ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಜತೆಗೆ ಕಾಡುವುದೇ ಡೆಂಗಿ? ಮಳೆಗೆ ರೋಗಗಳು ಹೆಚ್ಚಾಗುವ ಸಾಧ್ಯತೆ

Last Updated 12 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮಳೆಯಿಂದಾಗಿ ಕೋವಿಡ್ ಜತೆಗೆ ಮುಂದಿನ ದಿನಗಳಲ್ಲಿ ಡೆಂಗಿ, ಚಿಕೂನ್‌ಗುನ್ಯಾ ಹಾಗೂ ಮಲೇರಿಯಾ ಜ್ವರ ಕೂಡ ಕಾಡುವ ಸಾಧ್ಯತೆಯಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಕಳೆದ ವರ್ಷ ಕೂಡ ಮಳೆ ಅಧಿಕಗೊಂಡ ಬಳಿಕವೇ ವಿವಿಧ ಜ್ವರಗಳಿಂದ ಬಳಲುವವರ ಸಂಖ್ಯೆ ಏರಿಕೆ ಕಂಡಿತ್ತು.

ಸದ್ಯ ಯಾವುದೇ ರೀತಿಯ ಜ್ವರದಿಂದ ಬಳಲಿದರೂ ಅವರಿಗೆ ಕೋವಿಡ್ ಪರೀಕ್ಷೆ ನಡೆಸಿ, ಚಿಕಿತ್ಸೆ ಒದಗಿಸಲಾಗುತ್ತಿದೆ. ಕಳೆದ ವರ್ಷ 16 ಸಾವಿರ ಮಂದಿ ಡೆಂಗಿ ಜ್ವರದಿಂದ ಬಳಲಿದ್ದು, 13 ಮಂದಿ ಮೃತಪಟ್ಟಿದ್ದರು. 10 ಸಾವಿರಕ್ಕೂ ಅಧಿಕ ಪ್ರಕರಣಗಳು ರಾಜಧಾನಿ ಬೆಂಗಳೂರಿನಲ್ಲೇ ವರದಿಯಾಗಿದ್ದವು. ದಶಕದಲ್ಲೇ ಅತಿ ಹೆಚ್ಚು ಮಂದಿ ಈ ಜ್ವರದಿಂದ ಬಳಲಿದ್ದರು. ಆದರೆ, ಈ ವರ್ಷ ಆರಂಭದಲ್ಲಿಯೇ ಕೋವಿಡ್ ಕಾರಣ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಹೀಗಾಗಿ ಡೆಂಗಿ ಸದ್ಯ ನಿಯಂತ್ರಣದಲ್ಲಿದೆ. ಈವರೆಗೆ 39,347 ಶಂಕಿತ ಡೆಂಗಿ ಪ್ರಕರಣಗಳು ವರದಿಯಾಗಿದ್ದು, ಅದರಲ್ಲಿ 2,508 ಮಂದಿ ಇದೇ ಜ್ವರದಿಂದ ಬಳಲಿದ್ದಾರೆ ಎನ್ನುವುದು ದೃಢಪಟ್ಟಿದೆ.

ಕಳೆದ ವರ್ಷ ಈ ವೇಳೆಗೆ 7,093 ಮಂದಿ ಡೆಂಗಿ ಸೋಂಕಿತರಾಗಿದ್ದರು. ಅಕ್ಟೋಬರ್ ಅಂತ್ಯಕ್ಕೆ ಈ ಸಂಖ್ಯೆ ದುಪ್ಪಟ್ಟಾಗಿ, 14,139 ಮಂದಿ ಜ್ವರದಿಂದ ಬಳಲಿದ್ದರು. ಚಿಕೂನ್‌ಗುನ್ಯಾ ಹಾಗೂ ಮಲೇರಿಯಾ ಜ್ವರದಿಂದ ಬಳಲಿದವರ ಸಂಖ್ಯೆ ಕೂಡ ಹೆಚ್ಚಳವಾಗಿತ್ತು. ಈ ವರ್ಷ 922 ಮಂದಿ ಈವರೆಗೆ ಚಿಕೂನ್‌ಗುನ್ಯಾ ಜ್ವರದಿಂದ ಬಳಲಿದ್ದಾರೆ.

ಕೋವಿಡ್‌ನಿಂದ ಮರೆ: ‘ಕೋವಿಡ್‌ನಿಂದಾಗಿ ಡೆಂಗಿ, ಚಿಕೂನ್‌ಗುನ್ಯಾ ಸೇರಿದಂತೆ ವಿವಿಧ ರೋಗಗಳು ಅಷ್ಟಾಗಿ ಬೆಳಕಿಗೆ ಬರುತ್ತಿಲ್ಲ. ಒಂದು ವೇಳೆ ಜ್ವರ ಸೇರಿದಂತೆ ಬೇರೆ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ತೆರಳಿದಲ್ಲಿ ಕೋವಿಡ್ ಪರೀಕ್ಷೆ ಕೂಡ ನಡೆಸಲಾಗುತ್ತಿದೆ. ಕಳೆದ ವರ್ಷ ಮುಂಗಾರು ಮಳೆ ಪ್ರಾರಂಭವಾಗುತ್ತಿದ್ದಂತೆ ಡೆಂಗಿ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿತ್ತು. ಆದರೆ, ಈ ವರ್ಷ ಸದ್ಯಕ್ಕೆ ನಿಯಂತ್ರಣದಲ್ಲಿರುವುದು ಸಮಾಧಾನ ತಂದಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಸವಾಲಿದೆ’ ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಡೆಂಗಿ ಜ್ವರ ಈ ವರ್ಷ ಅಷ್ಟಾಗಿ ಕಾಡಿಲ್ಲ. ಆದರೆ, ಮಳೆಗಾಲ ಪ್ರಾರಂಭವಾದ ಕಾರಣ ವಾತಾವರಣದಲ್ಲಿ ವ್ಯತ್ಯಯವಾಗಿ, ಹೆಚ್ಚಳವಾಗುವ ಸಾಧ್ಯತೆ ಇದೆ. ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕು’ ಎಂದು ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯ ವೈದ್ಯ ಅಧೀಕ್ಷಕ ಡಾ. ಅನ್ಸರ್ ಅಹಮದ್ ಅವರು ಎಚ್ಚರಿಸಿದರು.

ಪ್ರವಾಹ ಸ್ಥಳಗಳಲ್ಲಿ ಮುನ್ನೆಚ್ಚರಿಕೆ ಸೂಚನೆ
‍ಪ್ರವಾಹದ ಸ್ಥಳಗಳಲ್ಲಿ ಕಾಲರಾ, ಶ್ವಾಸಕೋಶದ ಸೋಂಕು, ವಿಷಮ ಶೀತ ಜ್ವರ, ಹೆಪಟೈಟಿಸ್, ಇಲಿ ಜ್ವರ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ನೀರು, ಗಾಳಿ ಮತ್ತು ಆಹಾರಗಳಿಂದ ಕೂಡ ಸೋಂಕು ಹರಡುತ್ತದೆ. ಹಾಗಾಗಿ ಅಗತ್ಯ ಮುಂಜಾಗ್ರತೆ ವಹಿಸಬೇಕು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಕಲುಷಿತ ಹಾಗೂ ತಣ್ಣನೆಯ ನೀರನ್ನು ಕುಡಿಯಬಾರದು. ತಂಗಳು, ಹಳಸಿದ, ತೆರೆದಿಟ್ಟ ಆಹಾರವನ್ನು ಸೇವಿಸಬಾರದು. ಕೈಗಳನ್ನು ಸೋಪಿನ ನೀರಿನಿಂದ ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ಬಯಲಿನಲ್ಲಿ ಮಲ, ಮೂತ್ರ ವಿಸರ್ಜನೆ ಮಾಡಬಾರದು ಎಂದು ಎಚ್ಚರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT