ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಗಿಣಿ ಬಿಜೆಪಿಯವರೋ ಅಲ್ಲವೋ? ಬಿಜೆಪಿ–ಕಾಂಗ್ರೆಸ್‌ ನಡುವೆ ಕುತೂಹಲದ ಚರ್ಚೆ

Last Updated 6 ಸೆಪ್ಟೆಂಬರ್ 2020, 18:11 IST
ಅಕ್ಷರ ಗಾತ್ರ

ಬೆಂಗಳೂರು: ಡ್ರಗ್ಸ್‌ ಜಾಲದಲ್ಲಿ ಸಿಲುಕಿರುವ ನಟಿ ರಾಗಿಣಿ ದ್ವಿವೇದಿ ಅವರ ರಾಜಕೀಯ ಮೂಲ ಈಗ ರಾಜ್ಯದಲ್ಲಿ ತೀವ್ರ ಚರ್ಚೆಯಾಗುತ್ತಿದೆ. ಅವರು ಬಿಜೆಪಿ ಪರ ಪ್ರಚಾರ ನಡೆಸುತ್ತಿರುವ ವಿಡಿಯೊಗಳು ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗುತ್ತಿವೆ. ಈ ಮಧ್ಯೆ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ರಾಗಿಣಿ ರಾಜಕೀಯದ ಹಿನ್ನೆಲೆಯ ಕುರಿತು ಕುತೂಹಲದ ಚರ್ಚೆ ನಡೆದಿದೆ.

‘ನಟಿ ರಾಗಿಣಿ ಬಿಜೆಪಿಯವರಲ್ಲ’

ಬೆಂಗಳೂರು: ‘ಡ್ರಗ್‌ ಪ್ರಕರಣದಲ್ಲಿ ಬಂಧಿತರಾಗಿರುವ ಚಿತ್ರನಟಿ ರಾಗಿಣಿ ದ್ವಿವೇದಿ ಬಿಜೆಪಿಯವರಲ್ಲ. 2019ರ ವಿಧಾನಸಭಾ ಉಪ ಚುನಾವಣೆ ಸಮಯದಲ್ಲಿ ಅವರು ಸ್ವಯಂಪ್ರೇರಿತರಾಗಿ ಪಕ್ಷದ ಪರ ಪ್ರಚಾರ ನಡೆಸಿದ್ದರು’ ಎಂದರು ಬಿಜೆಪಿ ರಾಜ್ಯ ಘಟಕದ ವಕ್ತಾರ ಗಣೇಶ್‌ ಕಾರ್ಣಿಕ್‌ ತಿಳಿಸಿದ್ದಾರೆ.

ರಾಗಿಣಿ ಬಂಧನ ಪ್ರಕರಣ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಸಮಾಜದ ವಿವಿಧ ಸ್ತರದ ನೂರಾರು ಖ್ಯಾತನಾಮರು 2019ರ ಉಪ ಚುನಾವಣೆ ಸಮಯದಲ್ಲಿ ಪಕ್ಷದ ಪರ ಪ್ರಚಾರ ನಡೆಸಿದ್ದರು. ಚಿತ್ರನಟಿ ರಾಗಿಣಿ ದ್ವಿವೇದಿ ಅವರಲ್ಲಿ ಒಬ್ಬರಾಗಿರಬಹುದು’ ಎಂದು ಸ್ಪಷ್ಟಪಡಿಸಿದ್ದಾರೆ.

‘ರಾಗಿಣಿ ಬಿಜೆಪಿ ಸದಸ್ಯರಲ್ಲ. ಪಕ್ಷವು ಅವರಿಗೆ ಚುನಾವಣೆಯಲ್ಲಿ ಯಾವುದೇ ಜವಾಬ್ದಾರಿ ವಹಿಸಿರಲಿಲ್ಲ. ತಾವಾಗಿಯೇ ಅವರು ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ಅವರ ವೈಯಕ್ತಿಕ ಅಥವಾ ವೃತ್ತಿ ಜೀವನದ ಚಟುವಟಿಕೆಗಳಿಗೆ ಬಿಜೆಪಿ ಹೊಣೆಯಾಗುವುದಿಲ್ಲ’ ಎಂದು ತಿಳಿಸಿದ್ದಾರೆ.

‘ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಉತ್ತರ ನೀಡುವ ಅಗತ್ಯವಿಲ್ಲ. ಈ ಘಟನೆಗೂ ನಮಗೂ ಸಂಬಂಧವಿಲ್ಲ. ಈ ಪ್ರಕರಣದಿಂದ ಪಕ್ಷವು ಅಂತರ ಕಾಯ್ದುಕೊಳ್ಳಲಿದೆ’ ಎಂದು ಕಾರ್ಣಿಕ್‌ ಹೇಳಿದ್ದಾರೆ.

‘ಯಾವುದೇ ವ್ಯಕ್ತಿಯು ಯಾವುದೇ ಸ್ವರೂಪದಲ್ಲಿ ಸಮಾಜಘಾತುಕಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದನ್ನು ಬಿಜೆಪಿ ವಿರೋಧಿಸುತ್ತದೆ. ಪಕ್ಷವು ಎಂದಿಗೂ ಅಂತಹಚಟುವಟಿಕೆಗಳಿಗೆ ಬೆಂಬಲ ನೀಡುವುದಿಲ್ಲ’ ಎಂದು ತಿಳಿಸಿದ್ದಾರೆ.

‘ರಾಗಿಣಿ ಬಿಜೆಪಿ ರಾಯಭಾರಿ‘

ಮೈಸೂರು: ‘ಚಲನಚಿತ್ರ ನಟಿ ರಾಗಿಣಿ ದ್ವಿವೇದಿ ಬಿಜೆಪಿಯ ರಾಯಭಾರಿ’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌ ಭಾನುವಾರ ಇಲ್ಲಿ ದೂರಿದರು.

‘2019ರ ಲೋಕಸಭಾ ಚುನಾವಣೆಯಲ್ಲಿ ಸಚಿವ ಸಿ.ಟಿ.ರವಿ ಅವರ ವಿಧಾನಸಭಾ ಕ್ಷೇತ್ರ ಚಿಕ್ಕಮಗಳೂರಿನಲ್ಲೇ ರಾಗಿಣಿ ಬಿಜೆಪಿ ಪರ ಪ್ರಚಾರ ನಡೆಸಿದ್ದಾರೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ, ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಜೊತೆಯೂ ರಾಗಿಣಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದಾರೆ’ ಎಂದ ಲಕ್ಷ್ಮಣ್, ಕೆಲವು ಛಾಯಾಚಿತ್ರಗಳನ್ನು ಪ್ರದರ್ಶಿಸಿದರು.

‘ಡ್ರಗ್‌‌ ದಂಧೆಗೆ ಸಂಬಂಧಿಸಿದಂತೆ ಇಂದ್ರಜಿತ್ ಲಂಕೇಶ್‌ ಅವರು 15 ಸಿನಿಮಾ ನಟ–ನಟಿಯರ ಹೆಸರನ್ನು ಪೊಲೀಸರ ಬಳಿ ಉಲ್ಲೇಖಿಸಿದ್ದಾರೆ. ಇವರಲ್ಲಿ ಬಹುತೇಕರು ಬಿಜೆಪಿ ಜೊತೆ ನಂಟು ಹೊಂದಿದವರೇ ಆಗಿದ್ದಾರೆ’ ಎಂದು ಆರೋಪಿಸಿದರು.

‘ರಾಗಿಣಿ ಹೆಸರನ್ನಷ್ಟೇ ಪ್ರಸ್ತಾಪಿಸಲಾಗಿದೆ. ಉಳಿದವರನ್ನು ರಕ್ಷಿಸಲಾಗುತ್ತಿದೆ. ಈ ದಂಧೆಯಲ್ಲಿ ಯಾರ‍್ಯಾರು ಭಾಗಿಯಾಗಿದ್ದಾರೆ ಎಂಬುದನ್ನು ಇಂದ್ರಜಿತ್ ಸಹ ಬಹಿರಂಗಪಡಿಸುತ್ತಿಲ್ಲ’ ಎಂದರು.

‘ತನ್ನ ವೈಫಲ್ಯ ಮುಚ್ಚಿಕೊಳ್ಳಲು ಸರ್ಕಾರ ಡ್ರಗ್‌‌ ದಂಧೆ ಹಿಂದೆ ಬಿದ್ದಿತು. ಇದೀಗ ತಾನೇ ಮುಜುಗರಕ್ಕೀಡಾಗಿದೆ’ ಎಂದು ವಾಗ್ದಾಳಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT