ಮಂಗಳವಾರ, ನವೆಂಬರ್ 30, 2021
22 °C
ಸರಣಿ ಟ್ವೀಟ್‌ ಮಾಡಿ ಪ್ರಶ್ನಿಸಿರುವ ಜೆಡಿಎಸ್ ರಾಜ್ಯ ಘಟಕ; ಬಿಜೆಪಿಯಿಂದಲೂ ತಿರುಗೇಟು

ಆರೆಸ್ಸೆಸ್‌ ಕೆಲಸ ಸೇವೆಯೋ ಹಣ ಮಾಡುವುದೋ: ಜೆಡಿಎಸ್ ಪ್ರಶ್ನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಆರೆಸ್ಸೆಸ್‌ ಅಧಿಕೃತ ಸಂಸ್ಥೆಯೇ? ಅದು ಎಲ್ಲಿ? ಯಾವಾಗ ನೋಂದಣಿ ಆಗಿದೆ? ಅದರ ಅಧಿಕೃತ ಕಚೇರಿ ಎಲ್ಲಿದೆ? ಅದರ ಕೆಲಸ ಸಮಾಜ ಸೇವೆಯೋ ಅಥವಾ ರಾಜಕೀಯವೋ? ಅಥವಾ ಹಣ ಮಾಡುವುದೋ’ ಎಂದು ಜೆಡಿಎಸ್ ರಾಜ್ಯ ಘಟಕ ಪ್ರಶ್ನಿಸಿದೆ.

ಸರಣಿ ಟ್ವೀಟ್‌ ಮಾಡಿರುವ ಜೆಡಿಎಸ್‌, ‘ಗುರುದಕ್ಷಿಣೆ ಸೇರಿದಂತೆ ದೇಶ-ವಿದೇಶಗಳಿಂದ ಕೋಟ್ಯಂತರ ರೂಪಾಯಿ ದೇಣಿಗೆ ಬರುತ್ತಿದೆ. ಅದರ ಲೆಕ್ಕವನ್ನು ಸಂಘ ಲೆಕ್ಕ ಕೊಟ್ಟಿದೆಯಾ? ಅದರ ವಹಿವಾಟನ್ನು ಪರಿಶೀಲನೆ ಮಾಡಿದ ಲೆಕ್ಕ ಪರಿಶೋಧಕರು ಯಾರು? ಶಾಲೆಗಳಲ್ಲಿ ಬಾಲ ಸ್ವಯಂ ಸೇವಕರ ಬ್ರೈನ್ ವಾಶ್ ಮಾಡುತ್ತಿರುವುದು ಸುಳ್ಳೇ’ ಎಂದೂ ಕೇಳಿದೆ.

‘ಶಿಕ್ಷಣ ಕೊಡುವ ನೆಪದಲ್ಲಿ ಮತಾಂಧತೆಯ ವಿಷಪ್ರಾಶನ ಮಾಡುತ್ತಿರುವುದು ಸುಳ್ಳಾ? ಸಂಘದ ಶಾಖೆಗಳಲ್ಲಿ ತ್ರಿಶೂಲ, ಖಡ್ಗದಂಥ ಆಯುಧಗಳನ್ನು ಇಡುವುದು ಅಕ್ರಮ. ಇದಕ್ಕೆ ಪರವಾನಗಿ ಪಡೆಯಲಾಗಿದೆಯಾ? ಎಂಬ ಪ್ರಶ್ನೆಗಳನ್ನು ಪಕ್ಷದ ನಾಯಕರಾದ ಕುಮಾರಸ್ವಾಮಿ ಕೇಳಿದ್ದರು. ಈ ಪ್ರಶ್ನೆಗಳಿಗೆ ಉತ್ತರ ಕೊಡುವ ಎದೆಗಾರಿಕೆಯನ್ನು ಬಿಜೆಪಿ ಏಕೆ ತೋರಲಿಲ್ಲ’ ಎಂದೂ ಪ್ರಶ್ನಿಸಿದೆ.

‘ಆರೆಸ್ಸೆಸ್‌ ಬಗ್ಗೆ ಕುಮಾರಸ್ವಾಮಿ ಎತ್ತಿರುವುದು ವೈಯಕ್ತಿಕ ವಿಷಯಗಳಲ್ಲ. ಆದರೆ, ಬಿಜೆಪಿ ಅವರ ವೈಯಕ್ತಿಕ ವಿಚಾರಗಳಲ್ಲಿ ಮೂಗು ತೂರಿಸಿದೆ. ಸದನದಲ್ಲಿಯೇ ತಮ್ಮ ಖಾಸಗಿ ಬದುಕಿನ ಬಗ್ಗೆ ಮಾತನಾಡುವ ಎದೆಗಾರಿಕೆ ತೋರಿದ ಕುಮಾರಸ್ವಾಮಿ ಅವರೆಲ್ಲಿ? ಅದೇ ಸದನದಲ್ಲಿ ನೀಚ ಕೃತ್ಯ ಎಸಗಿದ ಬಿಜೆಪಿ ನಾಯಕರು ಎಲ್ಲಿ?’ ಎಂದು ಜೆಡಿಎಸ್‌ ಕೇಳಿದೆ.

ಬಿಎಸ್‌ವೈ ಕೆಳಗಿಳಿಸಿದ್ದೇ ವಿಶ್ವಾಸದ್ರೋಹ’

‘ಬಿಜೆಪಿ ಕಟ್ಟಿ ಬೆಳೆಸಿದ ಯಡಿಯೂರಪ್ಪ ಅವರನ್ನು ಅವಮಾನ ಮಾಡಿದ್ದಲ್ಲದೇ, ಅವರಿಂದ ಹೀನಾಯವಾಗಿ ರಾಜೀನಾಮೆ ಪಡೆದಿದ್ದು ಅವರ ಪಕ್ಷದ ನಾಯಕರು ಮಾಡಿದ ದೊಡ್ಡ ವಿಶ್ವಾಸದ್ರೋಹ’ ಎಂದು ಜೆಡಿಎಸ್‌ ಮುಖಂಡ ಟಿ.ಎ. ಶರವಣ ಟೀಕಿಸಿದ್ದಾರೆ.

ಬಿಜೆಪಿಯ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಅವರು, ‘ವಿಶ್ವಾಸ ದ್ರೋಹದ ಬಗ್ಗೆ ಮಾತನಾಡುವ ಯೋಗ್ಯತೆಯೇ ನಿಮಗಿಲ್ಲ. ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತದ ಬಗ್ಗೆ ಬಿಜೆಪಿ ಮಾತನಾಡುವುದೇ ಹಾಸ್ಯಾಸ್ಪದ. ಭ್ರಷ್ಟಾಚಾರದ ಕಾರಣಕ್ಕೆ ಆ ಪಕ್ಷದ ನಾಯಕರೇ ಜೈಲು ಸೇರಿದ್ದಾರೆ. ಮಾಜಿ ಮುಖ್ಯಮಂತ್ರಿಯವರ ಆಪ್ತ ಸಿಬ್ಬಂದಿ, ಅವರ ನಿಕಟವರ್ತಿ ಗುತ್ತಿಗೆದಾರರ ಮೇಲೆಯೇ ಆದಾಯ ತೆರಿಗೆ ದಾಳಿ ನಡೆದಿದೆ. ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಹೊಡೆಯುತ್ತಿರುವುದು ಸರಿಯಲ್ಲ’ ಎಂದು ಅವರು ಹೇಳಿದ್ದಾರೆ.

‘ಆರ್‌ಎಸ್‍ಎಸ್ ಬಗ್ಗೆ ಹಗುರಮಾತು ಶೋಭೆಯಲ್ಲ’

ಬಳ್ಳಾರಿ: ‘ಆರ್‌ಎಸ್‍ಎಸ್ ಬಗ್ಗೆ ಹಗುರವಾಗಿ ಮಾತನಾಡುತ್ತಿರುವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮತಿಭ್ರಮಣೆಯಾಗಿದೆ’ ಎಂದು ಬಳ್ಳಾರಿ ನಗರ ಶಾಸಕ ಸೋಮಶೇಖರ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದೇಶಪ್ರೇಮ, ದೇಶಭಕ್ತಿಯ ಪ್ರತೀಕವಾಗಿರುವ ಆರ್‌ಎಸ್‍ಎಸ್ ವಿಪತ್ತು ಸಂದರ್ಭದಲ್ಲಿ ಎನ್‍ಡಿಆರ್‌ಎಫ್ ಮಾದರಿಯಲ್ಲಿ ಕೆಲಸಮಾಡುತ್ತದೆ. ಅಂಥ ಸಂಘಟನೆ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುವುದು ಅವರಿಗೆ ಶೋಭೆತರುವುದಿಲ್ಲ’ ಎಂದರು.

‘ದೇಶಸೇವೆಯಲ್ಲಿ ತೊಡಗಿರುವ ಸಂಘದ ಬಗ್ಗೆ ಮಾತನಾಡುವ ಮುನ್ನ ಅದರ ಬಗ್ಗೆ ಪರಿಪೂರ್ಣ ಮಾಹಿತಿ ಪಡೆದುಕೊಳ್ಳಬೇಕು. ಉಪ ಚುನಾವಣೆಯಲ್ಲಿ ಮತಗಳಿಕೆಗಾಗಿ ಬೇಕಾಬಿಟ್ಟಿ ಮಾತನಾಡುವುದು ತರವಲ್ಲ’ ಎಂದರು.

‘ಜಿಲ್ಲೆ ವಿಭಜನೆಗೆ ಕಾರಣರಾದ ಆನಂದ್ ಸಿಂಗ್ ಜಿಲ್ಲಾ ಉಸ್ತುವಾರಿ ಸಚಿವರಾಗಿ ಮುಂದುವರಿಯುವುದು ಬೇಡ ಎಂಬ ನನ್ನ ಹೇಳಿಕೆಯಲ್ಲಿ ಬದಲಾವಣೆ ಇಲ್ಲ. ಬಿ.ಎಸ್‍.ಯಡಿಯೂರಪ್ಪ ಅವರಿಗೂ ಹೇಳಿದ್ದೆವು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ಹೇಳಿದ್ದೇವೆ. ಉಪ ಚುನಾವಣೆಯ ನಂತರ ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಿಸಿ ಶ್ರೀರಾಮುಲು ಅವರನ್ನು ನೇಮಿಸುವ ನಿರೀಕ್ಷೆ ಇದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು