್ಲಿ ತನಿಖೆ ನಡೆಸಬೇಕು. ತನಿಖೆ ವರದಿಯನ್ನು ಲಿಖಿತವಾಗಿ ಸಲ್ಲಿಸಬೇಕಾದ ಕಾರಣ ಅವಧಿಯನ್ನು ವಿಸ್ತರಿಸಲು ಅವಕಾಶವಿದ್ದು, ಒಂದು ಬಾರಿಗೆ ಆರು ತಿಂಗಳು ಮೀರದಂತೆ ವಿಸ್ತರಿಸಬಹುದು.

* ಕರ್ನಾಟಕ ಕೈಗಾರಿಕಾ (ಸೌಲಭ್ಯ)(ತಿದ್ದುಪಡಿ)ಮಸೂದೆ 2020:

* ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಮಸೂದೆ 2020

* ಕರ್ನಾಟಕ ಕಲ್ಲುಪುಡಿ ಮಾಡುವ ಘಟಕಗಳ ನಿಯಂತ್ರಣ(ತಿದ್ದುಪಡಿ) ಮಸೂದೆ2020

ವಿಧಾನಪರಿಷತ್ತಿನಲ್ಲಿ ಒಪ್ಪಿಗೆ ಪಡೆದ ಮಸೂದೆಗಳು: ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ತಿದ್ದುಪಡಿ) ಮಸೂದೆ,ಕರ್ನಾಟಕ ರೇಸ್ ಕೋರ್ಸ್ ಗಳಿಗೆ ಪರವಾನಗಿ ನೀಡುವ (ತಿದ್ದುಪಡಿ) ಮಸೂದೆ, ಸರ್ವಜ್ಞ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಮಸೂದೆ, ಕೈಗಾರಿಕಾ ವಿವಾದಗಳ (ಕರ್ನಾಟಕ ತಿದ್ದುಪಡಿ) ಮಸೂದೆ, ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ (ತಿದ್ದುಪಡಿ) ಮಸೂದೆ, ಕರ್ನಾಟಕ‌ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) (ತಿದ್ದುಪಡಿ)ಮಸೂದೆ ಹಾಗೂ ಕರ್ನಾಟಕಕೆಲವು ಅಧಿನಿಯಮಗಳು ಮತ್ತು ಪ್ರಾದೇಶಿಕ ಕಾನೂನುಗಳನ್ನುನಿರಸನಗೊಳಿಸುವ ಮಸೂದೆಗಳಿಗೆ‌ ವಿಧಾನ ಪರಿಷತ್ ಒಪ್ಪಿಗೆನೀಡಿತು.

ನಿಗಮ ಮತ್ತು ಮಂಡಳಿಗಳ ಸಿಬ್ಬಂದಿ ರಾಜ್ಯ ಸರ್ಕಾರಿ ನೌಕರರಲ್ಲ: ನಿಗಮ ಮತ್ತು ಮಂಡಳಿಗಳ ಸಿಬ್ಬಂದಿ ರಾಜ್ಯ ಸರ್ಕಾರಿ ನೌಕರರಲ್ಲ. ಒಂದು ವೇಳೆ ನಿಗಮ– ಮಂಡಳಿಗಳನ್ನು ಮುಚ್ಚಿದರೆ ಸಿಬ್ಬಂದಿಯನ್ನು ನೌಕರರೆಂದು ಇತರ ಯಾವುದೇ ಇಲಾಖೆಗೆ ಸೇರಿಸಿಕೊಳ್ಳದಿರುವ ಉದ್ದೇಶದಿಂದ ಕರ್ನಾಟಕ ನಿಗಮ ಮಂಡಳಿಗಳ ತಿದ್ದುಪಡಿ ಮಸೂದೆಗೆ ವಿಧಾನಸಭೆ ಒಪ್ಪಿಗೆ ನೀಡಿತು.

ನಿಗಮ ಅಥವಾ ಮಂಡಳಿಗಳನ್ನು ಮುಚ್ಚಿದರೆ ಅದರ ಸಿಬ್ಬಂದಿಗೆ ನ್ಯಾಯಯುತವಾಗಿ ಬರಬೇಕಾದ ಪರಿಹಾರವನ್ನು ಒದಗಿಸಲಾಗುವುದು. ಆದರೆ, ಅವರನ್ನು ನೌಕರರೆಂದು ಪರಿಗಣಿಸಿ ಬೇರೆ ಇಲಾಖೆಗೆ ತೆಗೆದುಕೊಂಡರೆ ಸಮಸ್ಯೆಗಳು ಸೃಷ್ಟಿಯಾಗುತ್ತದೆ ಮತ್ತು ಹೊಸ ಉದ್ಯೋಗ ಸೃಷ್ಟಿಯಾಗದೇ, ಯುವಕರು ನಿರುದ್ಯೋಗದ ಸಮಸ್ಯೆ ಗುರಿಯಾಗಬೇಕಾಗುತ್ತದೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಸದನಕ್ಕೆ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT