ಮಂಗಳವಾರ, ಡಿಸೆಂಬರ್ 7, 2021
19 °C
ಸ್ನಾತಕೋತ್ತರ ಪದವಿಗೆ ಮುನ್ನವೇ ಕೆ–ಸೆಟ್ ಪಾಸ್‌ ಆದವರಿಗೆ ಆತಂಕ

‘ಕೆ–ಸೆಟ್‌’ ಅರ್ಹತೆಯೂ ನಿಷ್ಪ್ರಯೋಜಕ !

ರಾಜೇಶ್ ರೈ ಚಟ್ಲ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸ್ನಾತಕೋತ್ತರ ಪದವಿ (ಪಿ.ಜಿ) ಪಾಸಾಗುವ ಮೊದಲೇ ಕೆ–ಸೆಟ್‌ (ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ) ಪಾಸಾಗಿದ್ದರೆ, ಅಂಥವರು ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಲ್ಲ!

ಪಿ.ಜಿ ಕಲಿಯುತ್ತಿರುವಾಗಲೇ ಕೆ–ಸೆಟ್‌ಗೆ ನೋಂದಾಯಿಸಿ, ಸಾವಿರಾರು ಅಭ್ಯರ್ಥಿಗಳು ತೇರ್ಗಡೆಯಾಗಿದ್ದಾರೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ 1,242 ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಈಗ ನಡೆಯುತ್ತಿರುವ ನೇಮಕಾತಿ ಪ್ರಕ್ರಿಯೆಯಲ್ಲಿ ಅರ್ಜಿ ಸಲ್ಲಿಸುವ ಅವಕಾಶದಿಂದ ಇವರೆಲ್ಲ ವಂಚಿತರಾಗುವ ಆತಂಕ ಎದುರಿಸುತ್ತಿದ್ದಾರೆ.

ಈ ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನೇಮಕಾತಿ ಪ್ರಾಧಿಕಾರವಾಗಿದ್ದು, ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ನವೆಂಬರ್ 6 ಕೊನೆಯ ದಿನ.

ಕೆ–ಸೆಟ್‌ ಅಧಿಸೂಚನೆ ಪ್ರಕಾರ, ಪಿ.ಜಿ ಪಡೆದವರು ಮತ್ತು ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಪಿ.ಜಿ ವ್ಯಾಸಂಗ (ಪ್ರಥಮ ಮತ್ತು ದ್ವಿತೀಯ) ಮಾಡುತ್ತಿರುವ ವಿದ್ಯಾರ್ಥಿಗಳು ಕೆ–ಸೆಟ್‌ ಪರೀಕ್ಷೆ ತೆಗೆದುಕೊಳ್ಳಲು ಅರ್ಹರು. ಪಿ.ಜಿ ವ್ಯಾಸಂಗ ಮಾಡುತ್ತಿರುವಾಗಲೇ ಕೆ–ಸೆಟ್‌ ಪಾಸಾದರೆ, ಅಂಥವರು ಕೆ–ಸೆಟ್‌ ಫಲಿತಾಂಶ ಪ್ರಕಟವಾದ ದಿನದಿಂದ ಎರಡು ವರ್ಷದ ಒಳಗೆ ಪಿ.ಜಿ ಅಂಕ ಪಟ್ಟಿ ಸಲ್ಲಿಸಿದರೆ ಮಾತ್ರ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪ್ರಮಾಣಪತ್ರ ಪಡೆಯಬಹುದು. ಇಲ್ಲದೇ ಇದ್ದರೆ ಅರ್ಹತೆ ರದ್ದುಗೊಳ್ಳುತ್ತದೆ. ಹೀಗೆ ಪರೀಕ್ಷೆ ಬರೆದ ಸಾವಿರಾರು ಅಭ್ಯರ್ಥಿಗಳು ತಮ್ಮ ಪಿ.ಜಿ ಫಲಿತಾಂಶ ಪ್ರಕಟಗೊಳ್ಳುವ ಮೊದಲೇ ಕೆ–ಸೆಟ್‌ ಪಾಸ್‌ ಮಾಡಿಕೊಂಡಿದ್ದಾರೆ.

ಆದರೆ, ಪಿ.ಜಿ ಪಾಸಾಗುವ ಮೊದಲೇ ಕೆ–ಸೆಟ್‌ ಮಾಡಿಕೊಂಡ ಅಭ್ಯರ್ಥಿಗಳು ಸಹಾಯಕ ಹುದ್ದೆಗಳಿಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ, ‘ಕೆ–ಸೆಟ್‌ ಪಾಸಾದ ವರ್ಷ ಪಿ.ಜಿ ವರ್ಷಕ್ಕಿಂತ ಕಡಿಮೆ ಇರಬಾರದು’ ಎಂಬ ಸಂದೇಶ ಬರುತ್ತಿದೆ. ಹೀಗಾಗಿ, ಆನ್‌ಲೈನ್‌ ಅರ್ಜಿಯ ಮುಂದಿನ ಹಂತಗಳನ್ನು ಭರ್ತಿ ಮಾಡಲು ಸಾಧ್ಯ ಆಗುತ್ತಿಲ್ಲ ಎಂದು ಅಭ್ಯರ್ಥಿಗಳು ದೂರಿದ್ದಾರೆ.

‘ಈ ಹಿಂದೆ ಈ ರೀತಿಯ ಸಮಸ್ಯೆ ಇರಲಿಲ್ಲ. ಸ್ನಾತಕೋತ್ತರ ಪದವಿ ಓದುತ್ತಿರುವಾಗಲೇ ಕೆ–ಸೆಟ್‌ ಪಾಸಾದ ಅನೇಕರು ಸಹಾಯಕ ಹುದ್ದೆಗಳಿಗೆ ಅರ್ಹತೆ ಪಡೆದಿದ್ದಾರೆ. ಇದೇ ಮೊದಲ ಬಾರಿಗೆ ಈ ಷರತ್ತು ವಿಧಿಸಲಾಗಿದೆ’ ಎಂದು ಹುದ್ದೆ ಆಕಾಂಕ್ಷಿ ರಾಯಚೂರು ಜಿಲ್ಲೆಯ ಲಿಂಗಸಗೂರಿನ ವಿಜಯಕುಮಾರ್‌ ನಾಯಕ್‌ ಹೇಳಿದರು.

‘ನಾನು ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಪಿ.ಜಿ ಮೊದಲ ವರ್ಷದಲ್ಲಿದ್ದಾಗಲೇ ಕೆ– ಸೆಟ್‌ (2019 ಮಾರ್ಚ್‌) ಪಾಸಾಗಿದ್ದೇನೆ. 2020 ಜೂನ್‌ನಲ್ಲಿ ಪಿ.ಜಿ ಮುಗಿಯಬೇಕಾಗಿತ್ತು. ಕೋವಿಡ್‌ ಕಾರಣದಿಂದ 2021 ಜನವರಿಗೆ ಕೋರ್ಸ್‌ ಮುಗಿಯಿತು. ಆದರೆ, ಕೋರ್ಸ್‌ ಮುಗಿಯುವ ಮೊದಲೇ ಕೆ–ಸೆಟ್‌ ಪಾಸಾಗಿರಬಾರದು ಎಂಬ ಷರತ್ತಿನಿಂದಾಗಿ ಹುದ್ದೆಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ನನ್ನಂತೆ ಪಿ.ಜಿ ಮುಗಿಯುವ ಮೊದಲೇ ಕೆ–ಸೆಟ್‌ ಪಾಸಾದವರು ನಮ್ಮ ವಿಶ್ವವಿದ್ಯಾಲಯವೊಂದರಲ್ಲಿಯೇ 2,000ಕ್ಕೂ ಹೆಚ್ಚು ಮಂದಿ ಇದ್ದೇವೆ’ ಎಂದೂ ಅವರು ಹೇಳಿದರು.

ಪಾಸಾದವರು ಮತ್ತೆ ಬರೆದರೆ ‘ಅರ್ಹತೆ’ ರದ್ದು:

ಕೆ–ಸೆಟ್‌ ಅಧಿಸೂಚನೆಯಲ್ಲಿ ‘ಈಗಾಗಲೇ ಕೆ–ಸೆಟ್‌ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು, ಮುಂಬರುವ ಕೆ–ಸೆಟ್‌ ಪರೀಕ್ಷೆಗೆ ಅದೇ ವಿಷಯದಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇಲ್ಲ. ಈಗಾಗಲೇ ಕೆ–ಸೆಟ್‌ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಮತ್ತೊಮ್ಮೆ ಅರ್ಜಿ ಸಲ್ಲಿಸಿದರೆ, ಅಂಥ ಅಭ್ಯರ್ಥಿಗಳ ಅರ್ಹತೆ ರದ್ದುಗೊಳಿಸಲಾಗುವುದು. ಅಲ್ಲದೆ, ಅಂಥವರು ಹಿಂದೆ ಪಡೆದಿರುವ ಕೆ–ಸೆಟ್‌ ಅರ್ಹತೆಯನ್ನು ಕೂಡಾ ಡಿ ನೋಟಿಫಿಕೇಷನ್‌ ಮೂಲಕ ಹಿಂಪಡೆಯಲಾಗುವುದು’ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.  ಇದು ಕೂಡ ಗೊಂದಲಗಳಿಗೆ ಕಾರಣವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು