ಮಂಗಳವಾರ, ನವೆಂಬರ್ 30, 2021
22 °C
ವಿದೇಶಾಂಗ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ಹರ್ಷವರ್ಧನ್‌ ಶ್ರಿಂಗ್ಲಾ

ಭಾರತ– ಬಾಂಗ್ಲಾ ಸಂಬಂಧ ನೆರೆಹೊರೆಗೆ ಮಾದರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭಾರತ ಮತ್ತು ಬಾಂಗ್ಲಾದೇಶಗಳ ಮಧ್ಯದ ಸಂಬಂಧವು ಇತರ ಎಲ್ಲ ವ್ಯೂಹಾತ್ಮಕ ಸಂಬಂಧಗಳಿಗಿಂತಲೂ ಬಿಗಿಯಾಗಿದೆ. ಎರಡು ದೇಶಗಳ ಬಾಂಧವ್ಯವು ನೆರೆಹೊರೆಗೆ ಒಂದು ಪ್ರಬಲ ಮಾದರಿಯಂತೆ ಇದೆ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ಹರ್ಷವರ್ಧನ್‌ ಶ್ರಿಂಗ್ಲಾ ಹೇಳಿದರು.

ಪಾಕಿಸ್ತಾನದ ವಿರುದ್ಧದ 1971ರ ಯುದ್ಧದಲ್ಲಿ ಭಾರತೀಯ ಸೇನೆಯ ಗೆಲುವಿನ ಸುವರ್ಣ ಮಹೋತ್ಸವದ ಪ್ರಯುಕ್ತ ಜಕ್ಕೂರು ವಾಯುನೆಲೆಯಲ್ಲಿ ನಡೆಯುತ್ತಿರುವ ‘ಸ್ವರ್ಣಿಮ ವಿಜಯ ವರ್ಷ’ ಕಾರ್ಯಕ್ರಮದಲ್ಲಿ ಶನಿವಾರ ದೆಹಲಿಯಿಂದ ವಿಡಿಯೊ ಕಾನ್ಫರೆನ್ಸ್‌ ಮೂಲಕ ಮಾತನಾಡಿದ ಅವರು, ಉಭಯ ರಾಷ್ಟ್ರಗಳ ಸಂಬಂಧದ ಕುರಿತು ವಿವರಿಸಿದರು.

‘50 ವರ್ಷಗಳ ಹಿಂದೆ ಬಾಂಗ್ಲಾದೇಶದ ವಿಮೋಚನೆಗೆ ಕಾರಣವಾದ ಭಾರತ, ಅಲ್ಲಿನ ಅಭಿವೃದ್ಧಿಯ ಪಾಲುದಾರನಂತೆ ಸ್ನೇಹಹಸ್ತ ಚಾಚಿದೆ. ಐದು ದಶಕಗಳ ಬಳಿಕವೂ ಎರಡೂ ರಾಷ್ಟ್ರಗಳು ಉತ್ತಮ ಬಾಂಧವ್ಯ ಹೊಂದಿವೆ. ಅಭಿವೃದ್ಧಿ ಮತ್ತು ವ್ಯಾಪಾರ ವಹಿವಾಟಿನಲ್ಲಿ ಬಾಂಗ್ಲಾದೇಶವು ಭಾರತಕ್ಕೆ ಅತಿದೊಡ್ಡ ಪಾಲುದಾರನಾಗಿದೆ’ ಎಂದರು.

1971ರ ಯುದ್ಧದ ಗೆಲುವು ಒಂದು ದೊಡ್ಡ ನೈತಿಕ ಮತ್ತು ರಾಜಕೀಯ ಗೆಲುವು. ನೈತಿಕತೆಯ ಆಧಾರದಲ್ಲಿ ಬಾಂಗ್ಲಾದೇಶೀಯರಿಗೆ ಬೆಂಬಲ ನೀಡಿದ್ದ ಭಾರತದ ನಿಲುವು ಸರಿಯಾದದ್ದು ಎಂಬುದು ಸಾಬೀತಾಗಿದೆ. ಸ್ನೇಹ, ಪರಸ್ಪರ ಅರಿಯುವಿಕೆ, ಗೌರವಯುವ ಸಂಬಂಧದ ಮೂಲಕ ಎರಡೂ ರಾಷ್ಟ್ರಗಳು ದ್ವಿಪಕ್ಷೀಯ ಸಂಬಂಧಕ್ಕೆ ಜಗತ್ತಿಗೇ ಮಾದರಿಯಾಗಿವೆ ಎಂದು ಶ್ರಿಂಗ್ಲಾ ಹೇಳಿದರು.

ಉಭಯ ರಾಷ್ಟ್ರಗಳ ಸೇನಾಪಡೆಗಳು ಹೊಂದಿರುವ ಸೌಹಾರ್ದಯುತ ಸಂಬಂಧವು ಭಾರತ ಮತ್ತು ಬಾಂಗ್ಲಾದೇಶಗಳು ಭದ್ರತೆಯ ವಿಷಯದಲ್ಲಿ ಹೊಂದಿರುವ ಸಮಾನ ಕಾಳಜಿಯನ್ನು ಪ್ರತಿಬಿಂಬಿಸುತ್ತವೆ. ಎರಡೂ ರಾಷ್ಟ್ರಗಳು ತ್ಯಾಗ ಮತ್ತು ಧೈರ್ಯವನ್ನು ಒಟ್ಟಾಗಿ ಪ್ರದರ್ಶಿಸಿದ್ದವು. ಅದುವೇ ಈಗ ಭಾರತ ಮತ್ತು ಬಾಂಗ್ಲಾ ನಡುವಿನ ಸೌಹಾರ್ದಯುತ ಸಂಬಂಧಕ್ಕೆ ಕಾರಣವಾಗಿದೆ ಎಂದರು.

ಪೂರ್ವ ಪಾಕಿಸ್ತಾನದ (ಈಗಿನ ಬಾಂಗ್ಲಾದೇಶ) ಜನರ ಮೇಲಿನ ದೌರ್ಜನ್ಯ, ಕಗ್ಗೊಲೆಗಳನ್ನು ಕಂಡು ಮಾನವೀಯ ದೃಷ್ಟಿಯಿಂದ ಭಾರತವು ಸ್ಪಂದಿಸಿತ್ತು. ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಭಾರತದ ಪ್ರಬಲ ಪ್ರತಿಪಾದನೆಗೆ ಮಣಿದ ಹಲವು ರಾಷ್ಟ್ರಗಳು, ಬಾಂಗ್ಲಾದೇಶದ ವಿಮೋಚನೆಯ ಬೇಡಿಕೆಯನ್ನು ಒಪ್ಪಿಕೊಂಡವು. ಪ್ರಬಲ ರಾಷ್ಟ್ರಗಳ ನಡುವಿನ ಶೀತಲ ಸಮರದ ಕಾರಣದಿಂದ ವಿಶ್ವಸಂಸ್ಥೆಯು 1971ರ ಡಿಸೆಂಬರ್‌ವರೆಗೂ ಈ ವಿಷಯದಲ್ಲಿ ಹೆಚ್ಚು ಪ್ರತಿಕ್ರಿಯಿಸಿರಲಿಲ್ಲ ಎಂದು ಹೇಳಿದರು.

 

‘ಪ್ರಬಲ ನಾಯಕತ್ವ ಅಗತ್ಯ’

‘ಅಂದಿನ ಪ್ರಧಾನಿ ಇಂದಿರಾ ಗಾಂಧಿ ನಾಯಕತ್ವದಲ್ಲಿ ಇಡೀ ಸರ್ಕಾರವೇ ಒಂದಾಗಿ ಪ್ರತಿಕ್ರಿಯಿಸಿದ ಕಾರಣದಿಂದ 1971ರ ಯುದ್ಧದಲ್ಲಿ ಗೆಲುವು ಸಾಧ್ಯವಾಯಿತು. ಈ ಕಾಲಘಟ್ಟದಲ್ಲಿ ಅಂತಹ ಪ್ರಬಲ ನಾಯಕತ್ವದ ಪ್ರತಿಕೃತಿಯನ್ನು ಕಾಣುವುದು ಕಷ್ಟ’ ಎಂದು ವೈಸ್‌ ಅಡ್ಮಿರಲ್‌ ಅನಿಲ್‌ ಕುಮಾರ್‌ ಚಾವ್ಲಾ ಹೇಳಿದರು.

‘ಈಗ ಸಂಪೂರ್ಣ ಚಿತ್ರಣವೇ ಬದಲಾಗಿದೆ. ಎದುರಾಳಿಗಳು, ಸನ್ನಿವೇಶ, ತಂತ್ರಜ್ಞಾನದ ಬಳಕೆ ಎಲ್ಲವೂ ಯುದ್ಧನೀತಿಯನ್ನೇ ಬದಲಿಸಿವೆ. ಸೇನಾಪಡೆಗಳು ಜಂಟಿಯಾಗಿ ಹೋರಾಡಿದರೆ ಸಾಲದು, ಸರ್ಕಾರವೇ ಒಂದಾಗಿ ಪ್ರತಿಕ್ರಿಯಿಸಿದರೆ ಮಾತ್ರ ಈಗಲೂ ಯುದ್ಧದಲ್ಲಿ ಗೆಲುವು ಸಾಧಿಸಬಹುದು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.