ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ ಹೊಸ್ತಿಲಲ್ಲೇ ಐಟಿ, ಇಡಿ, ಸಿಬಿಐ ದಾಳಿ

Last Updated 5 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ಕೇಂದ್ರೀಯ ತನಿಖಾ ಸಂಸ್ಥೆಯಾದ ಸಿಬಿಐ ‘ಆಡಳಿತ ಪಕ್ಷದ ಅಸ್ತ್ರ’ವಾಗಿರುತ್ತದೆ ಎಂಬ ಆರೋಪ ತುಂಬ ಹಿಂದಿನದ್ದು. ವಿರೋಧ ಪಕ್ಷದ ಸ್ಥಾನದಲ್ಲಿ ಯಾರೇ ಇದ್ದರೂ ಈ ಆರೋಪವನ್ನು ಒಂದಲ್ಲ ಒಂದುಬಾರಿ ಮಾಡಿಯೇ ಇರುತ್ತಾರೆ. ಸಿಬಿಐ ಮಾತ್ರವಲ್ಲ ಜಾರಿ ನಿರ್ದೇಶನಾಲಯ ಹಾಗೂ ಆದಾಯ ತೆರಿಗೆ ಇಲಾಖೆಯೂ ಇಂಥ ಆರೋಪಗಳನ್ನು ಎದುರಿಸುತ್ತಾ ಬಂದಿದೆ. ಈ ಸಂಸ್ಥೆಗಳು ನಡೆಸುವ ಕೆಲವು ಶೋಧಗಳ ಸಮಯ–ಸಂದರ್ಭವು ಈ ಆರೋಪಕ್ಕೆ ಪುಷ್ಟಿನೀಡುವಂತೆ ಇರುತ್ತದೆ ಎಂಬುದು ಕಾಕತಾಳೀಯವೂ ಆಗಿರಬಹುದು.

ಬೆಂಗಳೂರು: 2017ರಿಂದ ಈಚೆಗೆ ಕರ್ನಾಟಕದಲ್ಲಿ ಚುನಾವಣೆಗಳು ಘೋಷಣೆಯಾದಾಗಲೆಲ್ಲ ಆದಾಯ ತೆರಿಗೆ (ಐಟಿ) ದಾಳಿಗಳು ನಡೆಯುತ್ತಿವೆ. ಈ ಬಾರಿ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಪ್ರಕ್ರಿಯೆ ನಡೆಯುತ್ತಿರುವಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರನ್ನು ಗುರಿಯಾಗಿಸಿ ದಾಳಿ ನಡೆದಿದೆ.

2017ರಲ್ಲಿ ಗುಜರಾತ್‌ನಿಂದ ರಾಜ್ಯಸಭೆಗೆ ಚುನಾವಣೆ ನಡೆಯುತ್ತಿದ್ದಾಗಲೂ ಶಿವಕುಮಾರ್‌ ಅವರನ್ನು ಗುರಿಯಾಗಿಸಿ ಐ.ಟಿ ದಾಳಿ ನಡೆದಿತ್ತು. 2018ರ ವಿಧಾನಸಭೆ ಚುನಾವಣೆ, 2019ರ ಲೋಕಸಭೆ ಚುನಾವಣೆ, 2019ರ ಡಿಸೆಂಬರ್‌ನಲ್ಲಿ 15 ಕ್ಷೇತ್ರಗಳ ಉಪ ಚುನಾವಣೆ ವೇಳೆಯೂ ಆದಾಯ ತೆರಿಗೆ ಇಲಾಖೆಯಿಂದ ಸರಣಿ ದಾಳಿಗಳು ನಡೆದಿದ್ದವು.

ಚುನಾವಣೆಯಲ್ಲಿ ವಿವಿಧ ಪಕ್ಷಗಳ ನೇತೃತ್ವ ವಹಿಸಿದ್ದವರ ಆಪ್ತ ವಲಯದಲ್ಲಿದ್ದವರು, ಅಭ್ಯರ್ಥಿಗಳು, ವಿವಿಧ ರಾಜಕೀಯ ಪಕ್ಷಗಳ ಜತೆ ನಿಕಟ ನಂಟು ಹೊಂದಿದ್ದ ಗುತ್ತಿಗೆದಾರರ ಮನೆ, ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆಯ ಗೋವಾ– ಕರ್ನಾಟಕ ವಿಭಾಗದ ಅಧಿಕಾರಿಗಳು ದಾಳಿ ನಡೆಸಿದ್ದರು. ದಾಳಿ ವೇಳೆ‍ ಪತ್ತೆಯಾದ ಹಣ, ಆಸ್ತಿ, ಬೇನಾಮಿ ವ್ಯವಹಾರಗಳ ಕುರಿತು ಜಾರಿ ನಿರ್ದೇಶನಾಲಯವೂ ತನಿಖೆ ಮುಂದುವರಿಸುತ್ತಿತ್ತು.

ಅಭ್ಯರ್ಥಿಗಳಿಗೆ ದಿಗ್ಬಂಧನ:2018ರ ವಿಧಾನಸಭಾ ಚುನಾವಣೆ ವೇಳೆ ರಾಜ್ಯದ 34 ಕಡೆಗಳಲ್ಲಿ ಐಟಿಯು ಶೋಧಗಳನ್ನು ನಡೆಸಿತ್ತು. ಕಾಂಗ್ರೆಸ್‌ ಮುಖಂಡರು ಮತ್ತು ಆ ಪಕ್ಷದ ಜೊತೆ ನಂಟು ಹೊಂದಿದ್ದ 22 ಮಂದಿ, ಜೆಡಿಎಸ್‌ನ ನಾಲ್ವರು ಹಾಗೂ ಬಿಜೆಪಿಯ ಆರು ಮಂದಿಗೆ ಸೇರಿದ ಮನೆ, ಆಸ್ತಿಗಳ ಮೇಲೆ ಆ ಸಮಯದಲ್ಲಿ ದಾಳಿ ನಡೆದಿತ್ತು.

ಸಚಿವರಾಗಿದ್ದ ಬಿ. ರಮಾನಾಥ ರೈ, ಆನೇಕಲ್‌ ಶಾಸಕ ಬಿ. ಶಿವಣ್ಣ, ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಭೀಮಣ್ಣ ನಾಯ್ಕ, ಆಗ ಶಾಸಕರಾಗಿದ್ದ ಸತೀಶ್‌ ಸೈಲ್‌, ಅಶೋಕ್‌ ಖೇಣಿ ಸೇರಿದಂತೆ ಹಲವರ ಮನೆಗಳಲ್ಲಿ ಐ.ಟಿ ಅಧಿಕಾರಿಗಳು ಶೋಧ ನಡೆಸಿದ್ದರು. ಭೀಮಣ್ಣ ನಾಯ್ಕ ಸೇರಿದಂತೆ ಕೆಲವು ಅಭ್ಯರ್ಥಿಗಳ ಸತತ ವಿಚಾರಣೆ ನಡೆಸಿದ್ದಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು, ಚುನಾವಣಾ ಪ್ರಚಾರದಲ್ಲಿ ಭಾಗವಹಿಸುವುದನ್ನೂ ತಡೆದಿದ್ದರು.

ಲೋಕಸಭಾ ಚುನಾವಣೆಯಲ್ಲೂ ಸಕ್ರಿಯ:2019ರ ಲೋಕಸಭಾ ಚುನಾವಣೆ ವೇಳೆಯಲ್ಲೂ ಆದಾಯ ತೆರಿಗೆ ಅಧಿಕಾರಿಗಳು ಕರ್ನಾಟಕದಲ್ಲಿ ದೊಡ್ಡ ಪ್ರಮಾಣದಲ್ಲಿ ದಾಳಿಗಳನ್ನು ನಡೆಸಿದ್ದರು. ಈ ಅವಧಿಯಲ್ಲಿ ರಾಜ್ಯದಲ್ಲಿ 46 ದಾಳಿಗಳು ನಡೆದಿದ್ದವು. ಜೆಡಿಎಸ್‌ ಜೊತೆ ನಂಟು ಹೊಂದಿದ್ದವರ ಮೇಲೆ 22, ಕಾಂಗ್ರೆಸ್‌ ಜತೆ ಸಂಪರ್ಕವಿದ್ದವರ ಮೇಲೆ 16 ಹಾಗೂ ಬಿಜೆಪಿ ಜತೆ ಗುರುತಿಸಿಕೊಂಡಿದ್ದವರ ಮೇಲೆ ಆರು ದಾಳಿಗಳು ನಡೆದಿದ್ದವು. ಯಾವ ಪಕ್ಷದ ಜತೆಗೂ ಸಂಬಂಧವಿಲ್ಲದ ಇಬ್ಬರ ಮೇಲೂ ಆದಾಯ ತೆರಿಗೆ ದಾಳಿ ನಡೆದಿತ್ತು. ಜೆಡಿಎಸ್‌– ಕಾಂಗ್ರೆಸ್‌ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ. ಕುಮಾರಸ್ವಾಮಿ, ಸಚಿವರಾಗಿದ್ದ ಎಚ್‌.ಡಿ. ರೇವಣ್ಣ, ಡಿ.ಸಿ. ತಮ್ಮಣ್ಣ, ಸಿ.ಎಸ್‌. ಪುಟ್ಟರಾಜು ಅವರ ಬೆಂಬಲಿಗರು, ನಿಕಟವರ್ತಿಗಳನ್ನು ಕೇಂದ್ರೀಕರಿಸಿ ಹೆಚ್ಚಿನ ದಾಳಿಗಳು ನಡೆದಿದ್ದವು. ಸಂಸದರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರ ಆಪ್ತರೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ಎದುರಿಸಿದ್ದರು.

2019ರ ಮೇ ತಿಂಗಳಿನಲ್ಲಿ ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಕುಸುಮಾ ಶಿವಳ್ಳಿ ಅವರ ಬೆಂಬಲಿಗರ ಮೇಲೂ ಐ.ಟಿ ದಾಳಿ ನಡೆದಿತ್ತು. 2019ರ ಡಿಸೆಂಬರ್‌ನಲ್ಲಿ ನಡೆದ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಸಮಯದಲ್ಲಿ ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಕೆ.ಬಿ. ಕೋಳಿವಾಡ ಸೇರಿದಂತೆ ಹಲವರ ಮನೆಗಳ ಮೇಲೆ ಆದಾಯ ತೆರಿಗೆ ದಾಳಿ ನಡೆದಿತ್ತು.

ಡಿಕೆಶಿ ಮೇಲೆ ಮೂರನೇ ದಾಳಿ

ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ನಾಯಕ ಅಹ್ಮದ್‌ ಪಟೇಲ್‌ ಅವರ ಗೆಲುವು ಖಚಿತಪಡಿಸಲು, 2017ರ ಆಗಸ್ಟ್‌ನಲ್ಲಿ ಗುಜರಾತ್‌ನ ಕಾಂಗ್ರೆಸ್‌ ಶಾಸಕರನ್ನು ಕರೆತಂದು ಕೆಲವು ದಿನಗಳ ಕಾಲ ಬಿಡದಿಯ ಈಗಲ್‌ಟನ್‌ ರೆಸಾರ್ಟ್‌ನಲ್ಲಿ ಇರಿಸಲಾಗಿತ್ತು. ಈ ಕಾರ್ಯಾಚರಣೆಯು ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ನಡೆದಿತ್ತು. ಆಗಲೇ ಶಿವಕುಮಾರ್‌, ಸಂಸದ ಡಿ.ಕೆ. ಸುರೇಶ್‌ ಸೇರಿದಂತೆ ಹಲವರ ಮೇಲೆ ಐ.ಟಿ ದಾಳಿ ನಡೆದಿತ್ತು.

ಅದೇ ಪ್ರಕರಣದ ಮುಂದುವರಿದ ಭಾಗವಾಗಿ 2019ರ ಸೆಪ್ಟೆಂಬರ್‌ನಲ್ಲಿ ಶಿವಕುಮಾರ್‌ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದರು. ಆಗಲೇ, 15 ಕ್ಷೇತ್ರಗಳ ಉಪ ಚುನಾವಣೆಗೆ ತಯಾರಿ ಆರಂಭವಾಗಿತ್ತು. ಅದೇ ಪ್ರಕರಣದ ತನಿಖೆಯ ಮುಂದಿನ ಹಂತವಾಗಿ ಈಗ ಶಿವಕುಮಾರ್‌ ಮೇಲೆ ಸಿಬಿಐ ದಾಳಿ ನಡೆದಿದೆ ಎಂದು ಸಿಬಿಐ ಅಧಿಕಾರಿಗಳು ಪ್ರತಿಪಾದಿಸಿದ್ದಾರೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT