ಸೋಮವಾರ, ಮೇ 23, 2022
30 °C
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಕ್ರೋಶ

ಪಾಲಿಟೆಕ್ನಿಕ್ : ಕನ್ನಡ ಪಾಠಕ್ಕೆ ಅನ್ಯ ಬೋಧಕರು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಕನ್ನಡ ಬೋಧಿಸುತ್ತಿರುವ ಅರೆಕಾಲಿಕ ಉಪನ್ಯಾಸಕರನ್ನು ಬಿಡುಗಡೆಗೊಳಿಸಿ, ಇತರ ವಿಷಯಗಳ ಉಪನ್ಯಾಸಕರಿಗೆ ಕನ್ನಡ ಬೋಧಿಸುವಂತೆ ಸೂಚಿಸಬೇಕು ಎಂದು ಇಲಾಖೆ ಆಯುಕ್ತರು ಹೊರಡಿಸಿರುವ ಆದೇಶಕ್ಕೆ ಆಕ್ಷೇಪ ವ್ಯಕ್ತವಾಗಿದೆ.

ಪ್ರೊ.ಹಿ.ಚಿ. ಬೋರಲಿಂಗಯ್ಯನವರ ವರದಿಯ ಶಿಫಾರಸಿನ ಮೇರೆಗೆ ಸರ್ಕಾರವು 2015–16ನೇ ಸಾಲಿನಿಂದ ವೃತ್ತಿ ಶಿಕ್ಷಣದಲ್ಲಿ (ಎಂಜಿನಿಯರಿಂಗ್, ವೈದ್ಯಕೀಯ, ಕಾನೂನು, ಕೃಷಿ ಇತ್ಯಾದಿ ವಿಭಾಗಗಳಲ್ಲಿ) ಕಡ್ಡಾಯವಾಗಿ ಕನ್ನಡವನ್ನು ಬೋಧಿಸುವಂತೆ ಆದೇಶ ಹೊರಡಿಸಿತ್ತು. ಅದರಂತೆ ರಾಜ್ಯದ ಎಲ್ಲ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ 2015ರಿಂದ ಕನ್ನಡವನ್ನು 3 ಮತ್ತು 4ನೇ ಸೆಮಿಸ್ಟರ್‌ಗಳಿಗೆ ಒಂದು ವಿಷಯವಾಗಿ ಕಲಿಸಲಾಗುತ್ತಿದೆ. ಆದರೆ, ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಕನ್ನಡವನ್ನು ಬೋಧಿಸುತ್ತಿದ್ದ ಉಪನ್ಯಾಸಕರನ್ನು ಕೈಬಿಡಬೇಕು ಎಂದು ಸೂಚಿಸಿ, ಆಯಾ ಕಾಲೇಜುಗಳಲ್ಲಿನ ಬೇರೆ ವಿಷಯಗಳ ಉಪನ್ಯಾಸಕರು ಕನ್ನಡವನ್ನು ಬೋಧಿಸಬೇಕು ಎಂದು ತಿಳಿಸಲಾಗಿದೆ.

ಕಾಲೇಜು ಶಿಕ್ಷಣ ಆಯುಕ್ತರ ಈ ಆದೇಶವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಟೀಕಿಸಿದೆ.

ಆಯುಕ್ತರು ಹೊರಡಿಸಿರುವ ಆದೇಶವನ್ನು ಕೂಡಲೇ ಹಿಂಪಡೆಯಲು ಸೂಚಿಸಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಹಾಗೂ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರಿಗೆ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಅವರು ಪತ್ರ ಬರೆದಿದ್ದಾರೆ.

ಕನ್ನಡ ವಿರೋಧಿ ನಿಲುವು: ‘ಅರೆಕಾಲಿಕ ಕನ್ನಡ ಉಪನ್ಯಾಸಕರನ್ನು ವಜಾಗೊಳಿಸಿ, ಅವರ ಜಾಗದಲ್ಲಿ ಕಾಲೇಜಿನ ಇತರ ವಿಷಯಗಳ ಪ್ರಾಧ್ಯಾಪಕರಿಂದ ಕನ್ನಡ ಬೋಧಿಸಲು ಸೂಚಿಸುವುದು ಖಂಡನೀಯ. ನಾಡಿನಲ್ಲಿಯೇ ರಾಜ್ಯಭಾಷೆ ಕನ್ನಡಕ್ಕೆ ಒದಗಿ ಬಂದಿರುವ ಈ ದುಸ್ಥಿತಿಯು ಆಡಳಿತದಲ್ಲಿ ಕನ್ನಡ ವಿರೋಧಿ ನಿಲುವನ್ನು ತೋರಿಸುತ್ತದೆ. ಈ ಹಿಂದೆ ಇಲಾಖೆಯ ಆಯುಕ್ತರು ಪದವಿ ಕಾಲೇಜುಗಳಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಅಧಿಸೂಚನೆಯಲ್ಲಿ ಅಗತ್ಯವೆನಿಸದ ಅವೈಜ್ಞಾನಿಕ ನಿಯಮಗಳನ್ನು ಅಳವಡಿಸುವ ಮೂಲಕ ಕನ್ನಡ ಭಾಷಾ ವಿರೋಧಿ ನಿಲುವನ್ನು ತಾಳಿದ್ದರು. ಈಗ ಅದನ್ನು ಮುಂದುವರಿಸಿದ್ದು, ಕನ್ನಡವನ್ನು ಅಧ್ಯಯನ ಮಾಡಿದ ನೂರಾರು ಮಂದಿಯನ್ನು ನಿರುದ್ಯೋಗಿಗಳನ್ನಾಗಿಸಿದ್ದಾರೆ’ ಎಂದು ಟಿ.ಎಸ್. ನಾಗಾಭರಣ ಬೇಸರ ವ್ಯಕ್ತಪಡಿಸಿದ್ದಾರೆ.

‘ಈ ಕೂಡಲೇ ಎಚ್ಚೆತ್ತುಕೊಂಡು ಸದರಿ ಆದೇಶವನ್ನು ಹಿಂಪಡೆಯಬೇಕು. ಕನ್ನಡ ಉಪನ್ಯಾಸಕರನ್ನು ನೇಮಿಸಿಕೊಂಡು, ಕಡ್ಡಾಯವಾಗಿ 3 ಮತ್ತು 4ನೇ ಸೆಮಿಸ್ಟರ್‌ನಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಬೋಧಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರನ್ನು ಸಂಪರ್ಕಿಸಲು ಯತ್ನಿಸಲಾಯಿತು. ಅವರು ಲಭ್ಯರಾಗಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು