ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ಮನೆಯಿಂದ ಹೊರಬರದ ಜೆಡಿಎಸ್ ನಾಯಕರು

ಶಿರಾ ವಿಧಾನಸಭೆ ಉಪಚುನಾವಣೆ ಸಮರ ಜೋರು
Last Updated 16 ಅಕ್ಟೋಬರ್ 2020, 7:59 IST
ಅಕ್ಷರ ಗಾತ್ರ
ADVERTISEMENT
""
""

ತುಮಕೂರು: ಶಿರಾ ವಿಧಾನಸಭೆ ಉಪಚುನಾವಣೆ ಕಣ ರಂಗೇರಿದ್ದು ಘಟಾನುಘಟಿ ನಾಯಕರು ಕ್ಷೇತ್ರದ ಮೇಲೆ ಕಣ್ಣಿಟ್ಟು ಗೆಲುವಿನ ತಂತ್ರ ಹೆಣೆಯುತ್ತಿದ್ದಾರೆ. ಪ್ರಚಾರಕಾರ್ಯ ಬಿರುಸು ಪಡೆದುಕೊಂಡಿದ್ದರೂ, ಜೆಡಿಎಸ್ ನಾಯಕರು ಮಾತ್ರ ಮನೆಬಿಟ್ಟು ಹೊರ ಬರುತ್ತಿಲ್ಲ.

ಜೆಡಿಎಸ್ ರಾಜ್ಯ ಮಟ್ಟದ ನಾಯಕರು ಬಂದು ಪ್ರಚಾರ ಮಾಡಿಹೋಗಿರುವುದನ್ನು ಹೊರತುಪಡಿಸಿದರೆ, ಜಿಲ್ಲೆಯ ಶಾಸಕರು, ಮಾಜಿ ಶಾಸಕರು, ಹಿರಿಯ ಮುಖಂಡರು ಕ್ಷೇತ್ರದತ್ತ ತಲೆಹಾಕಿಲ್ಲ. ತಮ್ಮ ನಾಯಕರು ಕ್ಷೇತ್ರಕ್ಕೆ ಬಂದಾಗ ‘ಮುಖ ತೋರಿಸಿ’ ವಾಪಸಾದರೆ ಮತ್ತೆ ಕ್ಷೇತ್ರದತ್ತ ಕಾಲಿಡಲು ತಮ್ಮ ನಾಯಕರೇ ಬರಬೇಕು. ಸ್ಥಳೀಯ ಮಟ್ಟದ ಯಾವೊಬ್ಬ ನಾಯಕರೂ ಚುನಾವಣೆ ಬಗ್ಗೆ ಆಸಕ್ತಿ ವಹಿಸದಿರುವುದು ವರಿಷ್ಠರಿಗೆ ತಲೆನೋವು ಉಂಟುಮಾಡಿದೆ.

ಎಸ್‌.ಆರ್‌.ಶ್ರೀನಿವಾಸ್

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿಕ್ಷೇತ್ರದಲ್ಲಿ ಎರಡು ಬಾರಿ ಸಭೆ ನಡೆಸಿದ್ದಾರೆ. ಎಚ್.ಡಿ.ದೇವೇಗೌಡ ಅವರು ಸಹ ಚುನಾವಣೆ ಘೋಷಣೆಗೆ ಮುನ್ನ ಬಂದು ಹೋಗಿದ್ದಾರೆ. ಶಾಸಕರಾಗಿದ್ದ ಸತ್ಯನಾರಾಯಣ ಅವರ ಪತ್ನಿ ಅಮ್ಮಾಜಮ್ಮ ಪರವಾಗಿ ರಾಜ್ಯ ಘಟಕದ ಅಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ, ಮುಖಂಡ ಎಚ್.ಡಿ.ರೇವಣ್ಣ ನಾಮಪತ್ರ ಸಲ್ಲಿಸಿದರು. ಕೊರೊನಾ ಸೋಂಕಿನಿಂದಾಗಿ ಅಭ್ಯರ್ಥಿ ಪ್ರತ್ಯೇಕವಾಸದಲ್ಲಿದ್ದಾರೆ. ಕ್ಷೇತ್ರದಲ್ಲಿ ಚುನಾವಣೆ ಉಸ್ತುವಾರಿ ಯಾರು ವಹಿಸಬೇಕು, ಪ್ರಚಾರ ಮತ್ತಿತರ ಪ್ರಮುಖ ಜವಾಬ್ದಾರಿಗಳನ್ನು ಯಾರು ಕೈಗೊಳ್ಳಬೇಕು ಎಂಬ ಬಗ್ಗೆ ಈವರೆಗೂ ಸ್ಪಷ್ಟತೆ ಮೂಡಿಲ್ಲ.

ಜಿಲ್ಲೆಯ ಮಟ್ಟಿಗೆ ಪಕ್ಷದ ಹಿರಿಯರೆನಿಸಿಕೊಂಡಿರುವ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್, ಶಿರಾಗೆ ಹೊಂದಿಕೊಂಡಿರುವ ಚಿಕ್ಕನಾಯಕನಹಳ್ಳಿ ಮಾಜಿ ಶಾಸಕ ಸಿ.ಬಿ.ಸುರೇಶ್ ಬಾಬು, ಕುಣಿಗಲ್ ಮಾಜಿ ಶಾಸಕ ಡಿ.ನಾಗರಾಜಯ್ಯ ಅವರಂತಹ ಹಿರಿಯರು ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಶ್ರೀನಿವಾಸ್, ಸುರೇಶ್ ಬಾಬು ಅವರು ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದು, ನಾಯಕರು ಬಂದಾಗ ಕ್ಷೇತ್ರಕ್ಕೆ ಹೋಗಿಬರುತ್ತಿದ್ದಾರೆ. ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಸ್ವಲ್ಪ ಮಟ್ಟಿಗೆ ಪ್ರಚಾರ ನಡೆಸಿದ್ದಾರೆ. ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರು, ಕಾರ್ಯಾಧ್ಯಕ್ಷರ ಚಟುವಟಿಕೆಗಳು ಗೋಚರಿಸುತ್ತಿಲ್ಲ.

ನೆಪಮಾತ್ರ: ಶಿರಾ ಕ್ಷೇತ್ರದ ಪ್ರಮುಖ ನಾಯಕರು ಬಿಜೆಪಿ, ಕಾಂಗ್ರೆಸ್ ಸೇರಿದ್ದು, ಉಳಿದಿರುವ ಬೆರಳೆಣಿಕೆಯಷ್ಟು ನಾಯಕರೂ ಉತ್ಸಾಹ ತೋರುತ್ತಿಲ್ಲ. ನಾವೂ ಪ್ರಚಾರದಲ್ಲಿ ಇದ್ದೇವೆ ಎಂಬಂತೆ ಸುತ್ತಾಟ ನಡೆಸಿದ್ದಾರೆ. ಅಮ್ಮಾಜಮ್ಮ ಅವರು ಕೊರೊನಾ ಸೋಂಕಿನಿಂದ ಗುಣಮುಖರಾಗಿಲ್ಲ. ಅವರು ಇನ್ನೂ ಪ್ರಚಾರಕ್ಕೆ ಇಳಿದಿಲ್ಲ. ಪುತ್ರ ಸತ್ಯಪ್ರಕಾಶ್ ಸ್ವಲ್ಪ ಮಟ್ಟಿಗೆ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಚುನಾವಣೆ ಗೆಲುವಿಗೆ ಕಾರ್ಯತಂತ್ರ ರೂಪಿಸುವಷ್ಟು ಶಕ್ತರಲ್ಲ. ಅಳಿದುಳಿದಿರುವ ಸ್ಥಳೀಯ ನಾಯಕರೇ ತಮಗೆ ಬೇಕಾದ ರೀತಿಯಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಯಾರೊಬ್ಬರೂ ಚುನಾವಣೆ ನೇತೃತ್ವ ವಹಿಸಿಕೊಳ್ಳಲು ಸಿದ್ಧರಿಲ್ಲ.

ಸುರೇಶ್‌ಬಾಬು

ಸ್ಥಳೀಯ ಮಟ್ಟದ ನಾಯಕರ ಪಕ್ಷಾಂತರದಿಂದ ಪ್ರಚಾರ ಸೇರಿದಂತೆ ಚುನಾವಣೆಯ ಎಲ್ಲಾ ಉಸ್ತುವಾರಿಯನ್ನೂ ಕುಮಾರಸ್ವಾಮಿ ಅವರೇ ನೋಡಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಕ್ಷೇತ್ರದಲ್ಲಿ ಪಕ್ಷದ ಕಾರ್ಯಕರ್ತರು ಇದ್ದರೂ, ನಾಯಕತ್ವದ ಕೊರತೆ ಕಾಡುತ್ತಿದೆ. ಜೆಡಿಎಸ್ ಪರವಾಗಿ ಇರುವ ಮತಗಳನ್ನು ಕ್ರೋಡೀಕರಿಸಲು ರಾಜ್ಯ ನಾಯಕರು ಪ್ರಯಾಸಪಡುತ್ತಿದ್ದಾರೆ. ಈ ಅವಕಾಶವನ್ನು ಇತರ ಪಕ್ಷಗಳು ಚೆನ್ನಾಗಿ ಬಳಸಿಕೊಳ್ಳುತ್ತಿವೆ.

ಜೆಡಿಎಸ್ ನೆಲೆ ಉಳಿಯುವುದೆ?

ಒಂದು ಕಾಲಕ್ಕೆ ತುಮಕೂರು ಜಿಲ್ಲೆ ಜನತಾ ಪರಿವಾರದ ಭದ್ರಕೋಟೆಯಾಗಿತ್ತು. ಹಲವು ವರ್ಷಗಳ ಕಾಲ ಜೆಡಿಎಸ್‌ ನಾಯಕರು ಅಧಿಕಾರ ನಡೆಸಿದ್ದಾರೆ. 2013ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ 11 ಕ್ಷೇತ್ರಗಳಲ್ಲಿ 6ರಲ್ಲಿ ಜೆಡಿಎಸ್ ಶಾಸಕರು ಆಯ್ಕೆ ಆಗಿದ್ದರು. ಕೊರಟಗೆರೆ, ಪಾವಗಡ, ಚಿಕ್ಕನಾಯಕನಹಳ್ಳಿ, ತುರುವೇಕೆರೆ, ಗುಬ್ಬಿ, ಕುಣಿಗಲ್ ಕ್ಷೇತ್ರದಲ್ಲಿ ಪಕ್ಷದ ಶಾಸಕರು ಇದ್ದರು.

2018ರಲ್ಲಿ ನಡೆದ ವಿಧಾನಸಭೆ ಚುನಾವಣೆ ವೇಳೆಗೆ ಪಕ್ಷ ಹಿನ್ನಡೆ ಅನುಭವಿಸಿತು. 11ರಲ್ಲಿ 4 ಕ್ಷೇತ್ರಗಳಲ್ಲಷ್ಟೇ ಜೆಡಿಎಸ್ ಶಾಸಕರು ಆಯ್ಕೆಯಾದರು. ಮಧುಗಿರಿ, ಶಿರಾ, ಗುಬ್ಬಿ, ತುಮಕೂರು ಗ್ರಾಮಾಂತರದಲ್ಲಿ ಶಾಸಕರು ಆಯ್ಕೆಯಾದರು. ಕಳೆದ ವರ್ಷ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಚ್.ಡಿ.ದೇವೇಗೌಡ ಪರಾಭವಗೊಂಡಿದ್ದರು. ಶಿರಾದಿಂದ ಆಯ್ಕೆಯಾಗಿದ್ದ ಸತ್ಯನಾರಾಯಣ ನಿಧನದಿಂದ ಸದ್ಯ ಮತ್ತೊಂದು ಕ್ಷೇತ್ರ ಕಡಿಮೆಯಾಗಿದೆ. ಪ್ರಸ್ತುತ ಜೆಡಿಎಸ್ ನಾಯಕರಿಗೆ ಕ್ಷೇತ್ರ ಉಳಿಸಿಕೊಳ್ಳುವ ಸವಾಲು ಎದುರಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT