ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್ ತೊರೆಯಲು ಮುಂದಾದರೇ ಮನೋಹರ್?

‘ವಿಧಾನಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ; ವಿಧಾನಸಭಾ ಚುನಾವಣೆಯತ್ತ ದೃಷ್ಟಿ’
Last Updated 7 ನವೆಂಬರ್ 2021, 2:09 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ಚುನಾಯಿತರಾಗಿರುವ ಸಿ.ಆರ್.ಮನೋಹರ್ ಅವರ ಸದಸ್ಯತ್ವದ ಅವಧಿ 2022ರ ಜ.5ಕ್ಕೆ ಕೊನೆಗೊಳ್ಳಲಿದೆ. ಅವಧಿ ಪೂರ್ಣಕ್ಕೆ ಮೂರು ತಿಂಗಳಷ್ಟೇ ಬಾಕಿ ಇದೆ. ಈ ನಡುವೆಯೇ ಅವರು ಜೆಡಿಎಸ್‌ನಿಂದ ಒಂದು ಹೆಜ್ಜೆ ಹೊರಗೆ ಇಟ್ಟಿದ್ದಾರೆ. ಇದು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ರಾಜಕೀಯ ವಲಯದಲ್ಲಿ ಆಂತರಿಕ ಚರ್ಚೆಗೆ ಕಾರಣವಾಗಿದೆ.

ಈ ಎರಡೂ ಜಿಲ್ಲೆಗಳಲ್ಲಿ ಗಣನೀಯವಾಗಿರುವ ಬಲಿಜ ಸಮುದಾಯದ ಮೇಲೆ ಮನೋಹರ್ ಅವರಿಗೆ ಉತ್ತಮವಾದ ಹಿಡಿತವಿದೆ. ಆ ಸಮುದಾಯದ ಪ್ರಮುಖ ನಾಯಕರಾಗಿಯೂ ಅವರು ಗುರುತಿಸಿಕೊಂಡಿದ್ದಾರೆ.

2009ರಿಂದಲೂ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ರಾಜಕಾರಣದಲ್ಲಿ ಮನೋಹರ್ ಅವರ ಹೆಜ್ಜೆ ಗುರುತು ಪ್ರಬಲವಾಗಿದೆ. 2009ರ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅವರು 1.86 ಲಕ್ಷ ಮತಗಳನ್ನು ಪಡೆದಿದ್ದರು. 2018ರ ವಿಧಾನಸಭಾ ಚುನಾವಣೆಯಲ್ಲಿ ಬಾಗೇಪಲ್ಲಿ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ 38 ಸಾವಿರ ಮತಗಳನ್ನು ಪಡೆದಿದ್ದರು. ಅವಧಿ ಪೂರ್ಣಗೊಂಡ ನಂತರ ವಿಧಾನ ಪರಿಷತ್ ಚುನಾವಣೆಗೆ ಮತ್ತೆ ಸ್ಪರ್ಧೆ ಮಾಡದಿರಲು ನಿರ್ಧರಿಸಿದ್ದಾರೆ.

ವಿಧಾನ ಪರಿಷತ್‌ನ 25 ಕ್ಷೇತ್ರಗಳಿಗೆ ಡಿಸೆಂಬರ್‌ನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ರಾಜಕೀಯ ಪಕ್ಷಗಳ ನಡುವೆ ಆಂತರಿಕ ಚರ್ಚೆಗಳು ಆರಂಭವಾಗಿವೆ. ಮನೋಹರ್ ಮತ್ತೆ ಪರಿಷತ್‌ಗೆ ಸ್ಪರ್ಧೆ ಮಾಡುವುದಿಲ್ಲ ಎಂದು ನಿರ್ಧರಿಸಿದ್ದು ಜೆಡಿಎಸ್ ಹೊಸ ಅಭ್ಯರ್ಥಿಯ ಹುಡುಕಾಟಕ್ಕೆ
ಅಡಿ ಇಡಬೇಕಾಗಿದೆ.

ಇತ್ತೀಚೆಗೆ ಕೋಲಾರ ಶಾಸಕ ಶ್ರೀನಿವಾಸಗೌಡ ಅವರು ಜೆಡಿಎಸ್ ತೊರೆದಿದ್ದಾರೆ. ಕಾಂಗ್ರೆಸ್ ಸೇರುವ ಸುಳಿವು ನೀಡಿದ್ದಾರೆ. ಈಗ ಮನೋಹರ್ ಜೆಡಿಎಸ್ ಪಕ್ಷದಿಂದ ಒಂದು ಕಾಲು ಹೊರಗಿಟ್ಟಿದ್ದಾರೆ. ಕಳೆದ ಎರಡು ವರ್ಷಗಳಿಂದಲೂ ಅವರು ಜೆಡಿಎಸ್‌ನ ಕಾರ್ಯಕ್ರಮಗಳಿಂದ ದೂರವೇ ಉಳಿದಿದ್ದಾರೆ. ಇತ್ತೀಚೆಗೆ ರಾಮನಗರದಲ್ಲಿ ನಡೆದ ಜೆಡಿಎಸ್ ಕಾರ್ಯಾಗಾರಕ್ಕೆ ಅವರಿಗೆ ಆಹ್ವಾನ ನೀಡಿರಲಿಲ್ಲವಂತೆ.

ಕೋಲಾರ ಮತ್ತು ಚಿಕ್ಕಬಳ್ಳಾಪುರ ಸ್ಥಳೀಯ ಸಂಸ್ಥೆಗಳಿಂದ ಪರಿಷತ್ ಚುನಾವಣೆಯಲ್ಲಿ ಒಂದು ಸಾವಿರ ಮತಗಳ ಅಂತರದಿಂದ ಮನೋಹರ್ ಗೆಲುವು ಸಾಧಿಸಿದ್ದರು.

ಯಾವ ಕ್ಷೇತ್ರ ಯಾವ ಪಕ್ಷ: ಜೆಡಿಎಸ್‌ನಲ್ಲಿ ತಾಂತ್ರಿಕವಾಗಿರುವ ಮನೋಹರ್ ಅವರ ಮುಂದಿನ ರಾಜಕೀಯ ನಡೆ ಕುತೂಹಲಕ್ಕೂ ಕಾರಣವಾಗಿದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಎರಡೂ ಜಿಲ್ಲೆಗಳಲ್ಲಿ ರಾಜಕಾರಣವನ್ನು ನಡೆಸಿರುವ ಮನೋಹರ್, ಮುಂದಿನ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧೆಗೆ ಇಳಿಯುವರು ಎನ್ನುವ ಕುತೂಹಲ ಸಹಜವಾಗಿದೆ.

ಈ ಎರಡೂ ಜಿಲ್ಲೆಗಳಲ್ಲಿ ತಮ್ಮದೇ ಆದ ಮತದಾರರು ಮತ್ತು ಸ್ನೇಹ ಬಳಗವನ್ನು ಮನೋಹರ್ ಹೊಂದಿದ್ದಾರೆ. ಒಮ್ಮೆ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗೆ ಜಿಲ್ಲೆಯಲ್ಲಿ ಸ್ಪರ್ಧಿಸಿದ್ದ ಕಾರಣ ಕೋಲಾರಕ್ಕಿಂತ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಯೇ ಅವರ ರಾಜಕಾರಣದ ಛಾಪು ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ರಾಜಕಾರಣದಲ್ಲಿ ನಾನಾ ಚರ್ಚೆಗಳು ಗರಿಗೆದರಿವೆ.

ಚಿಕ್ಕಬಳ್ಳಾಪುರ, ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರಗಳಲ್ಲಿ ಬಲಿಜ ಸಮುದಾಯವು ಗಣನೀಯವಾಗಿದೆ. ಮನೋಹರ್ ನಡೆ ಈ ಕ್ಷೇತ್ರಗಳ ಮೇಲೂ ಒಂದಿಷ್ಟು ಪರಿಣಾಮವನ್ನು ಬೀರುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT