ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು ಜಿಲ್ಲೆ ನಿಮ್ಮಪ್ಪನ ಜಹಗೀರಾ?: ಸಿದ್ದರಾಮಯ್ಯಗೆ ಕುಮಾರಸ್ವಾಮಿ ಪ್ರಶ್ನೆ

Last Updated 22 ಜನವರಿ 2022, 11:03 IST
ಅಕ್ಷರ ಗಾತ್ರ

ಬೆಂಗಳೂರು: ತುಮಕೂರಿನಿಂದ ಜೆಡಿಎಸ್‌ ಪಕ್ಷವನ್ನು ಓಡಿಸಿ ಎನ್ನುವುದಕ್ಕೆ ತುಮಕೂರು ಜಿಲ್ಲೆಯೇನು ನಿಮ್ಮಪ್ಪನ ಜಹಗೀರಾ? ಎಂದು ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಅವರಿಗೆ ಒಬ್ಬ ನಾಯಕನನ್ನು ಸೃಷ್ಟಿಸುವ ಯೋಗ್ಯತೆ ಇಲ್ಲ. ಅವರು, ಗೆದ್ದಲು ಕಟ್ಟಿದ ಹುತ್ತಕ್ಕೆ ವಿಷಸರ್ಪ ಸೇರಿಕೊಳ್ಳುವ ಹಾಗೆ ಎಂದುಹೇಳಿರುವಕುಮಾರಸ್ವಾಮಿ, ಕಂಡೋರ ಕಷ್ಟದ ಮೇಲೆ ಅಧಿಕಾರ ಅನುಭವಿಸುವ ನೀವಾ ಜೆಡಿಎಸ್‌ ಬಗ್ಗೆ ಮಾತನಾಡುವುದು? ಎಂದು ಪ್ರಶ್ನಿಸಿದ್ದಾರೆ.

ಈ ಸಂಬಂಧ ಸರಣಿ ಟ್ವೀಟ್‌ ಮಾಡಿರುವ ಕುಮಾರಸ್ವಾಮಿ,'ತುಮಕೂರಿನಿಂದ ಜೆಡಿಎಸ್‌ ಪಕ್ಷವನ್ನು ಓಡಿಸಿ ಎನ್ನುವುದಕ್ಕೆ ತುಮಕೂರು ಜಿಲ್ಲೆಯೇನು ನಿಮ್ಮಪ್ಪನ ಜಹಗೀರಾ? ಅಥವಾ ಕಾಂಗ್ರೆಸ್‌ʼನ ಪಿತ್ರಾರ್ಜಿತ ಆಸ್ತಿಯಾ?' ಎಂದು ಏಕವಚನದಲ್ಲೇ ಪ್ರಶ್ನಿಸಿದ್ದಾರೆ. 'ಚಾಮುಂಡೇಶ್ವರಿ ಕ್ಷೇತ್ರದಿಂದ ನಿಮ್ಮನ್ನು ಜನರು ಓಡಿಸಿದ್ದನ್ನು ಮರೆತುಬಿಟ್ಟಿರಾ? ಈ ಸಲ ಬಾದಾಮಿ ಕ್ಷೇತ್ರದಿಂದಲೂ ಓಡಬೇಕಾಗುತ್ತದೆ, ಕಾಯಿರಿ' ಎಂದು ಚಾಟಿ ಬೀಸಿದ್ದಾರೆ.

'ಕಾಂಗ್ರೆಸ್‌ ಸೇರುವ ಮುನ್ನ ನೀವು ಯಾರ ಬಾಲಂಗೋಚಿ ಆಗಿದ್ದಿರಿ? ಗುರುಸ್ವಾಮಿ ಅವರೆದುರು ಸೋತುಸುಣ್ಣವಾದ ಮೇಲೆ ಅನುಗ್ರಹಕ್ಕೆ ಬಂದು ಯಾರ ಮುಂದೆ ಗಳಗಳನೆ ಅತ್ತು ರಾಜಕೀಯ ಬಿಟ್ಟು, ವಕೀಲಿ ಮಾಡುತ್ತೇನೆ ಎಂದಿರಿ ಅನ್ನುವುದು ನೆನಪಿದೆಯಾ ಸಿದ್ದರಾಮಯ್ಯ? ಆಗ ನಿಮಗೆ ಬಾಲಂಗೋಚಿತನ ನೆನಪಾಗಲಿಲ್ಲವೆ?' ಎಂದು ತಿವಿದಿದ್ದಾರೆ.

'ಪ್ರತಿಯೊಂದಕ್ಕೂ ಈ ಸರ್ಕಾರಕ್ಕೆ ಜೆಡಿಎಸ್‌ ಬೆಂಬಲ ನೀಡುತ್ತಿದೆ ಎನ್ನುವ ನಿಮ್ಮ ʼಸುಳ್ಳು ನಾಲಗೆʼ; ಅದೇ ಸರ್ಕಾರ ಬರಲು ಮೂಲ ಕಾರಣರಾದ ʼಸಿದ್ದಪುರುಷʼ ಯಾರು ಎನ್ನುವುದನ್ನು ಹೇಳಲಿಲ್ಲವೇ? ಪಕ್ಷದ್ರೋಹ, ತಾಯಿಗೆ ಮಾಡುವ ದ್ರೋಹಕ್ಕೆ ಸಮಾನ. ನಿಮ್ಮ ದ್ರೋಹ ಮುಚ್ಚಿಟ್ಟುಕೊಳ್ಳಲು ಜೆಡಿಎಸ್‌ ಜಪವಾ ಸಿದ್ದರಾಮಯ್ಯ?' ಎಂದು ಗುಡುಗಿದ್ದಾರೆ.

ಮುಂದುವರಿದು, 'ಮತ್ತೆ ಮುಖ್ಯಮಂತ್ರಿ ಆಗಬೇಕೆನ್ನುವ ದುರಾಸೆ, ಅವಕಾಶ ಸಿಗದೇನೋ ಅನ್ನುವ ಹತಾಶೆ. ಅಭ್ಯರ್ಥಿಗಳಿಲ್ಲ, ಜೆಡಿಎಸ್‌ ಬಿಟ್ಟರೆ ಗತಿ ಇಲ್ಲ ನಿಮ್ಮ ಯೋಗ್ಯತೆಗೆ. ನಮ್ಮವರನ್ನು ಹೈಜಾಕ್‌ ಮಾಡಿ ಅವರಿಗೆ ಟಿಕೆಟ್‌ ಆಮಿಷ ತೋರಿಸಿ ಮೂಲ ಕಾಂಗ್ರೆಸ್ಸಿಗರನ್ನು ಮೂಲೆಗೆ ತಳ್ಳುವ ನಿಮ್ಮ ʼಕಂತ್ರಿʼ ರಾಜಕೀಯ ಎಲ್ಲರಿಗೂ ಗೊತ್ತಿದೆ' ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ, 'ಅಕ್ಕಪಕ್ಕದವರ ತಟ್ಟೆಯಲ್ಲಿರುವುದನ್ನು ಎಗರಿಸುವುದು ಸಿದ್ಧಾಂತವೇ? ʼಆಪರೇಷನ್‌ ಹಸ್ತʼವೂ ಸಿದ್ಧಾಂತವೇ? ಆಶ್ರಯ ಕೊಟ್ಟ ಪಕ್ಷವನ್ನು, ಅಲ್ಲಿನ ಮೂಲನಿವಾಸಿಗಳನ್ನು ಮುಗಿಸುವುದೇ ಸಿದ್ಧಾಂತವೇ? ನೀವು ಜೆಡಿಎಸ್‌ ಸಿದ್ಧಾಂತದ ಬಗ್ಗೆ ಮಾತನಾಡುತ್ತೀರಿ? ನಾಚಿಕೆಯಾಗಬೇಕು ನಿಮಗೆ' ಛೇಡಿಸಿದ್ದಾರೆ.

ಹಾಗೆಯೇ, #ವಿನಾಶಕಾಲೇ_ವಿಪರೀತ_ಸುಳ್ಳು ಟ್ಯಾಗ್‌ ಬಳಸಿ, 'ಸುಳ್ಳು ನಿಮ್ಮ ರಾಜಕೀಯದ ಅಡಿಪಾಯ. ಸುಳ್ಳೇ ನಿಮ್ಮ ರಾಜಕೀಯ ಅಸ್ತಿತ್ವದ ಪ್ರತೀಕ. ಸುಳ್ಳು ಸುಳ್ಳೇ ನಿಮ್ಮ ನರಿಬುದ್ಧಿ ಅವಕಾಶವಾದಿ ರಾಜಕಾರಣ ನಿಜಸ್ವರೂಪ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಧಾನ ಪರಿಷತ್‌ನ ಮಾಜಿ ಸದಸ್ಯ ಕಾಂತರಾಜು (ಬೆಮೆಲ್ ಕಾಂತರಾಜು) ಅವರು ಜೆಡಿಎಸ್‌ ತೊರೆದು ಕಾಂಗ್ರೆಸ್‌ ಪಕ್ಷಕ್ಕೆ ಸೇರಿದ್ದರು. ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಕಾಂತರಾಜು ಅವರನ್ನು ಸ್ವಾಗತಿಸಿ ಮಾತನಾಡಿದ್ದ ಸಿದ್ದರಾಮಯ್ಯ, ‘ಜೆಡಿಎಸ್‌ನವರು ಕೇವಲ ಜಾತಿಯ ಹೆಸರು ಹೇಳಿಕೊಂಡು ರಾಜಕಾರಣ ಮಾಡುತ್ತಾರೆ. ಅವರಿಗೆ ಸಿದ್ಧಾಂತವಿಲ್ಲ. ಅದು ರಾಜಕೀಯ ಪಕ್ಷವೇ ಅಲ್ಲ. ಅವಕಾಶವಾದಿ ರಾಜಕಾರಣ ಮಾಡುವ ಜೆಡಿಎಸ್‌ ಪಕ್ಷವನ್ನು ತುಮಕೂರಿನಿಂದ ಓಡಿಸಿ’ ಎಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT