ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜ್ಞಾನಯೋಗಿ’ ಸಿದ್ಧೇಶ್ವರ ಸ್ವಾಮೀಜಿ ಲಿಂಗೈಕ್ಯ

Last Updated 2 ಜನವರಿ 2023, 23:23 IST
ಅಕ್ಷರ ಗಾತ್ರ

ವಿಜಯಪುರ: ಕನ್ನಡನಾಡು ಕಂಡು ಅಪರೂಪದ ಸಂತ, ಭಕ್ತರ ಪಾಲಿನ ‘ನಡೆದಾಡುವ ದೇವರು’ ಎಂದೇ ಪ್ರಸಿದ್ಧವಾಗಿದ್ದ ಆಧ್ಯಾತ್ಮಿಕ ಚಿಂತಕ, ಪ್ರವಚನಕಾರ ವಿಜಯಪುರದ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ (82) ಸೋಮವಾರ ಸಂಜೆ 6.05ಕ್ಕೆ ಅಸ್ತಂಗತರಾದರು.

ಒಂದು ವಾರದಿಂದ ಸಾವು–ಬದುಕಿನ ನಡುವೆ ಹೋರಾಟ ನಡೆಸಿದ್ದ ಶ್ರೀಗಳು ಕೊನೆಗೂ ಮರಳಿ ಬಾರದ ಲೋಕಕ್ಕೆ ಪಯಣಿಸಿದರು. ಅವರ ಕೋಟ್ಯಂತರ ಭಕ್ತರು ಶೋಕಸಾಗರದಲ್ಲಿ ಮುಳುಗಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ಸಿದ್ಧೇಶ್ವರ ಶ್ರೀಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲು ನಡೆಸಿದ ಮನವೊಲಿಕೆ ಪ್ರಯತ್ನಕ್ಕೆ ಶ್ರೀಗಳು ಒಪ್ಪದ ಕಾರಣ ಆಶ್ರಮದಲ್ಲೇ ಬಿಎಲ್‌ಡಿಇ ಆಸ್ಪತ್ರೆಯ ತಜ್ಞ ವೈದ್ಯರು ಚಿಕಿತ್ಸೆ ನೀಡಿದ್ದರು.

ಎರಡು ದಿನಗಳಿಂದ ಉಸಿರಾಟಕ್ಕೆ ಆಮ್ಲಜನಕದ ವ್ಯವಸ್ಥೆ ಕಲ್ಪಿಸಲಾಗಿತ್ತು. ಸುಮಾರು 20 ದಿನಗಳಿಂದ ಆಹಾರ ತ್ಯಜಿಸಿದ್ದ ಶ್ರೀಗಳು ಸೋಮವಾರ ಬೆಳಿಗ್ಗೆ ಸ್ವಲ್ಪ ಗಂಜಿ ಸೇವಿದ್ದರು. ಬಳಿಕ ಕ್ಷಣ, ಕ್ಷಣಕ್ಕೆ ಉಸಿರಾಟ, ನಾಡಿಬಡಿತ ಕ್ಷೀಣವಾಯಿತು.

ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲು ವೈದ್ಯರು, ನಾಡಿನ ವಿವಿಧ ಮಠಾಧೀಶರು, ಮಠದ ಶಿಷ್ಯರು, ಗಣ್ಯರು ಅವರ ಮನವೊಲಿಸಿದರೂ ಆಸ್ಪತ್ರೆಗೆ ಹೋಗಲು ಶ್ರೀಗಳು ನಿರಾಕರಿಸಿದ್ದರು.

ಆಶ್ರಮಕ್ಕೆ ಭಾನುವಾರ ರಾತ್ರಿ ಭೇಟಿ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಚಿವ ಗೋವಿಂದ ಕಾರಜೋಳ ಅವರು ಸಹ ಉನ್ನತಮಟ್ಟದ ಚಿಕಿತ್ಸೆಗೆ ವ್ಯವಸ್ಥೆ ಮಾಡುವುದಾಗಿ ಮನವಿ ಮಾಡಿದರೂ ಶ್ರೀಗಳು ಒಪ್ಪಲಿಲ್ಲ.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ತಮ್ಮ ಫೋನ್‌ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಂಪರ್ಕಿಸಿ ಶ್ರೀಗಳ ಜೊತೆ ಮಾತನಾಡಲು ಅನುವು ಮಾಡಿಕೊಟ್ಟಿದ್ದರು. ಪ್ರಧಾನಿ ಸಹ ಉನ್ನತ ಮಟ್ಟದ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರೂ ಶ್ರೀಗಳು ಕೈಮುಗಿಯುವ ಮೂಲಕ ಈ ಜೀವಕ್ಕೆ ಚಿಕಿತ್ಸೆ ಅಗತ್ಯವಿಲ್ಲ, ಸಹಜವಾಗಿ ತೆರಳಲು ಬಿಡಿ ಎಂದು ಕೈಸನ್ನೆ ಮಾಡಿದ್ದರು.

ಅಂತಿಮ ದರ್ಶನಕ್ಕೆ ವ್ಯವಸ್ಥೆ:

ಶ್ರೀಗಳ ಅಗಲಿಗೆ ವಿಷಯ ತಿಳಿಯುತ್ತಿರುವಂತೆ ನಾಡಿನ ವಿವಿಧ ಮಠಾಧೀಶರು, ಸಚಿವರು, ಶಾಸಕರು, ಭಕ್ತರ ದಂಡು ಆಶ್ರಮದತ್ತ ಧಾವಿಸುತ್ತಿದ್ದು, ಕಂಬನಿ ಮಿಡಿಯುತ್ತಿದ್ದಾರೆ.

ಶ್ರೀಗಳ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಜನವರಿ 3ರಂದು ಬೆಳಿಗ್ಗೆ 5 ರಿಂದ ಸಂಜೆ 4ರ ವರೆಗೆ ವಿಜಯಪುರ ನಗರದ ಸೈನಿಕ ಶಾಲೆಯಲ್ಲಿ ಕಲ್ಪಿಸಲಾಗಿದೆ. ಬಳಿಕ ಸಂಜೆ 5ಕ್ಕೆ ಅಂತಿಮ ಯಾತ್ರೆಯು ಸೈನಿಕ ಶಾಲೆಯಿಂದ ಆರಂಭಗೊಂಡು, ಶಿವಾಜಿ ವೃತ್ತ, ಗಾಂಧಿ ಚೌಕಿ, ಸಿದ್ಧೇಶ್ವರ ಗುಡಿ ಮೂಲಕವಾಗಿ ಸಾಗಿ ಆಶ್ರಮ ತಲುಪಲಿದೆ. ಸಂಜೆ 6.5ಕ್ಕೆ ಸರ್ಕಾರದ ಸಕಲ ಗೌರವಗಳೊಂದಿಗೆ ಶ್ರೀಗಳ ಅಂತಿಮ ಸಂಸ್ಕಾರ ನಡೆಯಲಿದೆ.

‘ಗುಡಿ ಕಟ್ಟಬಾರದು, ಸಮಾಧಿ ಮಾಡಬಾರದು’ ಎಂಬ ಶ್ರೀಗಳ ಆಶಯದಂತೆ ಅಗ್ನಿ ಸ್ಪರ್ಶ ಮಾಡುವ ಮೂಲಕ ಅಂತಿಮ ಸಂಸ್ಕಾರ ನಡೆಸಲು ನಿರ್ಧರಿಸಲಾಗಿದೆ.

ಅಂತ್ಯಸಂಸ್ಕಾರದಲ್ಲಿ ಮಠಾಧೀಶರು, ಗಣ್ಯರು, ಮಾಧ್ಯಮದವರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ತಿಳಿಸಿದ್ದಾರೆ.

ಆಶ್ರಮದ ಶಿಷ್ಯ ವರ್ಗ, ನಾಡಿನ ಹಿರಿಯ ಮಠಾಧೀಶರು, ಗಣ್ಯರು ಶ್ರೀಗಳ ಅಂತ್ಯ ಸಂಸ್ಕಾರದ ವಿಧಿವಿಧಾನಗಳನ್ನು ನಡೆಸಲು ಅಗತ್ಯ ಸಿದ್ಧತೆ ಕೈಗೊಂಡಿದ್ದಾರೆ.

ಶ್ರೀಗಳ ಅಂತಿಮ ದರ್ಶನಕ್ಕೆ ಸಹಸ್ರಾರು ಭಕ್ತರು ಆಶ್ರಮದತ್ತ ಧಾವಿಸುತ್ತಿರುವುದರಿಂದ ಯಾವುದೇ ಅಸ್ತವ್ಯಸ್ತವಾಗದಂತೆ ನೋಡಿಕೊಳ್ಳಲು ಜಿಲ್ಲಾಧಿಕಾರಿ ವಿಜಯ ಮಹಾಂತೇಶ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದಕುಮಾರ್‌ ಅಗತ್ಯ ವ್ಯವಸ್ಥೆ, ಭದ್ರತೆ ಮಾಡಿದ್ದಾರೆ.

ಅಂತಿಮ ದರ್ಶನಕ್ಕೆ 5 ಲಕ್ಷದಿಂದ 10 ಲಕ್ಷ ಭಕ್ತರು ಬರುವ ನಿರೀಕ್ಷೆ ಇದ್ದು, ಕೆಪಿಸಿಸಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಉಪಹಾರದ ವ್ಯವಸ್ಥೆ ಮಾಡಿದ್ದಾರೆ. ಸಾರ್ವಜನಿಕರೂ ಸಹ ಭಕ್ತರಿಗೆ ಉಪಹಾರದ ವ್ಯವಸ್ಥೆ ಮಾಡಬಹುದಾಗಿದೆ ಎಂದು ಕನ್ಹೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT