ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದಾಯ ಮಾಹಿತಿ ಮುಚ್ಚಿಟ್ಟ ಆರೋಪ: 12 ವೈದ್ಯ ಕಾಲೇಜುಗಳ ಮೇಲೆ ಐಟಿ ದಾಳಿ

ತೆರಿಗೆ ವಂಚನೆ
Last Updated 17 ಫೆಬ್ರುವರಿ 2021, 21:32 IST
ಅಕ್ಷರ ಗಾತ್ರ

ಬೆಂಗಳೂರು: ತೆರಿಗೆ ವಂಚನೆ ಮತ್ತು ಆದಾಯ ಮಾಹಿತಿ ಮುಚ್ಚಿಟ್ಟ ಆರೋಪಕ್ಕೆ ಸಂಬಂಧಿಸಿದಂತೆ ಬೆಂಗಳೂರು, ತುಮಕೂರು, ದಾವಣೆಗೆರೆ ಮತ್ತು ಮಂಗಳೂರಿನ 12 ವೈದ್ಯಕೀಯ ಕಾಲೇಜುಗಳು ಹಾಗೂ ಆಸ್ಪತ್ರೆಗಳ ಮೇಲೆ ಬುಧವಾರ ದಾಳಿ ನಡೆಸಿರುವ ಆದಾಯ ತೆರಿಗೆ (ಐ.ಟಿ) ಇಲಾಖೆ ಅಧಿಕಾರಿಗಳು, ವ್ಯಾಪಕ ಶೋಧ ನಡೆಸಿದ್ದಾರೆ.

ಮಂಗಳೂರಿನ ಎ.ಜೆ. ವೈದ್ಯಕೀಯ ಕಾಲೇಜು, ಯೇನೆಪೋಯ ವೈದ್ಯಕೀಯ ಕಾಲೇಜು, ಕಣಚೂರು ವೈದ್ಯಕೀಯ ಕಾಲೇಜು, ಶ್ರೀನಿವಾಸ ವೈದ್ಯಕೀಯ ಕಾಲೇಜು, ಬೆಂಗಳೂರಿನ ಸಪ್ತಗಿರಿ ವೈದ್ಯಕೀಯ ಕಾಲೇಜು, ಬಿಜಿಎಸ್‌ ವೈದ್ಯಕೀಯ ಕಾಲೇಜು, ದೇವನಹಳ್ಳಿಯ ಆಕಾಶ್‌ ವೈದ್ಯಕೀಯ ಕಾಲೇಜು, ತುಮಕೂರಿನ ಶ್ರೀದೇವಿ ವೈದ್ಯಕೀಯ ಕಾಲೇಜು ಹಾಗೂ ಅವುಗಳ ಆಸ್ಪತ್ರೆಗಳ ಮೇಲೆ ಐ.ಟಿ ದಾಳಿ ನಡೆದಿದೆ.

ದಾವಣಗೆರೆಯ ಶಾಮನೂರು ಶಿವಶಂಕರಪ್ಪ ಒಡೆತನದ ಎಸ್‌.ಎಸ್‌. ವೈದ್ಯಕೀಯ ಕಾಲೇಜು, ಜೆ.ಜೆ. ವೈದ್ಯಕೀಯ ಕಾಲೇಜು, ಬಾಪೂಜಿ ದಂತ ವೈದ್ಯಕೀಯ ಕಾಲೇಜು, ಕಾಲೇಜ್‌ ಆಫ್‌ ಡೆಂಟಲ್‌ ಸೈನ್ಸಸ್‌ನಲ್ಲೂ (ಸಿಒಡಿಎಸ್‌) ಐ.ಟಿ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಆದರೆ, ಸಂಸ್ಥೆಯ ಮುಖ್ಯಸ್ಥರು ಐ.ಟಿ ದಾಳಿಯನ್ನು ನಿರಾಕರಿಸಿದ್ದಾರೆ.

ಈ ಎಲ್ಲ ಕಾಲೇಜುಗಳ ಆಡಳಿತ ಮಂಡಳಿಗಳ ಕಚೇರಿಗಳು, ಆಸ್ಪತ್ರೆಗಳ ಕಚೇರಿಗಳು, ಆಡಳಿತ ಮಂಡಳಿಗಳ ಪ್ರಮುಖರ ಮನೆಗಳು, ಟ್ರಸ್ಟ್‌ ನಿರ್ದೇಶಕರ ಮನೆಗಳು ಮತ್ತು ಅವರ ನಿಕಟವರ್ತಿಗಳ ಮನೆಗಳಲ್ಲಿ ಶೋಧ ನಡೆಸಲಾಗಿದೆ. 200 ಅಧಿಕಾರಿಗಳ ತಂಡ ಬುಧವಾರ ನಸುಕಿನ ಜಾವ 4.30ಕ್ಕೆ ಶೋಧ ಆರಂಭಿಸಿದ್ದು, ತಡ ರಾತ್ರಿಯವೆರಗೂ ಕಾರ್ಯಾಚರಣೆ ಮುಂದುವರಿದಿತ್ತು.

ತುಮಕೂರಿನ ಶ್ರೀದೇವಿ ವೈದ್ಯಕೀಯ ಕಾಲೇಜಿನ ಮುಖ್ಯಸ್ಥ ಡಾ. ಹುಲಿನಾಯ್ಕರ್, ದೇವನಹಳ್ಳಿಯ ಆಕಾಶ್‌ ವೈದ್ಯಕೀಯ ಕಾಲೇಜಿನ ಮುಖ್ಯಸ್ಥ ಮುನಿರಾಜು,ಸಪ್ತಗಿರಿ ವೈದ್ಯಕೀಯ ಕಾಲೇಜಿನ ಮುಖ್ಯಸ್ಥ ದಯಾನಂದ್‌ ಅವರ ಮನೆಗಳಲ್ಲೂ ಶೋಧ ನಡೆಸಲಾಗಿದೆ. ದಾಳಿಯ ವೇಳೆ ಮೂವರೂ ಮನೆಯಲ್ಲೇ ಇದ್ದರು. ಆದಾಯ ತೆರಿಗೆ ಅಧಿಕಾರಿಗಳು ಈ ಎಲ್ಲರನ್ನೂ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತೆರಿಗೆ ವಂಚನೆ ಶಂಕೆ: ಈ ಎಲ್ಲ ವೈದ್ಯಕೀಯ ಕಾಲೇಜುಗಳು ಮತ್ತು ಆಸ್ಪತ್ರೆಗಳ ಆಡಳಿತ ಮಂಡಳಿಗಳು ನೈಜ ಆದಾಯದ ಮಾಹಿತಿಯನ್ನು ಬಹಿರಂಗಪಡಿಸದೇ ತೆರಿಗೆ ವಂಚಿಸಿರುವ ಶಂಕೆಯ ಮೇಲೆ ಐ.ಟಿ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಈ ಕಾರಣಕ್ಕಾಗಿ ಹಿಂದಿನ ವರ್ಷಗಳ ಹಣಕಾಸು ವಹಿವಾಟಿಗೆ ಸಂಬಂಧಿಸಿದ ದಾಖಲೆಗಳು ಮತ್ತು ಬಿಲ್‌ಗಳಿಗೆ ಸಂಬಂಧಿಸಿದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಕೋವಿಡ್‌ ಅವಧಿಯಲ್ಲಿ ಕೆಲವು ಆಸ್ಪತ್ರೆಗಳಲ್ಲಿ ನಿಗದಿಗಿಂತ ಹೆಚ್ಚಿನ ಬಿಲ್‌ ಪಡೆದಿರುವ ಆರೋಪಗಳಿವೆ. ಆ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ. ಕೆಲವು ಸ್ಥಳಗಳಲ್ಲಿ ಬೃಹತ್‌ ಮೊತ್ತದ ನಗದು ಪತ್ತೆಯಾಗಿದೆ. ಚಿನ್ನಾಭರಣ, ಬ್ಯಾಂಕ್‌ ದಾಖಲೆಗಳು, ಆಸ್ತಿ ಖರೀದಿ ಮತ್ತು ಹಣಕಾಸು ವಹಿವಾಟಿಗೆ ಸಂಬಂಧಿಸಿದ ದಾಖಲೆಗಳನ್ನೂ ತನಿಖಾ ತಂಡ ವಶಕ್ಕೆ ಪಡೆದಿದೆ ಎಂದು ಆದಾಯ ತೆರಿಗೆ ಇಲಾಖೆ ಮೂಲಗಳು ತಿಳಿಸಿವೆ.

ಕಾರ್ಯಾಚರಣೆ ವೇಳೆ ಬೃಹತ್‌ ಪ್ರಮಾಣದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಎಲ್ಲ ದಾಖಲೆಗಳ ಪರಿಶೀಲನೆ ಬಳಿಕವೇ ತೆರಿಗೆ ವಂಚನೆ ಕುರಿತು ನಿಖರ ಮಾಹಿತಿ ಲಭ್ಯವಾಗಲಿದೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT