ಶುಕ್ರವಾರ, ಡಿಸೆಂಬರ್ 2, 2022
20 °C
 ಅಧಿಕಾರಿಗಳಿಂದಾದ ಪ್ರಮಾದ

ರಾಜ್ಯದ ಬಸ್‌ ಟಿಕೆಟ್‌ನಲ್ಲಿ ‘ಜೈ ಮಹಾರಾಷ್ಟ್ರ’ ಮೊಹರು! ಪ್ರಯಾಣಿಕರಿಂದ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಯಡವಟ್ಟಿನಿಂದಾಗಿ ಡಂಬಳ ಮಾರ್ಗವಾಗಿ ಸಂಚರಿಸುವ ರಾಜ್ಯ ರಸ್ತೆ ಸಾರಿಗೆ ಬಸ್‌ನಲ್ಲಿ ‘ಜೈ ಮಹಾರಾಷ್ಟ್ರ’, ‘ಮಹಾರಾಷ್ಟ್ರ ರಾಜ್ಯ ಪರಿವಾಹನ್‌’ ಎಂಬ ಲಾಂಛನ ಇರುವ ಟಿಕೆಟ್‌ ಬುಧವಾರ ಹಂಚಿಕೆಯಾಗಿದೆ. ಇದಕ್ಕೆ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂಡರಗಿ ತಾಲ್ಲೂಕಿನ ಡೋಣಿ ಗ್ರಾಮದಿಂದ ಗದಗ ನಗರಕ್ಕೆ ಬರುವ ಬಸ್‌ ಟಿಕೆಟ್‌ ಮೇಲೆ ವಾ.ಕ.ರ.ಸಾ.ಸಂಸ್ಥೆ ಗದಗ ಘಟಕ ಎಂದು ಮುದ್ರಿಸಲಾಗಿದೆ. ಆದರೆ, ಆ ಟಿಕೆಟ್‌ ಮಧ್ಯಭಾಗದಲ್ಲಿ ‘ಜೈ ಮಹಾರಾಷ್ಟ್ರ’ ಎಂದು ಮುದ್ರಿಸಲಾಗಿದೆ. ಮಹಾರಾಷ್ಟ್ರ ರಾಜ್ಯ ಸಾರಿಗೆ ಮೊಹರಿನ ಟಿಕೆಟ್‌ ನೋಡಿದ ಪ್ರಯಾಣಿಕರು ‘ಇದೇನು ಮಹಾರಾಷ್ಟ್ರವೋ, ಕರ್ನಾಟಕವೋ?’ ಎಂದು ಆಕ್ರೋಶ ಹೊರಹಾಕಿದ್ದಾರೆ. ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. 

‘ಮಹಾರಾಷ್ಟ್ರ ರಸ್ತೆ ಸಾರಿಗೆ ಸಂಸ್ಥೆಯವರಿಗೆ ಇಟಿಎಂ ರೋಲ್‌ ಸರಬರಾಜು ಮಾಡುವವರೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೂ ಒದಗಿಸುತ್ತಾರೆ. ಆಕಸ್ಮಿಕವಾಗಿ ಮಹಾರಾಷ್ಟ್ರ ರಸ್ತೆ ಸಾರಿಗೆ ಸಂಸ್ಥೆಯ ಎರಡು ಬಾಕ್ಸ್‌ ಗದಗ ವಿಭಾಗಕ್ಕೆ ಬಂದಿವೆ. ಒಂದು ಬಾಕ್ಸ್‌ನಲ್ಲಿ 300 ರೋಲ್‌ಗಳಿರುತ್ತವೆ. ಒಟ್ಟು 600 ರೋಲ್‌ಗಳ ಪೈಕಿ 70 ರೋಣ ಡಿಪೋಗೆ, 60 ರೋಲ್‌ಗಳು ಗದಗ ಡಿಪೋಗೆ ಹಂಚಿಕೆಯಾಗಿವೆ. ರೋಲ್‌ಗಳನ್ನು ಹಂಚಿಕೆ ಮಾಡುವ ಮುನ್ನ ಗುಮಾಸ್ತರು ಗಮನಿಸಬೇಕಿತ್ತು. ಜತೆಗೆ ನಿರ್ವಾಹಕರು ಟಿಕೆಟ್‌ ಕೊಡುವಾಗಲಾದರೂ ನೋಡಬೇಕಿತ್ತು. ಆದರೆ, ಇಬ್ಬರ ಕಣ್ತಪ್ಪಿನಿಂದಾಗಿ ಮಹಾರಾಷ್ಟ್ರ ರಸ್ತೆ ಸಾರಿಗೆ ಸಂಸ್ಥೆಯ ರೋಲ್‌ನಲ್ಲಿ ಟಿಕೆಟ್‌ ಹಂಚಿಕೆಯಾಗಿದೆ’ ಎಂದು ಗದಗ ವಿಭಾಗೀಯ ನಿಯಂತ್ರಣಾಧಿಕಾರಿ ಜಿ.ಸೀನಯ್ಯ ‘ಪ್ರಜಾವಾಣಿ’ಗೆ ಸ್ಷಷ್ಟನೆ ನೀಡಿದ್ದಾರೆ.

‘ಮಹಾರಾಷ್ಟ್ರ ಮೊಹರು ಇರುವ ಎಲ್ಲ ರೋಲ್‌ಗಳನ್ನು ಹಿಂಪಡೆಯುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕರ್ತವ್ಯ ಲೋಪ ಎಸಗಿದವರ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದು ಅವರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು