ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಇಪಿಯಿಂದ ಜ್ಞಾನವಂತರ ದೇಶವಾಗಿ ಭಾರತ ಪರಿವರ್ತನೆ: ಕೇಂದ್ರ ಸಚಿವ ಅಮಿತ್‌ ಶಾ

Last Updated 3 ಮೇ 2022, 7:50 IST
ಅಕ್ಷರ ಗಾತ್ರ

ಬೆಂಗಳೂರು: ‘ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಮೂಲಕ ಭಾರತವನ್ನು ಜ್ಞಾನವಂತರ ದೇಶವನ್ನಾಗಿ ಮಾಡಲು ಪ್ರಧಾನಿ ನರೇಂದ್ರ ಮೋದಿ ಪಣ ತೊಟ್ಟಿದ್ದಾರೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದರು.

ನೃಪತುಂಗ ವಿಶ್ವವಿದ್ಯಾಲಯ ಆವರಣದಲ್ಲಿ ‘ನೃಪತುಂಗ ವಿಶ್ವವಿದ್ಯಾಲಯ’ದ ಉದ್ಘಾಟನೆ ಮತ್ತು ಶೈಕ್ಷಣಿಕ ಸಮುಚ್ಚಯಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಂಗಳವಾರ ಅವರು ಮಾತನಾಡಿದರು.

‌‘ದೇಶದಲ್ಲಿ 230ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳನ್ನು ನಮ್ಮ ಸರ್ಕಾರ ಸ್ಥಾಪಿಸಿದೆ. ಮೋದಿ ಅವರು ಪ್ರತಿ ಕ್ಷೇತ್ರಕ್ಕೂ ಒತ್ತು ನೀಡಿದ್ದಾರೆ. ಇದಕ್ಕಾಗಿ ವಿವಿಧ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ’ ಎಂದ ಶಾ, ‘ಉರಿ, ಪುಲ್ವಾಮದಲ್ಲಿ ಏರ್ ಸ್ಟ್ರೈಕ್ ಮಾಡಿಸಿ ದೇಶದ ತಂಟೆಗೆ ಬಂದರೆ ಏನಾಗಲಿದೆ ಎನ್ನುವುದನ್ನೂ ತೋರಿಸಿಕೊಟ್ಟಿದ್ದಾರೆ’ ಎಂದರು.

‘ಮೊದಲು ಇದು ಸರ್ಕಾರಿ ವಿಜ್ಞಾನ ಕಾಲೇಜು ಆಗಿತ್ತು. 100 ವರ್ಷಗಳಿಂದ ಇಲ್ಲಿ ವಿದ್ಯಾರ್ಥಿಗಳು ಶಿಕ್ಷಣ ಪಡೆದಿದ್ದಾರೆ. ಇದೀಗ ನೃಪತುಂಗ ವಿಶ್ವವಿದ್ಯಾಲಯ ಆಗಿದೆ. ರಾಷ್ಟ್ರಕೂಟದ ಪ್ರಸಿದ್ಧ ರಾಜನಾದ ನೃಪತುಂಗನ ಹೆಸರನ್ನು ವಿಶ್ವವಿದ್ಯಾಲಯಕ್ಕೆ ಇಟ್ಟಿರುವುದು ಸಂತಸ ತಂದಿದೆ’ ಎಂದೂ ಅವರು ಹೇಳಿದರು.

‘ಇವತ್ತು ಅಕ್ಷಯ ದಿನದ ಪವಿತ್ರ ದಿನ. ದೇಶದಲ್ಲಿ ಕೃಷಿಕರು ಹಸುವಿನ ಪೂಜೆ ನೆರವೇರಿಸಿ ವರ್ಷವನ್ನು ಆರಂಭಿಸುತ್ತಾರೆ. ಇವತ್ತು ಬಸವಣ್ಣನವರ ಜಯಂತಿ ಕೂಡ. ಪ್ರಜಾತಂತ್ರದ ಸ್ಪಷ್ಟ ಉದಾಹರಣೆಯನ್ನು ಅನುಭವ ಮಂಟಪದ ಮೂಲಕ ಬಸವಣ್ಣ ಬೋಧಿಸಿದ್ದಾರೆ. ಯುವಕರು ಏನು ಬೇಕಾದರೂ ಓದಲಿ, ಜೊತೆಗೆ ಬಸವಣ್ಣನವರ ವಚನಗಳನ್ನೂ ಓದಬೇಕು. ಆಗ, ಜೀವನದಲ್ಲಿ ಯಾವುದೇ ಸಮಸ್ಯೆ ಎದುರಾಗದು’ ಎಂದರು.

ಮುಖ್ಯಮಂತ್ರಿ ‌ಬಸವರಾಜ ಬೊಮ್ಮಾಯಿ‌ ಮಾತನಾಡಿ, ‘ಹೊಸ ರಾಷ್ಟ್ರೀಯ ಶಿಕ್ಷಣ ನೀತಿ‌ಯನ್ನು ಮೋದಿ ಜಾರಿಗೆ ತಂದಿದ್ದಾರೆ. ಕೆಜಿಯಿಂದ ಪಿಜಿವರೆಗೂ ಕ್ರಾಂತಿಕಾರಿ ಬದಲಾವಣೆ ಆಗಲಿದೆ. ಬದಲಾವಣೆ ಮಾಡುವಾಗ ವಿರೋಧಗಳು ಸಹಜ. ಆದರೆ, ಕಾಲ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ಹೊಸ ಶಿಕ್ಷಣ ನೀತಿ ಒಪ್ಪಿಕೊಂಡು, ಬದಲಾವಣೆಯತ್ತ ಹೊರಟಿರುವ ಮೊದಲ ಸಂಸ್ಥೆ ನೃಪತುಂಗ ವಿಶ್ವವಿದ್ಯಾಲಯ. ಬದಲಾವಣೆಯ ದೊಡ್ಡ ಹರಿಕಾರರು ನೃಪತುಂಗ. ಹೀಗಾಗಿ, ಅದೇ ಹೆಸರಿನಲ್ಲಿ ವಿಶ್ವವಿದ್ಯಾಲಯ ಸ್ಥಾಪನೆ ಆಗಿದೆ’ ಎಂದರು.

‘ಎಜುಕೇಷನ್‌, ಎಂಪ್ಲಾಯಿಮೆಂಟ್‌, ಎಂಪವರ್‌ಮೆಂಟ್‌ ಈ ಮೂರೂ ‘ಇ’ಗಳು ಬಹಳ ಮುಖ್ಯ. ಬದಲಾವಣೆಯ ಹರಿಕಾರರು ನೀವು ‌ಕೂಡ ಆಗಬೇಕು. ನಿಮ್ಮ ಶ್ರಮ ಕೂಡ ಬಹಳ ಮುಖ್ಯ’ ಎಂದು ವಿದ್ಯಾರ್ಥಿಗಳಿಗೆ ಮುಖ್ಯಮಂತ್ರಿ ಕಿವಿಮಾತು ಹೇಳಿದರು.

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಷಿ, ಗೃಹ ಸಚಿವ ಆರಗ ಜ್ಞಾನೇಂದ್ರ, ಉನ್ನತ ಶಿಕ್ಷಣ ಸಚಿವ ಡಾ.ಸಿ. ಎನ್ ಅಶ್ವತ್ಥ ನಾರಾಯಣ, ಸಂಸದ ಪಿ.ಸಿ. ಮೋಹನ್‌, ಡಿಜಿಪಿ ಪ್ರವೀಣ ಸೂದ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT