ಶನಿವಾರ, ಏಪ್ರಿಲ್ 1, 2023
28 °C
 ಭಾರತದ ಸಾಂಸ್ಕೃತಿಕ ಶ್ರೀಮಂತಿಕೆಗೆ ತಲೆದೂಗಿದ ಮಲೇಷ್ಯಾ ತಂಡ

ಬಂಧುತ್ವ ಬೆಸೆದ ಜಾಂಬೂರಿ | ಭಾರತದ ಸಾಂಸ್ಕೃತಿಕ ಶ್ರೀಮಂತಿಕೆಗೆ ತಲೆದೂಗಿದ ಮಲೇಷ್ಯಾ

ಪ್ರವೀಣ್‌ ಕುಮಾರ್‌ ಪಿ.ವಿ Updated:

ಅಕ್ಷರ ಗಾತ್ರ : | |

Prajavani

ಮೂಡುಬಿದಿರೆ: ಇಲ್ಲಿನ ಹಾಡು ನೃತ್ಯ, ಕುಣಿತ ಹಾಗೂ ಆಚರಣೆಗಳಲ್ಲಿ ತಮ್ಮ ದೇಶದ ಸಂಸ್ಕೃತಿಯ ಛಾಯೆ, ಮಲೇಷ್ಯಾದಿಂದ ಬಂದಿರುವ ಸ್ಕೌಟ್ಸ್‌ ಮತ್ತು ಗೈಡ್ಸ್ ತಂಡದ ಸದಸ್ಯರಿಗೆ ಕಂಡಿದೆ.

ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಧಾರ್ಮಿಕ ಹಾಗೂ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿದ ಬಳಿಕ, ತಮ್ಮ ದೇಶಕ್ಕೂ ಈ ನೆಲಕ್ಕೂ ಬಂಧುತ್ವ ಇರುವುದು ಅವರಿಗೆ ಮತ್ತಷ್ಟು ಮನದಟ್ಟಾಗಿದೆ. ಇಲ್ಲಿ ನಡೆಯುತ್ತಿರುವ ಸ್ಕೌಟ್ಸ್ ಮತ್ತು ಗೈಡ್ಸ್ ಅಂತರರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ಮಲೇಷ್ಯಾ ಮತ್ತು ಭಾರತದ ನಡುವಿನ ನಂಟನ್ನು ಮತ್ತಷ್ಟು ಗಟ್ಟಿಗೊಳಿಸಿದೆ.

ಮಲೇಷ್ಯಾ ತಂಡದ ಸದಸ್ಯರು ಈ ಜಾಂಬೂರಿಯ ಅನುಭವವನ್ನು ‘ಪ್ರಜಾವಾಣಿ’ ಜೊತೆ ಹಂಚಿಕೊಂಡರು. ‘ಎಲ್ಲಾ ಯುವಜನರಿಗೂ ಜಾಂಬೂರಿ ಅಮೋಘ ಅನುಭವ. ಸಂಸ್ಕೃತಿ ವಿನಿಮಯಕ್ಕೆ ಹಾಗೂ ಸ್ನೇಹದ ಬೆಸುಗೆ ಬೆಸೆಯಲು ಇದೊಂದು ಉತ್ತಮ ಅವಕಾಶ. ವಿಶ್ವ ಶಾಂತಿಗೆ ಕೊಡುಗೆ ನೀಡುವ ದಿಸೆಯಲ್ಲಿ ಇದೊಂದು ಮನೋಹರ ಪಯಣ. ಈ ಜಾಂಬೂರಿ ನಮಗೆ ಭಾರತ ದರ್ಶನ ಮಾಡಿಸಿತು. ಕಲೆ, ಸಂಗೀತ, ರಂಗು ರಂಗಿನ ಉಡುಗೆ ತೊಡುಗೆ, ವೈವಿಧ್ಯಮಯ ಆಹಾರ, ಬಗೆಬಗೆಯ ನೋಟಗಳ ಮೂಲಕ ನಾವು ಪಡೆದ ಅನುಭವ ಮಾತಿಗೆ ನಿಲುಕದ್ದು. ಜಾಂಬೂರಿಯ ಒಂದೊಂದು ಕಾರ್ಯಕ್ರಮವೂ ಅಮೋಘವಾಗಿತ್ತು. ಅನೇಕ ಅದ್ಭುತಗಳಿಗೆ ನಾವಿಲ್ಲಿ ಸಾಕ್ಷಿಯಾದೆವು’ ಎನ್ನುತ್ತಾರೆ ಮಲೇಷ್ಯಾದ ಚೆಂಪಕ ಎಮಲಿನ್ ಫಾಹಮಿನ್.

ಅವರು ವರ್ಲ್ಡ್ ಅಸೋಸಿಯೇಷನ್ ಆಫ್ ಗರ್ಲ್ಸ್ ಗೈಡ್ಸ್ ಆಂಡ್ ಗರ್ಲ್ ಸ್ಕೌಟ್ಸ್‌ನ ಏಷ್ಯಾ ಪೆಸಿಫಿಕ್ ರೀಜನ್ ಕಮಿಟಿಯ ಮುಖ್ಯಸ್ಥರು. ಮಲೇಷ್ಯಾದಿಂದ 12 ವಿದ್ಯಾರ್ಥಿಗಳು ಹಾಗೂ 5 ಪ್ರತಿನಿಧಿಗಳನ್ನು ಒಳಗೊಂಡ ತಂಡ ಈ ಜಾಂಬೂರಿಯಲ್ಲಿ ಭಾಗವಹಿಸಿದೆ.

ಜಾಂಬೂರಿಯ ನಿಗದಿತ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರ ಜೊತೆಗೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳಿಗೂ ತಂಡವು ಭೇಟಿ ನೀಡಿದೆ. ‘ನಮಗೆ ಮಂಗಳೂರಿನ ಸೇಂಟ್ ಅಲೋಶಿಯಸ್ ಚರ್ಚ್, ಕುದ್ರೋಳಿಯ ಗೋಕರ್ಣನಾಥ ಕ್ಷೇತ್ರ, ಉಳ್ಳಾಲದ ಸಯ್ಯದ್ ಮದನಿ ದರ್ಗಾ, ಧರ್ಮಸ್ಥಳದ ಬಾಹುಬಲಿ ಮೂರ್ತಿಗಳನ್ನು ನೋಡುವ ಅಪೂರ್ವ ಅವಕಾಶವನ್ನು ಸಂಘಟಕರು ಕಲ್ಪಿಸಿದ್ದಾರೆ. ಇಲ್ಲಿನ ಧಾರ್ಮಿಕ ವೈವಿಧ್ಯ ಹಾಗೂ ಸಾಂಸ್ಕೃತಿಕ ಸಮೃದ್ಧಿ ಬೇರೆಲ್ಲೂ ಕಾಣಸಿಗದು’ ಎನ್ನುತ್ತಾರೆ ಚೆಂಪಕ.

‘ನಮ್ಮ ಕಲ್ಪನೆಗೂ ಮೀರಿದ ಭಾರತದ ಹೊಸತೊಂದು ಲೋಕವನ್ನು ಕಂಡು ಅನುಭವಿಸಿದ ಅಪೂರ್ವ ಅನುಭವವನ್ನು ಮರೆಯಲು ಸಾಧ್ಯವಿಲ್ಲ’ ಎಂದರು.

‘50 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದ ಈ ಅಂತರರಾಷ್ಟ್ರೀಯ ಜಾಂಬೂರಿಯಲ್ಲಿ ಭಾಗವಹಿಸಿದ ನಾವು ಪುಣ್ಯವಂತರು. ನಮ್ಮ ಪಾಲಿಗೆ ಇದೊಂದು ವಿಶಿಷ್ಟ ಅನುಭವ. ಇದೊಂದು ಪ್ರಾಯೋಗಿಕ ಜಾಂಬೂರಿಯಾಗಿತ್ತು. ಭಾರತದಾದ್ಯಂತದ ಸಂಸ್ಕೃತಿಯ ಬಹುಮುಖಗಳನ್ನು ಪರಿಚಯಿಸಿದ ಈ ಮಹಾ ಮೇಳ ಅವಿಸ್ಮರಣೀಯ ನೆನಪುಗಳ ಮೂಟೆಯನ್ನೇ ಕಟ್ಟಿಕೊಟ್ಟಿದೆ’ ಎನ್ನುತ್ತಾರೆ ಮಲೇಷ್ಯಾದ ಗರ್ಲ್ ಗೈಡ್ಸ್ ಅಸೋಸಿಯೇಷನ್‌ನ ಚೀಫ್ ಕಮಿಷನರ್ ಡೇಟೊ ಜಯಧೇವಿ ಸುಬ್ರಹ್ಮಣ್ಯಂ.

ಅವರ ಪೂರ್ವಜರು ಶ್ರೀಲಂಕಾದವರು. ‘ಭಾರತ, ಶ್ರೀಲಂಕಾ ಮತ್ತು ಮಲೇಷ್ಯಾದ ಸಂಸ್ಕೃತಿ ಮತ್ತು ಆಚರಣೆಗಳಲ್ಲಿ ಅನೇಕ ಸಾಮ್ಯಗಳಿವೆ. ಮಲೇಷ್ಯಾದಲ್ಲಿ ಭಾರತ, ಚೀನಾ, ಶ್ರೀಲಂಕಾ ಮೂಲದವರೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ನಮ್ಮಲ್ಲಿ ನೆಲೆಸಿರುವ ಭಾರತೀಯರ ಸಂಸ್ಕೃತಿ ಆಚರಣೆಗಳು ರೂಪಾಂತರ ಹೊಂದಿವೆ. ಈ ಜಾಂಬೂರಿ ಸಂಸ್ಕೃತಿಯ ಬೇರುಗಳ ಬಂಧವನ್ನು ಮನಗಾಣುವ ಅವಕಾಶವನ್ನು ಒದಗಿಸಿದೆ’ ಎಂದು ಡೇಟೊ ಜಯಧೇವಿ ಸುಬ್ರಹ್ಮಣ್ಯಂ ತಿಳಿಸಿದರು.

ಈ ಜಾಂಬೂರಿ ನನ್ನ ಕಣ್ಣು ತೆರೆಯುವಂತೆ ಮಾಡಿತು. ಭಾರತೀಯರು ತಮ್ಮ ಸಂಸ್ಕೃತಿಯನ್ನು ಎಷ್ಟು ಪ್ರೀತಿಸುತ್ತಾರೆ, ಎಷ್ಟು ಸಂಭ್ರಮಿಸುತ್ತಾರೆ ಎಂದು ಕಣ್ಣಾರೆ ಕಂಡೆ. ಭಾರತದ ಸ್ಮಾರಕಗಳು, ಸಂಪ್ರದಾಯಗಳ ಶ್ರೀಮಂತಿಕೆಯನ್ನು ಉಣಬಡಿಸಿದ ಈ ಜಾಂಬೂರಿ ಕನಸಿನ ಲೋಕಕ್ಕೆ ಕರೆದೊಯ್ಯಿತು.
– ಇಲಿಯನ್ನೆ, ಮಲೇಷ್ಯಾದ ವಿದ್ಯಾರ್ಥಿನಿ

ನಾನು ಅಂತರರಾಷ್ಟ್ರೀಯ ಜಾಂಬೂರಿಯಲ್ಲಿ ಭಾಗವಹಿಸಿದ್ದು ಇದೇ ಮೊದಲು. ಭಾರತದ ಮೇಲೆ ಮತ್ತಷ್ಟು ಪ್ರೀತಿ ಮೂಡಿದೆ. ಇಲ್ಲಿನ ಸಂಸ್ಕೃತಿ, ಸಂಪ್ರದಾಯಗಳು ನಿಜಕ್ಕೂ ಮೋಡಿ ಮಾಡುವಂತಿವೆ.
– ರೈಗಾ, ಮಲೇಷ್ಯಾದ ವಿದ್ಯಾರ್ಥಿನಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು