ಶುಕ್ರವಾರ, ಮಾರ್ಚ್ 31, 2023
22 °C
ಜಯದೇವ ಹೃದ್ರೋಗ ಸಂಸ್ಥೆ ನಡೆಸಿದ ಅಧ್ಯಯನದಿಂದ ದೃಢ

ಮುನ್ನೆಚ್ಚರಿಕೆ ಡೋಸ್: ಶೇ 99ರಷ್ಟು ಮಂದಿಗೆ ಪ್ರತಿಕಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್ ಲಸಿಕೆಯ ಮುನ್ನೆಚ್ಚರಿಕೆ ಡೋಸ್‌ ಬಗ್ಗೆ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಅಧ್ಯಯನ ನಡೆಸಿದ್ದು, ಮುನ್ನೆಚ್ಚರಿಕೆ ಡೋಸ್‌ ಪಡೆದ ಶೇ 99.4ರಷ್ಟು ಮಂದಿಯಲ್ಲಿ ಉತ್ತಮ ಪ್ರತಿಕಾಯ ಅಭಿವೃದ್ಧಿಯಾಗಿದೆ. 

ಕೊರೊನಾ ವೈರಾಣುವಿನ ರೂಪಾಂತರಿ ಬಿಎಫ್ 7, ಎಕ್ಸ್‌ ಬಿಬಿ 1.5 ಜಗತ್ತಿನ ವಿವಿಧೆಡೆ ಪತ್ತೆಯಾಗಿರುವುದರಿಂದ ಸಂಸ್ಥೆ ಪ್ರತಿಕಾಯದ ಬಗ್ಗೆ ಅಧ್ಯಯನ ನಡೆಸಿದೆ. ಮುನ್ನೆಚ್ಚರಿಕೆ ಡೋಸ್ ಲಸಿಕೆ ಪಡೆದ ಸಂಸ್ಥೆಯ 350 ಆರೋಗ್ಯ ಸಿಬ್ಬಂದಿಯನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಅವರಲ್ಲಿ ಬಹುತೇಕ ಎಲ್ಲರಲ್ಲಿಯೂ ಪ್ರತಿಕಾಯ ವೃದ್ಧಿಯಾಗಿರುವುದು ಅಧ್ಯಯನದಿಂದ ದೃಢಪಟ್ಟಿದೆ. 

‘ಕಳೆದ ವರ್ಷ ಮುನ್ನೆಚ್ಚರಿಕೆ ಡೋಸ್ ಪಡೆದ ಸಂಸ್ಥೆಯ ವೈದ್ಯರು, ಶುಶ್ರೂಷಕರು ಹಾಗೂ ಆರೋಗ್ಯ ಸಿಬ್ಬಂದಿಯ ಮೇಲೆ ಅಧ್ಯಯನ ನಡೆಸಲಾಯಿತು. ರಕ್ತದಲ್ಲಿನ ಪ್ರತಿಕಾಯಗಳನ್ನು ಅಳೆಯಲು ‘ಎಲಿಸಾ’ ಮಾದರಿ ಅನುಸರಿಸಲಾಗಿತ್ತು. ಅಧ್ಯಯನಕ್ಕೆ ಒಳಪಟ್ಟ 19ರಿಂದ 60 ವರ್ಷದೊಳಗಿನ, 148 ಪುರುಷರಲ್ಲಿ ಶೇ 42ರಷ್ಟು ಹಾಗೂ 202 ಮಹಿಳೆಯರಲ್ಲಿ ಶೇ 58ರಷ್ಟು ಪ್ರತಿಕಾಯ ವೃದ್ಧಿಯಾಗಿದೆ’ ಎಂದು ಸಂಸ್ಥೆ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ತಿಳಿಸಿದ್ದಾರೆ. 

4ನೇ ಡೋಸ್‌ ಅಗತ್ಯವಿಲ್ಲ: ‘ವೃದ್ಧಿಯಾಗಿರುವ ಪ್ರತಿಕಾಯಗಳು ಒಂದು ವರ್ಷಗಳ ಕಾಲ ದೇಹದಲ್ಲಿ ಸಕ್ರಿಯವಾಗಿದೆ ಎನ್ನುವುದು ಸಂತೋಷದ ಸಂಗತಿ. ಜನರಲ್ಲಿ ಗೊಂದಲ ಸೃಷ್ಟಿಸಿರುವ ನಾಲ್ಕನೇ ಡೋಸ್‌ ಅಗತ್ಯವಿಲ್ಲ. ಆದರೆ, ಕಡ್ಡಾಯವಾಗಿ ಮುನ್ನೆಚ್ಚರಿಕೆ ಡೋಸ್‌ (ಮೂರನೇ ಡೋಸ್) ಪಡೆಯಬೇಕು’ ಎಂದು ಹೇಳಿದ್ದಾರೆ. 

‘ಈ ಅಧ್ಯಯನದಿಂದ ಮುನ್ನೆಚ್ಚರಿಕೆ ಡೋಸ್ ಪಡೆದವರಲ್ಲಿ ಪ್ರತಿಕಾಯ ಎಷ್ಟು ಅವಧಿವರೆಗೆ ಉಳಿಯುತ್ತದೆ, ಮುನ್ನೆಚ್ಚರಿಕೆ ಡೋಸ್ ಎಷ್ಟು ಉಪಯುಕ್ತ ಎನ್ನುವ ಮಾಹಿತಿ ದೊರೆತಿದೆ. ಸೂಕ್ಷ್ಮ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ನವೀನ್, ಸಹ ಪ್ರಾಧ್ಯಾಪಕರಾದ ಡಾ. ನಂದಿನಿ, ಡಾ. ಕವಿತಾ ಹಾಗೂ ಪ್ರಪುಲ್ಲಾ ಕುಮಾರಿ ಅವರ ತಂಡ ಈ ಅಧ್ಯಯನ ನಡೆಸಿದ್ದಾರೆ’ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು