ಸೋಮವಾರ, ಸೆಪ್ಟೆಂಬರ್ 26, 2022
24 °C

ಸ್ವಾತಂತ್ರ್ಯ ಹೋರಾಟಗಾರಿರುವ ಜಾಹೀರಾತಲ್ಲಿ ನೆಹರೂಗೆ ಕೋಕ್‌: ತೀವ್ರಗೊಂಡ ಆಕ್ರೋಶ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: 'ಮನೆ ಮನೆಯ ಮೇಲೆ ತ್ರಿವರ್ಣ ಧ್ವಜ' ಅಭಿಯಾನದ ಅಂಗವಾಗಿ ಮಾಧ್ಯಮಗಳಿಗೆ ರಾಜ್ಯ ಸರ್ಕಾರವು ನೀಡಿರುವ ಜಾಹೀರಾತು ವಿವಾದಕ್ಕೆ ಕಾರಣವಾಗಿದೆ. ಸಿಎಂ ಕುರ್ಚಿ ಉಳಿಸಿಕೊಳ್ಳುವುದಕ್ಕೆ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ಜವಾಹರಲಾಲ್‌ ನೆಹರೂ ಹೆಸರನ್ನು ಕೈಬಿಡುವಷ್ಟು ಕೀಳುಮಟ್ಟಕ್ಕೆ ಇಳಿಯಬಾರದಿತ್ತು ಎಂದು ಕಾಂಗ್ರೆಸ್‌ ಮುಖಂಡರು ಕಿಡಿಕಾರಿದ್ದಾರೆ.

ಆಗಸ್ಟ್‌ 14ರ ಪತ್ರಿಕೆಗಳ ಮುಖಪುಟದಲ್ಲಿ ಮಹಾತ್ಮ ಗಾಂಧಿ ಆದಿಯಾಗಿ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರ ಫೋಟೊ ಮತ್ತು ಸಂಕ್ಷಿಪ್ತ ವಿವರಗಳಿರುವ ಜಾಹೀರಾತು ಪ್ರಕಟಣೆಯನ್ನು ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನೀಡಿದೆ. ಆದರೆ ಈ ಪಟ್ಟಿಯಲ್ಲಿ ಭಾರತದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ಅವರ ಪರಿಚಯವನ್ನು ಕೈಬಿಡಲಾಗಿದೆ. ಇದಕ್ಕೆ ನೆಹರೂ ಅನುಯಾಯಿಗಳು ಹಾಗೂ ಸಾರ್ವಜನಿಕ ವಲಯದಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಆದರೆ ಜಾಹೀರಾತಿನಲ್ಲಿ ಪ್ರಕಟಿಸಿರುವ ಸ್ವಾತಂತ್ರ್ಯ ಹೋರಾಟಗಾರರ ರೇಖಾಚಿತ್ರದಲ್ಲಿ ಜವಾಹರಲಾಲ್‌ ನೆಹರೂ ಅವರ ಚಿತ್ರವೂ ಒಳಗೊಂಡಿರುವುದನ್ನು ಬೊಟ್ಟು ಮಾಡಿ ರಾಜ್ಯ ಸರ್ಕಾರದ ನಡೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸಲಾಗುತ್ತಿದೆ. ಉದ್ದೇಶಪೂರ್ವಕವಾಗಿ ನೆಹರೂ ಅವರನ್ನು ಪಟ್ಟಿಯಿಂದ ಹೊರಗಿಟ್ಟವರಿಗೆ, ರೇಖಾಚಿತ್ರದಲ್ಲಿರುವ ನೆಹರೂ ಅವರನ್ನು ಹೊರಗಿಡಲು ಸಾಧ್ಯವಾಗಿಲ್ಲ. ಎಷ್ಟೇ ಶ್ರಮ ತೆಗೆದುಕೊಂಡರೂ ನೆಹರೂ ಅವರನ್ನು ಜನಮಾನಸದಿಂದ ಮರೆಮಾಚಲು ಸಾಧ್ಯವಿಲ್ಲ ಎಂದು ಹರಿಹಾಯ್ದಿದ್ದಾರೆ.

ಬಿಜೆಪಿ ಹೈಕಮಾಂಡ್‌ ಮತ್ತು ಆರ್‌ಎಸ್‌ಎಸ್‌ಅನ್ನು ಮೆಚ್ಚಿಸುವುದಕ್ಕೆ ಜಾಹೀರಾತಿನಲ್ಲಿ ನೆಹರೂ ಅವರ ಚಿತ್ರವನ್ನು ಕೈಬಿಡಲಾಗಿದೆಯೇ ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ. ಮೇರು ನಾಯಕ ನೆಹರೂ ಅವರ ಚಿತ್ರವನ್ನು ಕೈಬಿಡಲು ಕಾರಣವೇನು? ತಮ್ಮ ದೆಹಲಿ ದೊರೆಗಳನ್ನು ಮೆಚ್ಚಿಸಲೇ? ಬ್ರಿಟಿಷರೊಂದಿಗೆ ಕೈಜೋಡಿಸಿದ್ದ ಸಂಘಪರಿವಾರವನ್ನು ಮೆಚ್ಚಿಸಲೇ? ಕ್ಷಮೆ ಕೇಳಿದ ಸಾವರ್ಕರ್‌ಗೆ ಇರುವ ಜಾಗ ಹೋರಾಟಗಾರ ನೆಹರೂರವರಿಗೆ ಇಲ್ಲವೇಕೆ? ಅಥವಾ ದೇಶದ ಸ್ವಾತಂತ್ರದ ಬಗ್ಗೆಯೇ ಅಸಹನೆಯೇ? ಎಂದು ಟ್ವೀಟ್‌ನಲ್ಲಿ ಸಿಎಂ ಬೊಮ್ಮಾಯಿ ಅವರನ್ನು ತರಾಟೆಗೆ ತೆಗೆದುಕೊಂಡಿದೆ.

ಮುಖ್ಯಮಂತ್ರಿ ಹುದ್ದೆಯನ್ನು ಉಳಿಸಿಕೊಳ್ಳಲು ನೆಹರೂ ಹೆಸರನ್ನು ಕೈಬಿಡುವಷ್ಟು ಕೀಳು ಮಟ್ಟಕ್ಕೆ, ಈ ಪರಿಯ ಗುಲಾಮಗಿರಿಗೆ ಇಳಿಯಬಾರದಿತ್ತು ಎಂದು ಸಿಎಂ ಬೊಮ್ಮಾಯಿ ವಿರುದ್ಧ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಸರಣಿ ಟ್ವೀಟ್‌ ಮಾಡಿರುವ ಸಿದ್ದರಾಮಯ್ಯ, ಪಂಡಿತ ಜವಾಹರಲಾಲ್ ನೆಹರೂ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ ತಮ್ಮ ಬದುಕಿನ 9 ವರ್ಷಗಳನ್ನು ಜೈಲಿನಲ್ಲಿ ಕಳೆದವರು ಎನ್ನುವುದು ನೆನಪಿರಲಿ. ಅವರು ನಿಮ್ಮ ವಿ.ಡಿ.ಸಾವರ್ಕರ್ ಅವರಂತೆ ಜೈಲಿನಿಂದ ಬಿಡುಗಡೆಗೊಳ್ಳಲು ಬ್ರಿಟಿಷರ ಕಾಲು ಹಿಡಿದು ಕ್ಷಮೆ ಕೋರಿದ ಹೇಡಿ ಅಲ್ಲ ಎಂದಿದ್ದಾರೆ.

ಸಾರ್ವಜನಿಕರ ಹಣದಲ್ಲಿ ದ್ವೇಷ ತೀರಿಸಿಕೊಳ್ಳುವ ಚಾಳಿಯನ್ನು ಬಿಜೆಪಿ ಮುಂದುವರಿಸಿದೆ. ಸ್ವಾತಂತ್ರ್ಯ ಚಳುವಳಿಯಲ್ಲಿ ಪಾಲ್ಗೊಂಡಿದ್ದಕ್ಕಾಗಿ ಪಂ. ಜವಾಹರ್‌ಲಾಲ್‌ ನೆಹರೂ ಅವರನ್ನು ಬ್ರಿಟಿಷರು 9 ಬಾರಿ ಬಂಧಿಸಿ 3,259 ದಿನ ಜೈಲಿನಲ್ಲಿರಿಸಿದ್ದರು. ರಾಜಕೀಯ ದುರುದ್ದೇಶದಿಂದ ನೆಹರೂ ಅವರ ಹೆಸರನ್ನು ಜಾಹೀರಾತಿನಿಂದ ಕೈ ಬಿಟ್ಟಿರುವುದು ಅಕ್ಷಮ್ಯ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೆಹರೂ ಅವರನ್ನು ಅಪಮಾನಿಸುವ ಹಾಗೂ ಸರ್ಕಾರಿ ಜಾಹೀರಾತಿನಿಂದ ಕೈಬಿಡುವುದರಿಂದ ಇತಿಹಾಸ ಎಂದಿಗೂ ಅವರನ್ನು ಮರೆಯುವುದಿಲ್ಲ. ಆದರೆ ಚರಿತ್ರೆಯು ನಿಮ್ಮ ಸಣ್ಣತನವನ್ನು ನೆನಪಿಡುತ್ತದೆ. ಬ್ರಿಟಿಷರಿಗೆ ಕ್ಷಮಾಪಣಾ ಪತ್ರ ಬರೆದು ಜೈಲಿನಿಂದ ಹೊರಬಂದ ಸಾವರ್ಕರ್‌ ಸ್ವಾತಂತ್ರ್ಯ ಹೋರಾಟಗಾರನಾದರೆ, ನಾಲ್ಕು ಆಂಗ್ಲೋ ಮೈಸೂರು ಯುದ್ಧ ಮಾಡಿ ತನ್ನ ಮಕ್ಕಳನ್ನು ಬ್ರಿಟಿಷರಿಗೆ ಒತ್ತೆ ಇಟ್ಟು ಸಮರದಲ್ಲಿ ಮಡಿದ ಟಿಪ್ಪು ಸುಲ್ತಾನ್ ಸ್ವಾತಂತ್ರ್ಯ ಹೋರಾಟಗಾರ ಏಕಲ್ಲ? ಎಂದು ಡಿ.ಕೆ.ಶಿವಕುಮಾರ್‌ ಪ್ರಶ್ನಿಸಿದ್ದಾರೆ.

ಜವಾಹರಲಾಲ್‌ ನೆಹರೂ ಅವರಿಗೆ ಸಮನಾದ ಹೋರಾಟಗಾರರೆಂದು ಹೇಳಿಕೊಳ್ಳಲು ಬಿಜೆಪಿಗೆ ಯಾರೂ ಇಲ್ಲ. ಇದು ಅವರ ಅಸಹನೆಗೆ ಕಾರಣ. ಬಿಜೆಪಿಗರು ಎಷ್ಟೇ ಕೆಳಮಟ್ಟಕ್ಕಿಳಿದರೂ ನೆಹರೂ ವ್ಯಕ್ತಿತ್ವಕ್ಕೆ ಯಾವುದೆ ಕುಂದು ಬರುವುದಿಲ್ಲ ಎಂದು ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

ಬೊಮ್ಮಾಯಿ ಸರ್ಕಾರದ ಜಾಹೀರಾತಿನ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್‌ ಸಂಸದ ಜೈರಾಮ್‌ ರಮೇಶ್‌, ಬಸವರಾಜ ಬೊಮ್ಮಾಯಿ ಅವರ ತಂದೆ ಎಸ್‌.ಆರ್‌.ಬೊಮ್ಮಾಯಿ ಹಾಗೂ ಅವರ ತಂದೆಯ ರಾಜಕೀಯ ಗುರು ಎಂ.ಎನ್‌.ರಾಯ್‌ ಅವರಿಗೆ ಎಸಗಿದ ಅಪಮಾನವಿದು ಎಂದಿದ್ದಾರೆ.

ಸುರ್ಜೆವಾಲಾ ಆಕ್ರೋಶ
‘ನೆಹರೂ ಅವರ ಮೇಲಿನ ಕೊನೆಯಿಲ್ಲದ ದ್ವೇಷವು ಅದರ ಉತ್ತುಂಗವನ್ನು ತಲುಪಿದೆ. ಬೊಮ್ಮಾಯಿ ಸರ್ಕಾರ ತನ್ನ ಅಸ್ತಿತ್ವವನ್ನೇ ನಿರಾಕರಿಸುವ ಮೂಲಕ ಅತ್ಯಂತ ಕೆಳಮಟ್ಟಕ್ಕೆ ಇಳಿದಿದೆ. ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವದಂದು, ಇದು ಇಂದಿನ ಆಡಳಿತಗಾರರ ಪಾತ್ರ ಮತ್ತು ಕೆಟ್ಟ ಆಲೋಚನಾ ಪ್ರಕ್ರಿಯೆಯನ್ನು ಪ್ರತಿಬಿಂಬಿಸುತ್ತದೆ’ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಟ್ವೀಟ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‌ರಾಜ್ಯಸಭಾ ಸದಸ್ಯ ಜೈರಾಂ ರಮೇಶ್, ‘ಮುಖ್ಯಮಂತ್ರಿ ಬೊಮ್ಮಾಯಿ ತಮ್ಮ ಕೆಲಸ ಉಳಿಸಿಕೊಳ್ಳಲು ಹತಾಶರಾದಂತೆ ಕಾಣುತ್ತಿದೆ. ನೆಹರೂ ಭಾವಚಿತ್ರ ಮರೆತಿರುವುದು ಬೊಮ್ಮಾಯಿಯವರು ತಮ್ಮ ತಂದೆ ಎಸ್.ಆರ್. ಬೊಮ್ಮಾಯಿಗೆ ಮಾಡಿದ ಅವಮಾನ. ಎಸ್.ಆರ್. ಬೊಮ್ಮಾಯಿ ಮತ್ತು ಅವರ ರಾಜಕೀಯ ಗುರು ಎಂ.ಎನ್. ರಾಯ್ ಇಬ್ಬರೂ ನೆಹರೂ ಬೆಂಬಲಿಗರಾಗಿದ್ದರು’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು