ಶುಕ್ರವಾರ, ಏಪ್ರಿಲ್ 16, 2021
31 °C
ಅರಣ್ಯದಂಚಿನಲ್ಲಿ ತೀವ್ರಗೊಂಡ ವನ್ಯಜೀವಿ ಹಾವಳಿ: ಆತಂಕದಲ್ಲಿ ದಿನ ದೂಡತ್ತಿರುವ ಜನತೆ

ಕುಗ್ಗಿದ ಅರಣ್ಯ: ಹೆಚ್ಚಿದ ವನ್ಯಜೀವಿ ಸಂಖ್ಯೆ

ವಿ.ಸೋಮಣ್ಣ Updated:

ಅಕ್ಷರ ಗಾತ್ರ : | |

ಗೋಣಿಕೊಪ್ಪಲು: ದಕ್ಷಿಣ ಕೊಡಗಿನಲ್ಲಿ ವನ್ಯಜೀವಿಗಳ ಹಾವಳಿ ಅತಿಯಾಗಿದೆ. ಐದು ವರ್ಷಗಳಿಂದ ಈಚೆಗೆ ಹೆಚ್ಚಾಗಿರುವ ಕಾಡುಪ್ರಾಣಿಗಳ ಉಪಟಳದಿಂದ ಇಲ್ಲಿನ ಜನರು ಬೇಸತ್ತು ಹೋಗಿದ್ದಾರೆ. ಒಂದು ಕಡೆ ಕಾಡಾನೆ ದಾಳಿ, ಮತ್ತೊಂದು ಕಡೆ ಹುಲಿ ಹಾವಳಿ, ಇನ್ನೊಂದು ಕಡೆ ಕಾಡುಕೋಣ ಮತ್ತು ಕರಡಿಗಳ ಕಾಟ.

ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಅಂಚಿನ ಜನರು ನೂರಾರು ವರ್ಷಗಳಿಂದಲೂ ಅರಣ್ಯದ ಪ್ರಾಣಿಗಳೊಂದಿಗೆ ಬದುಕು ಸಾಗಿಸುತ್ತಾ ಬಂದಿದ್ದಾರೆ. ಹತ್ತಾರು ವರ್ಷಗಳ ಹಿಂದೆ ಗದ್ದೆಯಲ್ಲಿನ ಭತ್ತದ ಕೃಷಿಗೆ ಕಾಡಾನೆಗಳು ಬಂದರೆ ಅವುಗಳನ್ನು ಜನರು ಕೂಗಿ ಓಡಿಸುತ್ತಿದ್ದರು. ಮರದ ಮೇಲೆ ಅಟ್ಟಣಿಗೆ ನಿರ್ಮಿಸಿಕೊಂಡು ಕಾವಲು ಕಾಯುತ್ತಿದ್ದರು. ಆದರೆ, ಈಗ ಕಾಲ ಬದಲಾಗಿದೆ. ಅರಣ್ಯದಲ್ಲಿ ಪ್ರಾಣಿಗಳ ಸಂಖ್ಯೆ ಹೆಚ್ಚಾಗಿದೆ. ಅರಣ್ಯ ಪ್ರದೇಶ ಕ್ಷೀಣಿಸಿದೆ. ಕೃಷಿಯನ್ನು ಕಾಪಾಡಿಕೊಳ್ಳಲು ಕಾವಲು ಕಾಯಲು ಜನರೂ ಇಲ್ಲವಾಗಿದ್ದಾರೆ.

ಅರಣ್ಯ ವ್ಯಾಪ್ತಿ ಕ್ಷೀಣ: ಕೊಡಗು ಮತ್ತು ಮೈಸೂರು ಜಿಲ್ಲೆ ವ್ಯಾಪ್ತಿಗೆ ಒಳಪಟ್ಟಿರುವ ನಾಗರಹೊಳೆ ಅರಣ್ಯ ಪ್ರದೇಶ ಕೇವಲ 2 ಸಾವಿರ ಎಕರೆ ಪ್ರದೇಶವನ್ನು ಒಳಗೊಂಡಿದೆ. ಅರಣ್ಯ ನಾಲ್ಕು ದಿಕ್ಕಿನಲ್ಲಿಯೂ ಕೃಷಿ ಭೂಮಿಗಳಿವೆ. ಜನರ ಓಡಾಟವಿದೆ. ಮಧ್ಯದಲ್ಲಿ ಇರುವ ಒಂದಷ್ಟು ಅರಣ್ಯದಲ್ಲಿ ವನ್ಯಜೀವಿಗಳು ಬದುಕುಬೇಕಾದ ಅನಿವಾರ್ಯತೆ ಇದೆ. ಅರಣ್ಯದ ಅಂಚಿನಲ್ಲಿರುವ ಪ್ರದೇಶವನ್ನು ಬಫರ್‌ ಜೋನ್ ಎಂದು ಕರೆಯಲಾಗುತ್ತದೆ. ಅರಣ್ಯದಂಚಿನ 10 ಕಿ.ಮೀ ವ್ಯಾಪ್ತಿ ಒಳಗೆ ಕಾಡು ಪ್ರಾಣಿಗಳು ಕಾಣಿಸಿಕೊಳ್ಳುವುದು ಸಹಜ. ಇವುಗಳನ್ನು ಮರಳಿ ಕಾಡಿಗಟ್ಟಿ ಬೆಳೆ ರಕ್ಷಿಸಿಕೊಳ್ಳುವುದಕ್ಕಾಗಿಯೇ ಹಿಂದೆ ಜನರು ಕಾವಲು ಕಾಯುತ್ತಿದ್ದರು.

ಹಿಂದೆ ಕಾಡಾನೆಗಳಿದ್ದರೂ ಹುಲಿಗಳ ಹಾವಳಿ ಇಷ್ಟೊಂದು ಹೆಚ್ಚಿರಲಿಲ್ಲ. 20 ವರ್ಷಗಳ ಹಿಂದೆ ಬಾಳೆಲೆ ಕಾರ್ಮಾಡು ಹಾಡಿಯೊಂದರಲ್ಲಿ ಬಹಿರ್ದೆಸೆಗೆ ಹೋಗಿದ್ದ ಬುಡಕಟ್ಟು ವ್ಯಕ್ತಿಯೊಬ್ಬರನ್ನು ಹುಲಿ ತಿಂದು ಹಾಕಿತ್ತು. ಅದು ಅರಣ್ಯದ ಅಂಚಿನಲ್ಲಿ ನಡೆದ ಈ ಘಟನೆಯನ್ನು ಬಿಟ್ಟರೆ ಇತ್ತೀಚಿನ ದಿನಗಳವರೆಗೂ ಮತ್ತೆ ಸಂಭವಿಸಿರಲಿಲ್ಲ. ಸಾಮಾನ್ಯವಾಗಿ ಹುಲಿಗಳು ಮನುಷ್ಯರ ಮೇಲೆ ದಾಳಿ ಮಾಡುವುದು ಬಹಳ ಅಪರೂಪ ಎಂಬ ಮಾತು ವನ್ಯಜೀವಿ ತಜ್ಞ ಕುಂಞಗಡ ಬೋಸ್ ಮಾದಪ್ಪ ಅವರದ್ದು.

ಆದರೆ, ಇದೀಗ ದಕ್ಷಿಣ ಕೊಡಗಿನ ಶ್ರೀಮಂಗಲ ಭಾಗದಲ್ಲಿ ನಡೆಯುತ್ತಿರುವ ಹುಲಿ ದಾಳಿಗೆ ಒಂದು ವಾರದಲ್ಲಿ ಮೂರು ಜೀವಗಳು ಬಲಿಯಾಗಿವೆ. ವಾಸ್ತವವಾಗಿ ಹುಲಿ ಮನುಷ್ಯರನ್ನು ಬೇಟೆಯಾಡಲು ಬಂದುದಲ್ಲ. ಹಸಿದ ಹುಲಿ ಪ್ರಾಣಿಗಳನ್ನು ಹುಡುಕಿಕೊಂಡು ಕಾಫಿ ತೋಟದಲ್ಲಿ ಅಲೆದಾಡುವಾಗ ಎದುರಿಗೆ ಸಿಕ್ಕಿದ ಮನುಷ್ಯನ ಮೇಲೆ ಎರಗಿದೆ ಎಂದು ಹುಲಿ ವನ್ಯಜೀವಿ ಪ್ರಿಯರ ವಾದ.

ಕಾಫಿ ತೋಟದಲ್ಲಿ ಕಾರ್ಮಿಕರಿಗೆ ಭಯ

ಏನೇ ಆದರೂ ಹುಲಿ ದಾಳಿಯಿಂದ ಈ ಭಾಗದ ಜನರು ಅಕ್ಷರಶಃ ನಲುಗಿ ಹೋಗಿದ್ದಾರೆ. ಕಾಫಿ ತೋಟದಲ್ಲಿ ಕೆಲಸಗಳು ಸ್ಥಗಿತಗೊಂಡಿವೆ. ಮಾರ್ಚ್ ತಿಂಗಳ ಅವಧಿ ಕಾಫಿ ತೋಟಕ್ಕೆ ನೀರು ಹಾಯಿಸುವ ಸಂದರ್ಭ. ಹಗಲು ರಾತ್ರಿ ಎನ್ನದೇ ತೋಟದಲ್ಲಿ ಅಳವಡಿಸಿರುವ, ಸ್ಪಿಂಕ್ಲರ್ ಫೈಪ್‌ಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಬದಲಾಯಿಸುವಾಗ ತೋಟದ ಮಾಲೀಕರು ಮತ್ತು ಕಾರ್ಮಿಕರು ತೋಟದ ಒಳಗೆ ಇರುತ್ತಾರೆ. ರಾತ್ರಿ ವೇಳೆ ಪಂಪ್‌ಸೆಟ್‌ ವಿದ್ಯುತ್ ಕೊಡುವುದರಿಂದ ಈ ವೇಳೆಯಲ್ಲಿ ಬೆಳೆಗಾರರೂ ಮಲಗುವುದೇ ಇಲ್ಲ.

ಇಂತಹ ಸಂದರ್ಭದಲ್ಲಿ ಹೆಚ್ಚಿರುವ ಹುಲಿ ದಾಳಿಗೆ ರಾತ್ರಿ ವೇಳೆ ಹೋಗಲಿ, ಹಗಲಿನ ವೇಳೆಯಲ್ಲಿಯೂ ಜನತೆ ಕಾಫಿ ತೋಟದತ್ತ ತೆರಳಲು ಭಯಪಡುತ್ತಿದ್ದಾರೆ. ದಕ್ಷಿಣದ ಕುಟ್ಟ, ಶ್ರೀಮಂಗಲ, ಮಂಚಳ್ಳಿ, ನಾಲ್ಕೇರಿ, ಕಾನೂರು, ನಿಟ್ಟೂರು, ಕಾರ್ಮಾಡು, ಬಾಳೆಲೆ, ದೇವನೂರು, ತಿತಿಮತಿ, ಮಲ್ದಾರಿಯಿಂದ ಹಿಡಿದು ಉತ್ತರದ ದುಬಾರೆ, ನಂಜರಾಯಪಟ್ಟಣದವರೆಗೂ ನಾಗರಹೊಳೆ ಅರಣ್ಯ ವ್ಯಾಪಿಸಿಕೊಂಡಿದೆ. ಈ ಭಾಗದಲ್ಲಿ ಕಾಡಾನೆಗಳ ಹಾವಳಿ ತೀವ್ರಗೊಂಡಿದೆ.

ಕಾಡಾನೆಗಳು ಈಚಿನ ದಿನಗಳಲ್ಲಿ ಪಟ್ಟಣದಲ್ಲಿಯೂ ಕಾಣಿಸಿಕೊಳ್ಳುತ್ತಿವೆ. ಮೂರು ದಿನಗಳ ಹಿಂದೆ ವಿರಾಜಪಟ್ಟಣದ ಜನಸಂದಣಿ ಪ್ರದೇಶ ಕರಡದಲ್ಲಿ ಕಾಡಾನೆಯೊಂದು ಓಮ್ನಿ ಕಾರನ್ನು ಹಗಲಿನ ವೇಳೆಯಲ್ಲಿಯೇ ದಾಳಿ ನಡೆಸಿ ಹಾನಿ ಮಾಡಿತ್ತು.

ತೀವ್ರಗೊಂಡ ಹೋರಾಟ: ವನ್ಯಜೀವಿಗಳ ನಿಯಂತ್ರಣಕ್ಕಾಗಿ ರೈತ ಸಂಘಟನೆ ಮತ್ತು ವಿವಿಧ ಸಾರ್ವಜನಿಕ ಸಂಘ –ಸಂಸ್ಥೆಗಳವರು 25 ದಿನಗಳಿಂದ ಅರಣ್ಯ ಇಲಾಖೆ ವಿರುದ್ಧ ತೀವ್ರ ಹೋರಾಟ ನಡೆಸುತ್ತಿದ್ದಾರೆ. ಹುಲಿ ಸೆರೆಗೆ ಒತ್ತಾಯಿಸಿ, ಧರಣಿ ಕುಳಿತಿರುವ ಸಾರ್ವಜನಿಕರ ಆಸು ಪಾಸಿನಲ್ಲಿಯೇ ಹುಲಿ ಓಡಾಡುತ್ತಿದೆ. ಮಂಗಳವಾರ 10 ಕಿ.ಮೀ. ದೂರದ ಬಾಳೆಲೆ ಕೊಟ್ಟಗೇರಿಯಲ್ಲಿ ಜಾನುವಾರುವನ್ನು ಬಲಿತೆಗೆದುಕೊಂಡಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು