ಶನಿವಾರ, ಫೆಬ್ರವರಿ 4, 2023
17 °C

‘ಕೈ’ ನಾಯಕರ ವಿರುದ್ಧ ಕಾಡುಗೊಲ್ಲರ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೊ ಯಾತ್ರೆ ಸಮಯದಲ್ಲಿ ರಾಯಚೂರು ಜಿಲ್ಲೆಯಲ್ಲಿ ನಿಗದಿಯಾಗಿದ್ದ ಸಂವಾದ ಸಭೆಯಲ್ಲಿ ಭಾಗವಹಿಸಿ, ತಮ್ಮ ಅಹವಾಲು ಹೇಳಿಕೊಳ್ಳಲು ಅವಕಾಶ ನೀಡದೆ ಸಿದ್ದರಾಮಯ್ಯ ಹಾಗೂ ಅವರ ಬೆಂಬಲಿಗರು ಅಪಮಾನ ಮಾಡಿದ್ದಾರೆ ಎಂದು ಕಾಡುಗೊಲ್ಲ, ಕೋಲೆ ಬಸವ ಸಮುದಾಯದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅ.21ರಂದು ಗಿಲ್ಲೆಸೂಗೂರುನಲ್ಲಿ ತಳ ಸಮುದಾಯಗಳ ಮುಖಂಡರೊಂದಿಗೆ ಸಂವಾದ ನಿಗದಿಯಾಗಿತ್ತು. ತುಮಕೂರು ಜಿಲ್ಲೆಯಿಂದ ನಮಗೆ ಆಹ್ವಾನ ನೀಡಿದ್ದು, ಹೋಗಿದ್ದೆವು. ಆದರೆ, ನಮಗೆ ಅವಕಾಶ ನೀಡದೆ ಮುಖಂಡ ಎಚ್.ಎಂ.ರೇವಣ್ಣ ಹಾಗೂ ಅವರ ಜತೆಯಲ್ಲಿ ಇದ್ದವರು ಹೊರದಬ್ಬಿದರು ಎಂದು ಕರ್ನಾಟಕ ರಾಜ್ಯ ಕಾಡುಗೊಲ್ಲ ಅಸ್ಮಿತೆ ಹೋರಾಟ ಸಮಿತಿ ಅಧ್ಯಕ್ಷ ಜಿ.ಕೆ.ನಾಗಣ್ಣ ಆರೋಪಿಸಿದ್ದಾರೆ.

‘ಸಂವಾದ ನಡೆಯಬೇಕಿದ್ದ ಕೊಠಡಿಗೆ ಹೋಗುವ ಸಮಯದಲ್ಲಿ ವಕೀಲ ಪ್ರೊ.ರವಿವರ್ಮ ಕುಮಾರ್ ನೇತೃತ್ವದಲ್ಲಿ ಬಂದಿದ್ದ ಹಿಂದುಳಿದ ವರ್ಗಗಳ ಒಕ್ಕೂಟದ ಮುಖಂಡರಾದ ರಾಮಚಂದ್ರ, ಎಚ್.ಎಂ.ರೇವಣ್ಣ, ಬೈರತಿ ಸುರೇಶ್ ಇತರರು ನಮ್ಮನ್ನು ತಡೆದರು. ಹಿಂದುಳಿದ ವರ್ಗಗಳ ಒಕ್ಕೂಟದವರು ಒಳಕ್ಕೆ ಹೋಗಬೇಕು. ನೀವು ಏಕೆ ಬಂದಿದ್ದೀರಿ ಎಂದು ರೇವಣ್ಣ ಕತ್ತಿನ ಪಟ್ಟಿ ಹಿಡಿದು ಹೊರಕ್ಕೆ ನೂಕಿದರು’ ಎಂದು ಹೇಳಿದರು.

‘ನಾವು ಕಾಡುಗೊಲ್ಲ ಸಮುದಾಯದ ಪ್ರತಿನಿಧಿಯಾಗಿ ಬಂದಿದ್ದೇವೆ. ರಾಹುಲ್ ಜತೆಗೆ ಮಾತನಾಡಲು ಸಮಯ ನಿಗದಿಯಾಗಿದೆ. ವಿಶೇಷ ಪಾಸ್ ಕೊಟ್ಟಿದ್ದಾರೆ. ನಿಮ್ಮಂತಹವರು ನಮ್ಮಂತಹ ತಬ್ಬಲಿ ಸಮುದಾಯದ ಮೇಲೆ ದೌರ್ಜನ್ಯ ನಡೆಸಬಾರದು. ಒಳಗೆ ಬಿಡಿ ಎಂದು ಬೇಡಿಕೊಂಡಾಗ ರೇವಣ್ಣ ವ್ಯಗ್ರರಾದರು. ನಮ್ಮ ತಂಡದ ಮೂವರನ್ನು ಬಿಡದೆ ಹೊರಗೆ ನೂಕಿದರು’ ಎಂದು ಘಟನೆ
ಯನ್ನು ‘ಪ್ರಜಾವಾಣಿ’ಗೆ ವಿವರಿಸಿದರು.

‘ನಾನು, ಕೋಲೆ ಬಸವ ಸಮುದಾಯದ ಮುಖಂಡ ಶ್ರೀನಿವಾಸ್ ಕಷ್ಟಪಟ್ಟು ಒಳಗೆ ಹೋಗುತ್ತಿದ್ದಂತೆ ಸಿದ್ದರಾಮಯ್ಯ ಅವರು ನೀವು ಏಕೆ ಬಂದಿದ್ದೀರಿ ಎಂದು ಪ್ರಶ್ನಿಸಿದರು. ನಾವು ಎಂಬಿಸಿ (ಅತಿ ಹಿಂದುಳಿದ ಸಮುದಾಯ) ಎಂದು ಹೇಳುತ್ತಿದ್ದಂತೆ ಅವರೂ ಕೋಪಗೊಂಡರು. ಅಲ್ಲಿದ್ದವರು ನಮ್ಮನ್ನು ಹಿಡಿದು ಹಿಂದಕ್ಕೆ ತಳ್ಳಿದರು. ಇಷ್ಟೆಲ್ಲ ದೌರ್ಜನ್ಯದ ನಡುವೆ ರಾಹುಲ್ ಬಳಿಗೆ ಹೋಗಿ ಮನವಿ ಮಾಡಿಕೊಳ್ಳಲು ಯತ್ನಿಸಿದರೂ ಸಿದ್ದರಾಮಯ್ಯ ಅದಕ್ಕೂ ಅವಕಾಶ ನೀಡದೆ ಹಿಂದಕ್ಕೆ ನೂಕಿದರು’ ಎಂದು ಅಂದಿನ
ಸನ್ನಿವೇಶ ನೆನಪಿಸಿಕೊಂಡು ಕಣ್ಣೀರಾದರು.

ಕತ್ತು ಹಿಡಿದು ತಳ್ಳಿಲ್ಲ: ರೇವಣ್ಣ ಸ್ಪಷ್ಟನೆ

ಕಾಡುಗೊಲ್ಲ ಸಮುದಾಯದ ನಾಗಣ್ಣ ಯಾರು ಎಂಬುದೇ ಗೊತ್ತಿರಲಿಲ್ಲ. ಅವರನ್ನು ಕತ್ತು ಹಿಡಿದು ಹೊರಕ್ಕೆ ತಳ್ಳಿಲ್ಲ. ಸಂಪರ್ಕ ಕೊರತೆಯಿಂದ ಗೊಂದಲ ಆಗಿರಬಹುದು ಎಂದು ಕಾಂಗ್ರೆಸ್ ಮುಖಂಡ ಎಚ್.ಎಂ.ರೇವಣ್ಣ ಸ್ಪಷ್ಟಪಡಿಸಿದರು. ಹಿಂದುಳಿದ ಜಾತಿಗಳ ಒಕ್ಕೂಟ ಕೊಟ್ಟಿದ್ದ ಪಟ್ಟಿಯಲ್ಲಿ ಅವರ ಹೆಸರು ಇರಲಿಲ್ಲ. ರಾಹುಲ್ ಗಾಂಧಿ ಜತೆಗೆ ಮಾತನಾಡಲು ಸಾಧ್ಯವಾಗಲಿಲ್ಲ ಎಂಬ ಕಾರಣಕ್ಕೆ ಅವರು ಆರೋಪ ಮಾಡುತ್ತಿರಬಹುದು ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು